ಹೆಣ್ಣಿನ್ನು ರಿಲ್ಯಾಕ್ಸ್ ಆಗಬಹುದು, ಗಂಡಿಗೇ ಬಂದಿದೆ ಗರ್ಭ ನಿರೋಧಕ ಮಾತ್ರೆ!

By Suvarna News  |  First Published Feb 17, 2023, 3:06 PM IST

ಗರ್ಭಧಾರಣೆ ತಡೆಯಲು ಮಹಿಳೆಯರಿಗೆ ಸಾಕಷ್ಟು ಆಯ್ಕೆಯಿದೆ. ಆದ್ರೆ ಪುರುಷರಿಗೆ ಆಯ್ಕೆಗಳಿಲ್ಲ. ಪುರುಷರಿಗಾಗಿ ಗರ್ಭನಿರೋಧಕ ಮಾತ್ರೆಯೊಂದು ಸಿದ್ಧವಾಗ್ತಿದೆ. ಈಗಾಗಲೇ ಇಲಿಗಳ ಮೇಲೆ ನಡೆದ ಪ್ರಯೋಗ ಯಶಸ್ವಿಯಾಗಿದ್ದು, ಪುರುಷರ ಮೇಲೆ ಪ್ರಯೋಗ ನಡೆಯಬೇಕಿದೆ.
 


ಅನಗತ್ಯ ಗರ್ಭಧಾರಣೆ ತಡೆಯುವುದು ಮಹಿಳೆಯ ಹೊಣೆ ಎಂದು ಅನೇಕರು ಭಾವಿಸಿದ್ದಾರೆ. ಮಾರುಕಟ್ಟೆಯಲ್ಲಿ ಕೂಡ ಗರ್ಭನಿರೋಧಕ ಮಾತ್ರೆಗಳು ಮಹಿಳೆಯರಿಗೆ ಮಾತ್ರ ಸೀಮಿತವಾಗಿವೆ. ಈವರೆಗೂ ಪುರುಷರಿಗಾಗಿ ಗರ್ಭನಿರೋಧಕ ಮಾತ್ರೆ ಬಂದಿಲ್ಲ. ಅನೇಕ ಪ್ರಯೋಗ ನಡೆದ್ರೂ ಅದು ಯಶಸ್ವಿಯಾಗಿಲ್ಲ.

ಗರ್ಭನಿರೋಧಕ (Contraception) ಮಾತ್ರೆಗಳು ಮಹಿಳೆ ಆರೋಗ್ಯ (Health) ದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತವೆ. ಇನ್ನು ಸಂತಾನ ಹರಣ ಶಸ್ತ್ರಚಿಕಿತ್ಸೆ (Surgery) ಗೂ ಮಹಿಳೆಯರೇ ಒಳಗಾಗ್ತಾರೆ. ಇದನ್ನು ಮಾಡಿಸಿಕೊಳ್ಳುವ ಪುರುಷರ ಸಂಖ್ಯೆ ಕೂಡ ಅತಿ ವಿರಳ. ಗರ್ಭನಿರೋಧಕ ತಡೆಯಲು ಪುರುಷ (Male) ರಿಗಿರುವ ಒಂದೇ ಒಂದು ವಿಧಾನವೆಂದ್ರೆ ಕಾಂಡೋಮ್. ಇದನ್ನು ಹೊರತುಪಡಿಸಿ ಮಾತ್ರೆ ಅಗತ್ಯವಿದೆ ಎನ್ನುವವರಿಗೆ ಖುಷಿ ಸುದ್ದಿಯೊಂದಿದೆ.  

Latest Videos

undefined

ಈ ಸಮಸ್ಯೆ ಇದೆ ಅಂದ್ರೆ ಬಾಳೆಹಣ್ಣನ್ನು ತಿನ್ನಲೇ ಬಾರದು!

ಪುರುಷರಿಗೆ ಸಿದ್ಧವಾಗ್ತಿದೆ ಗರ್ಭನಿರೋಧಕ ಮಾತ್ರೆ : ಮಹಿಳೆಯರ ಗರ್ಭನಿರೋಧಕ ಮಾತ್ರೆಗಳಂತೆ, ವಿಜ್ಞಾನಿಗಳು ಪುರುಷರಿಗಾಗಿ ಗರ್ಭನಿರೋಧಕ ಮಾತ್ರೆಗಳನ್ನು ತಯಾರಿಸುವಲ್ಲಿ ತೊಡಗಿದ್ದಾರೆ. ಸಂತೋಷದ ವಿಷ್ಯವೆಂದ್ರೆ ಇದರಲ್ಲಿ ವಿಜ್ಞಾನಿಗಳು ದೊಡ್ಡ ಯಶಸ್ಸನ್ನು ಕಂಡಿದ್ದಾರೆ.  ಈ ಮಾತ್ರೆ ವೀರ್ಯವನ್ನು ತಾತ್ಕಾಲಿಕವಾಗಿ ತಡೆಯುವ ಮೂಲಕ ಗರ್ಭಧಾರಣೆಯನ್ನು ತಡೆಯುತ್ತದೆ. ಈ ಮಾತ್ರೆಗಳನ್ನು ಇಲಿಗಳ ಮೇಲೆ ಪ್ರಯೋಗ ನಡೆಸಲಾಗಿದೆ. ಪುರುಷರಿಗೆ ಗರ್ಭನಿರೋಧಕವಾಗಿ ಈವರೆಗೆ ಕಾಂಡೋಮ್ ಮಾತ್ರ ಲಭ್ಯವಿತ್ತು ಎಂದು ಅಮೆರಿಕದ ವೈಲ್ ಕಾರ್ನೆಲ್ ಮೆಡಿಸಿನ್‌ನ ಸಂಶೋಧಕರು ಹೇಳಿದ್ದಾರೆ. ಇದಕ್ಕಿಂತ ಮೊದಲು ಪುರುಷರಿಗಾಗಿ ಗರ್ಭನಿರೋಧಕ ಮಾತ್ರೆಗಳನ್ನು ಕಂಡು ಹಿಡಿಯಲಾಗಿತ್ತು. ಆದ್ರೆ ಅದ್ರ ಅಡ್ಡಪರಿಣಾಮ ಹೆಚ್ಚಿದ್ದ ಕಾರಣ ಅದನ್ನು ಅರ್ಧಕ್ಕೆ ನಿಲ್ಲಿಸಲಾಗಿತ್ತು. ಆದ್ರೆ ಹೊಸ ಮಾತ್ರೆ ಆಸೆ ಚಿಗುರಿಸಿದೆ ಎಂದವರು ಹೇಳಿದ್ದಾರೆ. 

ಹೇಗೆ ಕೆಲಸ ಮಾಡುತ್ತೆ ಮಾತ್ರೆ : ಸದ್ಯ ಪುರುಷರ ಗರ್ಭನಿರೋಧಕ ಮಾತ್ರೆಗೆ TDI-11861  ಎಂದು ಹೆಸರಿಡಲಾಗಿದೆ. ನೇಚರ್ ಕಮ್ಯುನಿಕೇಷನ್ಸ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ವರದಯಲ್ಲಿ, sAC ಪ್ರತಿರೋಧಕ TDI-11861ಯ ಒಂದು ಡೋಸನ್ನು ಇಲಿಗಳಿಗೆ ನೀಡಲಾಯ್ತು. ಇಲಿಗಳ ವೀರ್ಯವನ್ನು ಇದು ಎರಡೂವರೆ ಗಂಟೆಗಳವರೆಗೆ ನಿಶ್ಚಲಗೊಳಿಸಿತ್ತು ಎಂದು ವರದಿ ಮಾಡಿದೆ. ಮೂರು ಗಂಟೆಗಳ ನಂತರ ಕೆಲವು ವೀರ್ಯಾಣುಗಳು ಚಲನಶೀಲತೆಯನ್ನು ಮರಳಿ ಪಡೆದವು. 24 ಗಂಟೆಗಳ ಹೊತ್ತಿಗೆ ಬಹುತೇಕ ಎಲ್ಲಾ ವೀರ್ಯಗಳು ಸಾಮಾನ್ಯ ಚಲನಶೀಲತೆಗೆ ಮರಳಿದವು ಎಂದು ಸಂಶೋಧಕರು ಹೇಳಿದ್ದಾರೆ. 

TDI-11861 ಪೂರಕಗಳನ್ನು ನೀಡಿದ ಗಂಡು ಇಲಿಗಳನ್ನು ಹೆಣ್ಣು ಇಲಿಗಳೊಂದಿಗೆ ಜೋಡಿಸಲಾಯಿತು. ಇಲಿಗಳು ಸಾಮಾನ್ಯವಾಗಿ ಸಂಯೋಗ ಮಾಡುತ್ತವೆ. ಆದರೆ 52 ಪ್ರತ್ಯೇಕ ಸಂಯೋಗದ ನಂತರವೂ ಹೆಣ್ಣು ಇಲಿ ಗರ್ಭ ಧರಿಸಲಿಲ್ಲ.  ಈ ಮಾತ್ರೆ 30 ನಿಮಿಷದಿಂದ ಒಂದು ಗಂಟೆಯೊಳಗೆ ಕೆಲಸ ಮಾಡುತ್ತದೆ. ಆದ್ರೆ ಇತರ ಗರ್ಭನಿರೋಧಕಗಳು ವೀರ್ಯಾಣುಗಳ ಸಂಖ್ಯೆಯನ್ನು ಕಡಿಮೆ ಮಾಡಲು ಒಂದು ವಾರದವರೆಗೆ ಸಮಯ ತೆಗೆದುಕೊಳ್ಳುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.

ಈ ಮಾತ್ರೆಯಿಂದಾಗುವ ಲಾಭ : ಸಂಶೋಧಕರು ಕಂಡು ಹಿಡಿದಿರುವ ಹೊಸ ಮಾತ್ರೆಗಳ ಪರಿಣಾಮವು ಹೆಚ್ಚು ಕಾಲ ಉಳಿಯುವುದಿಲ್ಲ. ಇದನ್ನು ಪುರುಷರು ಅಗತ್ಯವಿರುವಾಗ ಮಾತ್ರ ತೆಗೆದುಕೊಳ್ಳುತ್ತಾರೆ ಎಂದು ಸಂಶೋಧಕರು ಹೇಳಿದ್ದಾರೆ. ಹಾಗಾಗಿ ಇದು ಫಲವತ್ತತೆಗೆ ಸಂಬಂಧಿಸಿದಂತೆ ನಿರ್ಧಾರ ತೆಗೆದುಕೊಳ್ಳಲು ಪುರುಷರಿಗೆ ನೆರವಾಗುತ್ತದೆ ಎನ್ನುತ್ತಾರೆ ಸಂಶೋಧಕರು.  

Laser Technology : ರಕ್ತನಾಳ ಬ್ಲಾಕೇಜ್ ತಡೆಯುತ್ತೆ ಲೇಸರ್ ಚಿಕಿತ್ಸೆ

ಮನುಷ್ಯನ ಮೇಲೆ ಬಾಕಿ ಇದೆ ಪ್ರಯೋಗ : ಸಂಶೋಧನಾ ತಂಡ ಈಗಾಗಲೇ ಇಲಿಗಳ ಮೇಲೆ ಪ್ರಯೋಗ ಮಾಡಿ ಯಶಸ್ವಿಯಾಗಿದೆ. ಈಗ ಮನುಷ್ಯರ ಮೇಲೆ ಪ್ರಯೋಗ ನಡೆಯಬೇಕಿದೆ. ಅದಕ್ಕಿಂತ ಮೊದಲು ಸಂಶೋಧನಾ ತಂಡ ವರದಿಯನ್ನು ಪ್ರಕಟಿಸಿದೆ. ಒಂದು ವೇಳೆ ಮನುಷ್ಯರ ಮೇಲೆ ನಡೆಯುವ ಈ ಮಾತ್ರೆ ಪ್ರಯೋಗ ಯಶಸ್ವಿಯಾದ್ರೆ ಪುರುಷರಿಗೆ ಗರ್ಭನಿರೋಧಕ ಮಾತ್ರೆ ಸಿಗಲಿದೆ. ಅನಗತ್ಯ ಗರ್ಭಧಾರಣೆ ತಡೆಯಲು ಪುರುಷರು ಯಾವುದೇ ಅಡ್ಡಪರಿಣಾಮವಿಲ್ಲದ ಈ ಮಾತ್ರೆಯನ್ನು ಸೇವಿಸಬಹುದಾಗಿದೆ. 
 

click me!