Cleaning Tips : ಸ್ನಾನ ಮಾಡೋವಾಗ ನಾಭಿ ಮರೆಯೋದು ತಪ್ಪಲ್ವಾ?

By Suvarna NewsFirst Published Aug 10, 2022, 1:46 PM IST
Highlights

ಸೋಪ್ ಹಚ್ಚಿ ಕೈಕಾಲು ಉಜ್ಜಿದ್ರೆ ಸಾಲದು. ಸ್ವಲ್ಪ ಹೊಕ್ಕಳ ಬಗ್ಗೆಯೂ ಗಮನ ನೀಡ್ಬೇಕು. ಹೊಕ್ಕಳಿಂದ ಗಬ್ಬು ವಾಸನೆ ಬರ್ತಿದ್ರೆ ನಿರ್ಲಕ್ಷ್ಯ ಮಾಡ್ಬೇಡಿ. ಅಪಾಯ ಹೆಚ್ಚಾಗುವ ಮೊದಲು ಎಚ್ಚೆತ್ತುಕೊಳ್ಳಿ.
 

ನಾವೆಲ್ಲ ಸ್ವಚ್ಛತೆ ಬಗ್ಗೆ ಹೆಚ್ಚು ಗಮನ ನೀಡ್ತೇವೆ ನಿಜ. ಪ್ರತಿ ದಿನ ಎರಡು ಬಾರಿ ಸ್ನಾನ ಮಾಡುವವರಿದ್ದಾರೆ. ಇಷ್ಟಾದ್ರೂ ದೇಹದ ಕೆಲ ಭಾಗಗಳ ಸ್ವಚ್ಛತೆ ಬಗ್ಗೆ ಹೆಚ್ಚಿನ ಗಮನ ನೀಡುವುದಿಲ್ಲ. ಶುಚಿತ್ವದ ವಿಷಯದಲ್ಲಿ ನಿರ್ಲಕ್ಷಿಸಲ್ಪಡುವ ದೇಹದ ಅಂತಹ ಭಾಗಗಳಲ್ಲಿ ಹೊಕ್ಕುಳೂ ಒಂದು. ಈ ಭಾಗವನ್ನು ಸ್ವಚ್ಛಗೊಳಿಸಲು ಯಾರೂ ಹೆಚ್ಚಾಗಿ ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ಹೊಕ್ಕಳಿನ ಸ್ವಚ್ಛತೆ ಕೂಡ ಬಹಳ ಮುಖ್ಯ. ಹೊಕ್ಕಳು ಸ್ವಚ್ಛವಾಗಿಲ್ಲವೆಂದ್ರೆ ಅದ್ರಲ್ಲಿ ಸೋಂಕು ಕಾಣಿಸಿಕೊಳ್ಳುವ ಸಾಧ್ಯತೆಯಿರುತ್ತದೆ.  ಈವರೆಗೂ ಗೊತ್ತಿರದ ಬ್ಯಾಕ್ಟೀರಿಯಾ ಹೊಕ್ಕಳಲ್ಲಿ ಕಾಣಿಸಿಕೊಂಡಿದೆ ಎಂದು ವಿಜ್ಞಾನಿಗಳು ಇತ್ತೀಚಿಗೆ ಹೇಳಿದ್ದಾರೆ. ಜಪಾನಿನ ವ್ಯಕ್ತಿಯೊಬ್ಬನ ನಾಬಿಯಲ್ಲಿ ಮಣ್ಣಿನಲ್ಲಿರುವ ಬ್ಯಾಕ್ಟೀರಿಯಾವೊಂದು ಕಾಣಿಸಿಕೊಂಡಿದೆ. 
ಹೊಕ್ಕಳಿ (Belly Button) ನಲ್ಲಿ ಕಾಣಿಸಿಕೊಳ್ಳುವ ಸೋಂಕು (Infection) ದುರ್ವಾಸನೆಯನ್ನು ಉಂಟುಮಾಡಬಹುದು. ನಾಭಿ ಸ್ವಚ್ಛವಾಗಿರಬೇಕು, ಅದ್ರಿಂದ ವಾಸನೆ ಬರಬಾರದು ಎನ್ನುವವರು ನಾಭಿ ಕ್ಲೀನ್ ಮಾಡಬೇಕು. ನಿಯಮಿತವಾಗಿ ಅದನ್ನು ಸ್ವಚ್ಛಗೊಳಿಸಿಕೊಳ್ಳಬೇಕು.  

ಹೊಕ್ಕಳಿನ ಸ್ವಚ್ಛತೆ ಹೀಗಿರಲಿ : 

1. ನಾಭಿ ಸ್ವಚ್ಛತೆಗೆ ಇದು ಒಳ್ಳೆ ಸಮಯ : ಸ್ನಾನ ಮಾಡುವಾಗ ಹೊಕ್ಕುಳನ್ನು ಸ್ವಚ್ಛಗೊಳಿಸುವುದು ಒಳ್ಳೆಯ ವಿಧಾನವಾಗಿದೆ. ಹೊಕ್ಕಳ ಸ್ವಚ್ಛತೆಯನ್ನು ವಾರದಲ್ಲಿ ಒಂದು ದಿನ ಮಾಡುವಂತಹದ್ದಲ್ಲ. ಪ್ರತಿದಿನ ಮಾಡುವುದು ಅವಶ್ಯಕ. ಹೆಚ್ಚು ಬೆವರುವ ವ್ಯಕ್ತಿಗಳು ಪ್ರತಿ ದಿನ ನಾಭಿಯನ್ನು ಕ್ಲೀನ್ ಮಾಡ್ಬೇಕು. 

2. ಸೋಪ್ ಮತ್ತು ನೀರು :  ನಾಭಿ ದೇಹದ ಭಾಗವಾಗಿದ್ದು, ಅದನ್ನು ಸ್ವಚ್ಛಗೊಳಿಸಲು ವಿಶೇಷ ಶಾಂಪೂ ಅಥವಾ ಸೋಪ್ ಅಗತ್ಯವಿಲ್ಲ. ಉಗುರು ಬೆಚ್ಚನೆಯ ನೀರಿನೊಂದಿಗೆ ಸೋಪ್ ಬಳಸಿ ಅದನ್ನು ಕ್ಲೀನ್ ಮಾಡ್ಬಹುದು. ಸೋಪಿನ ಮಿಶ್ರಣವನ್ನು ನಾಭಿಗೆ ಹಚ್ಚಿ, ನಿಧಾನವಾಗ ಕೈನಿಂದ ಉಚ್ಚಿ, ಕೊಳಕನ್ನು ತೆಗೆಯಬೇಕು.  ನಂತ್ರ ನೀರಿನಿಂದ ತೊಳೆಯಬೇಕು. ಆರೊಮ್ಯಾಟಿಕ್ ಸೋಪ್‌ಗಳು ಹೊಕ್ಕುಳ ಚರ್ಮದಲ್ಲಿ ತುರಿಕೆಗೆ ಕಾರಣವಾಗಬಹುದು. 

3. ಉಪ್ಪು ನೀರು : ಹೊಕ್ಕಳಿನ ಸ್ವಚ್ಛತೆಗೆ ಉಪ್ಪು ನೀರನ್ನು ಕೂಡ ನೀವು ಬಳಸಬಹುದು. ಒಂದು ಕಪ್ ನೀರಿಗೆ 1 ಚಮಚ ಉಪ್ಪನ್ನು ಮಿಕ್ಸ್ ಮಾಡಿ ಶುದ್ಧ ಬಟ್ಟೆಯನ್ನು ಅದರಲ್ಲಿ ಅದ್ದಿ, ಅದರ ಸಹಾಯದಿಂದ ಹೊಕ್ಕಳನ್ನು ಕ್ಲೀನ್ ಮಾಡ್ಬೇಕು.  ಉಪ್ಪು ನೀರು ಕೊಳೆಯನ್ನು ಹೋಗಲಾಡಿಸುವುದು ಮಾತ್ರವಲ್ಲದೆ ರೋಗಾಣುಗಳನ್ನು ಸಹ ತೆಗೆದುಹಾಕುತ್ತದೆ.    

4. ನಾಭಿ ಆಳವಾಗಿದ್ದರೆ ಹೀಗೆ ಮಾಡಿ : ಅನೇಕ ಜನರಿಗೆ ಹೊಕ್ಕಳು ಆಳವಾಗಿರುತ್ತದೆ. ಈ ಸಂದರ್ಭದಲ್ಲಿ, ಸ್ವಚ್ಛಗೊಳಿಸುವ ವಿಧಾನವೂ ಬದಲಾಗುತ್ತದೆ. ಏಕೆಂದರೆ ಆಳವಾದ ಹೊಕ್ಕಳಿನ ಆಳದಲ್ಲಿ ಕೊಳಕಿರುತ್ತದೆ. ಅದನ್ನು ಸ್ವಚ್ಛಗೊಳಿಸಲು ನೀವು ಹತ್ತಿ ಸ್ವ್ಯಾಬ್ ಬಳಸಬಹುದು.

ಕಾರ್ನ್ ಸಿಲ್ಕ್ ಮರೆತು ಕೂಡ ಎಸೆಯಬೇಡಿ, ಇದನ್ನು ಈ ರೀತಿ ಬಳಸಬಹುದು ಕೇಳಿಸ್ಕೊಳ್ಳಿ!

5. ಕಾಳಜಿ : ನಾಭಿ ಚರ್ಮವು ತುಂಬಾ ಮೃದುವಾಗಿರುತ್ತದೆ, ಸೂಕ್ಷ್ಮವಾಗಿರುತ್ತದೆ. ಆದ್ದರಿಂದ ಅದನ್ನು ಅತ್ಯಂತ ಸೌಮ್ಯವಾದ ಕೈಗಳಿಂದ ಸ್ವಚ್ಛಗೊಳಿಸಿ. ಇಲ್ಲದಿದ್ದರೆ ಗಾಯವಾಗುವ ಸಾಧ್ಯತೆಯಿರುತ್ತದೆ.  

6. ಬ್ಯಾಕ್ಟೀರಿಯಾ ಬೆಳವಣಿಗೆ : ಹೊಕ್ಕುಳನ್ನು ಸ್ವಚ್ಛಗೊಳಿಸುವುದು ಎಷ್ಟು ಮುಖ್ಯವೋ ಅದನ್ನು ಒಣಗಿಸುವುದು ಕೂಡ ಅಷ್ಟೇ ಮುಖ್ಯ. ನಾಭಿಯನ್ನು ಸ್ವಚ್ಛಗೊಳಿಸಿದ ನಂತರ ಅದನ್ನು ಒಣಗಿಸಲು ಮರೆಯಬೇಡಿ. ಏಕೆಂದರೆ ಹೊಕ್ಕುಳಲ್ಲಿ ನೀರು ಉಳಿದರೆ ಬ್ಯಾಕ್ಟೀರಿಯಾ ಬೆಳೆಯುವ ಸಾಧ್ಯತೆ ಹೆಚ್ಚಿರುತ್ತದೆ. ಹೊಕ್ಕಳನ್ನು ತೊಳೆದ ನಂತರ ಟವೆಲ್ ನಿಂದ ಒರೆಸಿಕೊಳ್ಳಿ.   

7. ಕ್ರೀಮ್ ಮತ್ತು ಲೋಷನ್ : ನಾಭಿ ಭಾಗಕ್ಕೆ ಕ್ರೀಮ್ ಅಥವಾ ಲೋಷನ್  ಹಚ್ಚಬೇಡಿ. ವೈದ್ಯರ ಸಲಹೆ ನಂತ್ರವೇ ಅದರ ಬಳಕೆ ಮಾಡಿ.   

Health Tips: ರಾತ್ರಿ ನಿದ್ರೆ ಹಾಳ್ಮಾಡುವ ಕಾಲ್ನೋವಿಗೆ ಇಲ್ಲಿದೆ ಪರಿಹಾರ

8. ಸೋಂಕಿನ ಲಕ್ಷಣ :  ಹೊಕ್ಕಳನ್ನು ಸ್ವಚ್ಛಗೊಳಿಸಿದ ನಂತರವೂ ವಾಸನೆ ಹೋಗದಿದ್ದರೆ ನಿಮ್ಮ ಹೊಕ್ಕಳಿನಲ್ಲಿ ಸೋಂಕಿದೆ ಎಂದರ್ಥ. ಈ ಸಮಯದಲ್ಲಿ ಚರ್ಮವು ಕೆಂಪು ಬಣ್ಣಕ್ಕೆ ತಿರುಗುತ್ತದೆ. ತುರಿಕೆಯೂ ಆಗುತ್ತದೆ. ಕೆಲವೊಮ್ಮೆ ಊತ ಕಾಣಿಸುತ್ತದೆ. ಕೀವು ಹೊರ ಬರುವ ಸಾಧ್ಯತೆಯಿದೆ. ಈ ಸಂದರ್ಭದಲ್ಲಿ ವೈದ್ಯರನ್ನು ಭೇಟಿಯಾಗಿ. 

click me!