
ಹಾಸನ (ಜೂ.26): ಯುವ ಜನರಲ್ಲಿ ಹೃದಯಾಘಾತ ಹೆಚ್ಚುತ್ತಿರುವ ಘಟನೆಯ ಸರಣಿಗಳ ನಡುವೆ, ಹಾಸನದಲ್ಲಿ ಆಗುತ್ತಿರುವ ವಿದ್ಯಮಾನ ಹಲವರ ಅಚ್ಚರಿಗೆ ಕಾರಣವಾಗಿದೆ. ಹಾಸನ ಜಿಲ್ಲೆಯಲ್ಲಿ ಹೃದಯಾಘಾತದ ಸರಣಿ ಸಾವು ಮುಂದುವರಿದಿದೆ. 24 ಗಂಟೆಯ ಅಂತರದಲ್ಲಿ ಮತ್ತೆರಡು ಹಾರ್ಟ್ ಅಟ್ಯಾಕ್ ಸಾವುಗಳು ದಾಖಲಾಗಿದೆ. ಹಾಸನ ಮೂಲದ ಯುವತಿ ಬೆಂಗಳೂರಿನಲ್ಲಿ ಗುರುವಾರ ಸಾವು ಕಂಡಿದ್ದಾರೆ.
ಹೃದಯಾಘಾತದಿಂದ 22 ವರ್ಷದ ಯುವತಿ ಸಾವು ಕಂಡಿದ್ದಾಳೆ. ಮೇ ಹಾಗೂ ಜೂನ್ ತಿಂಗಳಲ್ಲಿ ಹಾಸನ ಜಿಲ್ಲೆಯ ಒಟ್ಟು 15 ಮಂದಿ ಈವರೆಗೂ ಹಾರ್ಟ್ ಅಟ್ಯಾಕ್‌ನಿಂದ ಸಾವು ಕಂಡಿದ್ದಾರೆ. ಸುಪ್ರಿತಾ, ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಕಟ್ಟಳ್ಳಿ ಗ್ರಾಮದ ಯುವತಿ. ಗ್ರಾಮದ ಕೃಷ್ಣಮೂರ್ತಿ-ರೂಪ ದಂಪತಿಯ ಪುತ್ರಿಯಾಗಿದ್ದಾರೆ. ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ಕುಟುಂಬ ವಾಸವಿತ್ತು. ಸುಪ್ರೀತಾ ಮುಕ್ತ ವಿವಿಯಲ್ಲಿ ಪದವಿ ಓದುತ್ತಿದ್ದರು.
ವಿದ್ಯಾಭ್ಯಾಸದ ಜೊತೆಗೆ ಕೆಲಸ ಮಾಡುವ ಮೂಲಕ ಮನೆಯ ನೆರವಿಗೆ ಬಂದಿದ್ದರು. ಬುಧವಾರ ಮನೆಯಲ್ಲಿದ್ದ ವೇಳೆ ಏಕಾಏಕಿ ಎದೆನೋವು ಕಾಣಿಸಿಕೊಂಡಿದ. ಕೂಡಲೇ ಪೋಷಕರಿಗೆ ಎದೆನೋವು ಎಂದು ಹೇಳಿ ಸುಪ್ರೀತಾ ಕುಸಿದು ಬಿದ್ದಿದ್ದಾರೆ. ಆತಂಕಗೊಂಡ ಪಾಲಕರು ಆಕೆಯನ್ನು ತಕ್ಷಣವೇ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಅಷ್ಟರಲ್ಲಾಗಲೇ ಆಕೆ ಸಾವು ಕಂಡಿದ್ದಳು ಎಂದು ವೈದ್ಯರು ತಿಳಿಸಿದ್ದಾರೆ.
ಕಳೆದ 30 ದಿನಗಳ ಅವಧಿಯಲ್ಲಿ ಹಾಸನ ಜಿಲ್ಲೆಯ ಹದಿನೈದು ಮಂದಿ ಹೃದಯಾಘಾತದಿಂದ ಸಾವು ದಾಖಲಾಗಿದೆ. ಹಾಸನ ಮೂಲದ ಯುವ ಜನರ ಹಠಾತ್ ಸಾವುಗಳು ಎಲ್ಲರ ಅಚ್ಚರಿಗೆ ಕಾರಣವಾಗಿದೆ.
ಬುಧವಾರ ಕೂಡ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಮಧ್ಯಾಹ್ನ ವ್ಯಕ್ತಿಯೊಬ್ಬ ಹಾರ್ಟ್ ಅಟ್ಯಾಕ್‌ನಿಂದ ಸಾವು ಕಂಡಿದ್ದ. 32 ವರ್ಷದ ಆಟೋ ಡ್ರೈವರ್ ಯೋಗೇಶ್ ಮೃತ ದುರ್ದೈವಿ. ಚನ್ನರಾಯಪಟ್ಟಣ ತಾಲೂಕಿನ ಎಂ. ಹೊನ್ನೇನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿತ್ತು.
ಇದಕ್ಕೂ ಮುನ್ನ ಹಾಸನ ನಗರದ ಸತ್ಯಮಂಗಲ ಬಡಾವಣೆಯ 35 ವರ್ಷದ ಚೇತನ್ ಹೃದಯಾಘಾತದಿಂದ ಸಾವನ್ನಪ್ಪಿದವರು. ಕಿಕ್ಕೇರಿ ಮೂಲದ ಚೇತನ್ ಹಾಸನದ ಹಳೇ ಬಸ್ ನಿಲ್ದಾಣದ ಬಳಿ ಮೊಬೈಲ್ ಅಂಗಡಿ ಇಟ್ಟುಕೊಂಡಿದ್ದರು. ಸತ್ಯಮಂಗಲ ಬಡಾವಣೆಯಲ್ಲಿ ಪತ್ನಿ ಹಾಗೂ ಮಗುವಿನೊಂದಿಗೆ ವಾಸವಾಗಿದ್ದರು. ರಾತ್ರಿ ಅಂಗಡಿ ಬಾಗಿಲು ಹಾಕಿಕೊಂಡು ಮನೆಗೆ ಚೇತನ್ ಮನೆಗೆ ಬಂದಿದ್ದರು. ಈ ವೇಳೆ ಅವರ ಪತ್ನಿ ಊಟಕ್ಕೆ ಕರೆದಿದ್ದು, ಊಟಕ್ಕೆ ಕುಳಿತುಕೊಳ್ಳುವಾಗ ದಿಢೀರ್ ಎದೆನೋವು ಕಾಣಿಸಿಕೊಂಡಿದೆ. ಎದೆ ನೋಯುತ್ತಿದೆ ಎಂದು ಪತ್ನಿಗೆ ಹೇಳಿ, ಮೇಲೆ ಎದ್ದೇಳುವಾಗಲೇ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಷ್ಟರಲ್ಲಿ ಚೇತನ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಮೇ 20 ರಂದು ಅರಕಲಗೂಡು ತಾಲೂಕಿನ ಅಭಿಷೇಕ್, ಹೊಳೆನರಸೀಪುರದ 20 ವರ್ಷದ ವಿದ್ಯಾರ್ಥಿನಿ ಸಂಧ್ಯಾ ಸಾವು ಕಂಡಿದ್ದರು. 28 ರಂದು ಮತ್ತೋರ್ವ ವಿದ್ಯಾರ್ಥಿನಿ ಸಾವು ಕಂಡಿದ್ದಳು. ಜೂನ್ 11ರಂದು ಹೊಳೆನರಸೀಪುರದ ಯುವಕ ನಿಶಾಂತ್ ಸಾವು, ಜೂನ್ 12ರಂದು ಕೆಎಸ್ ಆರ್ ಟಿಸಿ ಬಸ್ ನಲ್ಲಿ ಸಾರಿಗೆ ಸಿಬ್ಬಂದಿ ನಾಗಪ್ಪ ಸಾವು, ಅದೇ ದಿನ ಹಾಸನ ನಗರಸಭೆ ಮಾಜಿ ಸದಸ್ಯ ನೀಲಕಂಠಪ್ಪ ಸಾವು ಕಂಡಿದ್ದರು.
ಅದಾದ ಬಳಿಕ ಜೂ. 13 ರಂದು ಚನ್ನರಾಯಪಟ್ಟಣದ ಗ್ರಾಮ ಲೆಕ್ಕಿಗ ದೇವರಾಜ್ ಎಂಬುವರು ಕಾರಲ್ಲೇ ಹೃದಯಾಘಾತಕ್ಕೆ ಬಲಿಯಾಗಿದ್ದರೆ, ಆ ಬಳಿಕ ಸತೀಶ್, ಜೂನ್ 14 ರಂದು ಕಾಂತರಾಜು, ಜೂನ್ 18 ರಂದು ರಸೀಕೆರೆ ಮೂಲದ ಶಿರಾದಲ್ಲಿ ಕೆಲಸ ಮಾಡುತ್ತಿದ್ದ ಅರಣ್ಯ ಇಲಾಖೆ ನೌಕರ ನವೀನ್ ಮೃತಪಟ್ಟಿದ್ದರು. ಜೂನ್ 21ರಂದು ಬೇಲೂರಿನ ನಿಶಾದ್ ಅಹ್ಮದ್ ಸಾವು ಕಂಡಿದ್ದರು.
ಅಸಮತೊಲನದ ಅಹಾರ ಸೇವನೆ ಹಾಗೂ ಜೀವನ ಶೈಲಿಯಿಂದಲೇ ಹಾರ್ಟ್ ಅಟ್ಯಾಕ್ ಹೆಚ್ಚುತ್ತಿದೆ ಎಂದು ಹಾಸನ ಡಿಎಚ್‌ಓ ಡಾ.ಅನಿಲ್ ತಿಳಿಸಿದ್ದಾರೆ. ಕಳೆದ 2 ವರ್ಷಗಳಲ್ಲಿ 507 ಮಂದಿಗೆ ಹೃದಯಾಘಾತವಾಗಿದ್ದು, 20 ರಿಂದ 30 ವರ್ಷದ 14 ಮಂದಿ, 30 ರಿಂದ 40 ವರ್ಷದ 40 ಮಂದಿ, 40 ವರ್ಷ ಮೇಲ್ಪಟ್ಟವರ ಪೈಕಿ 136 ಮಂದಿಗೆ ಹೃದಯಾಘಾತವಾಗಿದೆ. ಈ ಅವಧಿಯಲ್ಲಿ 140 ಮಂದಿ ಸಾವು ಕಂಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.