
ಹಾಸನ(ಮೇ.23) ಕುಟುಂಸ್ಥರು, ಆಪ್ತರು ಸೇರಿದಂತೆ ಎಲ್ಲರೂ ಮದುವೆಗೆ ಹಾಜರಾಗಿದ್ದಾರೆ. ಅದ್ಧೂರಿ ಮದುವೆ ಅದು. ಮದುವೆ ಕಾರ್ಯಗಳು ಆರಂಭಗೊಂಡಿದೆ. ಮಂತ್ರಘೋಷಗಳು ಮೊಳಗಿದೆ. ಇತ್ತ ಘಟ್ಟಿ ಮೇಳ ಮೊಳಗುತ್ತಿದ್ದಂತೆ ವರ ತಾಳಿ ಹಿಡಿದು ಕಟ್ಟಲು ಸಜ್ಜಾಗಿದ್ದಾರೆ. ಆದರೆ ಇನ್ನೇನು ತಾಳಿ ಕಟ್ಟಬೇಕು ಅನ್ನುಷ್ಟರಲ್ಲಿ ವಧು ಮದುವೆ ಬೇಡ ಎಂದ ಘಟನೆ ಹಾಸನದಲ್ಲಿ ನಡೆದಿದೆ. ತಾಳಿ ಕಟ್ಟುವ ಕೆಲವೇ ಕ್ಷಣಗಳ ಮೊದಲು ಪ್ರಿಯಕರನ ಕರೆ ಬಂದಿದೆ. ಕಾಲ ಮಿಂಚಿದರೂ ಗಟ್ಟಿ ನಿರ್ಧಾರ ಮಾಡಿದ ವಧು ಮದುವೆ ಬೇಡ ಎಂದಿದ್ದಾಳೆ. ಇತ್ತ ಹುಡುಗಿ ಪೋಷಕರು ಮನ ಒಲಿಸುವ ಪ್ರಯತ್ನ ಮಾಡಿದ್ದಾರೆ. ಇತ್ತ ವರ ಕೂಡ ಮನವಿ ಮಾಡಿಕೊಂಡಿದ್ದಾನೆ. ಆದರೆ ಯಾರ ಮಾತು ಕೇಳದ ವಧು ಹಸಮಣೆಯಿಂದ ಎದ್ದು ಹೊರನಡೆದಿದ್ದಾಳೆ. ಈ ಮೂಲಕ ಕೊನೆಯ ಕ್ಷಣದಲ್ಲಿ ಮದುವೆ ಮುರಿದು ಬಿದ್ದಿದೆ.
ಹಾಸನ ತಾಲ್ಲೂಕಿನ ಬೂವನಹಳ್ಳಿ ಗ್ರಾಮದ ಪಲ್ಲವಿ ಹಾಗೂ ಆಲೂರು ತಾಲ್ಲೂಕಿನ ವೇಣುಗೋಪಾಲ ಜಿ ಜೊತೆ ಮದುವೆ ನಿಶ್ಚಯವಾಗಿತ್ತು. ಹಾಸನ ನಗರದ ಶ್ರೀ ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ಮದುವೆಗೆ ಎಲ್ಲಾ ತಯಾರಿ ಮಾಡಿಕೊಳ್ಳಲಾಗಿತ್ತು. ಶುಭಮುಹೂರ್ತದಲ್ಲಿ ಮದುವೆ ಕಾರ್ಯಗಳು ಆರಂಭಗೊಂಡಿದೆ. ಅದ್ಧೂರಿ ಮದುವೆಗೆ ಕುಟುಂಬಸ್ಥರು ಎಲ್ಲಾ ವ್ಯವಸ್ಥೆ ಮಾಡಿದ್ದಾರೆ. ಸಾವಿರಕ್ಕೂ ಹೆಚ್ಚು ಆಪ್ತರು, ಕುಟುಂಬಸ್ಥರು ಆಗಮಿಸಿದ್ದಾರೆ. ಆದರೆ ಕೊನೆಯ ಘಳಿಗೆಯಲ್ಲಿ ಮದುವೆ ನಿಂತು ಹೋಗಿ ರಾದ್ಧಾಂತವಾಗಿದೆ.
ಬೇರೊಬ್ಬರನ ಜೊತೆ ಪ್ರೀತಿ, ತಾಳಿ ಕಟ್ಟುವಾಗ ಮುರಿದು ಬಿದ್ದ ಮದುವೆ
ಶುಭಮುಹೂರ್ತದಲ್ಲಿ ಪೋರೋಹಿತರು ಮದುವೆ ಕಾರ್ಯ ಆರಂಭಿಸಿದ್ದಾರೆ. ಆದರೆ ಇನ್ನೇನು ತಾಳಿ ಕಟ್ಟುವ ಮೊದಲು ಪ್ರಿಯಕರ ಕರೆ ಬಂದಿದೆ. ಇದರ ಬೆನ್ನಲ್ಲೇ ವಧು ತನಗೆ ಮದುವೆ ಬೇಡ ಎಂದಿದ್ದಾಳೆ. ಆರಂಭದಲ್ಲಿ ಕಾರಣ ಹೇಳದೆ ಮದುವೆ ಬೇಡ ಎಂದಿದ್ದಾಳೆ. ತಾಳಿ ಕಟ್ಟಲು ಮುಂದಾದ ವರ ನಿಜವಾಗಿಯೂ ಮದುವೆ ಇಷ್ಟವಿದೆಯಾ ಎಂದು ಹಲವರು ಬಾರಿ ಪ್ರಶ್ನಿಸಿದ್ದಾನೆ. ತನಗೆ ಮದುವೆ ಇಷ್ಟವಿಲ್ಲ ಎಂದಿದ್ದ ವಧುವಿನ ಬಳಿಕ ಕಾರಣವನ್ನೂ ಕೇಳಿದ್ದಾನೆ. ಇತ್ತ ಪೋಷಕರು, ಕುಟುಂಬಸ್ಥರು ವಧುವನ್ನು ಮನ ಒಲಿಸುವ ಪ್ರಯತ್ನ ಮಾಡಿದ್ದಾರೆ. ಗದರಿಸಿ, ಬೆದರಿಸಿ ಮದುವೆ ಮಾಡುವ ಪ್ರಯತ್ನ ಮಾಡಿದ್ದಾರೆ. ತಾನು ಬೇರೊಬ್ಬ ಹುಡುಗನ ಪ್ರೀತಿಸುತ್ತಿರುವುದಾಗಿ ಹೇಳಿದ್ದಾಳೆ.
ನೋವಿನಿಂದ ಕಣ್ಣೀರಿಟ್ಟ ವರ
ಕೈಯಲ್ಲಿ ತಾಳಿ ಹಿಡಿದು ನಿಂತ ವರನಿಗೆ ತಾಳಿ ಕಟ್ಟಲು ಸಾಧ್ಯವಾಗಲಿಲ್ಲ. ಮದುವೆ ಬೇಡ ಎಂದು ಹಠ ಹಿಡಿದ ವಧುವಿಗೆ ಪೋಷಕರು, ಆಪ್ತರು ತಾಳಿ ಕಟ್ಟಲು ಸೂಚಿಸಿದರೂ ವರ ತಾಳಿ ಕಟ್ಟಲು ಸಾಧ್ಯವಾಗದೇ ನಿಂತಿದ್ದಾನೆ. ಬೇರೊಬ್ಬನ ಪ್ರೀತಿಸುವ ಹುಡುಗಿ, ಆಕೆಯೇ ಮದುವೆ ಬೇಡ ಎನ್ನುತ್ತಿದ್ದಾಳೆ. ಹೀಗಿರುವಾಗ ತಾಳಿ ಹೇಗೆ ಕಟ್ಟಲಿ ಎಂದು ವರ ತಾಳಿ ಕಟ್ಟಿಲ್ಲ. ಈಶ್ವರಹಳ್ಳಿ ಕೂಡಿಗೆಯಲ್ಲಿ ಸರ್ಕಾರಿ ಶಾಲೆ ಶಿಕ್ಷಕನಾಗಿರುವ ವೇಣುಗೋಪಾಲ.ಜಿ ದುಡಿದ ಹಣದಲ್ಲಿ ಲಕ್ಷ ಲಕ್ಷ ರೂಪಾಯಿ ಖರ್ಚು ಮಾಡಿ ಅದ್ದೂರಿ ಮದುವಗೆ ವ್ಯವಸ್ಥೆ ಮಾಡಿದ್ದ. ಬಂಧು ಬಳಕ ಆಪ್ತರನ್ನೂ ಆಹ್ವಾನಿಸಿದ್ದ. ಆದರೆ ತನ್ನ ಮದುವೆ ಹೀಗಾಯಿತಲ್ಲ ಎಂದು ವರ ಕೂಡ ಕಣ್ಮೀರಿಟ್ಟಿದ್ದಾನೆ.
ಮಗಳ ನಿರ್ಧಾರಿಂದ ಆಘಾತಗೊಂಡ ಪೋಷಕರು
ಕೊನೆಯ ಕ್ಷಣದಲ್ಲಿ ಮದುವೆ ಬೇಡ ಎಂದ ಮಗಳನ್ನು ಪೋಷಕರು ಪರಿಪರಿಯಾಗಿ ಬೇಡಿಕೊಂಡಿದ್ದಾರೆ. ಆದರೆ ಮಗಳು ಪಲ್ಲವಿ ನಿರ್ಧಾರ ಬದಲಿಸಿಲ್ಲ. ಮಗಳ ಮದುವೆಗೆ ಹಗಳಿರುಳು ದುಡಿದ ಪೋಷಕರು ಕೊನೆಯ ಕ್ಷಣದಲ್ಲಿ ಮದುವೆ ಮುರಿದು ಬಿದ್ದ ತೀವ್ರ ನೋವು ಅನುಭವಿಸಿದ್ದರೆ. ಮಗಳ ನಿರ್ಧಾರದಿಂದ ಆಘಾತಗೊಂಡ ಪೋಷಕರು ಕಣ್ಣೀರಿಟ್ಟಿದ್ದಾರೆ.
ಮದುವೆ ಮಂಟಪದಿಂದ ತೆರಳಿದ ವಧು
ಮದುವೆ ಬೇಡ ಎಂದು ಹಸಮಣೆಯಿಂದ ಎದ್ದ ವಧು ನೇರವಾಗಿ ತೆರಳಿದ್ದಾಳೆ. ಕಾರಿನ ಮೂಲಕ ಮದುವೆ ಮಂಟಪದಿಂದ ತೆರಳಿದ್ದಾಳೆ. ಇತ್ತ ಎರಡು ಕುಟುಂಬದ ನಡುವೆ ಭಾರಿ ಗಲಾಟೆ ನಡೆದಿದೆ. ಮದುವೆ ಮನೆ ರಣಾಂಗಣವಾಗಿದೆ. ಇತ್ತ ಬಡಾವಣೆ ಹಾಗೂ ನಗರಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.