Hassan: ಜಿಲ್ಲೆಯಲ್ಲಿ ಹೃದಯಾಘಾತಕ್ಕೆ 17ನೇ ಬಲಿ, ಆಟೋ ಓಡಿಸುವಾಗಲೇ ಹಾರ್ಟ್‌ ಅಟ್ಯಾಕ್‌!

Published : Jun 28, 2025, 10:38 AM IST
Heart Attack

ಸಾರಾಂಶ

ಹಾಸನ ಜಿಲ್ಲೆಯಲ್ಲಿ ಹೃದಯಾಘಾತದಿಂದ ಸಾವುಗಳು ಹೆಚ್ಚುತ್ತಿದ್ದು, ಇತ್ತೀಚೆಗೆ 37 ವರ್ಷದ ಆಟೋ ಚಾಲಕ ಗೋವಿಂದ್‌ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಒಂದು ತಿಂಗಳ ಅವಧಿಯಲ್ಲಿ ಹದಿನೇಳು ಮಂದಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಹಾಸನ (ಜೂ.28): ಹಾಸನ ಜಿಲ್ಲೆಯಲ್ಲಿ ಹೃದಯಾಘಾತ ಹಾಗೂ ಕಾರ್ಡಿಯಾಕ್‌ ಅರೆಸ್ಟ್‌ನಿಂದ ಆಗುವ ಸಾವುಗಳಿಗೆ ಕೊನೆಯೇ ಸಿಗುತ್ತಿಲ್ಲ. ರಾಜ್ಯ ಆರೋಗ್ಯ ಇಲಾಖೆ ಕೂಡ ಈ ಬಗ್ಗೆ ಗಮನಹರಿಸುತ್ತಿಲ್ಲ. ಇದರ ನಡುವೆ ಶನಿವಾರ ಜಿಲ್ಲೆಯಲ್ಲಿ ಹೃದಯಾಘಾತಕ್ಕೆ ಮತ್ತೊಂದು ಬಲಿಯಾಗಿದೆ.

37 ವರ್ಷದ ವ್ಯಕ್ತಿ ಗೋವಿಂದ್‌ ಹೃದಯಾಘಾತದಿಂದ ಶನಿವಾರ ಸಾವು ಕಂಡಿದ್ದಾರ. ಹಾಸನದ ಸಿದ್ದೇಶ್ವರ್ ನಗರದಲ್ಲಿ ಘಟನೆ ನಡೆದಿದೆ. ಆಟೋ ಚಾಲಕನಾಗಿದ್ದ ಗೋವಿಂದ, ಶನಿವಾರ ಬೆಳಗ್ಗೆ 7 ಗಂಟೆಯ ಸಮಯದಲ್ಲಿ ಆಟೋ ರೈಡ್‌ ಮಾಡುವಾಗ ಎದೆನೋವು ಕಾಣಿಸಿಕೊಂಡಿತ್ತು. ಎದೆನೋವು ಕಾಣಿಸಿಕೊಂಡ ಬೆನ್ನಲ್ಲಿಯೇ ಆಟೋ ಚಲಾಯಿಸಿಕೊಂಡೇ ಜಿಲ್ಲಾಸ್ಪತ್ರೆಗೆ ಗೋವಿಂದ್‌ ಒಬ್ಬರೇ ತೆರಳಿದ್ದಾರೆ. ಆದರೆ, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ವೇಳೆಯಲ್ಲಿಯೇ ಹೃದಯಾಘಾತದಿಂದ ಗೋವಿಂದ ಸಾವು ಕಂಡಿದ್ದಾರೆ. ಒಂದು ತಿಂಗಳ ಅಂತರದಲ್ಲಿ ಹದಿನೇಳು ಮಂದಿ ಹೃದಯಾಘಾತದಿಂದ ಜಿಲ್ಲೆಯಲ್ಲಿ ಸಾವು ಕಂಡಂತಾಗಿದೆ.

ಗುರುವಾರವಷ್ಟೇ ಹಾಸನದಲ್ಲಿ 24 ಗಂಟೆಯ ಅಂತರದಲ್ಲಿ ಇಬ್ಬರು ಹೃದಯಾಘಾತದಿಂದ ಸಾವು ಕಂಡಿದ್ದರು. ಹಾಸನ ಮೂಲದ ಯುವತಿ ಸುಪ್ರೀತಾ ತನ್ನ 22ನೇ ವಯಸ್ಸಿನಲ್ಲಿಯೇ ಮೃತಪಟ್ಟಿದ್ದಳು. ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಕಟ್ಟಳ್ಳಿ ಗ್ರಾಮದ ಯುವತಿ ಆಗಿದ್ದ ಸುಪ್ರೀತಾ ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ಹಾರ್ಟ್‌ ಅಟ್ಯಾಕ್‌ನಿಂದ ಸಾವು ಕಂಡಿದ್ದರು. ಅದಕ್ಕೂ ಮುನ್ನ ಬುಧವಾರ ಚನ್ನರಾಯಪಟ್ಟಣದಲ್ಲಿ ಮಧ್ಯಾಹ್ನ ವ್ಯಕ್ತಿಯೊಬ್ಬ ಹಾರ್ಟ್‌ ಅಟ್ಯಾಕ್‌ನಿಂದ ಸಾವು ಕಂಡಿದ್ದ. 32 ವರ್ಷದ ಆಟೋ ಡ್ರೈವರ್‌ ಯೋಗೇಶ್‌ ಮೃತ ದುರ್ದೈವಿ. ಚನ್ನರಾಯಪಟ್ಟಣ ತಾಲೂಕಿನ ಎಂ. ಹೊನ್ನೇನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿತ್ತು.

ಮೇ 20 ರಂದು ಅರಕಲಗೂಡು ತಾಲೂಕಿನ ಅಭಿಷೇಕ್, ಹೊಳೆನರಸೀಪುರದ 20 ವರ್ಷದ ವಿದ್ಯಾರ್ಥಿನಿ ಸಂಧ್ಯಾ ಸಾವು ಕಂಡಿದ್ದರು. 28 ರಂದು ಮತ್ತೋರ್ವ ವಿದ್ಯಾರ್ಥಿನಿ ಸಾವು ಕಂಡಿದ್ದಳು. ಜೂನ್ 11ರಂದು ಹೊಳೆನರಸೀಪುರದ ಯುವಕ ನಿಶಾಂತ್ ಸಾವು, ಜೂನ್ 12ರಂದು ಕೆಎಸ್ ಆರ್​​ ಟಿಸಿ ಬಸ್​ ನಲ್ಲಿ ಸಾರಿಗೆ ಸಿಬ್ಬಂದಿ ನಾಗಪ್ಪ ಸಾವು, ಅದೇ ದಿನ ಹಾಸನ ನಗರಸಭೆ ಮಾಜಿ ಸದಸ್ಯ ನೀಲಕಂಠಪ್ಪ ಸಾವು ಕಂಡಿದ್ದರು.

ಅದಾದ ಬಳಿಕ ಜೂ. 13 ರಂದು ಚನ್ನರಾಯಪಟ್ಟಣದ ಗ್ರಾಮ ಲೆಕ್ಕಿಗ ದೇವರಾಜ್ ಎಂಬುವರು ಕಾರಲ್ಲೇ ಹೃದಯಾಘಾತಕ್ಕೆ ಬಲಿಯಾಗಿದ್ದರೆ, ಆ ಬಳಿಕ ಸತೀಶ್‌, ಜೂನ್‌ 14 ರಂದು ಕಾಂತರಾಜು, ಜೂನ್‌ 18 ರಂದು ಅರಸೀಕೆರೆ ಮೂಲದ ಶಿರಾದಲ್ಲಿ ಕೆಲಸ ಮಾಡುತ್ತಿದ್ದ ಅರಣ್ಯ ಇಲಾಖೆ ನೌಕರ ನವೀನ್ ಮೃತಪಟ್ಟಿದ್ದರು. ಜೂನ್ 21ರಂದು ಬೇಲೂರಿನ ನಿಶಾದ್ ಅಹ್ಮದ್ ಸಾವು ಕಂಡಿದ್ದರು.

ಅಸಮತೊಲನದ ಅಹಾರ ಸೇವನೆ ಹಾಗೂ ಜೀವನ ಶೈಲಿಯಿಂದಲೇ ಹಾರ್ಟ್‌ ಅಟ್ಯಾಕ್‌ ಹೆಚ್ಚುತ್ತಿದೆ ಎಂದು ಹಾಸನ ಡಿಎಚ್‌ಓ ಡಾ.ಅನಿಲ್‌ ತಿಳಿಸಿದ್ದಾರೆ. ಕಳೆದ 2 ವರ್ಷಗಳಲ್ಲಿ 507 ಮಂದಿಗೆ ಹೃದಯಾಘಾತವಾಗಿದ್ದು, 20 ರಿಂದ 30 ವರ್ಷದ 14 ಮಂದಿ, 30 ರಿಂದ 40 ವರ್ಷದ 40 ಮಂದಿ, 40 ವರ್ಷ ಮೇಲ್ಪಟ್ಟವರ ಪೈಕಿ 136 ಮಂದಿಗೆ ಹೃದಯಾಘಾತವಾಗಿದೆ. ಈ ಅವಧಿಯಲ್ಲಿ 140 ಮಂದಿ ಸಾವು ಕಂಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

 

PREV
Read more Articles on
click me!

Recommended Stories

ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಬಿಗ್ ಶಾಕ್: ಜೀವಾವಧಿ ಶಿಕ್ಷೆ ಅಮಾನತು ಅರ್ಜಿ ವಜಾಗೊಳಿಸಿದ ಹೈಕೋರ್ಟ್
ಕೋಡಿಮಠಕ್ಕೆ ಗೃಹಸಚಿವ ಪರಂ ರಹಸ್ಯ ಭೇಟಿ; ಕುತೂಹಲ ಕೆರಳಿಸಿದ ಒಂದು ಗಂಟೆಯ ಗೌಪ್ಯ ಮಾತುಕತೆ!