ಅಮೆರಿಕದಲ್ಲಿ ಪತ್ನಿ ಕೊಂದು ಭಾರತದ ಪ್ರೇಯಸಿಗೆ ಹೆಣದ ಫೋಟೋ ಕಳಿಸಿದ ತೆಲಂಗಾಣ ಮೂಲದ ಟೆಕ್ಕಿ! 9 ತಿಂಗಳಲ್ಲಿ ಅರೆಸ್ಟ್

Published : Jul 10, 2026, 12:22 PM IST

ಅಮೆರಿಕದಲ್ಲಿ ನೆಲೆಸಿದ್ದ ತೆಲಂಗಾಣ ಮೂಲದ ಸಾಫ್ಟ್‌ವೇರ್ ಎಂಜಿನಿಯರ್, ಮದುವೆಯಾದ ಕೇವಲ 6 ತಿಂಗಳಲ್ಲಿ ಪತ್ನಿಯನ್ನು ಕೊಲೆ ಮಾಡಿದ್ದಾನೆ. ಭಾರತದಲ್ಲಿದ್ದ ತನ್ನ ಪ್ರೇಯಸಿಗಾಗಿ ಈ ಕೃತ್ಯ ಎಸಗಿದ್ದು, ಪತ್ನಿಯ ಶವದ ಫೋಟೋವನ್ನು ಆಕೆಗೆ ಕಳುಹಿಸಿದ್ದ. 9ತಿಂಗಳ ಸುದೀರ್ಘ ತನಿಖೆಯ ನಂತರ ಆರೋಪಿಯನ್ನು ಬಂಧಿಸಿದ್ದಾರೆ.

PREV
16
ಮದುವೆಯಾದ 6ರೇ ತಿಂಗಳಿಗೆ ಕೊಂದ ಪಾಪಿ!

ವಾಷಿಂಗ್ಟನ್: ವಿವಾಹವಾದ ಕೇವಲ 6 ತಿಂಗಳಲ್ಲಿ ಹೆಂಡತಿಯನ್ನು ಅತಿ ಕ್ರೂರವಾಗಿ ಕತ್ತು ಹಿಸುಕಿ ಕೊಲೆ ಮಾಡಿ, ಆಕೆಯ ಶವದ  ಫೋಟೋವನ್ನು ಭಾರತದಲ್ಲಿದ್ದ ತನ್ನ ಪ್ರೇಯಸಿಗೆ ಕಳುಹಿಸಿದ್ದ ತೆಲಂಗಾಣ ಮೂಲದ ಸಾಫ್ಟ್‌ವೇರ್ ಎಂಜಿನಿಯರ್‌ನನ್ನು ಅಮೆರಿಕದ ವಾಷಿಂಗ್ಟನ್ ರಾಜ್ಯದ ಬೆಲ್ಲೆವ್ಯೂ ಪೊಲೀಸರು ಬಂಧಿಸಿದ್ದಾರೆ. 30 ವರ್ಷದ ಅವಿನಾಶ್ ನಾರ್ನೆ ಬಂಧಿತ ಆರೋಪಿಯಾಗಿದ್ದು, ಈತ ತನ್ನ ಪತ್ನಿ ರಜಿತಾ ಸಬ್ಬಿನೇನಿ (27) ಅವರನ್ನು  ಕೊಂದಿರುವುದನ್ನು ಒಪ್ಪಿಕೊಂಡಿದ್ದಾನೆ. 2025ರ ಅಕ್ಟೋಬರ್ 27ರಂದು ನಡೆದಿದ್ದ ಈ ಭೀಕರ ಕೊಲೆಯ ಆಘಾತಕಾರಿ ರಹಸ್ಯಗಳು ಅಮೆರಿಕ ಪೊಲೀಸರ 9 ತಿಂಗಳ ಸುದೀರ್ಘ ಹಾಗೂ ವ್ಯಾಪಕ ತನಿಖೆಯ ನಂತರ ಇದೀಗ ಜಗಜ್ಜಾಹೀರಾಗಿದೆ.

26
ಕಹಿ ಪಾನೀಯ ಕೊಟ್ಟು ಹಂತ ಹಂತವಾಗಿ ವಿಷಪ್ರಾಶನದ ಯತ್ನ!

ಸ್ಥಳೀಯ ಮಾಧ್ಯಮಗಳು ಮತ್ತು ಅಮೆರಿಕದ ಸುದ್ದಿವಾಹಿನಿ 'ಕಿಂಗ್ 5' ಬಿಡುಗಡೆ ಮಾಡಿರುವ ನ್ಯಾಯಾಲಯದ ದಾಖಲೆಗಳ ಪ್ರಕಾರ, ಕೊಲೆಯಾಗುವುದಕ್ಕಿಂತ ಕೆಲವು ತಿಂಗಳುಗಳ ಮುಂಚಿನಿಂದಲೇ ರಜಿತಾ ತನಗೆ ಪತಿ ತಯಾರಿಸಿಕೊಡುತ್ತಿದ್ದ ಪಾನೀಯಗಳು ಅಸಾಮಾನ್ಯವಾಗಿ ಕಹಿಯಾಗಿರುತ್ತಿವೆ ಎಂದು ಪದೇ ಪದೇ  ಹೇಳುತ್ತಿದ್ದರು. ತಾವು ಮೃತಪಟ್ಟ ದಿನವೂ ಸಹ ಅವಿನಾಶ್ ಮಾಡಿಕೊಟ್ಟಿದ್ದ ಸ್ಮೂಥಿ (ಹಣ್ಣಿನ ಜ್ಯೂಸ್) ಕುಡಿದು, ಇದು "ಔಷಧಿ" ಮತ್ತು "ಕೆಮ್ಮಿನ ಸಿರಪ್" ನಂತೆ ಕೆಟ್ಟ ಒಗರು ರುಚಿ ನೀಡುತ್ತಿದೆ ಎಂದು ರಜಿತಾ ತನ್ನ ಪತಿಗೆ ಮೆಸೇಜ್ ಮಾಡಿದ್ದರು. ಆರೋಪಿ ಅವಿನಾಶ್ ರಜಿತಾಳಿಗೆ  ಸ್ಲೋ ಪಾಯಿಸನ್ ಮಾಡಲು ಯತ್ನಿಸುತ್ತಿದ್ದ ಎಂಬ ಅಂಶಗಳು ಕೂಡ ಚಾಟ್‌ ನಿಂದ ಬಯಲಾಗಿದೆ.

36
ಬಾತ್‌ರೂಮ್‌ನಲ್ಲಿ ಹೆಂಡತಿಯ ಹೆಣ: ಗಂಡನ ಹೈಡ್ರಾಮಾ!

ದಂಪತಿಗಳು 2025ರ ಜೂನ್‌ನಲ್ಲಿ ವಿವಾಹವಾಗಿ ಜುಲೈನಿಂದ ವಾಷಿಂಗ್ಟನ್‌ನಲ್ಲಿ ಒಟ್ಟಿಗೆ ವಾಸಿಸಲು ಆರಂಭಿಸಿದ್ದರು. ಮದುವೆಯಾದ 6 ತಿಂಗಳಲ್ಲೇ, ಅಂದರೆ ಅಕ್ಟೋಬರ್ 27ರಂದು ರಾತ್ರಿ ಅವಿನಾಶ್ ಪೊಲೀಸರಿಗೆ ಕರೆ ಮಾಡಿ, "ನಾನು ಕೆಲಸ ಮುಗಿಸಿ ಮನೆಗೆ ಬಂದಾಗ ನನ್ನ ಪತ್ನಿ ಬಾತ್‌ರೂಮ್ ನ ಒಳಗೆ ಲಾಕ್ ಮಾಡಿಕೊಂಡಿದ್ದಾಳೆ, ಎಷ್ಟೇ ಕರೆದರೂ ಆ ಕಡೆಯಿಂದ ಉತ್ತರವಿಲ್ಲ" ಎಂದು ನಾಟಕವಾಡಿದ್ದ. ಸ್ಥಳಕ್ಕೆ ಧಾವಿಸಿದ ಪೊಲೀಸರು ಬಾತ್‌ರೂಮ್ ಬಾಗಿಲು ಮುರಿದು ಒಳನುಗ್ಗಿದಾಗ ರಜಿತಾ ಶವವಾಗಿ ಬಿದ್ದಿದ್ದರು. ತಾನು ಹೊರಗೆ ಹೋಗಿ ಬಂದ ಕೇವಲ 40 ನಿಮಿಷಗಳ ಅವಧಿಯಲ್ಲಿ ಯಾರೋ ಅಪರಿಚಿತರು ಬಂದು ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರನ್ನು ನಂಬಿಸಲು ಅವಿನಾಶ್ ನಾಟಕ ಮಾಡಿದ್ದ. ಆದರೆ, ಮರಣೋತ್ತರ ಪರೀಕ್ಷೆಯಲ್ಲಿ ರಜಿತಾ ಕತ್ತು ಹಿಸುಕಿದ ಪರಿಣಾಮ ಉಸಿರುಗಟ್ಟಿ ಸಾವನ್ನಪ್ಪಿರುವುದು ದೃಢಪಟ್ಟಿತ್ತು. ಇದರಿಂದ ಪೊಲೀಸರು ಇದನ್ನು ಕೊಲೆ ಪ್ರಕರಣವೆಂದು ದಾಖಲಿಸಿಕೊಂಡು ಸುದೀರ್ಫ ತನಿಖೆ ಆರಂಭಿಸಿದರು.

46
ಡಿಜಿಟಲ್ ಸಾಕ್ಷ್ಯ ಹಾಗೂ ಸ್ಮಾರ್ಟ್ ಲಾಕ್‌ನಿಂದ ಸಿಕ್ಕಿಬಿದ್ದ ಪಾಪಿ

ಕೊಲೆ ನಡೆದ ಅಪಾರ್ಟ್‌ಮೆಂಟ್‌ನ ಡಿಜಿಟಲ್ ಸೆಕ್ಯೂರಿಟಿ ಸಿಸ್ಟಮ್ ಮತ್ತು 'ಸ್ಮಾರ್ಟ್ ಲಾಕ್' ಡೇಟಾವನ್ನು ಪತ್ತೇದಾರರು ಕೂಲಂಕಷವಾಗಿ ಪರಿಶೀಲಿಸಿದಾಗ ಅವಿನಾಶ್ ಹೆಣೆದಿದ್ದ ಕಟ್ಟುಕಥೆ ಸಂಪೂರ್ಣವಾಗಿ ಸುಳ್ಳೆಂದು ಸಾಬೀತಾಯಿತು. ಅವಿನಾಶ್ ಹೊರಗೆ ಹೋಗಿದ್ದಾಗಿ ಹೇಳಿಕೊಂಡಿದ್ದ ಸಮಯದಲ್ಲಿ ಬೇರೆ ಯಾವುದೇ ಅಪರಿಚಿತ ವ್ಯಕ್ತಿ ಅಪಾರ್ಟ್‌ಮೆಂಟ್‌ ಒಳಗೆ ಬಂದೇ ಇರಲಿಲ್ಲ ಎಂಬ ಬಲವಾದ ತಾಂತ್ರಿಕ ಸಾಕ್ಷ್ಯ ಪೊಲೀಸರಿಗೆ ಲಭಿಸಿತು. ಆ ಮೂಲಕ ಕೊಲೆಗಾರ ಮನೆಯೊಳಗಿದ್ದ ಪತಿಯೇ ಎಂಬುದು ಪ್ರಾಥಮಿಕವಾಗಿ ಪತ್ತೆಯಾಯಿತು.

56
ಭಾರತದಲ್ಲಿದ್ದ ಪ್ರೇಯಸಿಗೆ ಹೆಣದ ಫೋಟೋ ರವಾನೆ!

ತನಿಖಾಧಿಕಾರಿಗಳಿಗೆ ಬೆಚ್ಚಿಬೀಳಿಸುವ ಸಾಕ್ಷ್ಯ ಸಿಕ್ಕಿದ್ದು ಅವಿನಾಶ್‌ನ ಮೊಬೈಲ್ ಕರೆಗಳು ಮತ್ತು ಹಣಕಾಸಿನ ದಾಖಲೆಗಳನ್ನು ಪರಿಶೀಲಿಸಿದಾಗ. ಅವಿನಾಶ್‌ಗೆ ಮದುವೆಗಿಂತ ಮುಂಚೆಯೇ ಭಾರತದಲ್ಲಿದ್ದ ಮಹಿಳೆಯೊಬ್ಬಳ ಜೊತೆ ಅನೈತಿಕ ಪ್ರೇಮ ಸಂಬಂಧವಿತ್ತು. ಮದುವೆಯ ನಂತರವೂ ಆಕೆಯ ಜೊತೆ ಈತ ನಿರಂತರ ಸಂಪರ್ಕದಲ್ಲಿದ್ದ ಹಾಗೂ ಆಕೆಯ ಜೊತೆಗೇ ಬದುಕಲು ಪತ್ನಿಯ ಕೊಲೆಗೆ ಸಂಚು ರೂಪಿಸಿದ್ದ. ರಜಿತಾಳನ್ನು ಕತ್ತು ಹಿಸುಕಿ ಕೊಂದ ನಂತರದ ಕೆಲವೇ ಗಂಟೆಗಳಲ್ಲಿ ಈತ ಭಾರತದಲ್ಲಿದ್ದ ತನ್ನ ಪ್ರೇಯಸಿಗೆ ಬರೋಬ್ಬರಿ ನಾಲ್ಕು ಬಾರಿ ಕರೆ ಮಾಡಿ ಮಾತನಾಡಿದ್ದ. ಅಷ್ಟೇ ಅಲ್ಲದೆ, ತನ್ನದೇ ಹೆಂಡತಿಯ ಹೆಣದ ಫೋಟೋವನ್ನು ಆಕೆಗೆ ವಾಟ್ಸಾಪ್‌ನಲ್ಲಿ ರವಾನಿಸಿದ್ದ! ವಿಚಾರಣೆಯ ವೇಳೆ ಪೊಲೀಸರ ಖೆಡ್ಡಾಕ್ಕೆ ಬಿದ್ದ ಅವಿನಾಶ್ ಈ ಎಲ್ಲ ಕೃತ್ಯಗಳನ್ನು ಒಪ್ಪಿಕೊಂಡಿದ್ದಾನೆ.

66
42 ಕೋಟಿ ರೂ. ಬಾಂಡ್; ಜೀವಾವಧಿ ಶಿಕ್ಷೆಯ ಭೀತಿ

9 ತಿಂಗಳ ಕಾಲ ಅವಿನಾಶ್‌ನ ಇಂಟರ್ನೆಟ್ ಹಿಸ್ಟರಿ, ಬ್ಯಾಂಕ್ ಖಾತೆಗಳು ಹಾಗೂ ಡಿಜಿಟಲ್ ಸಂವಹನಗಳನ್ನು ಜಾಲಾಡಿದ ಬೆಲ್ಲೆವ್ಯೂ ಪೊಲೀಸರು ಪಕ್ಕಾ ಸಾಕ್ಷ್ಯಗಳೊಂದಿಗೆ ಆತನನ್ನು ಹೆಡೆಮುರಿಕಟ್ಟಿದ್ದಾರೆ. ಪ್ರಸ್ತುತ ಆರೋಪಿಗೆ ನ್ಯಾಯಾಲಯವು ಬರೋಬ್ಬರಿ 5 ಮಿಲಿಯನ್ ಡಾಲರ್ (ಸುಮಾರು 42 ಕೋಟಿ ರೂಪಾಯಿ) ಭಾರಿ ಮೊತ್ತದ ಜಾಮೀನು ಬಾಂಡ್ ವಿಧಿಸಿ ಜೈಲಿಗಟ್ಟಿದೆ. ವಾಷಿಂಗ್ಟನ್ ರಾಜ್ಯದ ಕಠಿಣ ಕಾನೂನಿನ ಪ್ರಕಾರ, ಈತನ ಮೇಲಿನ ಕೊಲೆ ಆರೋಪ ಸಂಪೂರ್ಣ ಸಾಬೀತಾದರೆ ಕೋರ್ಟ್ ಈತನಿಗೆ ಯಾವುದೇ ಪೆರೋಲ್ ಇಲ್ಲದ ಜೀವಾವಧಿ ಕಠಿಣ ಸರಣಿ ಜೈಲು ಶಿಕ್ಷೆ ವಿಧಿಸಲಿದೆ ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories