ಮಾಯಾಮೃಗ: 1998ರಲ್ಲಿ ಡಿಡಿ ಚಂದನದಲ್ಲಿ ಪ್ರಸಾರವಾಗಿ ಪ್ರಸಿದ್ಧಿಗೆ ಬಂದ ಧಾರವಾಹಿ ಇದು. ಟಿ. ಎನ್. ಸೀತಾರಾಮ್ ಅವರು ಪಿ. ಶೇಷಾದ್ರಿ ಮತ್ತು ನಾಗೇಂದ್ರ ಶಾ ಜತೆ ಜಂಟಿಯಾಗಿ ಇದನ್ನು ನಿರ್ದೇಶನ ಮಾಡಿದ್ದರು. ಒಟ್ಟು 576 ಎಪಿಸೋಡ್‌ಗಳು ಪ್ರಕಟವಾಗಿತ್ತು. ಎಚ್‌ಜಿ ದತ್ತಾತ್ರೇಯ, ಲಕ್ಷ್ಮೀ ಚಂದ್ರಶೇಖರ್, ಜಯಶ್ರೀ, ಅವಿನಾಶ್, ಮಂಜುಭಾಷಿಣಿ ಈ ಧಾರವಾಹಿಯ ಪ್ರಮುಖ ಪಾತ್ರದಲ್ಲಿದ್ದರು.
ಮುಕ್ತ: ಈಟಿವಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮುಕ್ತ ಧಾರವಾಹಿ ತಮ್ಮ ಟೈಟಲ್ ಸಾಂಗ್‌ನಿಂದಲೂ ದೊಡ್ಡ ಮಟ್ಟದ ಜನಪ್ರಿಯತೆ ಗಳಿಸಿತ್ತು. ಟಿಎನ್ ಸೀತಾರಾಮ್ ಇದರ ಪ್ರಧಾನ ನಿರ್ದೇಶಕರಾಗಿದ್ದು 2005-2007ರವರೆಗೆ ಇದು ಕಿರುತೆರೆಯಲ್ಲಿ ಮೋಡಿ ಮಾಡಿತ್ತು. ಕರ್ನಾಟಕದ ಮನೆಮಾತಾಗಿದ್ದ ಈ ಧಾರವಾಗಿ ಸಾಮಾಜಿಕ ಮೌಲ್ಯಗಳನ್ನು ತಿಳಿಸುವುದರಲ್ಲಿ ಸಮರ್ಥವಾಗಿತ್ತು.
ಮುಕ್ತ ಮುಕ್ತ: ಟಿಎನ್ ಸೀತಾರಾಮ್ ಅವರ ಮತ್ತೊಂದು ಮೆಗಾ ಧಾರವಾಹಿ ಮುಕ್ತ ಮುಕ್ತ,, 2013ರಲ್ಲಿ ಇದು ಮುಕ್ತಾಯ ಕಂಡಿತ್ತು. ಜಾಗತೀಕರಣ, ರೈತ ಸಮಸ್ಯೆ, ನಕ್ಸಲರು,ವೈದ್ಯಕೀಯ ವ್ಯವಸ್ಥೆ, ರಾಜಕೀಯ ಬಗ್ಗೆ ವ್ಯವಸ್ಥಿತವಾಗಿ ಹೇಳಬಹುದು ಎಂದು ತೋರಿಸಿಕೊಟ್ಟ ಧಾರಾವಾಹಿ ಎನ್ನುವ ಕಾರಣಕ್ಕೆ ಸಾಕಷ್ಟು ಜನಪ್ರಿಯತೆ ಸಂಪಾದಿಸಿತ್ತು.
ಮೂಡಲಮನೆ: ಈಟಿವಿ ಕನ್ನಡದಲ್ಲಿ ಪ್ರಸಾರವಾದ ಮತ್ತೊಂದು ಪ್ರಮುಖ ಧಾರವಾಹಿ ಮೂಡಲ ಮನೆ. ತನ್ನ ಟೈಟಲ್ ಸಾಂಗ್‌ನಿಂದಾಗಿಯೂ ಜನಪ್ರಿಯತೆ ಪಡೆದಿತ್ತು. ಇದನ್ನು ವೈಶಾಲಿ ಕಾಸರವಳ್ಳಿ ನಿರ್ದೇಶನ ಮಾಡಿದ್ದರು. ಮಹಿಳೆಯೊಬ್ಬರು ನಿರ್ದೇಶನ ಮಾಡಿದ ಕನ್ನಡದ ಮೊಟ್ಟಮೊದಲ ಮೆಗಾಸೀರಿಯಲ್ ಇದಾಗಿತ್ತು. 2003ರ ಆಗಸ್ಟ್‌ನಿಂದ ಪ್ರಸಾರ ಆರಂಭವಾಗಿತ್ತು. ಇದರ ಟೈಟಲ್ ಸಾಂಗ್ ಬರೆದಿದ್ದು ಚಂದ್ರಶೇಖರ್ ಕಂಬಾರ. ಉತ್ತರ ಕರ್ನಾಟಕದ ಭಾಷೆಯ ಕಾರಣಕ್ಕಾಗಿ ಗಮನಸೆಳೆದಿತ್ತು. ಕೆಎಸ್‌ಎಲ್ ಸ್ವಾಮಿ, ಗಾಯತ್ರಿ, ರೇಣುಕಮ್ಮ, ಪದ್ಮಜಾ ರಾವ್, ಅಚ್ಯುತ್ ಕುಮಾರ್ ಈ ಸೀರಿಯಲ್‌ನಲ್ಲಿ ನಟಿಸಿದ್ದರು.
ಬದುಕು: ಬಿಗ್ ಬಾಸ್ ಮೂಲಕ ಮತ್ತೊಮ್ಮೆ ಕನ್ನಡದಲ್ಲಿ ಜಪ್ರಿಯವಾಗಿರುವ ಸಿರಿಜಾ ನಟನೆಯ ಸೀರಿಯಲ್ ಬದುಕು. ಈಟಿವಿ ಕನ್ನಡದಲ್ಲಿ ಪ್ರಸಾರವಾಗಿತ್ತು. ಮಾಳವಿಕಾ ಕೂಡ ಈ ಸೀರಿಯಲ್‌ನಲ್ಲಿ ನಟಿಸಿದ್ದರು. ರವಿಕಿರಣ್ ಅವರು ನಿರ್ದೇಶನ ಮಾಡಿದ್ದ ಸೀರಿಯಲ್ ಇದು.
ಗೃಹಭಂಗ: ಎಸ್ ಎಲ್ ಭೈರಪ್ಪ ಕಾದಂಬರಿ ಆಧಾರಿತ ಧಾರಾವಾಹಿ ಕೂಡ ಈಟಿವಿಯಲ್ಲಿ ಪ್ರಸಾರ ಕಂಡಿತ್ತು. ಗಿರೀಶ್ ಕಾಸರವಳ್ಳಿ ಇದರ ನಿರ್ದೇಶನ ಮಾಡಿದ್ದರು. ಟೈಟಲ್ ಸಾಂಗ್‌ಅನ್ನು ದೊಡ್ಡರಂಗೇಗೌಡರು ಬರೆದಿದ್ದರೆ, ಸಿ.ಅಶ್ವತ್ ಸಂಗೀತ ನೀಡಿದ್ದರು. 2004 ರಿಂದ 2005ರವರೆಗೆ ಪ್ರಸಾರವಾಗಿತ್ತು. ಮಾಳವಿಕಾ ಅವಿನಾಶ್ ಮುಖ್ಯಪಾತ್ರದಲ್ಲಿ ನಟಿಸಿದ್ದರು.
ಪಾಪ ಪಾಂಡು: ಚಿದಾನಂದ, ಶಾಲಿನಿ ಮುಖ್ಯ ಭೂಮಿಕೆಯಲ್ಲಿದ್ದ ಪಾಪ ಪಾಂಡು 2004ರಲ್ಲಿ ಈಟಿವಿಯಲ್ಲಿಯೇ ಪ್ರಸಾರವಾಗ್ತಿದ್ದ ಸೀರಿಯಲ್. ಆದರೆ, ಒಂದೇ ಕಥೆ ಇದರಲ್ಲಿ ಇರ್ತಾ ಇರಲಿಲ್ಲ. ಸಿಹಿ ಕಹಿ ಚಂದ್ರ ನಿರ್ದೇಶನದ ಈ ಧಾರವಾಹಿಯ ಹೊಸ ಅವತರಿಣಿಕೆ ಕೂಡ ಇತ್ತೀಚೆಗೆ ಪ್ರಸಾರವಾಗಿತ್ತು.
ಸಿಲ್ಲಿಲಲ್ಲಿ: ಡಾ. ವಿಠ್ಠಲ್ ರಾವ್, ಸಮಾಜಸೇವಕಿ ಲಲಿತಾಂಬ, ವಿಶಾಲೂ, ರಂಗ, ಪಲ್ಲಿ, ಸೂಜಿ, ಗೋವಿಂದ ಪಾತ್ರಗಳ ಮೂಲಕ ಜನಪ್ರಿಯತೆ ಕಂಡ ಧಾರವಾಹಿ ಸಿಲ್ಲಿಲಲ್ಲಿ. ಇಂದಿಗೂ ಜನಪ್ರಿಯ ಹಾಸ್ಯ ಧಾರವಾಹಿ. ವಿಠಲ್ ರಾವ್ ಮತ್ತು ಅವನ ಕುಟು೦ಬದ ದೈನ೦ದಿನ ಘಟನೆಗಳ ಹಾಸ್ಯವೇ ಈ ಕಿರುತೆರೆ ಧಾರಾವಾಹಿ. ಆಗಿತ್ತು. ವಿಜಯಪ್ರಸಾದ್ ಇದರ ನಿರ್ದೇಶಕರಾಗಿದ್ದರು. ಈಟಿವಿಯಲ್ಲಿ ಇದು ಪ್ರಸಾರವಾಗುತ್ತಿತ್ತು.
ರಂಗೋಲಿ: ಉದಯ ಟಿವಿಯಲ್ಲಿ ಪ್ರಸಾರವಾಗಿತ್ತಿದ್ದ ಧಾರವಾಹಿ ರಂಗೋಲಿ. ಸಿರಿಜಾ, ರೂಪೇಶ್ ಕುಮಾರ್, ನಾಗರಾಜ್ ಕೋಟೆ, ಮೈಕೋ ಮಂಜು ಈ ಧಾರವಾಹಿಯಲ್ಲಿ ನಟಿಸಿದ್ದರು.
ನಾಕುತಂತಿ: ಉದಯ ಟಿವಿಯಲ್ಲಿ 2005 ರಿಂದ 2006ರವರೆಗೆ ಪ್ರಸಾರವಾದ ಧಾರಾವಾಹಿಯನ್ನು ಬಿ ಸುರೇಶ್ ನಿರ್ದೇಶನ ಮಾಡಿದ್ದರು. ಕವಿ ದ.ರಾ.ಬೇಂದ್ರ ಅವರ ನಾಕುತಂತಿ ಕವನ ಸಂಕಲನದ “ನಾನು-ನೀನು-ಆನು-ತಾನು” ಕವಿತೆಯನ್ನೂ ಈ ಸೀರಿಯಲ್‌ಗೆ ಬಳಸಿಕೊಳ್ಳಲಾಗಿತ್ತು. ಹೆಸರಾಂತ ಸಂಗೀತ ನಿರ್ದೇಶಕ ಹಂಸಲೇಖ ಈ ಒಂದು ಹಾಡಿಗೆ ರಾಗ ಸಂಯೋಜನೆ ಮಾಡಿದ್ದರು. ಈ ಹಾಡನ್ನು ಫಯಾಜ್ ಖಾನ್ ಬಹಳ ಅದ್ಬುತವಾಗಿ ಹಾಡಿದ್ದರು. ನಾಗೇಶ್ ಮಯ್ಯ, ಶೈಲಜಾ ನಾಗ, ಸುಜಾತ, ಸೀತಾ ಕೋಟೆ, ಡಾಕ್ಟರ್ ಶಮಾ, ಶ್ರೀನಾಥ್ ವಸಿಷ್ಠ, ನಮ್ರತಾ ಗೌಡ ಸೇರಿದಂತೆ ಇನ್ನೂ ಅನೇಕ ಕಲಾವಿದರು ಈ ಸೀರಿಯಲ್‌ನಲ್ಲಿ ಅಭಿನಯಿಸಿದ್ದರು.