ಅಶ್ವಿನಿ ನಕ್ಷತ್ರದ ಹಾದಿಯಲ್ಲಿ ಹೊಸ ಧಾರಾವಾಹಿ ‘ನಿನ್ನ ಜೊತೆ ನನ್ನ ಕಥೆ’... ಇದು ಕಾಂಟ್ರಾಕ್ಟ್ ಮದುವೆಯ ಕಥೆ!

First Published | Sep 26, 2024, 4:31 PM IST

ಕನ್ನಡ ಕಿರುತೆರೆಯಲ್ಲಿ ಅದೆಷ್ಟೋ ಮದುವೆ ಆಧಾರಿತ ಕಥೆಗಳು ಬಂದು ಹೋಗಿವೆ. ಆದರೆ ಇದೀಗ 'ನಿನ್ನ ಜೊತೆ ನನ್ನ ಕಥೆ' ಎಂಬ ಹೊಸ ಧಾರಾವಾಹಿ ವೀಕ್ಷಕರಿಗೆ ಕಾಂಟ್ರಾಕ್ಟ್ ಮದುವೆಯ ಕಥೆ ಹೇಳಲು ಹೊರಟಿದೆ. ಇದು ಇನ್ನೊಂದು ಅಶ್ವಿನಿ ನಕ್ಷತ್ರ ಸೀರಿಯಲ್ ಆಗುತ್ತಾ? ಕಾದು ನೋಡಬೇಕು. 
 

ಸ್ಟಾರ್ ಸುವರ್ಣ (Star Suvarna) ವಾಹಿನಿಯಲ್ಲಿ ಹೊಸ ಕಥೆ ಶುರುವಾಗಲಿದೆ. ಅದುವೇ ನಿನ್ನ ಜೊತೆ ನನ್ನ ಕಥೆ. ಕನ್ನಡ ಕಿರುತೆರೆಯಲ್ಲಿ ಮದುವೆಯ ಅದೆಷ್ಟೋ ಕಥೆಗಳು ಬಂದು ಹೋಗಿವೆ. ಇದು ಅವುಗಳಲ್ಲಿ ಒಂದಾಗಿದೆ. ಆದರೆ ಕಥೆ ಸ್ವಲ್ಪ ವಿಭಿನ್ನವಾಗಿದೆ. ಹಿಂದೆ ಅಶ್ವಿನಿ ನಕ್ಷತ್ರದಲ್ಲಿದ್ದಂತೆ ಇದು ಕೂಡ ಕಾಂಟ್ರಾಕ್ಟ್ ಮದುವೆಯ ಕಥೆಯಾಗಿದೆ. 
 

ಈ ಕಥೆ ನಡೆಯೋದು ಮಂಡ್ಯದಲ್ಲಿ.  ಸಾಮಾನ್ಯವಾಗಿ ಮನಸು-ಮನಸುಗಳ ಬೆಸುಗೆಯಿಂದ ಮದುವೆಯಾಗುತ್ತದೆ. ಆದರೆ ಇದೊಂತರ ಡಿಫರೆಂಟ್ ಕಥೆ ಅಂತಾನೇ ಹೇಳಬಹುದು. ಯಾಕಂದ್ರೆ ಇಲ್ಲಿ ಮದುವೆಯಾಗೋದು ಹುಡುಗ-ಹುಡುಗಿ ಇಷ್ಟಪಟ್ಟು ಅಲ್ಲ. ಹಾಗಂತ, ಇಬ್ಬರು ಬಲವಂತದ ಮದುವೆಯನ್ನೂ ಆಗ್ತಿಲ್ಲ. ಒಬ್ಬರಿಗೊಬ್ಬರು ಸಹಾಯ ಮಾಡಲು ಮದುವೆ ಮಾಡಿಕೊಳ್ಳುವ ಕಾಂಟ್ರಾಕ್ಟ್ ಮದುವೆ ಇದು. 
 

Tap to resize

ಕಥಾನಾಯಕಿ ಭೂಮಿ ಚಹಾ ಮಾರುವವಳಾಗಿದ್ದು, ಪೊಲೀಸ್ ಕಾನ್ಸ್ಟೇಬಲ್ (Police Constable) ಆಗಬೇಕೆಂಬ ಕನಸನ್ನು ಹೊಂದಿರುತ್ತಾಳೆ. ಇನ್ನೊಂದು ಕಡೆ ಯಾರದ್ದೋ ಸಂಚಿಗೆ ಬಲಿಯಾಗಿ ಭೂಮಿಯ ತಾಯಿ ತಪ್ಪೇ ಮಾಡದಿದ್ರೂ ಜೈಲು ಸೇರಿರುತ್ತಾರೆ. ಅಮ್ಮನನ್ನು ಹೇಗಾದರೂ ಮಾಡಿ ಜೈಲಿಂದ ಹೊರತರಬೇಕು ಎನ್ನುವ ಹಂಬಲ ಭೂಮಿಯದ್ದು. 
 

ಇನ್ನು ಈ ಕಥೆಯ ನಾಯಕ ಅಜಿತ್, ಶ್ರೀಮಂತ ಕುಟುಂಬದಲ್ಲಿ ಬೆಳೆದ ನಿಷ್ಠಾವಂತ ಪೊಲೀಸ್ ಅಧಿಕಾರಿ (Police officer). ಮದುವೆ ಅಂದ್ರೇನೆ ಇಷ್ಟವಿರದ ಅಜಿತ್ ಗೆ ಮನೆಯಲ್ಲಿ ಮದುವೆಯ ತಯಾರಿ ಮಾಡುತ್ತಿರುತ್ತಾರೆ. ಮದುವೆಯಿಂದ ತಪ್ಪಿಸಿಕೊಳ್ಳಬೇಕೆಂಬ ಯೋಚನೆ ಅಜಿತ್ ನದ್ದು. 
 

ಮುಂದೆ ಅನಿವಾರ್ಯ ಕಾರಣಗಳಿಂದಾಗಿ ಭೂಮಿ ಹಾಗು ಅಜಿತ್ ಇಬ್ಬರು ಪರಸ್ಪರ ಷರತ್ತುಗಳಿಗೆ ಒಪ್ಪಿಕೊಂಡು ಒಂದು ವರ್ಷದ ಕಾಂಟ್ರಾಕ್ಟ್ ನೊಂದಿಗೆ ಮದುವೆಯಾಗ್ತಾರೆ. ಕಾಂಟ್ರಾಕ್ಟ್ ಮದುವೆಯಿಂದ (contract marriage) ಒಂದಾದ ಈ ಜೀವಗಳ ಮನಸುಗಳು ಮುಂದೆ ಹೇಗೆ ಒಂದಾಗುತ್ತೆ? ಎಂಬುದು ಈ ಧಾರಾವಾಹಿಯ ಮುಖ್ಯ ಕಥಾ ಹಂದರ.
 

ಈ ಕಥೆಯ ನಾಯಕನ ಪಾತ್ರದಲ್ಲಿ ಕಮಲಿ ಧಾರಾವಾಹಿಯಲ್ಲಿ ರಿಷಿ ಸರ್ ಪಾತ್ರದಲ್ಲಿ ಜನಮನ ಗೆದ್ದ ನಟ ನಿರಂಜನ್ ನಟಿಸುತ್ತಿದ್ದಾರೆ. ಇವರು ವರ್ಷಗಳ ಬಳಿಕ "ನಿನ್ನ ಜೊತೆ ನನ್ನ ಕಥೆ" ಧಾರಾವಾಹಿಯ ಮೂಲಕ ಕನ್ನಡ ಕಿರುತೆರೆಗೆ ಮರಳುತ್ತಿದ್ದಾರೆ. ನಾಯಕಿಯಾಗಿ ನಟಿ ನಿರುಷ ಗೌಡ ನಟಿಸುತ್ತಿದ್ದು, ಇವರು ಈ ಹಿಂದೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಗಂಡ ಹೆಂಡತಿ ಧಾರಾವಾಹಿಯಲ್ಲಿ ನಟಿಸುತ್ತಿದ್ದರು. 
 

ಇದೇ ಸೋಮವಾರದಿಂದ ರಾತ್ರಿ 8 ಗಂಟೆಗೆ ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ ಶುರುವಾಗ್ತಿದೆ ಹೊಚ್ಚ ಹೊಸ ಧಾರಾವಾಹಿ "ನಿನ್ನ ಜೊತೆ ನನ್ನ ಕಥೆ (Ninna Jothe Nanna Kathe)". ವಿಭಿನ್ನ ಕಥೆಯನ್ನು ನೋಡೋದಕ್ಕೆ ನೀವು ಇಷ್ಟಪಡೋದಾದ್ರೆ ಖಂಡಿತವಾಗಿಯೂ ಈ ಸೀರಿಯಲ್ ತಪ್ಪದೇ ನೋಡಿ. 
 

Latest Videos

click me!