ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ (Lakshmi Nivasa) ಸೀರಿಯಲ್ ವೀಕ್ಷಕರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಲಕ್ಷ್ಮೀ ಮತ್ತು ಶ್ರೀನಿವಾಸರ ಐವರು ಮಕ್ಕಳ ಐದು ಸಂಸಾರದ ವಿಭಿನ್ನ ಕಥೆಯನ್ನು ತೆರೆದಿಡುವ ರೀತಿ ಜನರಿಗೆ ಇಷ್ಟವಾಗಿದೆ.
ಸೀರಿಯಲ್ ನ ಪ್ರಮುಖ ಆಕರ್ಷಣೆ ಎಂದರೆ ಜಾಹ್ನವಿ ಮತ್ತು ಜಯಂತ್ (Jayanth -Jahnavi) ಜೋಡಿ. ಅದರಲ್ಲೂ ಅತಿ ನಯ-ವಿನಯ ತೋರಿಸಿದ ಜಯಂತ್ ಕೊನೆಗೆ ಸೈಕೋ ಪ್ರೇಮಿ ತರ ನಡೆದುಕೊಳ್ಳುವ ರೀತಿ ಜನರಿಗೆ ಕೋಪ ತರಿಸಿದ್ದರೂ ಜಯಂತ್ ನಟನೆಗೆ ಎಲ್ಲರೂ ಭೇಷ್ ಹೇಳುತ್ತಿದ್ದಾರೆ.
ಹೆಂಡತಿ ಜಾಹ್ನವಿಯನ್ನು ವಿಪರೀತವಾಗಿ ಪ್ರೀತಿಸುವ ಜಯಂತ್, ಆಕೆ ಯಾರೊಂದಿಗೂ ಮಾತನಾಡೋದನ್ನು ಸಹಿಸೋದಿಲ್ಲ. ಅಮ್ಮನ ಜೊತೆ ಹೆಚ್ಚು ಮಾತಾಡ್ತಾಳೆ ಎಂದು ಫೋನ್ ನೆಟ್‌ವರ್ಕ್ ಆಫ್ ಮಾಡಿ, ಜಾನು ಜೊತೆ ಕ್ಲೋಸ್ ಆಗಿದ್ದಾನೆ ಎಂದು ಇನ್ನೊಬ್ಬ ಸ್ನೇಹಿತನನ್ನು ಹೊಡೆದ ಸೈಕೋ ಗಂಡ ಜಯಂತ್.
ಜಯಂತ್ ಪಾತ್ರದಲ್ಲಿ ದೀಪಕ್ (Deepak) ನಟಿಸುತ್ತಿದ್ದು, ಅದ್ಭುತವಾಗಿ ನಟಿಸುತ್ತಿದ್ದಾರೆ. ಇವರ ಪಾತ್ರ ನೋಡಿದ್ರೆ ಎಷ್ಟು ಸಿಟ್ಟು ಬರುತ್ತೆ ಅಂದ್ರೆ, ಎದುರು ಸಿಕ್ಕಿದ್ರೆ ಹೊಡೀಬೇಕು ಅನಿಸುವಷ್ಟು ಸಿಟ್ಟು ಬರುತ್ತೆ. ಜನರು ಜಯಂತ್ ಪಾತ್ರಕ್ಕೆ ಚೆನ್ನಾಗಿ ಬಯ್ಯೋದನ್ನು ಸೋಶಿಯಲ್ ಮೀಡಿಯಾದಲ್ಲಿ ಕಾಣಬಹುದು. ಆದರೆ ಇತ್ತೀಚೆಗೆ ಈ ಘಟನೆ ರಿಯಲ್ ಆಗಿ ನಡೆದಿದೆ.
ಜಾಹ್ನವಿ ಖ್ಯಾತಿಯ ಚಂದನಾ ಅನಂತ ಕೃಷ್ಣ (Chandana Ananthakrishna) ಮತ್ತು ಜಯಂತ್ ಖ್ಯಾತಿಯ ದೀಪಕ್ ಇಬ್ಬರೂ ಕಾರಲ್ಲಿ ಹೋಗುತ್ತಿದ್ದಾಗ ಅಜ್ಜಿಯೊಬ್ಬರು ಕಾರಿನ ಬಳಿ ಬಂದು, ಹೆಂಡ್ತಿ ತವರಿಗೆ ಹೋಗಬಾರ್ದು ಅಂತ, ನೀವೆ ಕೈಯಲ್ಲಿ ಗಾಜು ಹಿಡಿದು ಹೊಡೆದು ಹಾಕಿದ್ರಲ್ವಾ? ನೀವು ಮಾಡಿದ್ದು ತಪ್ಪು ಎಂದು ಬೈದಿದ್ದಾರೆ. ಇದಕ್ಕೆ ದೀಪಕ್ ಸರಿ ಎಂದು ನಗುತ್ತಾ ಬೈ ಎಂದಿದ್ದಾರೆ.
ಈ ಘಟನೆಯ ವಿಡೀಯೋವನ್ನು ಕೆಲ ದಿನಗಳ ಹಿಂದೆ ದೀಪಕ್ ತಮ್ಮ ಇನ್’ಸ್ಟಾಗ್ರಾಂ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡಿದ್ರು. ಈ ವಿಡೀಯೋ ನೋಡಿದ್ರೆ ಜನರು ಪಾತ್ರವನ್ನು ಮತ್ತು ಸೀರಿಯಲ್ ಅನ್ನು ಎಷ್ಟು ಆಳವಾಗಿ ತೆಗೆದುಕೊಳ್ಳುತ್ತಾರೆ, ಅನ್ನೋದು ಕಾಣಿಸುತ್ತೆ. ಅಲ್ಲದೇ ಅಜ್ಜಿ ದೀಪಕ್‌ಗೆ ಪ್ರೀತಿಯಿಂದ ಬುದ್ದಿ ಹೇಳಿದ್ದು ಸಹ ಕಾಣಿಸುತ್ತೆ, ಇದು ಅಭಿಮಾನ ಅಷ್ಟೇ.
ಇನ್ನು ಈ ವಿಡಿಯೋ ವೈರಲ್ ಆಗಿದ್ದು ಜನರು ಕಾಮೆಂಟ್ ಮಾಡಿ ಸೂಪರ್.. ಇದು ಅವರ ಅಭಿನಯಕ್ಕೆ ಸಿಕ್ಕ ಬಹುಮಾನ ಎಂದು ಭಾವಿಸಬೇಕು ಎಂದರೆ, ಮಗದೊಬ್ಬರು ಇದರ ಅರ್ಥ ಆತ ಗೆದ್ದಿದ್ದಾನೆ ಹಾಗೂ ಅವನ ಪಾತ್ರ ಕೂಡ ಗೆದ್ದಿದೆ ಎಂದಿದ್ದಾರೆ. ಮತ್ತೊಬ್ಬರು ಅವರ ನಟನೆ ತುಂಬಾ ಚೆನ್ನಾಗಿದೆ. ಹಾಗೂ ಸಂಭಾಷಣೆಯಲ್ಲಿ ಸಹ ಅತೀ ಸ್ಪಷ್ಟತೆ ಇದೆ, ಮುಂದೊಂದು ದಿನ ಅವರು ರಘುವರನ್ ರಂತೆ ದೊಡ್ಡ ನಟರಾಗುವುದರಲ್ಲಿ ಅನುಮಾನವಿಲ್ಲ ಎಂದಿದ್ದಾರೆ.