ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಲಕ್ಷಣ ಸೀರಿಯಲ್ ಅನ್ನು ಜನರು ತುಂಬಾ ಇಷ್ಟಪಟ್ಟಿದ್ದಾರೆ. ಅದರಲ್ಲೂ ಈ ಸೀರಿಯಲ್ ನ ನಾಯಕಿ ನಕ್ಷತ್ರಾ ಅಂದ್ರೆ ವಿಜಯಲಕ್ಷ್ಮಿ ಅವರನ್ನು ಸಹ ಜನ ಮೆಚ್ಚಿಕೊಂಡಿದ್ದಾರೆ. ಸೀರಿಯಲ್‌ನಲ್ಲಿ ಕಪ್ಪು ಹುಡುಗಿಯ ಪಾತ್ರ ಮಾಡಿದ್ದು, ಅದರಲ್ಲಿ ಅವಮಾನ ಅನುಭವಿಸಿದ್ದರು. ಇವರ ರಿಯಲ್ ಲೈಫ್‌ನಲ್ಲೂ ಬಣ್ಣದ ವಿಷಯದಿಂದ ಬೇಜಾರಾಗಿದ್ದು ಇದೆ ಎನ್ನುತ್ತಾರೆ ವಿಜಯಲಕ್ಷ್ಮಿ.
ಲಕ್ಷಣ ಸೀರಿಯಲ್ ನ ನಕ್ಷತ್ರಾರ ನಿಜವಾದ ಹೆಸರು ವಿಜಯಲಕ್ಷ್ಮಿ ಕೃಷ್ಣನ್. ಮೂಲತಃ ಕೋಲಾರ ಜಿಲ್ಲೆ ಮಾಲೂರಿನವರು. ಅಪ್ಪ ಕಿರಾಣಿ ಅಂಗಡಿ ನಡೆಸುತ್ತಿದ್ದರಂತೆ. ಅಲ್ಲೇ ತಮ್ಮ ಬಾಲ್ಯದ ಜೀವನ ಕಳೆದಿದ್ದಾರೆ ಈ ನಟಿಗೆ ಬಾಲ್ಯದಿಂದಲೂ ನಟನೆ ಮೇಲೆ ತುಂಬಾ ಆಸಕ್ತಿ ಇತ್ತಂತೆ.
ಕಾಲೇಜು ಓದುತ್ತಿರುವಾಗ್ಲೇ ವಿಜಯಲಕ್ಷ್ಮಿಗೆ ನಟನೆಯಲ್ಲಿ ಮತ್ತಷ್ಟೂ ಆಸಕ್ತಿ (interested in acting) ಮೂಡಿತು. ಮೊದಲೆಲ್ಲಾ ಟಿವಿಯಲ್ಲಿ ನೋಡಿ ನಟ, ನಟಿಯರ ಅಭಿನಯ ಮಾಡುತ್ತಿದ್ದರಂತೆ. ಮುಖ್ಯವಾಗಿ ಅವರು ಊರಿನ ಹಾಸ್ಯ ರಂಗಭೂಮಿ ಕಲಾವಿದರನ್ನು ನೋಡಿ ನಟನೆ ಬಗ್ಗೆ ಒಲವು ತೋರಿಸಿದರು. ಸ್ಕೂಲ್, ಕಾಲೇಜಿನಲ್ಲೂ ಡ್ಯಾನ್ಸ್ ನಾಟಕ ಮಾಡಿ ಸೈ ಎನಿಸಿಕೊಂಡಿದ್ದರು.
ಹಾಸ್ಯ ರಂಗಭೂಮಿ ಕಲಾವಿದರ ಜೊತೆ ಜಿಲ್ಲಾ ಮಟ್ಟದಲ್ಲಿ ಹಲವು ನಾಟಕಗಳಲ್ಲಿ ಅಭಿನಯಿಸಿದ್ದ ಅನುಭವ ಇದ್ದ ಇವರಿಗೆ, ಕನ್ನಡ ಕಿರುತೆರೆಗೆ ಹೇಗಾದ್ರೂ ಎಂಟ್ರಿ ಕೊಡಬೇಕು ಎಂಬ ಬಯಕೆ ಇತ್ತಂತೆ . ಅದಕ್ಕಾಗಿಯೇ ಲಕ್ಷಣ ಸೀರಿಯಲ್ ಗೆ ಆಡಿಶನ್ ಗೆ ಕರೆದಾಗ ತಮ್ಮ ಲಕ್ ಪರೀಕ್ಷಿಸಿದ್ದರು. ಮೊದಲ ಆಡಿಷನ್ ನಲ್ಲೇ ವಿಜಯಲಕ್ಷ್ಮಿ ಲಕ್ಷಣ ಸೀರಿಯಲ್ ಗೆ ಸೆಲೆಕ್ಟ್ ಆಗಿದ್ದರು. ಕೊರೋನಾ ಬಂದ ಕಾರಣ ಧಾರಾವಾಹಿಗಾಗಿ 1 ವರ್ಷ ಕಾದಿದ್ದರಂತೆ ವಿಜಯಲಕ್ಷ್ಮಿ.
ಇವರ ಬಣ್ಣ ಕಪ್ಪಾಗಿರೋದ್ರಿಂದ ಆಡಿಶನ್ ನಲ್ಲಿ ಸೆಲೆಕ್ಟ್ ಆಗತ್ತೋ ಇಲ್ಲವೋ ಅನ್ನೋ ಭಯ ಇತ್ತಂತೆ, ಆದ್ರೆ ಪ್ರತಿಯೊಬ್ಬರೂ ಅಂತಹ ಭಯದಿಂದ ಹೊರಬಂದರೆ ಸಾಧನೆ ಮಾಡಬಹುದು ಎನ್ನುತ್ತಾರೆ ಈ ಕೃಷ್ಣ ಸುಂದರಿ. ಕಪ್ಪಾಗಿದ್ದೀವಿ ಅನ್ನೋ ಕಾರಣ ಅಲ್ಲಿ ಕೀಳರಿಮೆ ಇರುವುದಿಲ್ಲ. ಯಾವುದೋ ಒಂದು ರೂಪದಲ್ಲಿ ಅದು ನಮಗೆ ಸಹಾಯ ಮಾಡುತ್ತದೆ ಎನ್ನುತ್ತಾರೆ ವಿಜಯಲಕ್ಷ್ಮಿ.
ಈ ಹಿಂದೆ ಕಾರ್ಯಕ್ರಮವೊಂದರಲ್ಲಿ ಬಣ್ಣದ ಬಗ್ಗೆ ಓಪನ್ ಆಗಿ ಮಾತನಾಡಿದ ವಿಜಯಲಕ್ಷ್ಮಿ (Vijayalakshmi) ಇದು ಬಣ್ಣದ ಜಗತ್ತು. ನಾವು ಹೇಗೆ ಕಾಣಿಸಿಕೊಳ್ಳುತ್ತೇವೆ ಎನ್ನೋದರ ಬಗ್ಗೆ ನಮ್ಮನ್ನು ಆಯ್ಕೆ ಮಾಡಿಕೊಳ್ತಾರೆ. ಕಪ್ಪಗಿದ್ದೇನೆ ಎಂದು ನಾನು ಸಾಕಷ್ಟು ಬಾರಿ ಆಡಿಷನ್‌ನಲ್ಲಿ ರಿಜೆಕ್ಟ್ ಆಗಿದ್ದೇನೆ. ಆವಾಗ ತಾಯಿ ಸಮಾಧಾನ ಮಾಡಿದ್ದರು, ಎಂದು ಬೇಸರ ವ್ಯಕ್ತಪಡಿಸಿದ್ದರು.
ಲಕ್ಷಣ ಧಾರಾವಾಹಿಯಲ್ಲಿ ನಕ್ಷತ್ರಾ ಲೈಫ್‌ನಲ್ಲಿ ಏನು ನಡೆಯುತ್ತಿದೆಯೋ ಅದು ನನ್ನ ರಿಯಲ್ ಲೈಫ್‌ನಲ್ಲಿಯೂ ನಡೆದಿದೆ. ನಾನು ನಿಜಕ್ಕೂ ಕಪ್ಪಗಿದ್ದೇನೆ, ಧಾರಾವಾಹಿಗೋಸ್ಕರ ನನ್ನನ್ನು ಕಪ್ಪು ಮೇಕಪ್ ಮಾಡಿ ತೋರಸ್ತಿಲ್ಲ. ನನ್ನ ಕಪ್ಪು ಬಣ್ಣದಿಂದಲೇ ನಾನು ಸಾಕಷ್ಟು ಬಾರಿ ರಿಜೆಕ್ಟ್ ಆಗಿದ್ದೆ. ಆದರೆ ಈ ಬಾರಿ ಕಪ್ಪು ಬಣ್ಣದಿಂದಲೆ ನನಗೆ ಅಭಿನಯಿಸಲು ಚಾನ್ಸ್ ಸಿಕ್ಕಿದೆ. ಹಾಗಾಗಿ ಬಣ್ಣದ ಬಗ್ಗೆ ನನಗೆ ಕೀಳರಿಮೆ ಇಲ್ಲ ಎನ್ನುತ್ತಾರೆ ನಟಿ.