ಮಮ್ಮಿ ಎಂದೇ ಕರೆಯುತ್ತಿದ್ದ ಜಿಮ್ ಫ್ರೆಂಡ್‌ನೇ ಮದುವೆಯಾದ ನಟಿ ರಜನಿ; 10 ಮಿಲಿಯನ್ ವೀಕ್ಷಣೆ ಪಡೆದ ಲವ್‌ಸ್ಟೋರಿ ಇದು

Published : Aug 18, 2026, 11:15 AM IST

‘ಪೈಲ್ವಾನ್-ಪ್ರಿಟಿ ಗರ್ಲ್’ ಕಾಂಬಿನೇಷನ್‌ನ ಕಾಮಿಡಿ, ರಜನಿ ಹಾಗೂ ಅರುಣ್ ಗೌಡ ಅವರ ಸ್ನೇಹ, ಪ್ರೀತಿ ಮತ್ತು ಫಿಟ್‌ನೆಸ್ ಮೆಸೇಜ್‌ಗಳು ಸದ್ಯ ಕನ್ನಡ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿವೆ.

PREV
15
ನಟಿ ರಜನಿ ಪೈಲ್ವಾನ್ ಅರುಣ್ ಗೌಡ ಲವ್‌ಸ್ಟೋರಿ

ಕನ್ನಡ ಕಿರುತೆರೆಯಲ್ಲಿ ‘ಅಮೃತವರ್ಷಿಣಿ’ ಧಾರಾವಾಹಿ ಮೂಲಕ ಜನಪ್ರಿಯತೆ ಗಳಿಸಿದ ನಟಿ ರಜನಿ ಸದ್ಯ ಸ್ಟಾರ್ ಸುವರ್ಣ ವಾಹಿನಿಯ ‘ನೀ ಇರಲು ಜೊತೆಯಲ್ಲಿ’ ಹಾಗೂ ಉದಯ ಟಿವಿಯ ‘ಕೃಷ್ಣವಂಶಿ’ ಧಾರಾವಾಹಿಗಳಲ್ಲಿ ಅಭಿನಯಿಸುತ್ತಿದ್ದಾರೆ. ಕಿರುತೆರೆ ಪ್ರೇಕ್ಷಕರಿಗೆ ಪರಿಚಿತ ಮುಖವಾಗಿರುವ ರಜನಿ ಇದೀಗ ನಟನೆಯ ಜೊತೆಗೆ ಸೋಶಿಯಲ್ ಮೀಡಿಯಾ ಕಂಟೆಂಟ್ ಕ್ರಿಯೇಟರ್ ಆಗಿಯೂ ದೊಡ್ಡ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಅವರ ಪತಿ ಅರುಣ್ ಗೌಡ ಅವರೊಂದಿಗಿನ ವಿಶಿಷ್ಟ ಕಾಂಬಿನೇಷನ್. ಫಿಟ್‌ನೆಸ್ ಜಗತ್ತಿನಲ್ಲಿ ಗುರುತಿಸಿಕೊಂಡಿರುವ ಅರುಣ್ ಗೌಡ ಹಾಗೂ ರಜನಿ ಅವರ ಜೋಡಿ ಇಂದು ಸೋಶಿಯಲ್ ಮೀಡಿಯಾದಲ್ಲಿ ‘ಪೈಲ್ವಾನ್ ಮತ್ತು ಪ್ರಿಟಿ ಗರ್ಲ್’ ಎಂದೇ ಫೇಮಸ್ ಆಗಿದೆ.

7 ವರ್ಷಗಳ ಸ್ನೇಹ, ನಂತರ ಪ್ರೀತಿಯಾಗಿ ಬದಲಾದ ಸಂಬಂಧ

ರಜನಿ ಹಾಗೂ ಅರುಣ್ ಗೌಡ ಸುಮಾರು ಏಳು ವರ್ಷಗಳಿಂದ ಸ್ನೇಹಿತರಾಗಿದ್ದರು. ಕೋವಿಡ್ ಸಮಯದಲ್ಲಿ ಇವರಿಬ್ಬರ ಸ್ನೇಹ ಮತ್ತಷ್ಟು ಗಟ್ಟಿಯಾಯಿತು. ಜಿಮ್‌ನಲ್ಲಿ ಒಟ್ಟಿಗೆ ಸಮಯ ಕಳೆಯುತ್ತಿದ್ದ ಈ ಜೋಡಿ, ತಮಾಷೆಯಾಗಿ ವಿಡಿಯೋಗಳನ್ನು ಮಾಡಲು ಆರಂಭಿಸಿತು. ಆ ವಿಡಿಯೋಗಳೇ ಮುಂದೆ ಇವರ ಜೀವನಕ್ಕೆ ಹೊಸ ತಿರುವು ನೀಡಿದವು. ವರ್ಷಗಳ ಕಾಲ ಪ್ರೀತಿಸಿದ ಬಳಿಕ ರಜನಿ ಹಾಗೂ ಅರುಣ್ ಗೌಡ 2025ರ ನವೆಂಬರ್ 10ರಂದು ಬೆಂಗಳೂರಿನ ದೇವಸ್ಥಾನವೊಂದರಲ್ಲಿ ಸರಳವಾಗಿ ವಿವಾಹವಾದರು. ಇದೀಗ ದಂಪತಿಯಾಗಿ ಮಾತ್ರವಲ್ಲದೆ ಕಂಟೆಂಟ್ ಕ್ರಿಯೇಟರ್‌ಗಳಾಗಿಯೂ ಗಮನ ಸೆಳೆಯುತ್ತಿದ್ದಾರೆ.

25
ಒಂದು ‘ಲೆಗ್ ಪ್ರೆಸ್’ ವಿಡಿಯೋ ಬದಲಿಸಿತು ಎಲ್ಲವನ್ನೂ

ರಜನಿ ಮತ್ತು ಅರುಣ್ ಗೌಡ ಅವರ ಕಂಟೆಂಟ್ ಕ್ರಿಯೇಟರ್ ಜರ್ನಿಯಲ್ಲಿ ತಿರುವು ತಂದದ್ದು ಜಿಮ್‌ನಲ್ಲಿ ಮಾಡಿದ ಒಂದು ತಮಾಷೆಯ ವಿಡಿಯೋ. ಇವರಿಬ್ಬರು ಮಾಡಿದ ‘ಲೆಗ್ ಪ್ರೆಸ್’ ವಿಡಿಯೋ ಬರೋಬ್ಬರಿ 10 ಮಿಲಿಯನ್‌ಗೂ ಹೆಚ್ಚು ವೀಕ್ಷಣೆ ಪಡೆದುಕೊಂಡಿತು. ಈ ವಿಡಿಯೋ ದಕ್ಷಿಣ ಆಫ್ರಿಕಾದವರೆಗೂ ಟ್ರೆಂಡ್ ಆಗಿತ್ತು ಎನ್ನಲಾಗಿದೆ. ಅಲ್ಲಿಂದ ಆರಂಭವಾದ ಇವರ ಸೋಶಿಯಲ್ ಮೀಡಿಯಾ ಪಯಣ ಇಂದು ಮಿಲಿಯನ್‌ಗಟ್ಟಲೆ ವೀಕ್ಷಣೆ ಪಡೆಯುವ ಹಂತಕ್ಕೆ ತಲುಪಿದೆ.

‘ಮಮ್ಮಿ’ ಎಂದು ಯಾಕೆ ಕರೆಯುತ್ತಾರೆ?

ಅರುಣ್ ಗೌಡ, ರಜನಿ ಅವರನ್ನು ಆಗಾಗ್ಗೆ ‘ಮಮ್ಮಿ’ ಎಂದು ಕರೆಯುವುದು ಇವರ ಕಂಟೆಂಟ್‌ನ ಪ್ರಮುಖ ಆಕರ್ಷಣೆ. ಇದರ ಹಿಂದೆಯೂ ಒಂದು ತಮಾಷೆಯ ಕಾರಣವಿದೆ. ಅರುಣ್ ಏನಾದರೂ ಮಾಡಿದಾಗ ರಜನಿ, ‘ಬ್ಯಾಗ್ ಎಲ್ಲಿಟ್ಟಿದ್ದೀಯ? ಯಾಕೆ ತಡ ಮಾಡಿದೆ?’ ಎಂದು ಅಮ್ಮನ ರೀತಿಯಲ್ಲಿ ಬೈಯುತ್ತಾರಂತೆ. ಹೀಗಾಗಿ ತಮಾಷೆಗಾಗಿ ಅರುಣ್, ರಜನಿ ಅವರನ್ನು ‘ಮಮ್ಮಿ’ ಎಂದು ಕರೆಯಲು ಆರಂಭಿಸಿದ್ದರಂತೆ. ಆ ತಮಾಷೆಯೇ ಮುಂದೆ ಇವರ ಕಂಟೆಂಟ್‌ನ ವಿಶಿಷ್ಟ ಗುರುತಾಗಿ ಬದಲಾಗಿದೆ.

35
ಅರುಣ್ ಕೇವಲ ಜಿಮ್ ಫ್ರೀಕ್ ಅಲ್ಲ

ಅರುಣ್ ಗೌಡ ಅವರನ್ನು ಬಹುತೇಕರು ಬಾಡಿಬಿಲ್ಡರ್ ಮತ್ತು ಫಿಟ್‌ನೆಸ್ ಅಥ್ಲೀಟ್ ಎಂದೇ ಗುರುತಿಸುತ್ತಾರೆ. ಆದರೆ ಅವರ ಮತ್ತೊಂದು ಮುಖ ಅನೇಕರಿಗೆ ಗೊತ್ತಿಲ್ಲ. ಅರುಣ್ ಸುಮಾರು 9 ವರ್ಷಗಳ ಕಾಲ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದರು. ಸಂಕೇತ್ ಮತ್ತು ರಂಗಶಂಕರ ಸೇರಿದಂತೆ ವಿವಿಧ ರಂಗಭೂಮಿ ತಂಡಗಳೊಂದಿಗೆ 15ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ್ದಾರೆ. 200ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿರುವ ಅವರು ಎರಡು ನಾಟಕಗಳನ್ನು ನಿರ್ದೇಶಿಸಿರುವ ಅನುಭವವನ್ನೂ ಹೊಂದಿದ್ದಾರೆ. ಹೀಗಾಗಿ ಕ್ಯಾಮೆರಾ ಮುಂದೆ ಕಾಮಿಡಿ ಮಾಡುವ ಕಲೆ ಅವರಿಗೆ ಹೊಸದೇನಲ್ಲ.

‘ಡ್ಯಾನ್ಸಿಂಗ್ ಸ್ಟಾರ್ 2’ ಕೊಟ್ಟ ಫಿಟ್‌ನೆಸ್ ಟರ್ನಿಂಗ್ ಪಾಯಿಂಟ್

2016ರಲ್ಲಿ ಪ್ರಸಾರವಾದ ‘ಡ್ಯಾನ್ಸಿಂಗ್ ಸ್ಟಾರ್ 2’ ರಿಯಾಲಿಟಿ ಶೋ ರಜನಿ ಅವರ ವೃತ್ತಿಜೀವನದಲ್ಲಿ ಮಹತ್ವದ ತಿರುವು ನೀಡಿತು. ನೃತ್ಯ ಪ್ರದರ್ಶನಗಳಿಗೆ ಉತ್ತಮ ಕೋರ್ ಸ್ಟ್ರೆಂತ್ ಅಗತ್ಯವಿದ್ದ ಕಾರಣ ರಜನಿ ಮೊದಲ ಬಾರಿಗೆ ಜಿಮ್ ಮತ್ತು ಫಿಟ್‌ನೆಸ್‌ನತ್ತ ಗಮನ ಹರಿಸಿದರು. ಇದೇ ಆಸಕ್ತಿ ಮುಂದೆ ಅರುಣ್ ಗೌಡ ಅವರೊಂದಿಗೆ ಕಂಟೆಂಟ್ ಮಾಡಲು ಸಹ ಕಾರಣವಾಯಿತು.

45
ಕಾಮಿಡಿ ಜೊತೆಗೆ ಫಿಟ್‌ನೆಸ್ ಮೆಸೇಜ್

ರಜನಿ ಮತ್ತು ಅರುಣ್ ಗೌಡ ಅವರ ವಿಡಿಯೋಗಳು ಕೇವಲ ಮನರಂಜನೆಗೆ ಸೀಮಿತವಾಗಿಲ್ಲ. ತಮ್ಮ ಕಂಟೆಂಟ್ ಮೂಲಕ ಫಿಟ್‌ನೆಸ್ ಮತ್ತು ಆರೋಗ್ಯದ ಬಗ್ಗೆ ಜಾಗೃತಿಯನ್ನೂ ಮೂಡಿಸುತ್ತಿದ್ದಾರೆ. ಪ್ರೋಟೀನ್ ಸೇವನೆ, ಡಯಟ್, ವರ್ಕೌಟ್ ಮತ್ತು ಆರೋಗ್ಯದ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ಸರಳವಾಗಿ ಜನರಿಗೆ ಅರ್ಥವಾಗುವ ರೀತಿಯಲ್ಲಿ ಹೇಳುತ್ತಿದ್ದಾರೆ. ಟ್ರೈನರ್ ಇಲ್ಲದೆ ಯೂಟ್ಯೂಬ್ ವಿಡಿಯೋ ನೋಡಿ ವರ್ಕೌಟ್ ಮಾಡಿ ಗಾಯ ಮಾಡಿಕೊಳ್ಳಬೇಡಿ, ನೈಸರ್ಗಿಕ ಆಹಾರದಿಂದಲೂ ಉತ್ತಮ ಪ್ರೋಟೀನ್ ಪಡೆಯಬಹುದು ಮತ್ತು ಆರೋಗ್ಯದ ಮೇಲೆ ಪ್ರತಿದಿನ ಹೂಡಿಕೆ ಮಾಡಬೇಕು ಎಂಬ ಸಂದೇಶವನ್ನು ತಮ್ಮದೇ ಶೈಲಿಯಲ್ಲಿ ನೀಡುತ್ತಿದ್ದಾರೆ. ಅವರ ಮಾತಿನಲ್ಲಿ ಹೇಳುವುದಾದರೆ, ನೇರವಾಗಿ ಫಿಟ್‌ನೆಸ್ ಸಲಹೆ ನೀಡಿದರೆ ಕೆಲವರು ಗಮನ ಕೊಡದೇ ಇರಬಹುದು. ಹೀಗಾಗಿ ‘ಮಿರ್ಚಿ ಮಸಾಲಾ’ ಮತ್ತು ಕಾಮಿಡಿ ಸೇರಿಸಿ ಆರೋಗ್ಯದ ಸಂದೇಶವನ್ನು ಜನರಿಗೆ ತಲುಪಿಸುವುದು ಇವರ ಕಂಟೆಂಟ್‌ನ ವಿಶೇಷತೆ.

ನಟಿಯಿಂದ ಇನ್ಫ್ಲುಯೆನ್ಸರ್ ಆಗಿದ್ದಕ್ಕೆ ಟೀಕೆ

ರಜನಿ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಆಗಿ ಗುರುತಿಸಿಕೊಳ್ಳಲು ಆರಂಭಿಸಿದಾಗ ಕೆಲವರು ಅವರನ್ನು ಟೀಕಿಸಿದ್ದರು. ನಟಿಯಾಗಿದ್ದವರು ಇನ್ಫ್ಲುಯೆನ್ಸರ್ ಆಗಿ ಬದಲಾಗಿದ್ದಾರೆ ಎಂದು ಕೆಲವರು ಕಮೆಂಟ್ ಮಾಡಿದ್ದರು. ಆದರೆ ಈ ಟೀಕೆಗಳಿಗೆ ರಜನಿ ತಲೆಕೆಡಿಸಿಕೊಂಡಿಲ್ಲ. ಜನರು ತಮ್ಮ ವಿಡಿಯೋ ನೋಡಿ ದಿನದ ಒತ್ತಡ, ಬೇಸರ ಮತ್ತು ದಣಿವು ಮರೆತು ನಗುತ್ತೇವೆ ಎಂದು ಕಮೆಂಟ್ ಮಾಡಿದಾಗ ಸಿಗುವ ಖುಷಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂಬುದು ಅವರ ನಿಲುವು. ಕಲಾವಿದ ಎಲ್ಲೇ ಇದ್ದರೂ ಪ್ರೇಕ್ಷಕರಿಗೆ ಮನರಂಜನೆ ತಲುಪಿಸುವುದು ಮುಖ್ಯ ಎಂಬ ತತ್ವವನ್ನು ಅವರು ತಮ್ಮದೇ ರೀತಿಯಲ್ಲಿ ಮುಂದುವರಿಸುತ್ತಿದ್ದಾರೆ.

55
ಥೈಲ್ಯಾಂಡ್‌ನಲ್ಲಿ ಕ್ವಾಲಿಟಿ ಟೈಮ್

ನಟನೆ, ಕಂಟೆಂಟ್ ಕ್ರಿಯೇಷನ್ ಮತ್ತು ಫಿಟ್‌ನೆಸ್ ನಡುವೆ ಬ್ಯುಸಿಯಾಗಿರುವ ಈ ಜೋಡಿ ಇತ್ತೀಚೆಗೆ ಥೈಲ್ಯಾಂಡ್ ಪ್ರವಾಸಕ್ಕೂ ತೆರಳಿ ಒಟ್ಟಿಗೆ ಕ್ವಾಲಿಟಿ ಟೈಮ್ ಕಳೆದಿದ್ದಾರೆ. ದಂಪತಿಯ ಪ್ರವಾಸದ ಕ್ಷಣಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಗಮನ ಸೆಳೆದಿವೆ. ಒಟ್ಟಿನಲ್ಲಿ, ಧಾರಾವಾಹಿಯಿಂದ ಕಿರುತೆರೆ ಪ್ರೇಕ್ಷಕರ ಮನ ಗೆದ್ದ ರಜನಿ, ಫಿಟ್‌ನೆಸ್ ಮತ್ತು ರಂಗಭೂಮಿ ಹಿನ್ನೆಲೆಯ ಅರುಣ್ ಗೌಡ ಜೊತೆ ಸೇರಿ ಹೊಸ ರೀತಿಯ ಡಿಜಿಟಲ್ ಕಂಟೆಂಟ್ ಮೂಲಕ ಮತ್ತೊಂದು ದೊಡ್ಡ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿದ್ದಾರೆ. ‘ಪೈಲ್ವಾನ್-ಪ್ರಿಟಿ ಗರ್ಲ್’ ಕಾಂಬಿನೇಷನ್‌ನ ಕಾಮಿಡಿ, ಸ್ನೇಹ, ಪ್ರೀತಿ ಮತ್ತು ಫಿಟ್‌ನೆಸ್ ಮೆಸೇಜ್‌ಗಳು ಸದ್ಯ ಕನ್ನಡ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿವೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories