ಹಿಂದೊಮ್ಮೆ ಶಿವನನ್ನೇ ನಂಬದಿದ್ದ ಅರ್ಜುನ್ ರಮೇಶ್‌ಗೆ (Arjun Ramesh) ಒಂದಲ್ಲ , ಎರಡಲ್ಲ, ಮೂರು ಬಾರಿ ಶಿವನ ಪಾತ್ರ ಮಾಡುವ ಅವಕಾಶ ಒದಗಿ ಬಂದಿದೆ. ಹೌದು, ಅರ್ಜುನ್ ಇದೀಗ ಮೂರನೇ ಬಾರಿಗೆ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗಲಿರುವ ಶ್ರೀದೇವಿ ಮಹಾತ್ಮೆಯಲ್ಲಿ ಶಿವನಾಗಿ ಅಭಿನಯಿಸಲಿದ್ದಾರೆ.
ಇಂತಿ ನಿಮ್ಮ ಆಶಾ, ನಾಗಿಣಿ, ಅಗ್ನಿಸಾಕ್ಷಿ ಸೀರಿಯಲ್ ಗಳಲ್ಲಿ (Angisakshi) ನಟಿಸಿದ್ದ ನಟ ಅರ್ಜುನ್. ಇವರು ಜನಪ್ರಿಯತೆ ಪಡೆದದ್ದು, ಶನಿ ಮತ್ತು ಮಹಾಕಾಳಿ ಸೀರಿಯಲ್ ಗಳಲ್ಲಿ ಶಿವನ ಪಾತ್ರದಿಂದ. ವೀಕ್ಷಕರು ಕೂಡ ಇವರನ್ನು ಸಾಕ್ಷಾತ್ ಶಿವನಂತೆ ಕಾಣುತ್ತಿದ್ದರು.
ಹಿಂದೆ ಅರ್ಜುನ್ ಅವರಿಗೆ ಶಿವನ ಮೇಲೆ ಅಷ್ಟೊಂದು ನಂಬಿಕೆ ಇರಲಿಲ್ಲವಂತೆ, ಆದರೆ ಶಿವನ ಪಾತ್ರ ಮಾಡಿದ ಮೇಲೆ ಶಿವಭಕ್ತರಾಗಿ ಬದಲಾದರು ಅರ್ಜುನ್. ಇವರು ಹೊರಗಡೆ ಕಾಣಿಸಿಕೊಂಡಾಗ, ಎಷ್ಟೋ ಜನ ಇವರ ಕಾಲಿಗೆ ಬಿದ್ದಿದ್ದು ಇದೆಯಂತೆ.
ಅರ್ಜುನ್ ರಮೇಶ್ ಹಲವು ಸಿನಿಮಾದಲ್ಲೂ ನಟಿಸಿದ್ದಾರೆ. ಜೆಂಟಲ್ ಮ್ಯಾನ್ (Gentleman), ಕೌಟಿಲ್ಯ, ದೇವರ ಆಟ ಬಲ್ಲವರಾರು ಸಿನಿಮಾಗಳಲ್ಲೂ ಸಹ ಅರ್ಜುನ್ ನಟಿಸಿದ್ದು, ದೇವರ ಆಟ ಬಲ್ಲವರಾರು ಸಿನಿಮಾ 36 ಗಂಟೆಗಳ ಸತತ ಶೂಟಿಂಗ್ ಮಾಡಿ ಮುಗಿಸುವ ಮೂಲಕ ಗಿನ್ನೆಲ್ ದಾಖಲೆ ಬರೆಯುವ ಪ್ರಯತ್ನವನ್ನೂ ಮಾಡಿತ್ತು. ಮತ್ತೊಂದು ವಿಷ್ಯ ಅಂದ್ರೆ ಇವರು ರಾಜಕಾರಣಿಯೂ ಹೌದು.
ಅರ್ಜುನ್ ರಮೇಶ್ ಬಿಗ್ ಬಾಸ್ ಓಟಿಟಿಯಲ್ಲೂ ಸಹ ಮಿಂಚಿದ್ದರು. ಇನ್ನು ಇವರು ಹೆಚ್ಚು ಸುದ್ದಿಯಾದದ್ದು ಇಬ್ಬರು ಹೆಂಡತಿಯರನ್ನು ಹೊಂದಿರೋ ಸುದ್ದಿಯಿಂದ. ಹೌದು, ಅರ್ಜುನ್ ರಮೇಶ್ ಗೆ ಇಬ್ಬರು ಹೆಂಡ್ತಿಯರು. ಇಬ್ಬರ ಜೊತೆಗೆ ಮತ್ತಿಬ್ಬರು ಮಕ್ಕಳ ಜೊತೆಗೆ ಅರ್ಜುನ್ ಸಂತೋಷವಾಗಿ ಜೀವನ ನಡೆಸುತ್ತಿದ್ದಾರೆ. ಎಲ್ಲರೂ ಜೊತೆಯಾಗಿರುವ ಫೋಟೋಗಳನ್ನು ಅರ್ಜುನ್ ಹೆಚ್ಚಾಗಿ ಶೇರ್ ಮಾಡುತ್ತಿರುತ್ತಾರೆ.
ಕೆಲ ಸಮಯದ ಹಿಂದೆ ಸ್ಟಾರ್ ಸುವರ್ಣ (Star Suvarna) ವಾಹಿನಿಯ ಉಧೋ ಉಧೋ ರೇಣುಕಾ ಯಲ್ಲಮ್ಮ ಸೀರಿಯಲ್ ನಲ್ಲಿ ರಾವಣನಾಗಿ ಅಭಿನಯಿಸಿದ್ದ ಅರ್ಜುನ್ ಇದೀಗ ಮತ್ತೊಮ್ಮೆ ಶಿವನಾಗಿ ಕಾಣಿಸಿಕೊಂಡಿದ್ದಾರೆ. ಪೌರಾಣಿಕ, ದೈವೀಕ, ಭಕ್ತಿ ಪ್ರಧಾನ ಧಾರಾವಾಹಿಗಳನ್ನು ನೀಡುವಲ್ಲಿ ಯಶಸ್ವಿಯಾಗಿರುವ ಸ್ಟಾರ್ ಸುವರ್ಣ ಹೊಸ ಕಥೆಯೊಂದಿಗೆ ಬಂದಿದೆ.
ತಾಳ್ಮೆ ತ್ಯಾಗಕ್ಕೆ ಹೆಸರುವಾಸಿಯಾಗಿರುವ ಪಾರ್ವತಿ ದೇವಿ, ಜಗನ್ಮಾತೆಯಾಗಿ, ದುಷ್ಟ ಸಂಹಾರ ಮಾಡಿದ್ದು ಹೇಗೆ ಎನ್ನುವುದರ ಕಥೆಯನ್ನು ಹೊಂದಿರುವ ಶ್ರೀದೇವಿ ಮಹಾತ್ಮೆ ಧಾರಾವಾಹಿಯಲ್ಲಿ ಶಿವನಾಗಿ ಅರ್ಜುನ್ ರಮೇಶ್ ನಟಿಸಿದರೆ, ಪಾರ್ವತಿಯಾಗಿ ಜೀವಿತ ವಸಿಷ್ಠ ನಟಿಸುತ್ತಿದ್ದಾರೆ. ಪ್ರೋಮೋ ಬಿಡುಗಡೆಯಾಗಿದ್ದು, ಅದ್ಭುತವಾಗಿ ಬಂದಿದೆ.