ರೈಲಿನಲ್ಲಿ ಪ್ರಯಾಣ (travel by train) ಮಾಡೋದು ಅಂದರೆ ಏನೇನೋ ಅನುಭವ ಕೊಡುತ್ತೆ. ಕೆಲವೊಮ್ಮೆ ನದಿಯ ಮೇಲಿನ ಸೇತುವೆ ಮೇಲೆ ರೈಲಿನ ಪ್ರಯಾಣ, ಸಮುದ್ರದ ಬದಿಯಿಂದ ಪ್ರಯಾಣ, ಕಣಿವೆಗಳ ನಡುವೆ ಪಯಾಣ, ಜಲಪಾತದ ಬಳಿಯಿಂದ ಪ್ರಯಾಣ, ಇನ್ನು ಸಾಮಾನ್ಯದಲ್ಲಿ ಸಾಮಾನ್ಯ ಎಂದರೆ ಮೆಟ್ರೋ ಪ್ರಯಾಣ. ಆದರೆ ರೈಲು ಯಾವತ್ತಾದ್ರೂ ಅಪಾರ್ಟ್ ಮೆಂಟ್ ಮಧ್ಯದಿಂದ ಹೋಗೋದನ್ನು ನೀವು ಕೇಳಿದ್ದೀರಾ?
ನಾವು ಸಾಮಾನ್ಯವಾಗಿ ಬೆಳಿಗ್ಗೆ ಕೆಲಸಕ್ಕೆ ಹೋಗಲು ಮೆಟ್ರೋ ರೈಲನ್ನು ಉಪಯೋಗಿಸುತ್ತೇವೆ. ಈ ರೈಲು ಸಿಟಿಯ ಮಧ್ಯಭಾಗದಿಂದಲೇ ಹಾದು ಹೋಗುತ್ತದೆ. ಆದರೆ ಆಗ್ನೇಯ ಚೀನಾದ ಚಾಂಗ್ಕಿಂಗ್ನಲ್ಲಿ (Chongqing, southeast China), ಜನರು ಸಂಪೂರ್ಣವಾಗಿ ವಿಭಿನ್ನ ಅನುಭವ ಪಡೆದಿದ್ದಾರೆ. ಇಲ್ಲಿ ರೈಲು 19 ಅಂತಸ್ತಿನ ಅಪಾರ್ಟ್ಮೆಂಟ್ ಕಟ್ಟಡದ ಮಧ್ಯಭಾಗದಿಂದ ರೈಲು ಹಾದುಹೋಗುತ್ತದೆ. ರೈಲ್ವೆ ಸುರಂಗದ ಮೇಲೆ, ಕೆಳಗೆ ಎರಡೂ ಕಡೆಯೂ ಜನವಸತಿ ಇದೆ.
ಹೌದು ನೀವು ಕೇಳಿರೋದೆಲ್ಲಾ ನಿಜಾ. ಚೀನಾದ ಲಿಜಿಬಾ ನಿಲ್ದಾಣದಲ್ಲಿ ಚಾಂಗ್ಕಿಂಗ್ ರೈಲು ಸಾರಿಗೆ ಸಂಖ್ಯೆ 2 ಅನ್ನು ಹಿಡಿಯಲು ನಿವಾಸಿಗಳು ಕಟ್ಟಡದ ಆರನೇ ಅಥವಾ ಎಂಟನೇ ಮಹಡಿಗೆ ಹೋಗಬೇಕಾಗಿದೆ. ಈ ಬಿಲ್ಡಿಂಗ್ ಪೂರ್ತಿಯಾಗಿ ಜನರು ವಾಸಿಸುತ್ತಿದ್ದಾರೆ.
ಅನೇಕ ಎತ್ತರದ ಕಟ್ಟಡಗಳಿಂದಾಗಿ "ಮೌಂಟೇನ್ ಸಿಟಿ" (mountain city) ಎಂದು ಕರೆಯಲ್ಪಡುವ ಚಾಂಗ್ಕಿಂಗ್, ಕೇವಲ 31,000 ಚದರ ಮೈಲಿಗಳ ಒಳಗೆ 49 ಮಿಲಿಯನ್ ಜನರಿಗೆ ನೆಲೆಯಾಗಿದೆ, ಆದ್ದರಿಂದ ನಗರದ ರೈಲ್ವೆ ಎಂಜಿನಿಯರ್ಗಳು ಎಲ್ಲರಿಗೂ ಸ್ಥಳಾವಕಾಶ ನೀಡುವ ಮಾರ್ಗವನ್ನು ಕಂಡುಹಿಡಿಯಲು ಸೃಜನಶೀಲರಾಗಿರಬೇಕು.
ಸ್ಥಳಾವಕಾಶದ ಹಿನ್ನೆಲೆಯಲ್ಲಿಯೇ ಇಲ್ಲಿ ಅಪಾರ್ಟ್ ಮೆಂಟ್ ಮಧ್ಯ ರೈಲು ಹಾದುಹೋಗುವಂತೆ ಮಾಡಲಾಯಿತು. ಅದನ್ನು ತೆರೆದ ಹದಿಮೂರು ವರ್ಷಗಳ ನಂತರ, ರೈಲು ಅಪಾರ್ಟ್ಮೆಂಟ್ ಕಟ್ಟಡದ ಮಧ್ಯದಲ್ಲಿ ಹಾದುಹೋಗುತ್ತಿರುವ ಫೋಟೋಗಳು ಭಾರಿ ಸದ್ದು ಮಾಡುತ್ತಿವೆ.
ಈ ಕಟ್ಟಡದ ಮಧ್ಯೆ ಸಾಗುವ ರೈಲು ವಿಶೇಷತೆಯನ್ನು ಹೊಂದಿದ್ದು, ಈ ಲೈಟ್ ರೈಲ್ ಅದರ ಹೊಗೆ-ಮುಕ್ತ ವಿನ್ಯಾಸ ಮತ್ತು ಕಡಿಮೆ ಶಬ್ದ ಮತ್ತು ಕಂಪನ ಮಟ್ಟದಿಂದಾಗಿ ಚೀನಾದ ಶಾಂತ ರೈಲು ಮಾರ್ಗಗಳಲ್ಲಿ ಒಂದಾಗಿದೆ. ಈ ರೈಲು ಚಲಿಸಿದರೆ, ಯಾವುದೇ ರೀತಿಯ ಶಬ್ಧ ಕೇಳಿ ಬರೋದಿಲ್ಲ. ರೈಲು ತನ್ನ ಸಾಗಣೆಯ ಸಮಯದಲ್ಲಿ ಸುಮಾರು 60 ಡೆಸಿಬಲ್ ಶಬ್ದವನ್ನು ಮಾತ್ರ ಉತ್ಪಾದಿಸುವ ನಿರೀಕ್ಷೆಯಿರುವುದರಿಂದ ನಿವಾಸಿಗಳು ಶಬ್ದ ಮಾಲಿನ್ಯದ ಬಗ್ಗೆ ಚಿಂತಿಸಬೇಕಾಗಿಲ್ಲ.
ಈ ಕುರಿತು ಮಾತನಾಡುವ ಪುರಸಭೆಯ ಸಾರಿಗೆ ವಕ್ತಾರ ಯುವಾನ್ ಚೆಂಗ್ "ನಮ್ಮ ನಗರವು ಬಹಳ ಕಡಿಮೆ ಪ್ರದೇಶದಲ್ಲಿದೆ. ಇಲ್ಲಿ ಜನಸಂಖ್ಯೆಗೆ ಸರಿಯಾಗಿ ರಸ್ತೆಗಳು ಮತ್ತು ರೈಲ್ವೆ ಮಾರ್ಗಗಳಿಗೆ ಸ್ಥಳಾವಕಾಶವನ್ನು ಕಂಡುಹಿಡಿಯುವುದು ಸವಾಲಿನ ಕೆಲಸವಾಗಿದೆ. ಕೆಲವೊಮ್ಮೆ ನೆಲದ ಮೇಲೆ ಜಾಗವಿರುವುದಿಲ್ಲ, ಆದ್ದರಿಂದ ನಾವು ಕೆಳಗೆ ಅಥವಾ ಮೇಲಕ್ಕೆ ಹೋಗುವ ಬಗ್ಗೆ ಯೋಚಿಸಬೇಕು. ಈ ರೀತಿಯ ವೇಗದ ನಗರದಲ್ಲಿ ಜನರು ಬೇಗನೆ ತಿರುಗಾಡಲು ಈ ರೀತಿಯಾಗಿ ರೈಲ್ವೇ ಮಾರ್ಗವನ್ನು ನಿರ್ಮಾಣ ಮಾಡಲಾಯ್ತು, ಜೊತೆಗೆ ಅದರಲ್ಲಿ ಯಶಸ್ಸು ಕೂಡ ಪಡೆಯಲಾಯಿತು ಎನ್ನುತ್ತಾರೆ.