ವಿಶ್ವ ಆರೋಗ್ಯ ಸಂಸ್ಥೆಯ ವೆಬಿನಾರ್‌ನಲ್ಲಿ ಅಡಕೆಯನ್ನು ಕ್ಯಾನ್ಸರ್‌ಕಾರಕ ಎಂದು ಪರಿಗಣಿಸಿ ನಿಷೇಧಿಸುವ ಬಗ್ಗೆ ಚರ್ಚಿಸಲಾಗಿದೆ. ಆದರೆ,ಭಾರತೀಯ ತಜ್ಞರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು,ಅಡಕೆಯ ಆಯುರ್ವೇದ ಬಳಕೆ, ಆರ್ಥಿಕ ಅವಲಂಬನೆ ಮತ್ತು ಹೆಚ್ಚಿನ ವೈಜ್ಞಾನಿಕ ಅಧ್ಯಯನದ ಅಗತ್ಯವನ್ನು ಪ್ರತಿಪಾದಿಸಿದ್ದಾರೆ.
ಮಂಗಳೂರು: ದೆಹಲಿಯಲ್ಲಿ ಶುಕ್ರವಾರ ನಡೆದ ‘ಅರೆಕಾನಟ್ ಚಾಲೆಂಜ್: ಟರ್ನಿಂಗ್ ಪಾಲಿಸಿ ಇನ್‌ಟು ಇಂಪ್ಯಾಕ್ಟ್ ಇನ್ ದ ಸೌತ್ ಈಸ್ಟ್ ಏಷ್ಯಾ ರೀಜನ್’ ಎಂಬ ವೆಬಿನಾರ್‌ನಲ್ಲಿ ಕ್ಯಾನ್ಸರ್‌ಕಾರಕ ಉತ್ಪನ್ನಗಳಾದ ಮದ್ಯ ಪಾನೀಯ, ತಂಬಾಕು ಮುಂತಾದ ಉತ್ಪನ್ನಗಳ ಪಟ್ಟಿಗೆ ಸೇರಿರುವ ಅಡಕೆಯ ಬಳಕೆ ತಡೆಯುವುದನ್ನು ಕಾರ್ಯರೂಪಕ್ಕೆ ತರುವಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಉತ್ಸುಕವಾಗಿದೆ ಎಂಬ ಆಘಾತಕಾರಿ ವಿಚಾರ ಚಿಂತನ ಮಂಥನದಲ್ಲಿ ಹೊರಹೊಮ್ಮಿದೆ.
26
ಅಡಕೆ ಚಟ ನಿಯಂತ್ರಿಸಲು ಸಾಧ್ಯವಿಲ್ಲ
ಆದರೆ ವಿಜ್ಞಾನಿಗಳ ಪ್ರಕಾರ ಅಡಕೆಯನ್ನು ಒಂದು ಚಟವಾಗಿ ಬಳಸಲಾಗುತ್ತಿದ್ದು, ಇದನ್ನು ಅಷ್ಟು ಸುಲಭವಾಗಿ ನಿಯಂತ್ರಿಸಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಸರ್ಕಾರಗಳು ಸೂಕ್ತ ಕ್ರಮಗಳನ್ನು ವಿಶ್ವ ಆರೋಗ್ಯ ಸಂಸ್ಥೆಯ ಸೂಚನೆಯಂತೆ ಕೈಗೊಳ್ಳಬೇಕು. ಇದಕ್ಕಾಗಿ ಅಗತ್ಯ ಪ್ರಚಾರ ಮತ್ತು ತಿಳುವಳಿಕೆಯನ್ನು ಸಮಾಜದಲ್ಲಿ ಕೈಗೊಳ್ಳಬೇಕು ಎಂಬ ಅಭಿಪ್ರಾಯಕ್ಕೆ ಬರಲಾಗಿದೆ.
36
ಆಯುರ್ವೇದ ಔಷಧ ಪದ್ಧತಿಯಲ್ಲಿ ಬಳಕೆ
ವೆಬಿನಾರ್‌ನಲ್ಲಿ ಭಾಗವಹಿಸಿದ ಕ್ಯಾಂಪ್ಕೋ ನಿರ್ದೇಶಕ ಮುರಳಿಕೃಷ್ಣ ಅವರು, ಸರಿಯಾದ ಕ್ಲಿನಿಕಲ್ ಪರೀಕ್ಷೆಗಳು ನಡೆಸದೆ ಕೇವಲ ಶೈಕ್ಷಣಿಕ ಸಂಶೋಧನೆಗಳ ಮೂಲಕ ಕೈಗೊಂಡ ಫಲಿತಾಂಶಗಳ ಆಧಾರದ ಮೇಲೆ ಆತುರದ ನಿರ್ಧಾರಕ್ಕೆ ಬರಬಾರದು. ಬದಲಾಗಿ ದೊಡ್ಡ ಪ್ರಮಾಣದಲ್ಲಿ ಕ್ಲಿನಿಕಲ್ ಪರೀಕ್ಷೆ ನಡೆಸಿ ತೀರ್ಮಾನಕ್ಕೆ ಬರಬೇಕು. ಇದನ್ನು ಸಾರ್ವಜನಿಕರ ಮುಂದಿಡಬೇಕು, ಈ ವಿಚಾರವನ್ನು ಪ್ರತಿಯೊಂದು ರಾಜ್ಯ ಸರ್ಕಾರಗಳ ಮುಂದಿಡಬೇಕು ಎಂದರು. ಇದರೊಂದಿಗೆ ಅಡಕೆಯನ್ನು ಆಯುರ್ವೇದ ಔಷಧ ಪದ್ಧತಿಯಲ್ಲಿ ಬಳಕೆ ಮಾಡುತ್ತಿರುವ ಕಾರಣ ಅಂತಿಮ ತೀರ್ಮಾನಕ್ಕೆ ಬರುವ ಮೊದಲು ಈ ಬಗ್ಗೆ ಗಮನಹರಿಸಬೇಕು ಎಂದು ಪ್ರಶ್ನೆ ಮೂಲಕ ಗಮನ ಸೆಳೆದರು.
ವೆಬಿನಾರ್‌ನಲ್ಲಿ ಭಾಗವಹಿಸಿದ ಆರ್ಥಿಕ ತಜ್ಞ ಡಾ. ವಿಘ್ನೇಶ್ವರ ವರ್ಮುಡಿ, ಅಡಕೆ ಬೆಳೆಯುವ, ಬಳಕೆ ಮಾಡುವ ಮತ್ತಿತರ ಅವಲಂಬಿತರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗಳನ್ನು ಗಮನದಲ್ಲಿ ಇರಿಸಿಕೊಂಡು ಅಂತಿಮ ನಿರ್ಧಾರಕ್ಕೆ ಬರುವುದು ಸೂಕ್ತ. ಅಡಕೆಗೆ ಧಾರ್ಮಿಕ ಮೌಲ್ಯಗಳಿವೆ. ದಂತ ವೈದ್ಯರು ನೀಡುವ ಮಾಹಿತಿಗಳ ಪ್ರಕಾರ ಬಾಯಿಯ ಕ್ಯಾನ್ಸರ್‌ಗೆ ಮೂಲ ಕಾರಣ ರಾಸಾಯನಿಕಗಳಿಂದ ಮಿಶ್ರಿತವಾದ ಉತ್ಪನ್ನವೇ ಹೊರತು ಬರೇ ಅಡಕೆಯಲ್ಲ. ಆದ್ದರಿಂದ ಈ ದೃಷ್ಟಿಯಿಂದ ಇನ್ನಷ್ಟು ಅಧ್ಯಯನಗಳಾಗಬೇಕು ಎಂದು ಪ್ರತಿಪಾದಿಸಿದರು.
56
ಕಾರ್ಯಾಗಾರ ನಡೆಯಲಿ:
ಈ ಎಲ್ಲ ದೃಷ್ಟಿಯಿಂದ ಮೊತ್ತ ಮೊದಲು ಅಡಕೆಯ ಅವಲಂಬಿತರಿಗೆ ಸೂಕ್ತ ಮಾಹಿತಿಯನ್ನು ಒದಗಿಸಲು ಪ್ರಾದೇಶಿಕ ಮಟ್ಟದಲ್ಲಿ ಕಾರ್ಯಾಗಾರಗಳು ಹಾಗೂ ವಿಚಾರ ಸಂಕಿರಣಗಳನ್ನು ಏರ್ಪಡಿಸಿ ಅಂತಿಮ ತೀರ್ಮಾನಕ್ಕೆ ಮುಂದಾಗಬೇಕು ಎಂದಾಗ ಇದಕ್ಕೆ ವೆಬಿನಾರ್ ಆಯೋಜಕರು ಸಹಮತ ವ್ಯಕ್ತಪಡಿಸಿದರು. ಮಾತ್ರವಲ್ಲದೆ ಅಂತಿಮ ತೀರ್ಮಾನಕ್ಕೆ ಬರುವ ಮೊದಲು ವಿಶ್ವ ಆರೋಗ್ಯ ಸಂಸ್ಥೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಒಂದು ಅಲ್ಪಕಾಲೀನ ಮತ್ತು ಒಂದು ದೀರ್ಘ ಕಾಲೀನ ಯೋಜನೆಗಳನ್ನು ಹಮ್ಮಿಕೊಂಡು ಅವನ್ನು ಅಡಕೆಯ ಅವಲಂಬಿತರಿಗೆ ತಿಳಿಹೇಳಬೇಕು ಎಂದು ಡಾ.ವಿಘ್ನೇಶ್ವರ ವರ್ಮುಡಿ ಸಲಹೆ ನೀಡಿದರು.
66
ಮುಂದುವರಿದ ಭಾಗದ ವೆಬಿನಾರ್ ಫೆಬ್ರವರಿಯಲ್ಲಿ
ಅಡಕೆ ಬೆಳೆಗಾರರ ಪರವಾಗಿ ಮುರಳಿಕೃಷ್ಣ ಮತ್ತು ಡಾ. ವಿಘ್ನೇಶ್ವರ ವರ್ಮುಡಿ ಅವರು ಸುಮಾರು 25 ಪ್ರಶ್ನೆಗಳನ್ನು ಮುಂದಿಟ್ಟಿದ್ದರು. ಈ ವೆಬಿನಾರ್‌ನಲ್ಲಿ ಭಾರತವೂ ಸೇರಿದಂತೆ ಇತರ ರಾಷ್ಟ್ರಗಳ ಸುಮಾರು 150ಕ್ಕೂ ಅಧಿಕ ಮಂದಿ ತಜ್ಞರು ಭಾಗವಹಿಸಿದ್ದರು. ಇದರ ಮುಂದುವರಿದ ಭಾಗದ ವೆಬಿನಾರ್ ಫೆಬ್ರವರಿ ತಿಂಗಳಲ್ಲಿ ನಡೆಯಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ