ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಅರಬ್ಬೀ ಸಮುದ್ರದ 9 ನಾಟಿಕಲ್ ಮೈಲು ದೂರದ ಲೈಟ್ ಹೌಸ್ ಬಳಿ ಮಲ್ಪೆ ಮೂಲದ ಸೀ ಹಂಟರ್ ಹೆಸರಿನ ಬೋಟ್ ಒಂದು ಮುಳಗಡೆ ಆಗಿದೆ. ಇನ್ನು ಮುಳಗಡೆ ಆಗುವ ದೃಶ್ಯಗಳನ್ನು ವಿಡಿಯೋದಲ್ಲಿ ಸೆರೆ ಹಿಡಿಯಲಾಗಿದೆ.
ಎಂದಿನಂತೆ ಮೀನು ಹಿಡಿಯಲು ತೆರಳಿದ್ದ ಈ ಬೋಟ್ ಅರಬ್ಬೀ ಸಮುದ್ರದ 9 ನಾಟಿಕಲ್ ಮೈಲು ದೂರದ ಲೈಟ್ ಹೌಸ್ ಬಳಿ ಅಪಘಾತಕ್ಕೀಡಾಗಿದೆ. ಮಕರ ಸಂಕ್ರಾಂತಿ ಹಬ್ಬವನ್ನೂ ಆಚರಣೆ ಮಾಡದೇ ಇಂದು ಮುಂಜಾನೆ ಉಡುಪಿ ಜಿಲ್ಲೆಯ ಮಲ್ಪೆಯಿಂದ ಮಹಾರಾಷ್ಟ್ರದತ್ತ ಮೀನುಗಾರಿಕೆಗೆ ತೆರಳುತ್ತಿದ್ದ ಬೋಟ್‌ನಲ್ಲಿ 8 ಮಂದಿ ಮೀನುಗಾರರು ಇದ್ದರು.
ಕಬ್ಬಿಣದ ಬೋಟ್ ಆಗಿದ್ದರಿಂದ ಬೋಟ್‌ನ ತಳಭಾಗದಲ್ಲಿ ವೆಲ್ಡಿಂಗ್ ಬಿಟ್ಟುಹೋಗಿತ್ತು. ಇದರಿಂದ ಬೊಟ್‌ನ ಇಂಜಿನ್ ಒಳಗೆ ವೇಗವಾಗಿ ನೀರು ನುಗ್ಗಿದೆ. ಇನ್ನು ಬೋಟ್‌ನಲ್ಲಿ ನೀರು ನುಗ್ಗುವುದು, ಅದನ್ನು ತಡೆಯಲು ಮೀನುಗಾರರು ಪಟ್ಟ ಶ್ರಮವನ್ನು ಸ್ವತಃ ಮೀನುಗಾರರೇ ವಿಡಿಯೋ ಮಾಡಿಕೊಂಡಿದ್ದಾರೆ.
ನೀರು ಬೋಟ್‌ನೊಳಗೆ ನುಗ್ಗುವುದನ್ನು ತಡೆಯಲು ಮೀನುಗಾರರು ಎಷ್ಟೇ ಪ್ರಯತ್ನ ಮಾಡಿದರೂ ಅದು ಸಾಧ್ಯವಾಗಲಿಲ್ಲ. ಇನ್ನು ಕಬ್ಬಿಣದ ಬೋಟ್ ಆಗಿದ್ದರಿಂದ ಭಾರ ಹೆಚ್ಚಾಗಿದ್ದು, ವೆಲ್ಡಿಂಗ್ ಬಿಟ್ಟುಕೊಂಡಿರುವುದನ್ನು ಮುಚ್ಚಲು ಪ್ರಯತ್ನ ಮಾಡಿದಷ್ಟು ಅದು ವಿಸ್ತರಣೆಗೊಂಡಿದೆ. ಇದರಿಂದಾಗಿ ಬೋಟ್‌ನ ಇಂಜಿನ್ ಒಳಗೆ ನೀರು ನುಗ್ಗಿದೆ. ಅಂತಿಮವಾಗಿ ಬೋಟ್ ಸಂಪೂರ್ಣವಾಗಿ ಮುಳುಗುತ್ತದೆ ಎಂಬುದು ಖಚಿತ ಆಗುತ್ತಿದ್ದಂತೆ ಬೋಟಿನಲ್ಲಿದ್ದ ಮೀನುಗಾರರು ಸಹಾಯಕ್ಕಾಗಿ ಸಿಗ್ನಲ್ ನೀಡಿದ್ದಾರೆ.
ಕೂಡಲೇ ಸ್ಥಳೀಯ ಮೀನುಗಾರರಿಂದ ಮಲ್ಪೆಯ ಮುಳುಗಡೆ ಆಗುತ್ತಿದ್ದ ಬೋಟಿನ ಒಳಗಿದ್ದ 8 ಮಂದಿ ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ. ರಕ್ಷಣೆಗೊಳಗಾದ ಮೀನುಗಾರರನ್ನು ಇಂದು ಸಂಜೆ ಕಾರವಾರಕ್ಕೆ ಕರೆತರಲಾಗಿದೆ. ಬೋಟ್ ಮುಳುಗಡೆಯಿಂದ 1 ಕೋಟಿ ರೂ.ಗೂ ಹೆಚ್ಚು ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.