
1955ರಲ್ಲಿ ಎಸ್‌ಎಲ್ ಭೈರಪ್ಪ ತಮ್ಮ ಹೈಸ್ಕೂಲ್ ದಿನಗಳಲ್ಲಿಯೇ ಬರೆದ ಕಾದಂಬರಿ ಗತಜನ್ಮ ಮತ್ತೆರಡು ಕಥೆಗಳು. ಮೂರು ಬಾರಿ ಇದು ಮರುಮುದ್ರಿತವಾಗಿವೆ.
1958ರಲ್ಲಿ ಬರೆದ ಕಾದಂಬರಿ ಭೀಮಕಾಯ. 7 ಬಾರಿ ಮರುಮುದ್ರಿತವಾಗಿದೆ. ಕುಸ್ತಿಪಟುಗಳ ಬದುಕು ರೋಮಾಂಚಕಾರಿಯಾದಷ್ಟೇ ಗುಂಡಾಂತರ ಪೂರ್ವವೂ ಅಗಿದೆ. ಕುಸ್ತಿಪಟುವಿಗೆ ದೊರೆಯುವ ಮಾನಸಮ್ಮಾನದ ಹಿಂದೆ ಎಂತಹ ಸಂಯಮ ಬೇಕು ಎನ್ನುವುದು ಯಾರೂ ಆರಿಯರು. ಕುಸ್ತಿಕಣದ ನಿಕಟ ಸಂಪರ್ಕವಿರಿಸಿಕೊಂಡ ಈ ಕಾದಂಬರಿಕಾರರು ಕುಸ್ತಿಪಟುಗಳ ಜೀವನವನ್ನು ಸೌಹಾರ್ದತೆಯಿಂದ ಕಂಡಿದ್ದು ಈ ಕಾದಂಬರಿಯಲ್ಲಿದೆ.
ಭಾರತೀಯ ಪರಂಪರೆಯಲ್ಲಿ ಧರ್ಮ, ಸಂಸ್ಕೃತಿ, ಎರಡೂ ಅವಿಭಿನ್ನವಾದ ರೂಪಗಳು. ಮತಾಂತರದಿಂದ ಸಂಭವಿಸುವ ಸಾಂಸ್ಕೃತಿಕ ಘರ್ಷಣೆಯ ಸ್ವರೂಪವೆಂತಹುದು ಎಂಬುದೇ ‘ಧರ್ಮಶ್ರೀ’ಯ ವಸ್ತು. 1961ರಲ್ಲಿ ಬರೆದ ಕಾದಂಬರಿ 17 ಬಾರಿ ಮರುಮುದ್ರಿತವಾಗಿವೆ.
ನಲವತ್ತೆಂಟು ವರ್ಷ ಕಳೆದರೂ ಪದೇ ಪದೇ ಮರುಮುದ್ರಣ ಕಾಣುತ್ತಾ ಸಾಗಿರುವ ದೂರ ಸರಿದರು ಕಾದಂಬರಿ ಸಶಕ್ತ ಸನ್ನಿವೇಶ, ಜೀವಂತ ಪಾತ್ರಚಿತ್ರಣ ಮೊದಲಾದ ಗುಣಗಳಿಂದ ನಮ್ಮನ್ನು ನೆನಪಿನಲ್ಲಿ ಮುಳುಗಿಸುತ್ತದೆ. 1962ರಲ್ಲಿ ಬಂದ ಕಾದಂಬರಿ ಇಲ್ಲಿಯವರೆಗೂ 16 ಬಾರಿ ಮರುಮುದ್ರಿತಗೊಂಡಿದೆ.
1965ರಲ್ಲಿ ಬರೆದ ಕಾದಂಬರಿ ಇಲ್ಲಿಯವರೆಗೂ 21 ಬಾರಿ ಮರುಮುದ್ರಿತಗೊಂಡಿದೆ. 'ಬದುಕಿನ ಸೂಕ್ಷ್ಮ, ಸಂಕೀರ್ಣ ನೆಲೆಗಳ ಆಳಕ್ಕಿಳಿದು ಪ್ರಖರವಾದ ವೈಚಾರಿಕ, ತಾತ್ತ್ವಿಕ, ಮಾನವೀಯ ಅಂಶಗಳನ್ನು ಸಂವೇದನಾಶೀಲತೆಯಿಂದ ಶೋಧಿಸುವ ಕಾದಂಬರಿ ಇದು. ಹಿಂದಿ, ಮರಾಠಿ, ಗುಜರಾತಿ, ತೆಲುಗು, ಉರ್ದು, ಇಂಗ್ಲಿಷ್ ಮೊದಲಾಗಿ ಹಲವು ಭಾಷೆಗಳಿಗೆ ಅನುವಾದಿತವಾಗಿ ಭಾರತದ ಶ್ರೇಷ್ಠ ಕಾದಂಬರಿಗಳಲ್ಲೊಂದು ಎಂಬ ಮನ್ನಣೆಯನ್ನು ಗಳಿಸಿದೆ. ಬದುಕಿನ ಬೇರುಗಳನ್ನು ಶೋಧಿಸುವ ಈ ಸಾಹಿತ್ಯಕೃತಿಯನ್ನು ಓದುವುದೇ ಒಂದು ವಿಶಿಷ್ಟ ಅನುಭವ.
1965ರಲ್ಲಿ ಬರೆದ ಕಾದಂಬರಿ 14 ಬಾರಿ ಮರುಮುದ್ರಿತಗೊಂಡಿದೆ. ಎಮ್.ಬಿ.ಬಿ.ಎಸ್. ಮಾಡಿದ ಒಬ್ಬ ತರುಣ ತನ್ನ ಹಳ್ಳಿಯಲ್ಲಿ ಗಾಂಧಿಯ ಮಾರ್ಗದಲ್ಲಿ ಸೇವೆ ಮಾಡತೊಡಗಿ ಜನಾದರಣೆ ಗಳಿಸುತ್ತಾನೆ. ಅವನ ಜನಾದರಣೆಯನ್ನು ಬಳಸಿಕೊಳ್ಳುವ ತಂತ್ರ ಹೂಡಿ ಆಳುವ ಪಕ್ಷವು ಇನ್ನೂ ಹೆಚ್ಚು ಸೇವೆ ಮಾಡುವ ಅವಕಾಶಗಳು ದೊರೆಯುತ್ತವೆಂಬ ಆಮಿಷ ಹೂಡಿ ಅವನನ್ನು ಚುನಾವಣೆಯಲ್ಲಿ ತನ್ನ ಪಕ್ಷದ ಅಭ್ಯರ್ಥಿಯನ್ನಾಗಿ ನಿಲ್ಲಿಸುತ್ತದೆ. ಚುನಾವಣಾ ಓಡಾಟದಲ್ಲಿ ತೊಡಗಿದ ಅವನು ಒಬ್ಬ ರೋಗಿಗೆ ಗಮನಕೊಡದೆ ಆ ರೋಗಿ ಸಾಯುತ್ತಾನೆ. ವ್ಯೆದ್ಯನು ಚುನಾವಣೆಯಲ್ಲಿ ಸೋಲುತ್ತಾನೆ. ಮಂತ್ರಿಗಳ ಚುನಾವಣಾ ಫಂಡಿಗೆ ತನ್ನ ಆದಾಯದ ಮಿತಿ ಮೀರಿ ಸಾಲಮಾಡಿ ಹಣ ಒದಗಿಸಿದ ಒಬ್ಬ ಕಿರು ಕಂಟ್ರಾಕ್ಟರು ಕೊನೆಗೆ ತಾನು ನಿರೀಕ್ಷಿಸಿದ ಕಂಟ್ರಾಕ್ಟು ಸಿಕ್ಕದೆ ಸಾಲ ತೀರಿಸಲಾರದೆ ದೊಡ್ಡಕೆರೆಯ ತೂಬಿಗೆ ಕಲ್ಲು ಕಟ್ಟಿಕೊಂಡು ಮುಳುಗಿ ಸಾಯುತ್ತಾನೆ.
ಸೃಷ್ಟಿಶಕ್ತಿಯಿಂದ ವಿಜೃಂಭಿಸುವ ಜೀವನಪ್ರವೃತ್ತಿ ಮತ್ತು ಆ ಶಕ್ತಿಯನ್ನು ಹತ್ತಿಕ್ಕುವ ಜೀವನಪರಿಸ್ಥಿತಿಯ ತಾಕಲಾಟವೇ ‘ಜಲಪಾತ’ದ ಕಥಾವಸ್ತು. ನೀರು ಮತ್ತು ಮಣ್ಣಿನ ಶಕ್ತಿಯಿಂದ ಕಂಗೊಳಿಸುವ ವನಶ್ರೀ, ಗಂಡು ಹೆಣ್ಣುಗಳ ಮೂಲಶಕ್ತಿಯಾದ ಜೀವನವಿಕಾಸ, ಮತ್ತು ಬೌದ್ಧಿಕಸ್ತರದಲ್ಲಿ ಆವಿರ್ಭವಿಸುವ ಕಲಾಸೌಂದರ್ಯ-ಇವು ಮೂರು, ವಿವಿಧಸ್ತರಗಳಲ್ಲಿ ಪ್ರಕಟವಾಗುವ ಒಂದೇ ಮೂಲಶಕ್ತಿ ಎಂಬುದನ್ನು ಕಾದಂಬರಿಯ ಅಂಗಗಳಾಗಿ ಬೆಳೆದಿರುವ ಪ್ರತೀಕಗಳು ಎತ್ತಿತೋರಿಸುತ್ತವೆ. 1967ರಲ್ಲಿ ಬಂದ ಕಾದಂಬರಿ ಇಲ್ಲಿಯವರೆಗೂ 12 ಬಾರಿ ಮರುಮುದ್ರಿತವಾಗಿದೆ.
ಗೋವನ್ನು ಸರ್ವದೇವತೆಗಳ ಸ್ವರೂಪವೆಂದು ಪೂಜಿಸುವ ಕಾಳಿಂಗಜ್ಜ ಮತ್ತು ಅದು ಹಾಲು ಮಾಂಸಗಳನ್ನು ಕೊಡುವ ಪ್ರಾಣಿ ಮಾತ್ರ ಎಂದು ಭಾವಿಸುವ ಆಮೆರಿಕೆಯಿಂದ ಹಿಂತಿರುಗಿದ ಮೊಮ್ಮಗ, ಇವರ ಮೌಲ್ಯಸಂವೇದನೆಗಳ ನಡುವೆ ನಡೆಯುವ ತಿಕ್ಕಾಟವೇ ಈ ಕಾದಂಬರಿಯ ವಸ್ತು. ಪ್ರಾಯಶಃ ಭಾರತದ ಎಲ್ಲ ಭಾಷೆಗಳಲ್ಲೂ ಪ್ರಚಲಿತವಿರುವ ಗೋವಿನ ಹಾಡಿನ ಹಿನ್ನಲೆಯಲ್ಲಿ ಆರಂಭವಾಗುವ ಕಾದಂಬರಿಯು, ಭಾರತೀಯ ಸಂಸ್ಕೃತಿಯ ಮೂಲ ಬೇರುಗಳನ್ನು ಹಿನ್ನಲೆಯಲ್ಲಿ ಕಾಣಿಸುತ್ತದೆ. ಈ ಕೃತಿಯನ್ನಾಧರಿಸಿ ಕನ್ನಡ ಮತ್ತು ಹಿಂದಿಯಲ್ಲಿ ನಿರ್ಮಿಸಿರುವ ಚಲನ ಚಿತ್ರಗಳು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮನ್ನಣೆ ಪಡೆದಿವೆ. ಈ ಕಾದಂಬರಿಯ ಹಿಂದೀ ಅನುವಾದವೂ ಅಪಾರವಾದ ಮೆಚ್ಚುಗೆ ಪಡೆದಿದೆ. 1968ರಲ್ಲಿ ಬಂದ ಕಾದಂಬರಿ 13 ಬಾರಿ ಮರುಮುದ್ರಿತವಾಗಿದೆ.
ದೃಶ್ಯಜಗತ್ತಿನ ಒಂದು ವಾಸ್ತವ ಭಾಗವಾಗಿಯೂ ಕೂಡಾ ಇನ್ನೊಂದು ಮಟ್ಟದಲ್ಲಿ ಬೇರೊಂದು ಜಗತ್ತನ್ನೇ ದರ್ಶಿಸುವಂತೆ ಇಲ್ಲಿ ಮೂಡಿರುವ ಪ್ರತೀಕಗಳು ಅತ್ಯಂತ ಸಫಲವಾಗಿ ಅರ್ಥ ಸ್ಥರಗಳ ಒಂದು ಸೌಧವನ್ನು ನಿರ್ಮಿಸುತ್ತವೆ. ವಾಸ್ತವ ಶೈಲಿಯ ನಿರ್ದಿಷ್ಠತೆಯಿಂದಲೇ ಪುರಾಣಕ್ಕೆ ಸಾಧ್ಯವಾಗದ ಅತೀತತೆಯನ್ನು ಆಧುನಿಕ ಯುಗದ ಲೇಖಕರು ಮುಟ್ಟಬಹುದೆಂಬುದನ್ನು ಭೈರಪ್ಪನವರು ಈ ಕೃತಿಯಲ್ಲಿ ಸಾಧಿಸಿ ತೋರಿಸಿದ್ದಾರೆ. 1968ರಲ್ಲಿ ಬಂದ ಕಾದಂಬರಿ 17 ಬಾರಿ ಮರುಮುದ್ರಿತವಾಗಿದೆ.
1970ರಲ್ಲಿ ಬಂದ ಕಾದಂಬರಿ, 16 ಬಾರಿ ಮರುಮುದ್ರಣವಾಗಿದೆ. ಯಾವುದೇ ಬೌದ್ಧಿಕ ಜಿಜ್ಞಾಸೆಯ, ತಾತ್ತ್ವಿಕ, ವೈಚಾರಿಕ ವಿಶ್ಲೇಷಣೆಗಳ ಹಂಗಿಲ್ಲದೆ, ಬದುಕನ್ನು ಕೇವಲ ಬದುಕಾಗಿ ನೋಡುವ ಸಾಕ್ಷಿಪ್ರಜ್ಞೆಯ ಸೃಜನಾತ್ಮಕ ಕೃತಿ ‘ಗೃಹಭಂಗ’. ಯಾವುದೇ ಸಿದ್ಧಾಂತದ ವ್ಯಾಖ್ಯೆಗೂ ನಿಲುಕದ ಬದುಕಿನ ಒಳನೋಟಗಳ ಸಂಕೀರ್ಣ ವಿನ್ಯಾಸಗಳ ದರ್ಶನ ಮಾಡಿಸುವ ಈ ಕಾದಂಬರಿ, ಬದುಕಿಗೆ ಬದುಕೇ ಬರೆದ ಭಾಷ್ಯ. ‘ಗೃಹಭಂಗ’ ಭಾರತದ ಎಲ್ಲ ಭಾಷೆಗಳಿಗೂ ಅನುವಾದವಾಗಿ ಎಲ್ಲ ಭಾಷೆಗಳ ಓದುಗರನ್ನು ಸೆರೆಹಿಡಿದು, ಸಮಕಾಲೀನ ಭಾರತೀಯ ಕಾದಂಬರಿಗಳಲ್ಲಿ ಅಗ್ರಮಾನ್ಯತೆ ಪಡೆದಿದೆ.
ಐದು ಪುಟ್ಟ ಮಕ್ಕಳನ್ನು ಸಾಕಲು ಮನೆಯಲ್ಲಿ ಹೆಣ್ಣು ದಿಕ್ಕಿಲ್ಲದ ತಂದೆಯು, ಅವರನ್ನೆಲ್ಲ ದತ್ತು ಕೊಡುವುದಾಗಿ ಮುಂಬೈಯ ಟೈಮ್ಸ್ ಪತ್ರಿಕೆಯಲ್ಲಿ ಜಾಹೀರಾತು ಮಾಡುತ್ತಾನೆ.ಕನ್ನಡ ಕಾದಂಬರೀ ಪ್ರಪಂಚದಲ್ಲಿ ಒಂದು ವಿನೂತನ ಕೃತಿ. 1971ರಲ್ಲಿ ಬರೆದ ಕೃತಿ 14 ಬಾರಿ ಮರುಮುದ್ರಿತಗೊಂಡಿದೆ.
ಸನ್ಯಾಸಿಯ ಸತ್ಯಾನ್ವೇಷಣೆ ಮತ್ತು ಸಮಾಜದಲ್ಲಿ ಸ್ಥಾಪಿತವಾಗಿರುವ ನಂಬಿಕೆಗಳ ನಡುವೆ ಏರ್ಪಡುವ ಮೌಲ್ಯ ಸಂಘರ್ಷದ ವಿವಿಧ ಮಜಲುಗಳನ್ನು ಪರಾಮರ್ಶಿಸುವ ಕಾದಂಬರಿ ಗ್ರಹಣ. 1972ರಲ್ಲಿ ಬಂದ ಕಾದಂಬರಿ ಇಲ್ಲಿಯವರೆಗೂ 11 ಬಾರಿ ಮರುಮುದ್ರಣವಾಗಿದೆ.
‘ದಾಟು’ ಜಾತಿ ಸಮಸ್ಯೆಯನ್ನು ಕುರಿತು ಭಾರತೀಯ ಭಾಷೆಗಳಲ್ಲಿ ಬಂದಿರುವ ಕಾದಂಬರಿಗಳಲ್ಲೆಲ್ಲ ವಿಶಿಷ್ಟವಾದ ಕೃತಿ ಎಂದು ಪರಿಗಣಿತವಾಗಿದೆ. ಪಶ್ಚಿಮದಿಂದ ಎರವಲು ಪಡೆದ ಅಥವಾ ಸಮಕಾಲೀನ ರಾಜಕೀಯ ಒತ್ತಡದಿಂದ ಹುಟ್ಟಿದ ಸಿದ್ಧಾಂತಗಳನ್ನವಲಂಬಿಸದೆ ಸಾಂದ್ರವಾದ ಜೀವನಾನುಭವವನ್ನೊಳಗೊಂಡು ಭಾರತೀಯ ಸಾಮಾಜಿಕ ಪರಂಪರೆಯ ತಳಮುಟ್ಟುವ ವಿಶ್ಲೇಷಣೆಯನ್ನು ಸಾಧಿಸಿರುವ ಈ ಕೃತಿಯು ದಲಿತ ವಿಚಾರದ ಮೂಲನೆಲವಾದ ಮಹಾರಾಷ್ಟ್ರದಲ್ಲೂ ಅಪಾರ ಮನ್ನಣೆ ಪಡೆದಿದೆ. 1973ರಲ್ಲಿ ಬಂದ ಕಾದಂಬರಿ ಇಲ್ಲಿಯವರೆಗೂ 15 ಬಾರಿ ಮರುಮುದ್ರಣ ಕಂಡಿದೆ.
1976ರಲ್ಲಿ ಬಂದ ಕಾದಂಬರಿ 13 ಬಾರಿ ಮರುಮುದ್ರಣಗೊಂಡಿದೆ. ಈ ಕಾದಂಬರಿಯ ಪಾತ್ರಗಳು ತಮ್ಮ ತಮ್ಮ ಜೀವನವನ್ನು ಹುಡುಕಿಕೊಳ್ಳುವ ಪರಿಕ್ರಮದಲ್ಲಿ ‘ಗೃಹಭಂಗ’ದ ವಿಶ್ವನಾಥನ ಜೀವನವು ಓದುಗರಿಗೆ ಸ್ಪುಟವಾಗುತ್ತಾ ಹೋಗುತ್ತದೆ. ಅಲೆಮಾರಿಯಾಗಿ, ಹೋಟೆಲು ಕೆಲಸಗಾರನಾಗಿ, ಜಟಕಾ ಹೊಡೆಯುವವನಾಗಿ, ಪ್ರಿಯಕರನಾಗಿ, ಇನ್ನೂ ಹಲವು ರೀತಿಯಲ್ಲಿ ಅವನು ಸಾಗಿದ ದಾರಿಯಿಂದ ವಿವಿಧ ಪಾತ್ರಗಳು ಆಕರ್ಷಿತರಾಗುತ್ತಾರೆ; ತಮ್ಮನ್ನು ಅವನೊಡನೆ ಹೋಲಿಸಿಕೊಳ್ಳುತ್ತಾರೆ. ಆದರೆ ವಾಸ್ತವವಾಗಿ ಯಾರಿಗೂ ಅವನ ಜೀವನದ ಸಮಗ್ರ ಚಿತ್ರ ಕಾಣುವುದಿಲ್ಲ. ಈ ಕಾದಂಬರಿಯಲ್ಲಿ ಭೈರಪ್ಪನವರು ಸಾಧಿಸಿರುವ ತಂತ್ರಕೌಶಲ, ಜೀವನಗ್ರಹಿಕೆ ಬುದ್ಧಿಭಾವ, ಇಂದ್ರಿಯಾತ್ಮಕ ಚಿತ್ರಗಳ ಸಮರಸ ಹದವು ಕನ್ನಡ ಕಾದಂಬರೀಲೇಖನದಲ್ಲಿ ಒಂದು ಮುಖ್ಯ ಹಂತವಾಗಿ ನಿಂತಿದೆ.
ವ್ಯಾಸ ಮಹರ್ಷಿಗಳ ‘ಮಹಾಭಾರತ’ವನ್ನು ಆಧಾರವಾಗಿಟ್ಟುಕೊಂಡು ರಚಿತವಾಗಿರುವ ಕಾದಂಬರಿ ‘ಪರ್ವ’. ಇದು ಮರುಸೃಷ್ಟಿ. ಕಾವ್ಯ ಇತಿಹಾಸ ಪುರಾಣಗಳ ಮಿಶ್ರಣವಾದ ಪ್ರಾಚೀನ ಮಹಾಕೃತಿಯೊಂದನ್ನು ಆಧುನಿಕ ಸಾಹಿತ್ಯಪ್ರಕಾರವಾದ ಕಾದಂಬರಿಯನ್ನಾಗಿ ನಿರ್ಮಿಸುವ ಪ್ರಕ್ರಿಯೆಯಲ್ಲಿ, ಶ್ರೇಷ್ಠ ಕಾದಂಬರಿಕಾರರೊಬ್ಬರ ಪಕ್ವವಾದ ಮನಸ್ಸು ಕಾಲ ದೇಶಗಳನ್ನು ದಾಟಿ ಹೇಗೆ ಕೆಲಸ ಮಾಡಿದೆ ಎಂಬುದನ್ನು ಇಲ್ಲಿ ನೋಡಬಹುದು. ಸೃಜನಶೀಲ ಪ್ರತಿಭೆಯ ಸಾಹಸ ಈ ಬೃಹತ್ಕಾದಂಬರಿಯ ಪುಟಪುಟಗಳಲ್ಲಿ ಸ್ಫುಟಗೊಂಡಿದೆ. ಮೂಲಕೃತಿಯ ಅಲೌಕಿಕ ಅಂಶಗಳಿಂದ ಪಾರಾಗಿ, ಸಾಮಾನ್ಯರನ್ನೂ ಅಸಾಮಾನ್ಯರನ್ನೂ ಒಂದೇ ದೃಷ್ಟಿಯಿಂದ ನೋಡಿ, ಆದರ್ಶ ವಾಸ್ತವತೆಗಳನ್ನು ಮೇಳವಿಸಿ, ಯಾವುದೋ ಕಾಲದ ವ್ಯಕ್ತಿ ಸಂಗತಿಗಳು ನಮ್ಮ ಕಾಲದವಾಗಿ, ನಮಗೆ ತೀರ ಹತ್ತಿರದವಾಗಿ ಮಾರ್ಪಡುವ ಕಲಾಕೌಶಲವನ್ನು ಈ ಕಾದಂಬರಿ ತೋರಿಸುತ್ತದೆ. ಇದರ ‘ಪರ್ವ’ ನಮ್ಮ ಕಾಲದ ಒಂದು ಶ್ರೇಷ್ಠ ಕಲಾಕೃತಿ. 1979ರಲ್ಲಿ ಬಂದ ಈ ಕಾದಂಬರಿ ಇಲ್ಲಿಯವರೆಗೂ 18 ಬಾರಿ ಮರುಮುದ್ರಣವಾಗಿದೆ.
1983ರಲ್ಲಿ ಬಂದ ಕಾದಂಬರಿ 11 ಬಾರಿ ಮರುಮುದ್ರಣವಾಗಿದೆ. ನೂರ ಎಂಬತ್ತೇಳು ಪುಟಗಳ ಸಂಕ್ಷಿಪ್ತಲಿ ‘ನೆಲೆ ‘ ಕಾದಂಬರಿಯು ಅರಗಿಸಿಕೊಂಡಿರುವ ಘಟನೆ ಶೋಧನೆ ಚಿಂತನೆಗಳ ಆಳವಿಸ್ತಾರಗಳು ಅದ್ಭುತವಾಗಿವೆ. ನಿರುದ್ವೇಗದಿಂದ ವಸ್ತುವನ್ನು,ಆ ಮೂಲಕ ಜೀವನವನ್ನು ಇಲ್ಲಿ ನೋಡಿರುವ ರೀತಿಯು ಮಾಗಿ ಪಕ್ವವಾದ ದೊಡ್ಡ ಕಲಾವಿದನಿಗೆ ಮಾತ್ರ ಸಾಧ್ಯವಾಗುವಂಥದು.ಮೃತ್ಯುವಿನ ಅಂಚಿಗೆ ಪ್ರಜ್ಞೆಯು ತಲುಪಿದಾಗ ಮಾತ್ರ ಜೀವನದ ನಿಜವಾದ ಮಾಪನವು ಸಾಧ್ಯವೆಂಬ ಮೂಲಭೂತ ಮಾತನ್ನು ಈ ಕೃತಿಯು ಸಾಕಾರಗೊಳಿಸಿಕೊಂಡಿದೆ.
‘ಸಾಕ್ಷಿ’ಯು ಪುರಾಣ ಮತ್ತು ನಮ್ಮ ಈ ಇಂದ್ರಿಯ ವಾಸ್ತವ ಜಗತ್ತುಗಳನ್ನು ಜೋಡಿಸುವ ಮೂಲಕ ಮನುಷ್ಯನ ನೀತಿಯ ಬೇರುಗಳನ್ನು ಶೋಧಿಸುತ್ತದೆ. ನಿಜವೂ ನೀತಿಯ ನೆಲೆಯೋ, ನೀತಿಯು ನಿಜದ ನೆಲೆಯೋ ಎಂಬಂತಹ ಮೂಲಭೂತ ಪ್ರಶ್ನೆಗಳನ್ನು ಅರಗಿಸಿಕೊಂಡಿರುವ ಈ ಕಾದಂಬರಿಯ ಪಾತ್ರ ವೈಶಿಷ್ಟ್ಯ ರಚನಾ ವಿಧಾನ ಹಾಗು ಕಲಾತ್ಮಕ ಅನುಭವಗಳು ಭೈರಪ್ಪನವರ ಹಿಂದಿನ ಕಾದಂಬರಿಗಳಿಗಿಂತ ಮೂರು ಮೆಟ್ಟಿಲು ಮೇಲೆ ಹೋಗಿವೆ. 1986ರಲ್ಲಿ ಬಂದ ಕಾದಂಬರಿ 9 ಬಾರಿ ಮರುಮುದ್ರಣವಾಗಿದೆ.
ತನ್ನನ್ನು ಅವಿಚಿಕೊಂಡ ಅನ್ಯಾಯಗಳನ್ನು ಎತ್ತಿ ಎಸೆಯುವ ಭಾವಶಕ್ತಿ ಇಲ್ಲದ ಮನಸ್ಸು ತನ್ನನ್ನು ತಾನೇ ನಾಶಮಾಡಿಕೊಳ್ಳುವ ತನ್ನನ್ನು ಪ್ರೀತಿಸುವವರ ಮೇಲೆ ಕ್ರೌರ್ಯವನ್ನು ಮಸೆಯುವ ವಿಕೃತಿಗೆ ತಿರುಗಿರುವುದೇ ‘ ಅಂಚು’ವಿನ ವಸ್ತುವಾಗಿದೆ. 1990ರಲ್ಲಿ ಬಂದ ಈ ಕಾದಂಬರಿ 10 ಬಾರಿ ಮರುಮುದ್ರಣವಾಗಿದೆ.
ತನ್ನೂರು ಬಸವನಪುರದ ಚನ್ನಕೇಶವ ದೇವಾಲಯದಲ್ಲಿದ್ದ ದೊಡ್ಡ ಸರಸ್ವತಿ ವಿಗ್ರಹವನ್ನು ಕಳ್ಳಸಾಗಾಣೆದಾರರು ಮಾಯ ಮಾಡಿದ್ದಾರೆಂಬ ಸುದ್ದಿ ತಿಳಿದ ಪ್ರತ್ರಿಕಾ ಸಂಪಾದಕ ರವೀಂದ್ರ ಅಲ್ಲಿಗೆ ಹೋಗುತ್ತಾನೆ .ಅಲ್ಲಿಂದ ಆರಂಭವಾಗಿ ಇಡೀ ಸ್ವಾತಂತ್ರ್ಯೋತ್ತರ ಭಾರತದ ನಾಡಿಯ ಕಥೆಯು ಬೆಳೆಯುತ್ತದೆ. ಬೆಂಗಳೂರು, ಬಸವನಪುರ, ಜೋಗಿ ಹಳ್ಳಿ, ಮೈಸೂರು, ದಿಲ್ಲಿ, ಬನಾರಸ್, ಪಟ್ಣ, ಕಲ್ಕತ್ತಾ…., ಸಂಗೀತ , ಶಿಕ್ಷಣ, ವೃತ್ತಪತ್ರಿಕೆ, ಉದ್ಯಮ, ನಿರ್ಯಾತ, ಮೊದಲಾದ ವ್ಯಾಪ್ತಿಗಳಿಗೆ ಪಾತ್ರಗಳ ಸ್ವಂತ ಅನುಭವದ ಮೂಲಕ ಜೀವ ಕೊಟ್ಟು ಆಕಾರದ ಐಕ್ಯವನ್ನು ಸಾಧಿಸಿ ಈ ಕಾದಂಬರಿಯು ಸಮಕಾಲೀನ ವಸ್ತುವನ್ನು ಕಲೆಯಾಗಿಸುವ ನಿರ್ಲಿಪ್ತಿಯನ್ನು ಪಡೆದಿದೆ. 1993ರಲ್ಲಿ ಬಂದ ಕಾದಂಬರಿ 9 ಬಾರಿ ಮರುಮುದ್ರಣವಾಗಿದೆ.
ಸಾರ್ಥದ ಮರ್ಮವನ್ನು ತಿಳಿಯಲು ಮನೆ ಮಾರು ಬಿಟ್ಟುಹೋದ ನಾಗಭಟ್ಟನು ತನ್ನ ಗುರಿಯಿಲ್ಲದ ಸಂಚಾರಿಪರಿಕ್ರಮದಲ್ಲಿ ಜನಪದದ ಜೀವನಾಡಿಯಂತಿದ್ದ ಹತ್ತಾರು ಧಾರ್ಮಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಪ್ರವೃತ್ತಿಗಳ ಪ್ರಭಾವಕ್ಕೊಳಗಾಗಿ ಆಚ್ಚರಿಯ ಜೀವನದರ್ಶನಕ್ಕೆ ಸಾಕ್ಷಿಯಾಗುತ್ತಾನೆ . ಭಾರತವು ಸತತವಾಗಿ ಎದುರಿಸುತ್ತಿರುವ ಧಾರ್ಮಿಕ ಸಂಘರ್ಷಗಳ ತಾತ್ತ್ವಿಕಬೇರುಗಳನ್ನು ‘ಸಾರ್ಥ’ ಸೃಜನಶೀಲವಾಗಿ ಅನ್ವೇಷಿಸುತ್ತದೆ. 1998ರಲ್ಲಿ ಬಂದ ಈ ಕಾದಂಬರಿ 12 ಬಾರಿ ಮರುಮುದ್ರಣವಾಗಿದೆ.
ಎಸ್‌ಎಲ್ ಭೈರಪ್ಪ ಅವರಿಗೆ ಸರಸ್ವತಿ ಸಮ್ಮಾನ್ ಗೌರವ ತಂದುಕೊಟ್ಟ ಕೃತಿ. 2002ರಲ್ಲಿ ಬಂದ ಕಾದಂಬರಿ 13 ಬಾರಿ ಮರುಮುದ್ರಣವಾಗಿದೆ.
ಇದು ಭೈರಪ್ಪನವರ ಎರಡನೆಯ ಐತಿಹಾಸಿಕ ಕಾದಂಬರಿ . ಎಂಟನೆಯ ಶತಮಾನದ ಸಂಧಿಕಾಲದ ಅಂತಸ್ಸತ್ತ್ವವನ್ನು ‘ಸಾರ್ಥ’ದಲ್ಲಿ ಕಾದಂಬರಿಯ ರೂಪದಲ್ಲಿ ಆವಿಷ್ಕರಿಸಿದ್ದಾರೆ. ’ಆವರಣ’ ದಲ್ಲಿ ‘ಸಾರ್ಥ’ ದ ಕಾಲದ ಆನಂತರದ ಸತ್ಯವನ್ನು ಚಿತ್ರಿಸುವ ಪ್ರಯತ್ನಮಾಡಿದ್ದಾರೆ….. ಸಂವಹನ ಪ್ರಕ್ರಿಯೆಯಲ್ಲಿ ಹುಟ್ಟುವ ಸಮಸ್ಯೆಗಳನ್ನು ಪರಿಹರಿಕೊಳ್ಳುವ ವಿಧಾನಗಳನ್ನು ತಂತ್ರವೆಂದು ಕರೆಯಬಹುದು. ಇತಿಹಾಸ ಮತ್ತು ಇತಿಹಾಸಕಾರ ಇಬ್ಬರನ್ನೂ ‘ ಆವರಣ ‘ವು ಒಳಗೊಳ್ಳುತ್ತದೆ. 2007ರಲ್ಲಿ ಬಂದ ಕಾದಂಬರಿ ದಾಖಲೆಯ 46 ಬಾರಿ ಮರುಮುದ್ರಣಗೊಂಡಿದೆ.
ಭಾರತೀಯ ಸಮಾಜದಲ್ಲಿ ಕವಲುದಾರಿ ಹಿಡಿಯುತ್ತಿರುವ ಮೌಲ್ಯಗಳನ್ನು ಹೃದಯ ಕಲಕುವಂತೆ ಶೋಧಿಸುತ್ತಾ ಸಮಕಾಲೀನ ಜೀವನಕ್ಕೆ ಕನ್ನಡಿಯಾಗಿರುವ ಕಾದಂಬರಿ ಇದು. 2010ರಲ್ಲಿ ಬಂದ ಕಾದಂಬರಿ ಇಲ್ಲಿಯವರೆಗೂ 31 ಮರುಮುದ್ರಣ ಕಂಡಿದೆ.
150 ಅಡಿ ಅಗಲ, 300 ಅಡಿ ಉದ್ದದ ಆಕಾಶ ನೌಕೆಯನ್ನು ಕಟ್ಟಿ ಅದರಲ್ಲಿ ಒಬ್ಬ ಗಂಡು, ಒಬ್ಬಳು ಹೆಣ್ಣನ್ನು ಕೂರಿಸಿ 4.6 ಜ್ಯೋತಿರ್ವರ್ಷ ದೂರದಲ್ಲಿರುವ ಪ್ರಾಕ್ಸಿಮಾ ಸೆಂಟಾರಿಸ್ ನಕ್ಷತ್ರಮಂಡಲವನ್ನು ತಲುಪುವ ಯೋಜನೆಗೆ ಕಳಿಸುತ್ತಾರೆ. ಸೂರ್ಯಮಂಡಲದಲ್ಲಿ ಸೃಷ್ಟಿಸಿಕೊಂಡ ನೈತಿಕ ನಿಯಮಗಳು ಸೂರ್ಯನ ಗುರುತ್ವಾಕರ್ಷಣೆಯ ವಲಯದ ಆಚೆಗೆ ಹೋದಮೇಲೂ ಸಿಂಧುವಾಗುತ್ತವೆಯೆ ? ಎಂಬಂಥ ಪ್ರಶ್ನೆಗಳನ್ನು ಈ ಪಾತ್ರಗಳು ಎದುರಿಸಬೇಕಾಗುತ್ತದೆ. 2014ರಲ್ಲಿ ಬಂದ ಕಾದಂಬರಿ 28 ಮರುಮುದ್ರಣ ಕಂಡಿದೆ.
ನಲವತ್ತು ವರ್ಷಗಳ ಹಿಂದೆ ‘ಪರ್ವ’ದಲ್ಲಿ ದ್ರೌಪದಿ, ಕುಂತಿ, ಗಾಂಧಾರಿಯರನ್ನು ಚಿತ್ರಿಸಿದ ಭೈರಪ್ಪನವರು ಇಲ್ಲಿ ರಾಮಕಥೆ ಯನ್ನು ಸೀತೆಯ ಅನುಭವ ಮತ್ತು ಚಿಂತನೆಯ ಮೂಲಕ ಮೂಡಿಸಿದ್ದಾರೆ. ಮೂಲ ವಾಲ್ಮೀಕಿ ರಾಮಾಯಣದಲ್ಲಿ ಸೀತಾ ಪರಿತ್ಯಾಗವು ಉತ್ತರ ಕಾಂಡದಲ್ಲಿ ಬರುತ್ತದೆ. 2017ರಲ್ಲಿ ಬಂದ ಕಾದಂಬರಿ ಇಲ್ಲಿಯವರೆಗೂ ಒಮ್ಮೆ ಮರುಮುದ್ರಣ ಕಂಡಿದೆ.