ರೋಹಿಣಿಗೆ ಹೋದಲೆಲ್ಲಾ ವಿವಾದವೇ 'ಸಿಂಧೂರ'!

First Published | Feb 19, 2023, 10:27 PM IST

ಅದೇನೋ ಗೊತ್ತಿಲ್ಲ..ರೋಹಿಣಿ ಸಿಂಧೂರಿ ಹೋದಲ್ಲೆಲ್ಲಾ ಒಂದಲ್ಲಾ ಒಂದು ವಿವಾದ ಕಾದಿರುತ್ತದೆ. ಒಂದೋ ಆ ಪ್ರದೇಶದ ರಾಜಕಾರಣಿ ಅಥವಾ ಇನ್ಯಾರಿಂದಲೋ ಅವರ ಹೆಸರು ವಿವಾದದಲ್ಲಿ ಚರ್ಚೆಯಲ್ಲಿರುತ್ತದೆ. 2015ರಲ್ಲಿ ಡಿಕೆ ರವಿ ಆತ್ಮಹತ್ಯೆ ಕೇಸ್‌ ಬಳಿಕ ರಾಜ್ಯದಲ್ಲಿ ಯಾರಾದರೊಬ್ಬರು ಆಡಳಿತಾಧಿಕಾರಿಯ ಹೆಸರು ಚರ್ಚೆಯಲ್ಲಿ ಇದೆ ಎಂದರೆ ಅದು ರೋಹಿಣಿ ಸಿಂಧೂರಿ ಅವರದು ಮಾತ್ರ. ಈಗ ಹೊಸತೊಂದು ವಿವಾದದಲ್ಲಿ ಅವರು ಸಿಲುಕಿಕೊಂಡಿದ್ದಾರೆ. ಅದಕ್ಕೂ ಮುನ್ನ ಅವರ ವಿವಾದಗಳ ಹಿಂದಿನ ಹಿಸ್ಟರಿ ಇಲ್ಲಿದೆ.
 

ಮಾಜಿ ಐಪಿಎಸ್‌ ಅಧಿಕಾರಿ ಹಾಗೂ ರೋಹಿಣಿ ಸಿಂಧೂರಿ ನಡುವಿನ ವಿವಾದ ತಾರಕಕ್ಕೇರಿದೆ. ರೋಹಿಣಿ ಸಿಂಧೂರಿಯವರ ಖಾಸಗಿ ಫೋಟೋಗಳನ್ನು ಫೇಸ್‌ಬುಕ್‌ನಲ್ಲಿ ಪ್ರಕಟ ಮಾಡಿದ ರೂಪಾ ಮೌದ್ಗಿಲ್‌, ರೋಹಿಣಿ ಇಂಥ ಚಿತ್ರಗಳನ್ನು ಪುರುಷ ಅಧಿಕಾರಿಗಳಿಗೆ ಕಳಿಹಿಸುತ್ತಿದ್ದಾರೆ ಎಂದಿ ಆರೋಪಿಸಿದ್ದಾರೆ. ಇದರ ನಡುವೆ ರೋಹಿಣಿ ಸಿಂಧೂರಿ ಹೆಸರು ಮತ್ತೆ ಮುನ್ನಲೆಗೆ ಬಂದಿದೆ.

ಮೈಸೂರು ಜಿಲ್ಲಾಧಿಕಾರಿಯಾಗಿದ್ದಾಗ ರೋಹಿಣಿ ಅವರು ಕಲ್ಯಾಣ ಮಂಟಪದ ಸಮೀಪದ ಸ್ಥಳ ಒತ್ತುವರಿಯಾಗಿದೆ ಎಂದು ಕೆ.ಆರ್‌.ನಗರ ಶಾಸಕ ಸಾ.ರಾ. ಮಹೇಶ್‌ ಅವರ ವಿರುದ್ಧ ಕ್ರಮಕ್ಕೆ ಮುಂದಾಗಿದ್ದರು. ಇದೇ ವಿಚಾರವಾಗಿ ಇಬ್ಬರ ನಡುವೆ ಗಲಾಟೆ ತಾರಕಕ್ಕೇರಿತ್ತು. ಈ ನಡುವೆ ಇಬ್ಬರ ನಡುವೆ ಸಂಧಾನ ನಡೆದಿದೆ. ಎನ್ನಲಾಗಿದೆ. ಶಾಸಕರೊಬ್ಬರ ಬಳಿ ಡಿಸಿ ಆಗಿರುವವರು ಕ್ಷಮೆ ಕೇಳಿರುವ ಬಗ್ಗೆಯೂ ರೂಪಾ ಮೌದ್ಗಿಲ್‌ ಪ್ರಶ್ನೆ ಮಾಡಿದ್ದಾರೆ.

Latest Videos


ಇನ್ನು ರೋಹಿಣಿ ಸಿಂಧೂರಿ ಹಾಸನದ ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಎಚ್‌ಡಿ ರೇವಣ್ಣ ಅವರೊಂದಿಗೆ ವಿವಾದ ದೊಡ್ಡ ಮಟ್ಟದ ಸುದ್ದಿಯಾಗಿತ್ತು. ಪ್ರತಿ ದಿನವೂ ರೇವಣ್ಣ ಹಾಗೂ ಸಿಂಧೂರಿ ನಡುವಿನ ಜಟಾಜಟಿ ವರದಿಯಾಗುತ್ತಿತ್ತು. ಕೊನೆಗೆ ರೋಹಿಣಿ ಸಿಂಧೂರಿ ವರ್ಗಾವಣೆ ಆದಾಗ ರೇವಣ್ಣ ನಿಟ್ಟುಸಿರು ಬಿಟ್ಟಿದ್ದರು.

ರೋಹಿಣಿ ಸಿಂಧೂರಿ ಮೈಸೂರು ಡಿಸಿಯಾಗಿದ್ದ ಸಂದರ್ಭದಲ್ಲಿ ಸಂಸದ ಪ್ರತಾಪ್‌ ಸಿಂಹ ಜೊತೆ 37 ಕೋಟಿ ರೂಪಾಯಿ ಕೋವಿಡ್‌ ಪರಹಾರ ನಿಧಿ ವಿಚಾರವಾಗಿ ಸುದ್ದಿಯಾಗಿದ್ದರು. 16 ಖಾಸಗಿ ಕೋವಿಡ್‌ ಕೇರ್‌ ಸೆಂಟರ್‌ಗಳನ್ನು ಬಂದ್‌ ಮಾಡಿಸಿದ ಜಿಲ್ಲಾಧಿಕಾರಿ ವಿರುದ್ಧ ತನಿಖೆ ನಡೆಸುವಂತೆ ಪ್ರತಾಪ್‌ ಸಿಂಹ ಮುಖ್ಯಮಂತ್ರಿಯವರಿಗೆ ಮನವಿ ಮಾಡಿದ್ದರು.

ಇನ್ನು ರೋಹಿಣಿ ಸಿಂಧೂರಿ ಅವರ ಪತಿ ಸತೀಶ್‌ ರೆಡ್ಡಿ ವಿರುದ್ಧ ಹಿಂದಿಯ ಪ್ರಖ್ಯಾತ ಹಾಸ್ಯನಟ ಮೊಹಮದ್‌ ಅಲಿ ಅವರ ಪುತ್ರ ಪ್ರಖ್ಯಾತ ಗಾಯಕ ಲಕ್ಕಿ ಅಲಿ ಭೂ ಕಬಳಿಕೆ ಆರೋಪ ಮಾಡಿದ್ದರು.ಯಲಹಂಕ ಬಳಿ ಇರುವ ಕೆಂಚೇನಹಳ್ಳಿ ಬಳಿಯ ಲಕ್ಕಿ ಆಲಿ ಅವರ ಜಾಗವನ್ನು ತಮ್ಮ ಪತ್ನಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ (Rohini Sindhuri) ಯವರ ಸಹಾಯದಿಂದ ಒತ್ತುವರಿ ಮಾಡಲಾಗಿದೆ ಎಂದು ಅವರು ಆರೋಪ ಮಾಡಿದ್ದರು.

ಇನ್ನು ಮೈಸೂರು ಜಿಲ್ಲಾಧಿಕಾರಿಯಾಗಿದ್ದ ವೇಳೆ ರೋಹಿಣಿ ಸಿಂಧೂರಿ ಅವರು ಆಡಳಿತ ತರಬೇತಿ ಕೇಂದ್ರದ ಅತಿಥಿ ಗೃಹದಿಂದ 12 ಪೀಠೋಪಕರಣಗಳನ್ನು ತೆಗೆದುಕೊಂಡು ಹೋಗಿದ್ದರು. ಅವುಗಳನ್ನು ವಾಪಾಸ್‌ ಮಾಡುವಂತೆ ಆಡಳಿತ ತರಬೇತಿ ಕೇಂದ್ರದ ಅಧಿಕಾರಿಗಳು ಪತ್ರ ಬರೆದಿದ್ದರು. ಟೆಲಿಫೋನ್‌ ಟೇಬಲ್‌, ಬೆತ್ತದ ಚೇರ್‌ಗಳು,ಟಿಪಾಯಿ ಹಾಗೂ ಮೈಕ್ರೋಓವನ್‌ಗಳನ್ನು ಅವರು ಹೊತ್ತೊಯ್ದಿದ್ದರು.

ಇನ್ನು ಮೈಸೂರು ಜಿಲ್ಲಾಧಿಕಾರಿಯಾಗಿದ್ದ ವೇಳೆ, ಕಚೇರಿಯ ಆವರಣದಲ್ಲಿ ಈಜುಕೊಳ ನಿರ್ಮಾಣ ಮಾಡಿದ್ದು ವಿವಾದಕ್ಕೆ ಕಾರಣವಾಗಿತ್ತು. 'ಜಿಲ್ಲಾಧಿಕಾರಿ ವಸತಿ ಕಚೇರಿ ಆವರಣದಲ್ಲಿ ಈಜುಕೊಳ ನಿರ್ಮಿಸಬೇಕೆಂಬುದು 5 ವರ್ಷಗಳ ಹಿಂದಿನ ಯೋಜನೆ ಆಗಿತ್ತು. ಹೊಸ ತಂತ್ರಜ್ಞಾನ ಬಳಸಿ ನಿರ್ಮಾಣ ಕಾರ್ಯ ನಡೆಸಲು ನಿರ್ಮಿತಿ ಕೇಂದ್ರ ನಿರ್ಧರಿಸಿತ್ತು. ಅದರ ಪ್ರಾಯೋಗಿಕ ಯೋಜನೆಯಾಗಿ ಈಜುಕೊಳ ನಿರ್ಮಾಣವಾಗಿದೆ' ಎಂದು ಆ ಸಮಯದಲ್ಲಿ ಸ್ಪಷ್ಟನೆ ನೀಡಿದ್ದರು. ಸರ್ಕಾರ ಕೂಡ ಈ ಕುರಿತು ತನಿಖೆಗೆ ಆದೇಶಿಸಿತ್ತು.

ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಸಮಯದಲ್ಲಿ ರೋಹಿಣಿ ಸಿಂಧೂರಿ ಅವರು ಕರ್ತವ್ಯ ನಿರ್ವಹಣೆಯಲ್ಲಿ ತಮಗೆ ಕಿರುಕುಳ ನೀಡುತ್ತಿದ್ದಾರೆ, ಅವರು ನೀಡುತ್ತಿರುವ ಕಿರುಕುಳ ತಡೆದುಕೊಳ್ಳಲು ಆಗುತ್ತಿಲ್ಲ ಎಂದು ಆರೋಪಿಸಿ ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾ ರಾಜೀನಾಮೆ ಘೋಷಿಸಿದ್ದರು. ಇದರ ಬೆನ್ನಲ್ಲೇ ಶಿಲ್ಪಾ ನಾಗ್‌ ಅವರು ಸಿಎಸ್‌ಆರ್‌ ಅನುದಾನ ಬಳಕೆಯ ಲೆಕ್ಕ ನೀಡಿಲ್ಲ, ಕೊರೋನಾ ಕೇಂದ್ರಗಳನ್ನು ಸ್ಥಾಪಿಸಲು ಕೆಲಸ ಮಾಡಿಲ್ಲ. ಈ ಬಗ್ಗೆ ಕೇಳಿದ್ದಕ್ಕೆ ಅನಗತ್ಯ ವಿವಾದ ಮಾಡುತ್ತಿದ್ದಾರೆ ಎಂದು ರೋಹಿಣಿ ಸಿಂಧೂರಿ ದೂರಿದ್ದರು. ಇದು ಕೂಡ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು.

ಚಾಮರಾಜನಗರ ಆಕ್ಸಿಜನ್‌ ದುರಂತದ ಸಮಯದಲ್ಲೂ ರೋಹಿಣಿ ಸಿಂಧೂರಿ ಹೆಸರು ಕೇಳಿಬಂದಿತ್ತು.ಚಾ.ನಗರದ ದುರಂತಕ್ಕೆ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಅವರೇ ಕಾರಣ. ಚಾಮರಾಜನಗರಕ್ಕೆ ಆಕ್ಸಿಜನ್‌ ನೀಡಬೇಡಿ ಎಂದು ಅವರು ಮೌಖಿಕ ಆದೇಶ ನೀಡಿದ್ದರು. ಹೀಗಾಗಿ ಘಟನೆ ದಿನ ಔಷಧ ನಿಯಂತ್ರಕಾಧಿಕಾರಿಯೊಬ್ಬರು ಪರಿ ಪರಿಯಾಗಿ ಆಕ್ಸಿಜನ್‌ ಕೇಳಿದರೂ ಕೊಡಲಿಲ್ಲಎಂದು ಆರೋಪಿಸಿದ್ದಾರೆ. ಅದಕ್ಕೆ ಪೂರಕವಾಗಿ ಅವರು ಕೆಲ ಆಡಿಯೋ ತುಣುಕುಗಳನ್ನು ಬಿಡುಗಡೆ ಮಾಡಿದ್ದಾರೆ ಬಿಜೆಪಿಯ ಮುಖಂಡ ಮಲ್ಲೇಶ್‌ ಬಿಡುಗಡೆ ಮಾಡಿದ್ದರು.

ರೋಹಿಣಿ ಸಿಂಧೂರಿ ಮೂಲತಃ ತೆಲಂಗಾಣದವರು. ಓದಿದ್ದು ಕೆಮಿಕಲ್ ಎಂಜಿನಿಯರಿಂಗ್. ರೋಹಿಣಿ ಸಿಂಧೂರಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಪಡೆದದ್ದು 43ನೇ ರ‍್ಯಾಂಕ್. ರೋಹಿಣಿ ಪತಿ ಸುಧೀರ್ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು.

click me!