ದಾಂಡೇಲಿಯಲ್ಲಿ 15 ಅಡಿ ಉದ್ದದ ಬೃಹತ್ ಹೆಬ್ಬಾವನ್ನು ರಕ್ಷಿಸುವಾಗ ಉರಗ ತಜ್ಞ ರಾಜಾಕ್ ಶಾ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹೆಬ್ಬಾವು ಕಚ್ಚಿದರೂ ಧೈರ್ಯಗೆಡದೆ, ಅದನ್ನು ಸುರಕ್ಷಿತವಾಗಿ ಹಿಡಿದು ಅರಣ್ಯಕ್ಕೆ ಬಿಡುವ ಮೂಲಕ ಅವರು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ಬೃಹತ್ ಹೆಬ್ಬಾವೊಂದನ್ನು ರಕ್ಷಿಸುವ ಕಾರ್ಯಾಚರಣೆ ವೇಳೆ ಉರಗ ತಜ್ಞರೊಬ್ಬರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಜೀವದ ಹಂಗು ತೊರೆದು 15 ಅಡಿ ಉದ್ದದ ಹೆಬ್ಬಾವನ್ನು ರಕ್ಷಿಸಿದ ಉರಗ ತಜ್ಞ ರಾಜಾಕ್ ಶಾ ಅವರ ಸಾಹಸಕ್ಕೆ ಈಗ ಸಾರ್ವಜನಿಕ ವಲಯದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
28
ನಡೆದಿದ್ದೇನು?
ದಾಂಡೇಲಿಯ ವಿಟಿಯು (VTU) ಕಾಲೇಜು ಮೈದಾನದ ಗಟಾರಿನಲ್ಲಿ ಸುಮಾರು 15 ಅಡಿ ಉದ್ದದ ಬೃಹತ್ ಹೆಬ್ಬಾವು ಪ್ರತ್ಯಕ್ಷವಾಗಿತ್ತು. ಇದನ್ನು ಕಂಡು ಆತಂಕಗೊಂಡ ಕಾಲೇಜು ಶಿಕ್ಷಕರು ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಅರಣ್ಯ ಇಲಾಖೆಯ ಸೂಚನೆಯ ಮೇರೆಗೆ ಸ್ಥಳಕ್ಕೆ ಆಗಮಿಸಿದ ಉರಗ ತಜ್ಞ ರಾಜಾಕ್ ಶಾ ಅವರು ಹಾವನ್ನು ರಕ್ಷಿಸುವ ಕಾರ್ಯಾಚರಣೆ ಆರಂಭಿಸಿದರು.
38
ಹೊಟ್ಟೆಯ ಭಾಗಕ್ಕೆ ಕಚ್ಚಿದ ಹಾವು
ಗಟಾರಿನಲ್ಲಿದ್ದ ಹಾವನ್ನು ಹೊರತೆಗೆಯುವ ಪ್ರಯತ್ನದಲ್ಲಿದ್ದಾಗ, ಹೆಬ್ಬಾವು ಹಠಾತ್ತನೆ ರಾಜಾಕ್ ಶಾ ಅವರ ಹೊಟ್ಟೆಯ ಭಾಗಕ್ಕೆ ಕಚ್ಚಿದೆ. ಹಾವಿನ ವೇಗ ಮತ್ತು ಬಲಕ್ಕೆ ರಾಜಾಕ್ ಶಾ ಒಂದು ಕ್ಷಣ ತಬ್ಬಿಬ್ಬಾದರೂ, ಧೈರ್ಯಗೆಡದೆ ಹಾವನ್ನು ಸುರಕ್ಷಿತವಾಗಿ ಹಿಡಿದು ಬಳಿಕ ಸಮೀಪದ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ. ಹಾವಿನ ಕಡಿತದಿಂದ ರಾಜಾಕ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸಾಮಾನ್ಯವಾಗಿ ಹೆಬ್ಬಾವು ವಿಷಕಾರಿ ಅಲ್ಲ ಎಂಬ ನಂಬಿಕೆ ಇದೆ, ಇದು ನಿಜವೂ ಹೌದು. ಆದರೆ ಹೆಬ್ಬಾವು ಕಚ್ಚುವುದಿಲ್ಲ ಎಂಬುದು ತಪ್ಪು ಕಲ್ಪನೆ. ಉರಗ ತಜ್ಞರ ಪ್ರಕಾರ, ಹೆಬ್ಬಾವು ಎಲ್ಲ ಹಾವುಗಳಿಗಿಂತ ಅತ್ಯಂತ ಬಲವಾಗಿ ಕಚ್ಚುವ ಸಾಮರ್ಥ್ಯ ಹೊಂದಿದೆ.
58
ಹೆಬ್ಬಾವಿನ ಕಡಿತದ ವೈಶಿಷ್ಟ್ಯಗಳು:
ಒಳಬಾಗಿರುವ ಹಲ್ಲುಗಳು: ಹೆಬ್ಬಾವಿನ ಹಲ್ಲುಗಳು ಬಾಯಿಯ ಒಳಭಾಗಕ್ಕೆ ಬಾಗಿರುತ್ತವೆ. ಇದು ಬೇಟೆಯನ್ನು ಹಿಡಿದಾಗ ಅದು ತಪ್ಪಿಸಿಕೊಳ್ಳದಂತೆ ತಡೆಯಲು ಸಹಾಯ ಮಾಡುತ್ತದೆ. ಒಮ್ಮೆ ಹೆಬ್ಬಾವು ಕಚ್ಚಿದರೆ, ಅದು ಹಿಡಿದ ಮಾಂಸದ ಭಾಗವನ್ನೇ ಕಿತ್ತುಕೊಂಡು ಬರುವಷ್ಟು ಬಲವಾಗಿರುತ್ತದೆ.
68
ಬೇಟೆ ನುಂಗುವುದಕ್ಕೆ ಹಲ್ಲು ಸಹಾಯಕ
ನುಂಗುವ ತಂತ್ರ: ಹೆಬ್ಬಾವು ತನ್ನ ಬೇಟೆಯನ್ನು ನುಂಗುವಾಗ ಅದು ವಾಪಸ್ ಹೊರಬರದಂತೆ ಈ ಒಳಬಾಗಿರುವ ಹಲ್ಲುಗಳು ಹೂಕ್‌ನಂತೆ ಕೆಲಸ ಮಾಡುತ್ತವೆ. ಹೀಗಾಗಿ ಇದರ ಬಾಯಿಗೆ ಸಿಲುಕಿದ ಪ್ರಾಣಿ ತಪ್ಪಿಸಿಕೊಳ್ಳುವುದು ಅಸಾಧ್ಯ.
78
ಉಸಿರಾಟ ನಿಲ್ಲುವಷ್ಟು ಬಲವಾಗಿ ಸುತ್ತಿಕೊಳ್ಳುತ್ತದೆ
ಉಸಿರುಗಟ್ಟಿಸಿ ಕೊಲ್ಲುವ ಶಕ್ತಿ: ಹೆಬ್ಬಾವು ವಿಷವನ್ನು ಬಿಡುವುದಿಲ್ಲ, ಬದಲಾಗಿ ತನ್ನ ಬೇಟೆಯನ್ನು ಗಟ್ಟಿಯಾಗಿ ಬಿಗಿದು ಸುತ್ತಿಕೊಂಡು ಉಸಿರುಗಟ್ಟಿಸುತ್ತದೆ. ರಕ್ತ ಸಂಚಾರ ನಿಲ್ಲುವಂತೆ ಮಾಡಿ ಪ್ರಾಣಿಯನ್ನು ಸಾಯಿಸಿದ ನಂತರವೇ ಅದು ನುಂಗುತ್ತದೆ.
88
ರಜಾಕ್ ಶಾ ಧೈರ್ಯಕ್ಕೆ ಮೆಚ್ಚುಗೆ
ಒಟ್ಟಾರೆಯಾಗಿ, ವಿಷವಿಲ್ಲದಿದ್ದರೂ ಹೆಬ್ಬಾವು ತನ್ನ ದೈಹಿಕ ಬಲ ಮತ್ತು ಬಲಿಷ್ಠ ಹಲ್ಲುಗಳಿಂದ ಪ್ರಾಣಾಪಾಯ ತಂದೊಡ್ಡಬಲ್ಲದು. ದಾಂಡೇಲಿಯಲ್ಲಿ ರಾಜಾಕ್ ಶಾ ಅವರು ತೋರಿದ ಸಮಯಪ್ರಜ್ಞೆ ಮತ್ತು ಧೈರ್ಯದಿಂದಾಗಿ ಒಂದು ಬೃಹತ್ ಜೀವದ ರಕ್ಷಣೆಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ