ಮರಳು ದಂಧೆ ವಿರುದ್ಧ ಸಮರ ಸಾರಿದ ದೇವದುರ್ಗ ಶಾಸಕಿ ಮನೆಗೆ ಬಂದು ಧಮ್ಕಿ, ಕಾರಿನ ಮೇಲೆ ಟಿಪ್ಪರ್‌ ಹರಿಸಿ ಹತ್ಯೆಗೆ ಯತ್ನ!

Published : Jan 20, 2026, 03:54 PM IST

ದೇವದುರ್ಗದಲ್ಲಿ ಕೃಷ್ಣಾ ನದಿ ಪಾತ್ರದ ಅಕ್ರಮ ಮರಳು ಸಾಗಾಣಿಕೆ ವಿರೋಧಿಸಿದ್ದಕ್ಕೆ ಶಾಸಕಿ ಕರೆಮ್ಮ ಜಿ. ನಾಯಕರಿಗೆ ಮರಳು ದಂಧೆಕೋರರು ಮನೆಗೆ ಬಂದು ಬೆದರಿಕೆ ಹಾಕಿದ್ದಾರೆ. ಜೀವಭಯದಲ್ಲಿರುವುದಾಗಿ ಹೇಳಿರುವ ಶಾಸಕಿ, ಪೊಲೀಸ್ ಇಲಾಖೆ ನಿಷ್ಕ್ರಿಯವಾಗಿದೆ ಎಂದು ಆರೋಪಿಸಿದ್ದಾರೆ. 

PREV
18
ಮಿತಿ ಮೀರಿದ ಮರಳು ದಂಧೆಕೋರರ ಅಟ್ಟಹಾಸ

ದೇವದುರ್ಗ: ಕೃಷ್ಣಾ ನದಿ ಪಾತ್ರದಲ್ಲಿ ಅನಧಿಕೃತ ಮತ್ತು ನಿಯಮಬಾಹಿರವಾಗಿ ಅಕ್ರಮ ಮರಳು ಸಾಗಾಣಿಕೆ ಮಾಡುವ ಮರಳು ದಂಧೆಕೋರರ ಅಟ್ಟಹಾಸ ಮಿತಿ ಮೀರಿದ್ದು, ಏಕಾಏಕಿ ಭಾನುವಾರ ಅಮಾವ್ಯಾಸೆ ಮನೆಗೆ ಬಂದು ಭಯದ ವಾತಾವರಣ ನಿರ್ಮಾಣ ಮಾಡಿದ್ದಾರೆ.ನಾನೂ ಜೀವ ಭಯದಲ್ಲಿದ್ದೇನೆ ಎಂದು ಶಾಸಕಿ ಕರೆಮ್ಮ ಜಿ. ನಾಯಕ ಆತಂಕ ವ್ಯಕ್ತಪಡಿಸಿದರು.

ಪಟ್ಟಣದ ತಮ್ಮ ನಿವಾಸದಲ್ಲಿ ಸೋಮವಾರ ಮಾತನಾಡಿದ ಅವರು, ಅಕ್ರಮಗಳಿಗೆ ಕಡಿವಾಣ ಹಾಕಲು ನಡೆಸಿರುವ ಯತ್ನ ದಂಧೆಕೋರರಿಗೆ ನುಂಗಲಾರದ ತುತ್ತಾಗಿದ್ದು, ಬೆದರಿಕೆ ಹಾಕುವ ತಂತ್ರಗಳು ವ್ಯವಸ್ಥಿತವಾಗಿ ನಡೆದಿದ್ದು, ಅನ್ಯ ಜಿಲ್ಲೆಯವರು ತಾಲೂಕಿನಲ್ಲಿ ಭಯದ ವಾತಾವರಣ ನಿರ್ಮಿಸುತ್ತಿದ್ದಾರೆ. ಮರಳ ದಂಧೆಕೋರ ಶ್ರೀನಿವಾಸ ನಾಯಕ ನೇತೃತ್ವದಲ್ಲಿ ನೂರಾರು ವಾಹನಗಳು ಮನೆಯಲ್ಲಿ ಜಮೆಗೊಂಡಿದ್ದವು. ಅವರ ನಡೆ-ನುಡಿ ನೋಡಿದರೆ ನಾವು ಅಕ್ರಮವಾಗಿ ಮರಳು ಸಾಗಾಣಿಕೆ ಮಾಡುತ್ತೇವೆ. ಅಡ್ಡಿ ಪಡಿಸಬೇಡಿ, ತಂಟೆಗೆ ಬಂದರೆ ಹುಷಾರ್! ಎಂಬ ವರ್ತನೆ ಅವರಲ್ಲಿತ್ತು.

28
ಕ್ಷೇತ್ರದಲ್ಲಿ ಪೊಲೀಸ್ ಇಲಾಖೆ ಸಂಪೂರ್ಣ ನಿಷ್ಕ್ರಿಯ

ಕ್ಷೇತ್ರದಲ್ಲಿ ಪೊಲೀಸ್ ಇಲಾಖೆ ಸಂಪೂರ್ಣ ನಿಷ್ಕ್ರಿಯವಾಗಿದೆ. ಮರಳು ದಂಧೆ ಕೋರರಿಗೆ ಬಹಿರಂಗವಾಗಿ ಬೆಂಬಲಕ್ಕೆ ನಿಂತಿರುವದರಿಂದ ಕಡಿವಾಣ ಅಸಾಧ್ಯ ಎಂಬ ಸ್ಥಿತಿಗೆ ತಲುಪಿದೆ.ಮರಳು ದಂಧೆಕೋರರಿಗೆ ಇದು ಪುಷ್ಠಿ ನೀಡಿದಂತಾಗಿದೆ. ಪೊಲೀಸ್ ಇಲಾಖೆಯಲ್ಲಿ ಗುಪ್ತದಳ ಏನು ಕೆಲಸ ಮಾಡುತ್ತಿದೆಯೋ ತಿಳಿಯುತ್ತಿಲ್ಲ. ಸ್ಥಳೀಯರಿಗೆ ತೊಂದರೆಯಾಗುತ್ತದೆ ಎಂಬ ಉದ್ದೇಶದಿಂದ ಟೋಲ್ ಕರ ಸಂಗ್ರಹ ವಿರುದ್ಧ ಧ್ವನಿ ಎತ್ತಿದವರ ಮೇಲೆ ಪೊಲೀಸರು ಕೇಸ್ ಹಾಕುತ್ತಾರೆ, ಆದರೆ ಒಬ್ಬ ಶಾಸಕರ ಮನೆಗೆ ನೂರಾರು ಜನರು ಅಕ್ರಮ ಕೂಟ ಕಟ್ಟಿಕೊಂಡು ಬೆದರಿಸುವ ವಾತಾವರಣ ಸೃಷ್ಟಿ ಮಾಡಿದ್ದಾರೆ. ಆದರೂ ಇನ್ನೂ ಯಾರ ಮೇಲೂ ಪ್ರಕರಣ ದಾಖಲಿಸಿಲ್ಲ.

ಸುದ್ದಿ ತಿಳಿಯುತ್ತಲೇ ನಮ್ಮೆ ಬೆಂಬಲಿಗರು, ಕಾರ್ಯಕರ್ತರು ದಿಢೀರನೇ ಮನೆಗೆ ಧಾವಿಸಿಬಂದರು. ಪರಿಸ್ಥಿತಿ ಕೈಮೀರುವ ಹಂತಕ್ಕೆ ತಲುಪಿತ್ತು.ನಾನೇ ಎಲ್ಲರನ್ನು ಸಮಾಧಾನ ಮಾಡಿ,ಕಾನೂನು ಮೇಲೆ ನಂಬಿಕೆ ಇಟ್ಟವರು ನಾವು.ಯಾರೂ ಭಯಪಡಬೇಡಿ ಎಂದು ಸಾಂತ್ವನ ಹೇಳಿ ಕಳಿಸಿರುವೆ. ಕ್ಷೇತ್ರದಲ್ಲಿ ಅಕ್ರಮವಾಗಿ ಮಟ್ಕಾ ದಂಧೆ ಮತ್ತು ನಿಯಮಬಾಹಿರ ಮದ್ಯ ಮಾರಾಟ ಎಗ್ಗಿಲ್ಲದೇ ನಡೆಯುತ್ತಿದೆ. ಗಾಂಜಾ, ಅಫೀಮಯನಂತಹ ಮಾದಕ ವಸ್ತುಗಳನ್ನು ಮಾರಾಟ ಮಾಡುವ ಜಾಲವಿದೆ.ಅನೇಕ ಬಾರಿ ಇಲಾಖೆ ಗಮನಕ್ಕೆ ತಂದರೂ ಪ್ರಯೋಜನವಾಗುತ್ತಿಲ್ಲ.

38
ಟಿಪ್ಪರ್‌ ಹರಿಸಿ ಹತ್ಯೆಗೆ ಯತ್ನ

ಟ್ರಾಕ್ಟರ್‌ಗಳಿಗೆ ಮರಳು ಎತ್ತುವಳಿ ಮಾಡುವವರಿಗೆ, ಅಲ್ಲಿ ಕೂಲಿಕಾರರಿಗೆ ಶಾಸಕರು ಅಡ್ಡಿಪಡಿಸುತ್ತಾರೆ ಎಂಬ ತಪ್ಪು ಸಂದೇಶ ರವಾನೆಯಾಗುತ್ತಿದೆ. ಆದರೆ ನಾನೂ ಯಾವತ್ತೂ ಟ್ರ್ಯಾಕ್ಟರ್ ಮಾಲೀಕರು ಮತ್ತು ಅದರಲ್ಲಿ ಕೆಲಸ ಮಾಡುವ ಕೂಲಿಕಾರರ ಪರ ಇದ್ದೇನೆ. ಅವರಿಗೆ ನ್ಯಾಯ ಕೊಡಿಸಲೂ ಈಗಲೂ ಬದ್ದಳಾಗಿದ್ದೇನೆ. ಅಕ್ರಮ ಮರಳು ಅಡ್ಡೆಗಳನ್ನು ಪೊಲೀಸರು ಮತ್ತು ಗಣಿಕಾರಿಕೆ ಇಲಾಖೆ ಜಪ್ತಿ ಮಾಡಿದ್ದಾರೆ. ಅದನ್ನು ಗ್ರಾ.ಪಂ ಮಟ್ಟದಲ್ಲಿ ರಾಯಲ್ಟಿ ನೀಡಿ, ಟ್ರ್ಯಾಕ್ಟರ್ ಮೂಲಕ ಮರಳು ಸಾಗಾಣಿಕೆಗೆ ಅವಕಾಶ ಕೊಡಿಸಬೇಕೆಂದು ಈಗಾಗಲೇ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿರುವೆ ಎಂದರು.

ಅಣ್ಣೆಮಲ್ಲೇಶ್ವರ ದೇವಸ್ಥಾನಕ್ಕೆ ಹೋಗುವ ಸಂದರ್ಭದಲ್ಲಿ ಟಿಪ್ಪರ್‌ ಅನ್ನು ನನ್ನ ವಾಹನದ ಮೇಲೆ ಹೇರುವ ಪ್ರಯತ್ನಗಳೂ ನಡೆದಿವೆ. ಸ್ವತಃ ತಹಸೀಲ್ದಾರರೇ ಅಕ್ರಮ ಮರಳು ತಡೆಯಲು ಹೋದ ನಮ್ಮ ಕಂದಾಯ ಅಧಿಕಾರಿ ಮೇಲೆ ಲಾರಿ ಹಾಯಿಸಲು ಬಂದಿದ್ದರು ಎಂದು ಹೇಳುತ್ತಿದ್ದಾರೆ ಎಂದ ಮೇಲೆ ಪರಿಸ್ಥಿತಿ ಹೇಗಿದೇ?ಎಂಬುದು ಅರ್ಥವಾಗುತ್ತಿದೆ ಎಂದವರು ಆತಂಕ ವ್ಯಕ್ತಪಡಿಸಿದರು.

48
ಸರ್ಕಾರಕ್ಕೆ ದೂರು ನೀಡುವೆ

ಕ್ಷೇತ್ರದಲ್ಲಿ ಬೇರೆಯಾವುದೇ ಪಕ್ಷದವರಾಗಲಿ, ನಮ್ಮ ಪಕ್ಷದವರಾಗಲಿ ಅಕ್ರಮ ಮರಳು ಸಾಗಾಣಿಕೆ ಮಾಡುವದಿಲ್ಲ. ಬೇರೆ ಜಿಲ್ಲೆಯವರೇ ಈ ತಾಲೂಕಿನಲ್ಲಿ ಮರಳು ದಂಧೆ ಕೋರರು ಗುಂಡಾಗಳಂತೆ, ಧರೋಡೆಕೋರರಂತೆ ವರ್ತಿಸುತ್ತಿದ್ದು, ಮುಗ್ಧ ಜನರನ್ನು ತಪ್ಪು ದಾರಿಗೆ ಕರೆದೊಯ್ಯುತ್ತಿದ್ದಾರೆ. ಈ ಘಟನೆ ಕುರಿತು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಗೃಹ ಸಚಿವರ ಬಳಿ ದೂರು ನೀಡಲಾಗುವದು. ಜೊತೆಗೆ ಬರುವ ಅಧಿವೇಶನದಲ್ಲೂ ಸದನದ ಗಮನಸೆಳೆಯುವೆ. ಅಕ್ರಮ ಮರಳು ದಂಧೆಗೆ ಅನ್ಯ ಜಿಲ್ಲೆಗಳ ಪ್ರಭಾವಿಗಳೇ ಪ್ರಮುಖ ಏಜೆಂಟಟರಾಗಿದ್ದಾರೆ. ನಿಯಂತ್ರಣ ಮಾಡಬೇಕಾದ ಇಲಾಖೆಗಳೇ ಕೈಚೆಲ್ಲಿ ಕುಳಿತಿವೆ.

ಮಾರ್ಗ ಮಧ್ಯೆ ಚೆಕ್ ಪೋಸ್ಟ್‌ಗಳನ್ನು ನಿರ್ಮಿಸಲು ಆಗುವುದಿಲ್ಲ. ಸಿಬ್ಬಂದಿ ಸಂಖ್ಯೆ ಕಡಿಮೆ ಇದೆ ಎಂದು ಓರ್ವ ಡಿವೈಎಸ್ಪಿ ತಮ್ಮ ಅಸಹಾಯಕತೆಯನ್ನು ತೋರಿಸುತ್ತಾರೆ. ಹಾಗಾದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಯಾರು ಕಾಪಾಡಬೇಕೆಂಬ ಪ್ರಶ್ನೆ ಉದ್ಭವಿಸಿದೆ. ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿಯನ್ನು ಭೇಟಿಯಾಗಿ ನಿರ್ಮಾಣಗೊಂಡಿರುವ ವಸ್ತುಸ್ಥಿತಿ ಮತ್ತು ಕಡಿವಾಣದ ಕ್ರಮಗಳ ಕುರಿತು ಚರ್ಚಿಸಲಾಗುಚುದು. ದಯವಿಟ್ಟು ಟ್ರ್ಯಾಕ್ಟರ್ ಮಾಲೀಕರಾಗಲಿ ಅಥವಾ ಅಲ್ಲಿ ಕೆಲಸ ಮಾಡುವ ಕೂಲಿಕಾರರಾಗಲಿ ತಪ್ಪು ತಿಳಿದುಕೊಳ್ಳಬೇಡಿ ಎಂದರು.

58
20-25ವರ್ಷದಿಂದ ಠಾಣೆಗಳಲ್ಲಿ ಬಿಡಾರ ಹೂಡಿರುವವರಿಗೆ ವರ್ಗಾವಣೆ ಅಗತ್ಯ

ಕ್ಷೇತ್ರದಲ್ಲಿ ನಡೆದಿರುವ ಕಾಮಗಾರಿಗಳಿಗೂ ಮತ್ತು ಜನಸಾಮಾನ್ಯರು ಮನೆ ನಿರ್ಮಿಸಿಕೊಳ್ಳುವವರಿಗೆ ಅವಶ್ಯಕವಾಗಿ ಮರಳು ಬೇಕೇಬೇಕು. ಈ ವ್ಯವಸ್ಥೆ ಮಾಡಲಾಗುವುದು. ಕ್ಷೇತ್ರದಲ್ಲಿ ಕಳೆದ 20-25ವರ್ಷದಿಂದ ಠಾಣೆಗಳಲ್ಲಿ ಬಿಡಾರ ಹೂಡಿರುವ ಕೆಲ ಪೊಲೀಸರ ವರ್ಗಾವಣೆಗಾಗಿ ಗೃಹ ಸಚಿವರಿಗೆ ಒತ್ತಾಯಿಸ ಲಾಗುವದು ಎಂದು ಶಾಸಕಿ ಕರೆಮ್ಮ ಜಿ. ನಾಯಕ ತಿಳಿಸಿದರು.

ಜಿಲ್ಲಾ ಉಪಾಧ್ಯಕ್ಷ ಅಮರೇಶ ಪಾಟೀಲ್ ಪರ್ತಪೂರ ಮಾತನಾಡಿ, ಕೃಷ್ಣಾನದಿ ದಂಡೆ ಬಳಿ ಇರುವ ಜಮೀನುಗಳು ಬೆಳೆ ಬಾರದ ಸ್ಥಿತಿಗೆ ತಲುಪಿವೆ. ಪಕ್ಕದಲ್ಲಿಯೇ ನೀರು ಇದ್ದರೂ ಈ ಮರಳುದಂಧೆಕೋರರ ಉಪಟಳಕ್ಕೆ ಬಲಿಯಾಗಿದ್ದಾರೆ. ಉಳಿಮೆ ಮಾಡುವ ಹಕ್ಕಿನ ಹತ್ಯೆಯಾಗುತ್ತಿದೆ. ಶಾಸಕರಿಗೆ ಹಕ್ಕುಚ್ಯುತಿಯಾಗಿದೆ. ಜನಪ್ರತಿನಿಧಿಗಳೇ ಭಯದ ನೆರಳಲ್ಲಿದ್ದರೆ ಜನಸಾಮಾನ್ಯರ ರಕ್ಷಣೆ ಏನು? ಎಂಬಂತಾಗಿದೆ. ಮುಖ್ಯಮಂತ್ರಿ ಮತ್ತು ಗೃಹ,ಕಾನೂನು ಇಲಾಖೆ ಸಚಿವರು , ಸಭಾಪತಿಗಳು ಈ ಪ್ರಕರಣವನ್ನು ಗಂಬೀರವಾಗಿ ಪರಿಗಣಿಸಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಅಮರೇಶ ಪಾಟೀಲ್ ಪರ್ತಪೂರ,ಶರಣಪ್ಪ ಬಳೆ,ಹನುಮಂತ್ರಾಯ ನಾಯಕ ಚಿಂತಲಕುAಟಿ,ಬಸನಗೌಡ ದೇಸಾಯಿ,ಈಸಾಕ್ ಮೇಸ್ತಿç,ಶಾಲಂ ಉದ್ದಾರ,ಗೋವಿಂದರಾಜ್ ನಾಯಕ ಕೊತ್ತದೊಡ್ಡಿ,ರೇಣುಕಾ ಎಂ.ಸ್ವಾಮಿ ಇದ್ದರು.

68
ಗುಂಪುಗೂಡಿ ಶಾಸಕರ ಮನೆಗೆ ಬಂದ ಪ್ರಕರಣ; ದೂರು ದಾಖಲು

ಶಾಸಕರ ಮನೆಗೆ ಏಕಾಏಕಿ ಗುಂಪು ಕಟ್ಟಿಕೊಂಡು ಬಂದು ಭಯದ ವಾತಾವರಣ ನಿರ್ಮಿಸಿರುವವರ ಮೇಲೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ವಕೀಲ ಮತ್ತು ಜೆಡಿಎಸ್ ಮುಖಂಡ ಹನುಮಂತ್ರಾಯ ಚಿಂತಲಕುಂಟಿ ದೂರು ಸಲ್ಲಿಸಿದ್ದಾರೆ.

ಶ್ರೀನಿವಾಸ ನಾಯಕ,ರವಿಪ್ರಕಾಶ ಅಕ್ಕರಕಿ,ಅಮರೇಶ ಅಂಜಳ,ಸುರೇಶ ಚಿಂತಲಕುಂಟಿ,ವೀರೇಶಗೌಡ ಯಾಟಗಲ್,ಹನುಮಂತ್ರಾಯ ಕರಿಗುಡ್ಡ ಹಾಗೂ ಇತರೆ 60 ಜನರ ಮೇಲೆ ಅಕ್ರಮಕೂಟ ರಚನೆ ಮತ್ತು ಅಕ್ರಮ ಪ್ರವೇಶ ಹಾಗೂ ಜೀವಭಯದ ಆರೋಪಗಳ ಆಧರಿಸಿ ಪ್ರಕರಣ ದಾಖಲಾಗಿದೆ.

78
ಅಕ್ರಮ ಮರಳು: ಆರು ಟ್ರಾಕ್ಟರ್ ಮತ್ತು ಎರಡು ಟಿಪ್ಪರ್‌ಗಳ ಜಪ್ತಿ

ತಾಲೂಕಿನ ಕೃಷ್ಣಾನದಿ ಪಾತ್ರದಲ್ಲಿ ನಿಯಮಬಾಹಿರವಾಗಿ ಕಳ್ಳತನದಿಂದ ಮರಳು ಸಾಗಾಣಿಕೆ ಮಾಡುತ್ತಿದ್ದ 6 ಟ್ರ್ಯಾಕ್ಟರ್ ಮತ್ತು 2 ಟಿಪ್ಪರ್‌ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ತಾಲೂಕಿನ ಕರ್ಕಿಹಳ್ಳಿ,ಪರ್ತಪೂರ,ಕೋಣಚಪ್ಪಳ್ಳಿ,ದೊಂಡಂಬಳ್ಳಿ,ಅರಷಣಗಿ ಗ್ರಾಮ ಬಳಿ ದಿಢೀರನೇ ದಾಳಿ ನಡೆಸಿ, ಮರಳು ಸಮೇತ ವಾಹನಗಳನ್ನು ಜಪ್ತಿ ಮಾಡಿ, ಮಾಲೀಕ ಮತ್ತು ಚಾಲಕನ ವಿರುದ್ಧ, ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೇವದುರ್ಗ ತಾಲೂಕಿನ ಕೃಷ್ಣಾ ನದಿ ಪಾತ್ರದ ವಿವಿಧ ಹಳ್ಳಿಗಳಲ್ಲಿ ಅಕ್ರಮ ಮರಳು ಸಾಗಾಣಿಕೆ ನಡೆಸಿದ 6 ಟ್ರ್ಯಾಕ್ಟರ್ ಮತ್ತು 2 ಟಿಪ್ಪರ್‌ಗಳನ್ನು ವಶಕ್ಕೆ ಪಡೆದಿರುವ ಪೊಲೀಸರು, ಸಂಬಂಧಿಸಿದವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

88
ಬಿಜೆಪಿಯ ಆರೋಪವೇನು?

ಮನೆಗಳ ನಿರ್ಮಾಣಕ್ಕಾಗಿ ಕೂಲಿಕಾರರಿಂದ, ಮರಳು ಎತ್ತವಳಿ ಮಾಡಿಕೊಂಡು ಜೀವಿಸುತ್ತಿರುವ ಟ್ರ್ಯಾಕ್ಟರ್ ಮಾಲೀಕರು, ಸಣ್ಣ-ಪುಟ್ಟ ಕೂಲಿಕಾರರ ಮೇಲೆ ಶಾಸಕಿ ಕರೆಮ್ಮ ಜಿ.ನಾಯಕ ಬ್ರಹ್ಮಾಸ್ತ್ರ ಪ್ರಯೋಗಿಸುತ್ತಿದ್ದಾರೆ ಎಂದು ಬಿಜೆಪಿ ಮುಖಂಡರು ಆರೋಪಿಸಿದ್ದರು. ಪಟ್ಟಣದಲ್ಲಿ ನಗರಗುಂಡ ಗ್ರಾಮದ ಕೆಲ ಮುಖಂಡರು ಪತ್ರಿಕಾ ಪ್ರಕಟಣೆ ನೀಡಿ, ಶುಕ್ರವಾರ ರಾತ್ರಿ 12ಗಂಟೆಗೆ ಶಾಸಕರು ದೊಂಡಂಬಳಿ ಗ್ರಾಮ ಬಳಿ ಬಂದು, ಅಲ್ಪಪ್ರಮಾಣದ ಸಂಗ್ರಹಿಸಿದ ಮರಳು ಮತ್ತು ಟ್ರ್ಯಾಕ್ಟರ್‌ಗಳನ್ನು ಸೀಜ್ ಮಾಡಿಸಿದ್ದಾರೆ. ದೊಡ್ಡ ದೊಡ್ಡ ಅಡ್ಡೆಗಳನ್ನು ಹರಾಜಿನಲ್ಲಿ ತೆಗೆದುಕೊಂಡವರ ಪರ ಶಾಸಕರು ಬೆಂಬಲಕ್ಕೆ ನಿಂತಿದ್ದಾರೆ ಎಂದು ದೂರಿದ್ದರು.

ಕೃಷ್ಣಾ ನದಿ ಪಾತ್ರದಲ್ಲಿ ದೊಡ್ಡ ದೊಡ್ಡ ಇಟಾಜಿ, ಜೆಸಿಬಿಗಳ ಮೂಲಕ ಅನಿಯಮಿತ ಲೋಡ್ ಮುಖಾಂತರ ಮರಳು ಸಾಗಾಣಿಕೆ ಮಾಡಲಾಗುತ್ತದೆ. ನಕಲಿ ರಾಯಲ್ಟಿ ಮತ್ತು ಒಂದೇ ರಾಯಲ್ಟಿ ಮೇಲೆ ಎರಡೆರಡು ಟಿಪ್ಪರಗಳನ್ನು ಸಾಗಿಸುವರ ಮೇಲೆ ಯಾವುದೇ ಕ್ರಮವಿಲ್ಲ. ಅವ್ಯಾಹತವಾಗಿ ಮರಳು ಸಾಗಾಣಿಕೆ ನಡೆದಿದೆ. ಆದರೆ ಸಣ್ಣ ಮತು ಮಧ್ಯಮ ವರ್ಗದವರು ಮನೆ ನಿರ್ಮಿಸಿಕೊಳ್ಳಲು ಮರಳು ದೊರಕದಂತಾಗಿದೆ. ಈ ಬಾರಿ ಬೆಳೆ ಹಾನಿಯಾಗಿ ರೈತರು ಸಂಕಷ್ಟದಲ್ಲಿದ್ದಾರೆ. ಟ್ರ್ಯಾಕ್ಟರ್‌ಗಳನ್ನು ದುಡಿಸುವುದರ ಜೊತೆಗೆ ಕೂಲಿಕಾರರಿಗೆ ನೆರವು ನೀಡುವ ಉದ್ದೇಶ ಹೊಂದಿರುವವರ ಮೇಲೆ ತೊಂದರೆಕೊಡುತ್ತಿದ್ದಾರೆ ಎಂದು ಹೇಳಿದ್ದರು.

ಕೂಡಲೇ ಜಿಲ್ಲಾಡಳಿತ ಟ್ರ್ಯಾಕ್ಟರ್ ಮುಖಾಂತರ ಮರಳು ತೆಗೆದುಕೊಂಡು ಹೋಗುವವರಿಗೆ ನೆರವಿಗೆ ಬರಬೇಕು. ಜೆಸಿಬಿ ಮತ್ತು ಇಟಾಚಿಗಳನ್ನು ಬಳಸದೇ, ಕೂಲಿಕಾರಿಂದಲೇ ಮರಳು ತುಂಬಿಸಲಾಗುತ್ತದೆ. ಕೂಲಿಕಾರಿಗೆ ಕೂಲಿ ನೀಡುವ ವ್ಯವಸ್ಥೆ ಕಲ್ಪಿಸಬೇಕೆಂದು ನಗರಗುಂಡ ಗ್ರಾಮದ ಬಿಜೆಪಿ ಮುಖಂಡರಾದ ಮುದಕಪ್ಪ ನಾಯಕ, ಶಿವರಾಜ, ನಿಂಗಯ್ಯ, ಬೈಲಪ್ಪ, ಮಾಳಿಂಗರಾಯ, ಯಲ್ಲಪ್ಪ ಒತ್ತಾಯಿಸಿದ್ದರು. ಇದೆಲ್ಲದ್ದಕ್ಕೂ ಉತ್ತರವಾಗಿ ಶಾಸಕಿ ಕರೆಮ್ಮ ಎದುರಾಳಿಗಳಿಗೆ ಸ್ಪಷ್ಟ ಉತ್ತರ ನೀಡಿದ್ದಾರೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories