ಕೆಪಿಎಸ್‌ಸಿ ಹಗರಣ: ಇಡಿ ಅಧಿಕಾರಿಗಳು ಬರ್ತಿದ್ದಂತೆ ಮನೆಗೆ ಬೀಗ ಹಾಕಿ IAS ಜ್ಞಾನೇಂದ್ರ ಕುಮಾರ್ ಪರಾರಿ!

Published : Aug 23, 2026, 05:21 PM IST

ಕೆಪಿಎಸ್‌ಸಿ ಪಶು ವೈದ್ಯಕೀಯ ಪರೀಕ್ಷೆ ಅಕ್ರಮ ಹಗರಣಕ್ಕೆ ಸಂಬಂಧಿಸಿದಂತೆ, ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಬೆಂಗಳೂರಿನ ನಿವಾಸದ ಮೇಲೆ ಇಡಿ ದಾಳಿ ನಡೆಸಿದೆ. ಅಧಿಕಾರಿಗಳು ಬರುವಷ್ಟರಲ್ಲಿ ಮನೆಗೆ ಬೀಗ ಹಾಕಿ ಪರಾರಿಯಾಗಿದ್ದನು. ಆದರೆ, ದಾಳಿಗೆ ಬಂದ ಇಡಿ ಅಧಿಕಾರಿಗಳು ಪಟ್ಟು ಬಿಡದೇ ಮಾಡಿದ್ದೇನು ನೋಡಿ.

PREV
16

ಬೆಂಗಳೂರು: ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿರುವ ಕೆಪಿಎಸ್‌ಸಿ (KPSC) ಪಶು ವೈದ್ಯಕೀಯ ಪರೀಕ್ಷೆ ಅಕ್ರಮ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಪ್ರಕರಣದಲ್ಲಿ ಪ್ರಮುಖ ಆರೋಪ ಎದುರಿಸುತ್ತಿರುವ ಹಿರಿಯ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಅವರ ಬೆಂಗಳೂರಿನ ಜಯಮಹಲ್ ಬಡಾವಣೆಯಲ್ಲಿರುವ ನಿವಾಸದ ಮೇಲೆ ಇಡಿ ದಾಳಿ ನಡೆಸಿದ್ದು, ಅಪಾರ್ಟ್‌ಮೆಂಟ್ ಆವರಣದಲ್ಲಿ ಗಂಟೆಗಳ ಕಾಲ ಭಾರೀ ಹೈಡ್ರಾಮಾ ನಡೆದಿದೆ.

26

ತನಿಖೆ ಆರಂಭವಾಗ್ತಿದ್ದಂತೆ ಐಎಎಸ್ ಅಧಿಕಾರಿ ಪರಾರಿ!

ಕೆಪಿಎಸ್‌ಸಿ ಪಶು ವೈದ್ಯಕೀಯ ಅಧಿಕಾರಿಗಳ ನೇಮಕಾತಿ ಪರೀಕ್ಷೆಯ ಅಕ್ರಮದ ತನಿಖೆಯನ್ನು ಇಡಿ ಅಧಿಕಾರಿಗಳು ಕೈಗೆತ್ತಿಕೊಳ್ಳುತ್ತಿದ್ದಂತೆಯೇ, ಎಚ್ಚೆತ್ತ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಮನೆಗೆ ಬೀಗ ಹಾಕಿ ನಾಪತ್ತೆಯಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಅವರು ಸಂಪರ್ಕಕ್ಕೆ ಸಿಗದೆ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ. ಜಯಮಹಲ್‌ನಲ್ಲಿರುವ ಖಾಸಗಿ ಅಪಾರ್ಟ್‌ಮೆಂಟ್‌ನಲ್ಲಿರುವ ಜ್ಞಾನೇಂದ್ರ ಕುಮಾರ್ ಅವರ ಫ್ಲ್ಯಾಟ್‌ಗೆ ಶುಕ್ರವಾರ ಮುಂಜಾನೆ 3 ಇನ್ನೋವಾ (Innova) ಕಾರುಗಳಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ಯೋಧರೊಂದಿಗೆ ಇಡಿ ಅಧಿಕಾರಿಗಳ ತಂಡ ಆಗಮಿಸಿತು.

36

ಅಧಿಕಾರಿಗಳು ಬರುತ್ತಿದ್ದಂತೆ ಅಪಾರ್ಟ್‌ಮೆಂಟ್‌ನ ಸೆಕ್ಯೂರಿಟಿ ಗಾರ್ಡ್ ಮುಖ್ಯ ಗೇಟ್‌ಗೆ ಬೀಗ ಹಾಕಿದನು. 'ಯಾರನ್ನೂ ಒಳಗೆ ಬಿಡಲು ನನಗೆ ಅನುಮತಿ ಇಲ್ಲ' ಎಂದು ಅಧಿಕಾರಿಗಳನ್ನು ತಡೆದನು. ಸ್ಥಳೀಯ ಪೊಲೀಸರ ಸಮ್ಮುಖದಲ್ಲಿ ಅಧಿಕಾರಿಗಳು ಸೆಕ್ಯೂರಿಟಿ ಸಿಬ್ಬಂದಿ ಜೊತೆ ಮಾತುಕತೆ ನಡೆಸಿ, ಕಾನೂನು ಕ್ರಮದ ಎಚ್ಚರಿಕೆ ನೀಡಿದ ಬಳಿಕ ಗೇಟ್ ಓಪನ್ ಮಾಡಲಾಯಿತು. ಬಳಿಕ ಮುಂಜಾಗ್ರತಾ ಕ್ರಮವಾಗಿ ಅಪಾರ್ಟ್‌ಮೆಂಟ್ ಮುಂಭಾಗ ಬ್ಯಾರಿಕೇಡ್ ಹಾಕಿ ಸಿಆರ್‌ಪಿಎಫ್ ಭದ್ರತೆ ಒದಗಿಸಲಾಯಿತು.

46

ಸಾಕ್ಷಿಗೆ (Witness) ನಿರಾಕರಿಸಿದ ಎದುರು ಮನೆಯವರು!

  • ಅಧಿಕಾರಿಯ ಮನೆ ಲಾಕ್ ಆಗಿದ್ದರಿಂದ ಬಾಗಿಲು ಮುರಿಯಲು ಸ್ಥಳೀಯ ಸಾಕ್ಷಿಗಳ (Panchas) ಅಗತ್ಯವಿತ್ತು.
  • ಇಡಿ ಅಧಿಕಾರಿಗಳು ನಿಯಮಾವಳಿ ಪ್ರಕಾರ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ (Chief Secretary) ಹಾಗೂ ಪೊಲೀಸ್ ಇಲಾಖೆಗೆ ಲಿಖಿತ ಮಾಹಿತಿ ರವಾನಿಸಿದರು.
  • ಬಳಿಕ ಜ್ಞಾನೇಂದ್ರ ಕುಮಾರ್ ಅವರ ಎದುರು ಮನೆಯ ವ್ಯಕ್ತಿಯ ಬಳಿ ಬಾಗಿಲು ತೆಗೆಯುವಾಗ ‘ಸಾಕ್ಷಿ’ಯಾಗುವಂತೆ ಅಧಿಕಾರಿಗಳು ಮನವಿ ಮಾಡಿದರು. ಆದರೆ ಆ ವ್ಯಕ್ತಿ ತಾನು ಸಾಕ್ಷಿಯಾಗಲು ಸಾಧ್ಯವಿಲ್ಲ ಎಂದು ನೇರವಾಗಿ ನಿರಾಕರಿಸಿದರು.
  • ನಂತರ ಮತ್ತೊಂದು ಮನೆಯವರ ಜೊತೆ ಮಾತನಾಡಿದಾಗ, ಪಕ್ಕದ ಮನೆಯ ಓರ್ವ ವ್ಯಕ್ತಿ ಅಧಿಕೃತ ಸಾಕ್ಷಿಯಾಗಲು ಒಪ್ಪಿಕೊಂಡರು.
56

ವೈಯಾಲಿಕಾವಲ್‌ನಿಂದ ಕೀ ಮೇಕರ್ ಕರೆಸಿದ ಇಡಿ: ಬಾಗಿಲು ಓಪನ್

ಬೀಗ ಒಡೆಯುವ ಬದಲು ಹೊಸ ಕೀ ತಯಾರಿಸಲು ನಿರ್ಧರಿಸಿದ ಅಧಿಕಾರಿಗಳು, ಸಮೀಪದ ವೈಯಾಲಿಕಾವಲ್‌ನಿಂದ ನುರಿತ ‘ಕೀ ಮೇಕರ್’ (Key Maker) ಒಬ್ಬರನ್ನು ಸ್ಥಳಕ್ಕೆ ಕರೆಸಿದರು. ಕೀ ಮೇಕರ್ ಮೂಲಕ ಬಾಗಿಲಿನ ಲಾಕ್ ಓಪನ್ ಮಾಡಿಸಿ, ಸಾಕ್ಷಿಗಳ ಸಮ್ಮುಖದಲ್ಲಿ ಅಧಿಕಾರಿಗಳ ತಂಡ ಫ್ಲ್ಯಾಟ್‌ನೊಳಗೆ ಪ್ರವೇಶಿಸಿತು.

66

ಸ್ಕ್ಯಾನರ್, ಪ್ರಿಂಟರ್ ಹಿಡಿದು ಒಳನುಗ್ಗಿದ ಅಧಿಕಾರಿಗಳು!

ಫ್ಲ್ಯಾಟ್ ಒಳಗೆ ಪ್ರವೇಶಿಸಿದ ಬೆನ್ನಲ್ಲೇ ಅಧಿಕಾರಿಗಳು ತಮ್ಮೊಂದಿಗೆ ಪ್ರಿಂಟರ್ ಹಾಗೂ ಸ್ಕ್ಯಾನರ್‌ಗಳನ್ನು ಒಳಗೆ ಕೊಂಡೊಯ್ದಿದ್ದಾರೆ. ಮನೆಯ ಪ್ರತಿಯೊಂದು ಕೊಠಡಿ, ಕಪಾಟುಗಳನ್ನು ಜಾಲಾಡಲಾಗುತ್ತಿದ್ದು, ಪಶು ವೈದ್ಯಕೀಯ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದ ಕಡತಗಳು, ಅಕ್ರಮ ಆಸ್ತಿ ಪತ್ರಗಳು, ಬ್ಯಾಂಕ್ ಖಾತೆಗಳ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆ ಭರದಿಂದ ಸಾಗಿದೆ. ನಾಪತ್ತೆಯಾಗಿರುವ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಪತ್ತೆಗೂ ಶೋಧ ತೀವ್ರಗೊಂಡಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories