ವಿಧಾನಸೌಧಕ್ಕೆ ಪ್ರವೇಶ ಮಾಡುವವರು ಜಿಪಿಒ (ತಿಮ್ಮಯ್ಯ ವೃತ್ತ), ಕೆ.ಆರ್.ವೃತ್ತ, ಕಬ್ಬನ್ ಪಾರ್ಕ್ ಕಡೆಗಳಿಂದ ಪ್ರವೇಶಿಸಲು ಅವಕಾಶ ಕಲ್ಪಿಸಲಾಗಿದೆ. ಇಲ್ಲಿ ತಲಾ 6 ಗೇಟ್‌ಗಳಂತೆ 3 ಕಡೆಗಳಿಂದ ಒಟ್ಟು 18 ಪ್ರವೇಶ ದ್ವಾರಗಳನ್ನು ನಿರ್ಮಾಣ ಮಾಡಲಿದ್ದು, ಅವುಗಳ ಮೂಲಕವೇ ಸಾರ್ವಜನಿಕರು ಪ್ರವೇಶಿಸಲು ಅವಕಾಶವಿದೆ. ಸ್ವಾತಂತ್ರ್ಯ ದಿನಾಚರಣೆಯಂದು ಬೆಳಿಗ್ಗೆ 11ಗಂಟೆಯಿಂದ ಅಂಬೇಡ್ಕರ್ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ. ಈಗಾಗಲೇ ಬಿಎಂಟಿಸಿಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ನಗರದ ಎಲ್ಲ ಪ್ರದೇಶಗಳಿಂದ ವಿಧಾನಸೌಧಕ್ಕೆ ಬಸ್ ಸಂಚಾರ ಕಲ್ಪಿಸಲಾಗಿದೆ. ಸಾರ್ವಜನಿಕರು ಸಾಧ್ಯವಾದಷ್ಟು ಬಸ್‌ನಲ್ಲಿ ಆಗಮಿಸಿದರೆ ಸಂಚಾರದಟ್ಟಣೆ ಕಡಿಮೆಯಾಗಲಿದೆ ಎಂದು ಆಯುಕ್ತರು ತಿಳಿಸಿದರು.
ರಾತ್ರಿ ಮದ್ದು, ಪಟಾಕಿ ಸಿಡಿತ
ವಿಧಾನಸೌಧದ 4 ಕಡೆಗಳಲ್ಲಿ ರಾತ್ರಿ ಮದ್ದು, ಪಟಾಕಿ ಸಿಡಿಸಲು ಸ್ಥಳ ಗುರುತಿಸಿ ಸಂಬಂಧಿಸಿದ ಇಲಾಖೆಗಳಿಂದ ಎನ್‌ಒಸಿ ಪಡೆಯಲು ಮನವಿ ಕೊಡಲಾಗಿದೆ. ಎನ್ಒಸಿ ಇನ್ನೂ ದೊರೆತಿಲ್ಲ. ವಿಧಾನಸೌಧದ ಯಾವ ಕಡೆಗಳಲ್ಲಿ ಅನುಮತಿ ದೊರೆಯುತ್ತದೆಯೋ ಆ ಸ್ಥಳದಲ್ಲಿ ಮದ್ದು, ಪಟಾಕಿ ಸಿಡಿಸಲಾಗುವುದು ಎಂದು ಆಯುಕ್ತರು ತಿಳಿಸಿದರು.
ವಿಧಾನಸೌಧ ಮೆಟ್ರೋ ನಿಲ್ದಾಣ ಬಂದ್
ಫ್ರೀಡಂ ಹಬ್ಬ ಆಯೋಜನೆ ಹಿನ್ನೆಲೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಮೆಟ್ರೋ ನಿಲ್ದಾಣವನ್ನು ಬೆಳಗ್ಗೆ 10ರಿಂದ ರಾತ್ರಿ 9.30ರವರೆಗೆ ಪ್ರವೇಶ ಮತ್ತು ನಿರ್ಗಮನ ಸೇರಿ ಸಂಪೂರ್ಣವಾಗಿ ಬಂದ್ ಮಾಡಲಾಗುತ್ತದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ. ರಾತ್ರಿ 9.30ರ ನಂತರ ಜನರು ಮನೆಗಳಿಗೆ ತೆರಳಲು ಅನುಕೂಲವಾಗುವಂತೆ ಬಾಗಿಲುಗಳನ್ನು ತೆಗೆಯಲಾಗುತ್ತದೆ. ಆದರೆ, ಪ್ರಯಾಣಿಕರು ವಿಧಾನಸೌಧ ನಿಲ್ದಾಣದಲ್ಲಿ ಇಳಿದು ಹೊರ ಬರಲು 10 ಗಂಟೆಯ ನಂತರ ಮಾತ್ರ ಅವಕಾಶ ನೀಡಲಾಗುತ್ತದೆ. ನಿಲ್ದಾಣ ಬಂದ್ ಆಗಿರುವ ಅವಧಿಯಲ್ಲಿ ಪ್ರಯಾಣಿಕರು ಕಬ್ಬನ್‌ಪಾರ್ಕ್ ಮೆಟ್ರೋ ನಿಲ್ದಾಣ ಅಥವಾ ಸರ್ ಎಂ.ವಿಶ್ವೇಶ್ವರಯ್ಯ ನಿಲ್ದಾಣವನ್ನು ಬಳಸಬಹುದಾಗಿದೆ. ಅಂದು ರಾತ್ರಿ ಪ್ರಯಾಣಿಕರ ದಟ್ಟಣೆ ಮತ್ತು ಅಗತ್ಯತೆ ಅನುಸಾರ ರೈಲುಗಳ ಸಂಚಾರವನ್ನು ಹೆಚ್ಚಿಸಲಾಗುತ್ತದೆ ಎಂದು ಬಿಎಂಆರ್‌ಸಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ.
ಸ್ವಯಂ ಸೇವಕರಿಂದ ಅಗತ್ಯ ನೆರವು ಪಡೆಯಿರಿ
ಫ್ರೀಡಂ ಹಬ್ಬದಲ್ಲಿ ನಿಗದಿತ ಟಿ-ಶರ್ಟ್‌ಗಳ ಮೂಲಕ ಗುರುತಿಸಬಹುದಾದ May I Help You? ಸ್ವಯಂಸೇವಕರು ಕಾರ್ಯಕ್ರಮದ ಸ್ಥಳದ ಎಲ್ಲ ಕಡೆ ಸಂದರ್ಶಕರಿಗೆ ಅಗತ್ಯ ನೆರವು ನೀಡಲಿದ್ದಾರೆ. ನಗರದ 4 ವಿವಿಧ ದಿಕ್ಕುಗಳಲ್ಲಿ 4 ಆಂಬ್ಯುಲೆನ್ಸ್‌ಗಳನ್ನು ಅರೆವೈದ್ಯಕೀಯ ಸಿಬ್ಬಂದಿಯೊಂದಿಗೆ ನಿಯೋಜಿಸಲಾಗಿದೆ. ತುರ್ತು ಸಂದರ್ಭದಲ್ಲಿ ಯಾವ ಆಸ್ಪತ್ರೆಗೆ ಕರೆದೊಯ್ಯಬೇಕು ಎಂಬ ಮಾಹಿತಿಯೂ ಅವರಿಗೆ ಲಭ್ಯವಿರಲಿದೆ. ರಾಣಿ ಚೆನ್ನಮ್ಮ ದಳದ ಸಹಯೋಗದೊಂದಿಗೆ ಮಹಿಳಾ ಸಹಾಯ ಕೇಂದ್ರ ಸ್ಥಾಪಿಸಲಾಗಿದ್ದು, ಇಲ್ಲಿ ಶಿಶುಗಳಿಗೆ ಹಾಲುಣಿಸುವ ಕೊಠಡಿ, ವಿಶ್ರಾಂತಿ ವ್ಯವಸ್ಥೆ ಹಾಗೂ ಸ್ಯಾನಿಟರಿ ಸೌಲಭ್ಯಗಳು ಲಭ್ಯವಿರಲಿವೆ. ಪ್ರತಿಯೊಂದು ಚಟುವಟಿಕೆಗೆ ಪೊಲೀಸ್, ಜಿಬಿಎ, ಆಯೋಜಕರು ಹಾಗೂ ಈವೆಂಟ್ ಪ್ರತಿನಿಧಿಗಳು ಸೇರಿದಂತೆ ತಲಾ 4 ಪ್ರತಿನಿಧಿಗಳನ್ನು ನಿಯೋಜಿಸಲಾಗುವುದು.