ಕೊಡಗು: ತಡಿಯಂಡಮೋಳ್ ಬೆಟ್ಟದ ದಟ್ಟಾರಣ್ಯದಲ್ಲಿ ನಾಪತ್ತೆಯಾಗಿದ್ದ 'ಕೇರಳದ ಟೆಕ್ಕಿ ಶರಣ್ಯ 3 ದಿನದ ಬಳಿಕ ಪತ್ತೆ'!

Published : Apr 05, 2026, 06:56 PM IST

ಕೊಡಗಿನ ತಡಿಯಂಡಮೋಳ್ ಬೆಟ್ಟಕ್ಕೆ ಚಾರಣಕ್ಕೆ ಹೋಗಿ ನಾಪತ್ತೆಯಾಗಿದ್ದ ಕೇರಳ ಮೂಲದ ಐಟಿ ಉದ್ಯೋಗಿ ಶರಣ್ಯ, ಮೂರು ದಿನಗಳ ಬೃಹತ್ ಶೋಧ ಕಾರ್ಯಾಚರಣೆಯ ನಂತರ ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ. ಅರಣ್ಯ ಇಲಾಖೆ, ಪೊಲೀಸರು, ನಕ್ಸಲ್ ನಿಗ್ರಹ ಪಡೆ ಮತ್ತು ಸ್ಥಳೀಯರ ಜಂಟಿ ಕಾರ್ಯಾಚರಣೆ ಯಶಸ್ವಿಯಾಗಿದೆ.

PREV
18
3 ದಿನದ ಬಳಿಕ ಸಿಕ್ಕಿದ ಶರಣ್ಯ

ಕೊಡಗು (ಏ.05): ಕೊಡಗು ಜಿಲ್ಲೆಯ ಅತ್ಯಂತ ಎತ್ತರದ ಶಿಖರವಾದ ತಡಿಯಂಡಮೋಳ್ ಬೆಟ್ಟಕ್ಕೆ ಚಾರಣಕ್ಕೆ ಹೋಗಿ ಕಳೆದ ಮೂರು ದಿನಗಳಿಂದ ದಟ್ಟಾರಣ್ಯದಲ್ಲಿ ನಾಪತ್ತೆಯಾಗಿದ್ದ ಕೇರಳ ಮೂಲದ ಐಟಿ ಉದ್ಯೋಗಿ ಶರಣ್ಯ (36) ಕೊನೆಗೂ ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ. ಈ ಮೂಲಕ ಕೊಡಗು ಜಿಲ್ಲಾಡಳಿತ, ಅರಣ್ಯ ಇಲಾಖೆ ಮತ್ತು ಸ್ಥಳೀಯರು ನಡೆಸುತ್ತಿದ್ದ ಬೃಹತ್ ಶೋಧ ಕಾರ್ಯಾಚರಣೆ ಸುಖಾಂತ್ಯ ಕಂಡಿದೆ.

28
ಏಪ್ರಿಲ್ 2 ರಂದು ನಡೆದಿದ್ದೇನು?

ಕೇರಳದ ಕೊಚ್ಚಿಯ ನಾದನಾಪುರ ಗ್ರಾಮದ ನಿವಾಸಿ, ಗೋಪಿ ಮತ್ತು ಶೈಲಜಾ ದಂಪತಿಯ ಪುತ್ರಿ ಶರಣ್ಯ ಕಳೆದ 15 ವರ್ಷಗಳಿಂದ ದೇಶದ ವಿವಿಧೆಡೆ ಚಾರಣ (Trekking) ಮಾಡಿದ ಅನುಭವ ಹೊಂದಿದ್ದಾರೆ. ಏಪ್ರಿಲ್ 2 ರಂದು ಅವರು ಕೊಡಗಿನ ತಡಿಯಂಡಮೋಳ್ ಬೆಟ್ಟಕ್ಕೆ ಒಬ್ಬರೇ ಚಾರಣಕ್ಕೆ ತೆರಳಿದ್ದರು. ಚಾರಣ ಮುಗಿಸಿ ವಾಪಸ್ ಬರುವಾಗ ದಾರಿ ತಪ್ಪಿ ದಟ್ಟಾರಣ್ಯದೊಳಗೆ ಸಿಲುಕಿಕೊಂಡಿದ್ದರು.

38
ಮೊಬೈಲ್ ಫೋನ್ ಸ್ವಿಚ್ ಆಫ್

ದಾರಿ ತಪ್ಪಿದ ವಿಷಯ ತಿಳಿಯುತ್ತಿದ್ದಂತೆಯೇ ಅವರು ತಾವು ತಂಗಿದ್ದ ಹೋಂಸ್ಟೇ ಮಾಲೀಕರಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಆದರೆ, ದುರದೃಷ್ಟವಶಾತ್ ಕರೆ ಮಾಡಿದ ಕೆಲವೇ ಕ್ಷಣಗಳಲ್ಲಿ ಅವರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿತ್ತು. ಇದರಿಂದಾಗಿ ಅವರ ನಿಖರವಾದ ಲೊಕೇಶನ್ ಪತ್ತೆ ಹಚ್ಚುವುದು ಕಷ್ಟಕರವಾಗಿತ್ತು.

48
ಖಡಕ್ ಸೂಚನೆ ನೀಡಿದ್ದ ಅರಣ್ಯ ಸಚಿವರು:

ಶರಣ್ಯ ನಾಪತ್ತೆಯಾದ ವಿಷಯ ತಿಳಿಯುತ್ತಿದ್ದಂತೆಯೇ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದರು. ಶರಣ್ಯ ಪತ್ತೆಗಾಗಿ ಹೆಚ್ಚುವರಿ ತಂಡಗಳನ್ನು ನಿಯೋಜಿಸಲು ಮತ್ತು ಅತ್ಯಾಧುನಿಕ ತಂತ್ರಜ್ಞಾನ ಬಳಸಲು ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದರು. ಸಚಿವರ ಸೂಚನೆಯ ಬೆನ್ನಲ್ಲೇ ಶೋಧ ಕಾರ್ಯ ತೀವ್ರಗೊಂಡಿತ್ತು.

58
ಬೃಹತ್ ಶೋಧ ಕಾರ್ಯಾಚರಣೆ:

ಶರಣ್ಯ ಪತ್ತೆಗಾಗಿ ಅರಣ್ಯ ಇಲಾಖೆ ಸಿಬ್ಬಂದಿ, ಪೊಲೀಸರು ಮತ್ತು ಸ್ಥಳೀಯ ಸಾರ್ವಜನಿಕರ ತಂಡಗಳು ಹಗಲಿರುಳು ಶ್ರಮಿಸಿದವು. ಕಾಡಿನೊಳಗೆ ನಕ್ಸಲ್ ನಿಗ್ರಹ ಪಡೆ (ANF) ಕೂಡ ಕಾರ್ಯಾಚರಣೆಗೆ ಇಳಿದಿತ್ತು. ದಟ್ಟವಾದ ಕಾಡಿನಲ್ಲಿ ಮನುಷ್ಯರು ತಲುಪಲು ಸಾಧ್ಯವಾಗದ ಜಾಗಗಳಲ್ಲಿ ಹುಡುಕಾಟ ನಡೆಸಲು ಡ್ರೋಣ್ (Drones), ಥರ್ಮಲ್ ಡ್ರೋಣ್ (Thermal Drones) ಮತ್ತು ಶ್ವಾನ ದಳವನ್ನು (Dog Squad) ಬಳಸಿಕೊಳ್ಳಲಾಗಿತ್ತು.

68
3 ದಿನಗಳ ಬಳಿಕ ಪತ್ತೆ:

ಇಂದು ಬೆಳಗ್ಗೆ ಅರಣ್ಯ ಸಿಬ್ಬಂದಿ ಮತ್ತು ಸ್ಥಳೀಯರ ತಂಡವು ಬೆಟ್ಟದ ತಪ್ಪಲಿನ ದಟ್ಟಾರಣ್ಯದಲ್ಲಿ ಹುಡುಕಾಟ ನಡೆಸುತ್ತಿದ್ದಾಗ ಶರಣ್ಯ ಪತ್ತೆಯಾಗಿದ್ದಾರೆ. ದಾರಿ ತಪ್ಪಿ ಮೂರು ದಿನಗಳ ಕಾಲ ಕಾಡಿನಲ್ಲೇ ಕಳೆದಿದ್ದರೂ, ಅವರು ಧೈರ್ಯ ಕಳೆದುಕೊಂಡಿರಲಿಲ್ಲ. ಸದ್ಯ ಶರಣ್ಯ ಅವರು ಆರೋಗ್ಯವಾಗಿದ್ದು, ಅವರಿಗೆ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ.

78
ಕುಟುಂಬಸ್ಥರ ನಿಟ್ಟುಸಿರು

ಶರಣ್ಯ ಪತ್ತೆಯಾಗಿರುವ ಸುದ್ದಿ ತಿಳಿಯುತ್ತಿದ್ದಂತೆಯೇ ಅವರ ಕುಟುಂಬಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಚಾರಣದ ಅನುಭವವಿದ್ದ ಕಾರಣ ಅವರು ಕಾಡಿನ ವಿಷಮ ಪರಿಸ್ಥಿತಿಯಲ್ಲಿ ಮೂರು ದಿನಗಳ ಕಾಲ ಬದುಕುಳಿಯಲು ಸಾಧ್ಯವಾಯಿತು ಎಂದು ಹೇಳಲಾಗುತ್ತಿದೆ. ಕೊಡಗು ಜಿಲ್ಲಾಡಳಿತವು ಚಾರಣಿಗರಿಗೆ ಸೂಕ್ತ ಮಾರ್ಗದರ್ಶನ ಮತ್ತು ಸುರಕ್ಷತಾ ಕ್ರಮಗಳನ್ನು ಪಾಲಿಸುವಂತೆ ಮತ್ತೊಮ್ಮೆ ಮನವಿ ಮಾಡಿದೆ.

88
ಡಿಕೆ ಶಿವಕುಮಾರ್ ಭೇಟಿ ಮಾಡಿದ್ದ ಶರಣ್ಯ ಕುಟುಂಬಸ್ಥರು

ಇನ್ನು ಕೇರಳದಲ್ಲಿ ಚುನಾವಣಾ ಪ್ರಚಾರಕ್ಕೆ ತೆರಳಿರುವ ಕರ್ನಾಟಕದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಶರಣ್ಯ ಅವರ ಕುಟುಂಬ ಸದಸ್ಯರು ಭೇಟಿ ಮಾಡಿದ್ದರು. ಹೇಗಾದರೂ ಮಾಡಿ ನಮ್ಮ ಮಗಳನ್ನು ಹುಡುಕಿಕೊಡಿ ಎಂದು ಮನವಿ ಮಾಡಿದ್ದರು. ಇನ್ನು ನೆರೆ ರಾಜ್ಯದ ಜನರು ಬಂದು ಡಿಕೆಶಿ ಅವರನ್ನು ಮನವಿ ಮಾಡಿದ ಬೆನ್ನಲ್ಲಿಯೇ ಅರಣ್ಯ ಸಚಿವರಿಗೆ ಮಾಹಿತಿ ನೀಡಿ, ಶರಣ್ಯ ಹುಡುಕಾಟಕ್ಕೆ ಹೆಚ್ಚು ಒತ್ತಡ ಹಾಕಿದ್ದರು. ಇದರ ಬೆನ್ನಲ್ಲೇ ಶರಣ್ಯ ಸಿಕ್ಕಿದ್ದಾರೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories