ಬಳಕೆಗೆ ಮುಕ್ತವಾದ ಭಾಗಮಂಡಲ ಮೇಲ್ಸೇತುವೆ; ಹತ್ತಾರು ಗ್ರಾಮಗಳಿಗೆ ಇನ್ನು ಪ್ರವಾಹ ಭೀತಿ ಇಲ್ಲ

First Published | May 14, 2024, 8:59 PM IST

ಮಳೆಗಾಲ ಬಂತೆಂದರೆ ಸಾಕು ಮೂರು ನಾಲ್ಕು ತಿಂಗಳ ಕಾಲ ಪ್ರವಾಹ ಭೀತಿಗೆ ಸಿಲುಕಿ ನಲುಗಿ ಹೋಗುತ್ತಿದ್ದ ಕೊಡಗು ಜಿಲ್ಲೆ ಭಾಗಮಂಡಲಕ್ಕೆ ಇನ್ನು ಮುಂದೆ ಪ್ರವಾಹದ ಭೀತಿ ಇಲ್ಲ.. ಮೇಲ್ಸೇತುವೆ ಕಾಮಗಾರಿ ಸಂಪೂರ್ಣ ಮುಗಿದಿದ್ದು, ಬಳಕೆಗೆ ಮುಕ್ತವಾಗಿದೆ. 

ಹೌದು ಪ್ರಸಿದ್ಧ ಪುಣ್ಯ ಕ್ಷೇತ್ರ ಭಾಗಮಂಡಲದಲ್ಲಿ ಭಗಂಡೇಶ್ವರನ ಸನ್ನಿಧಿ ಇದೆ. ಇಲ್ಲಿಗೆ ನಿತ್ಯ ನೂರಾರು ಭಕ್ತರು ಜಿಲ್ಲೆಯಷ್ಟೇ ಅಲ್ಲ, ರಾಜ್ಯ ಹಾಗೂ ಹೊರ ರಾಜ್ಯಗಳಿಂದಲೂ ನಿತ್ಯ ಬಂದು ಹೋಗುತ್ತಾರೆ. ಇಲ್ಲಿರುವ ಕಾವೇರಿ, ಕನ್ನಿಕೆ ಹಾಗೂ ಸುಜ್ಯೋತಿ ನದಿಗಳ ಹೊಂದಾಗುವ ತ್ರಿವೇಣಿ ಸಂಗಮದಲ್ಲಿ ಮಿಂದೆದ್ದು ಪುನೀತರಾಗುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ ತ್ರಿವೇಣಿ ಸಂಗಮ ಕಳೆದ ಐದಾರು ವರ್ಷಗಳಿಂದ ಮಳೆಗಾಲ ಬಂತೆಂದರೆ ಈ ಮೂರು ನದಿಗಳು ಉಕ್ಕಿ ಹರಿದು ಪ್ರವಾಹದ ರೂಪ ತಳೆದು ನಾಲ್ಕೈದು ತಿಂಗಳ ಅವಧಿಯಲ್ಲಿ ಹಲವು ಬಾರಿ ಭಾಗಮಂಡಲವನ್ನು ಮುಳುಗಡೆ ಮಾಡಿ ಬಿಡುತಿತ್ತು. ಈ ಸಂದರ್ಭದಲ್ಲಿ ಭಾಗಮಂಡಲ, ಕೋರಂಗಾಲ, ಚೇರಂಗಾಲ, ತಲಕಾವೇರಿ, ಕುಯ್ಯಂಗೇರಿ, ಅಯ್ಯಂಗೇರಿ ಸೇರಿದಂತೆ ಸುತ್ತಮುತ್ತಲ ಹತ್ತಾರು ಹಳ್ಳಿಗಳ ಸಾವಿರಾರು ಕುಟುಂಬಗಳು ಪಡಬಾರದ ಕಷ್ಟ ಪಡುತ್ತಿದ್ದವು. ಅತ್ತಿಂದಿತ್ತ ಪ್ರವಾಹ ದಾಟಲಾಗದೆ ಸಂಕಷ್ಟ ಎದುರಿಸುತ್ತಿದ್ದವು. 

ಆದರೆ ಈ ಬಾರಿ ಅಂತಹ ಪ್ರವಾಹ ಭೀತಿಯಿಂದ ಹೊರ ಬಂದು ನೆಮ್ಮದಿ ನಿಟ್ಟುಸಿರು ಬಿಟ್ಟಿವೆ. ಹೌದು ಭಾಗಮಂಡಲದಲ್ಲಿ ಮೂರು ದಿಕ್ಕುಗಳಿಗೆ ಸಂಪರ್ಕ ಕಲ್ಪಿಸುವಂತೆ ಮೇಲ್ಸೇತುವೆ ನಿರ್ಮಾಣ ಮಾಡಲಾಗಿದ್ದು ಜನರು ಫುಲ್ ಖುಷಿಯಾಗಿದ್ದಾರೆ. 2018 ರಲ್ಲಿ 28 ಕೋಟಿ ವೆಚ್ಚದಲ್ಲಿ ಮೇಲ್ಸೇತುವೆ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಆದರೆ ಕಾಮಗಾರಿ ಮಂದಗತಿಯಲ್ಲಿ ನಡೆದಿದ್ದರಿಂದ ಜನರ ಓಡಾಟಕ್ಕೆ ಮುಕ್ತವಾಗಿರಲಿಲ್ಲ. ಅದರಲ್ಲೂ 2018 ರಿಂದ ನಿರಂತರ ಪ್ರವಾಹ ಎದುರಾದಾಗಲೆಲ್ಲಾ ಭಾಗಮಂಡಲದಿಂದ ಆಚೆಗೆ ಇರುವ ಯಾವುದೇ ಗ್ರಾಮಗಳ ಜನರು ಮಡಿಕೇರಿಯತ್ತ ತೆರಳು ಸಾಧ್ಯವಾಗದೇ ಪ್ರವಾಹದ ದಿಗ್ಭಂಧನದಲ್ಲಿ ಸಿಲುಕಿಬಿಡುತ್ತಿದ್ದರು. ಯಾರಿಗೆ ಯಾವುದೇ ತೊಂದರೆ ಆದರೂ ತ್ರಿವೇಣಿ ಸಂಗಮ ಮುಳುಗಡೆಯಾಗುತ್ತಿದ್ದರಿಂದ ಅಲ್ಲಿಯೇ ಸಿಲುಕಿ ಪರದಾಡಬೇಕಾಗಿತ್ತು. ಕೋರಂಗಾಲ, ತಲಕಾವೇರಿಯಲ್ಲಿ ಭೂಕುಸಿತವಾಗಲೆಲ್ಲಾ ಅಲ್ಲಿ ಸತ್ತವರನ್ನೂ, ಗಾಯಗೊಂಡವರನ್ನು ಇತ್ತ ಕಡೆಗೆ ಸಾಗಿಸಲಾಗದೆ ಪಡಬಾರದ ಕಷ್ಟ ಪಡಬೇಕಾಗಿತ್ತು. ಅಂದಿನಿಂದಲೂ ಮೇಲ್ಸೇತುವೆ ಕಾಮಗಾರಿಯನ್ನು ಆದಷ್ಟು ಬೇಗನೇ ಮುಗಿಸುವಂತೆ ಜನರು ಎಷ್ಟೇ ಒತ್ತಾಯಿಸಿದ್ದರೂ ಕಾಮಗಾರಿ ಪೂರ್ಣಗೊಂಡಿರಲೇ ಇಲ್ಲ. 2022 ರ ವರೆಗೂ ಪ್ರವಾಹದ ಪರಿಸ್ಥಿತಿಯಲ್ಲೇ ಜನರು ನಲುಗಿ ಹೋಗಿದ್ದರು. ಕಳೆದ ಬಾರಿಯೇ ಮೇಲ್ಸೇತುವೆ ಕಾಮಗಾರಿ ಮುಗಿಯುವ ಹಂತ ತಲುಪಿದ್ದರೂ ಅದರ ಸಂಪರ್ಕ ರಸ್ತೆಗಳ ಕಾಮಗಾರಿ ಮುಗಿಯದೇ ಬಳಕೆಗೆ ದೊರೆತ್ತಿರಲಿಲ್ಲ. ಆದರೆ ಈ ಬಾರಿ ಬಹುತೇಕ ಕಾಮಗಾರಿ ಮುಗಿದಿದ್ದು ಸಾರ್ವಜನಿಕರ ಬಳಕೆಗೆ ಮೇಲ್ಸೇತುವೆ ಮುಕ್ತವಾಗಿದೆ. 

Latest Videos


ಹೀಗಾಗಿ ಜನರು ಈ ಬಾರಿ ಪ್ರವಾಹದ ಪರಿಸ್ಥಿತಿ ಎದುರಾದರೂ ಯಾವುದೇ ಆತಂಕವಿಲ್ಲದೆ ತಮ್ಮ ನಿತ್ಯದ ಬದುಕು ದೂಡಬಹುದೆಂಬ ನೆಮ್ಮದಿ ನಿಟ್ಟುಸಿರು ಬಿಟ್ಟಿದ್ದಾರೆ. ಮೇಲ್ಸೇತುವೆ ಕಾಮಗಾರಿ ಮುಗಿದು ಅದು ಸಾರ್ವಜನಿಕರ ಬಳಕೆಗೆ ದೊರೆತ್ತಿರುವುದರಿಂದ ಪ್ರವಾಸಿಗರು ಕೂಡ ಯಾವುದೇ ಅಡ್ಡಿ ಆತಂಕವಿಲ್ಲದೆ, ಭಾಗಮಂಡಲ ಮತ್ತು ತಲಕಾವೇರಿಗಳಿಗೆ ತೆರಳಬಹುದು. ಆದರೆ ಭಾಗಮಂಡಲ ತಗ್ಗು ಪ್ರದೇಶವಾಗಿದ್ದು, ಒಂದು ವೇಳೆ ಮತ್ತೆ ಯತ್ತಾಸ್ಥಿತಿಯಲ್ಲಿ ಮಳೆಗಾಲದಲ್ಲಿ ಪ್ರವಾಹದ ಪರಿಸ್ಥಿತಿ ಎದುರಾದರೆ ಭಾಗಮಂಡಲದ ಅಂಗಡಿ ಮುಂಗಟ್ಟುಗಳು, ಕೆಲವು ಮನೆಗಳು ಮುಳುಗಡೆಯಾವುದು ಮಾತ್ರ ತಪ್ಪಲ್ಲ.

 ಏನೇ ಆಗಲಿ ಕಳೆದ ಐದು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಭಾಗಮಂಡಲದ ಮೇಲ್ಸೇತುವೆ ಕಾಮಗಾರಿ ಮುಗಿದಿರುವುದು ಸುತ್ತಮುತ್ತಲ ಗ್ರಾಮಗಳಿಗೆ ಮತ್ತು ಪ್ರವಾಸಿಗರ ಓಡಾಟಕ್ಕೆ ಸಾಕಷ್ಟು ಅನುಕೂಲವಾಗಿರುವುದಂತು ಸತ್ಯ.

ವರದಿ : ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
 

click me!