ಅಪ್ಸರಕೊಂಡ ಕರ್ನಾಟಕದ ಮೊದಲ ಸಮುದ್ರ ಸಂರಕ್ಷಿತ ವಲಯ ಘೋಷಣೆಯೊಂದೇ ಬಾಕಿ!

Published : May 16, 2025, 05:48 PM ISTUpdated : May 16, 2025, 05:56 PM IST

ಕರ್ನಾಟಕ ಸರ್ಕಾರವು ಮುಗ್ಲಿ-ಅಪ್ಸರಕೊಂಡವನ್ನು ರಾಜ್ಯದ ಮೊದಲ ಸಮುದ್ರ ಸಂರಕ್ಷಿತ ವಲಯವಾಗಿ ಘೋಷಿಸಲು ಸಜ್ಜಾಗಿದೆ. ಈ ಯೋಜನೆಯು ಆಲಿವ್-ರಿಡ್ಲಿ ಆಮೆಗಳು ಸೇರಿದಂತೆ ಅಳಿವಿನಂಚಿನಲ್ಲಿರುವ ಜಾತಿಗಳನ್ನು ರಕ್ಷಿಸುವ ಗುರಿಯನ್ನು ಹೊಂದಿದೆ ಮತ್ತು ಭಾರತದ ಏಳನೇ ಸಮುದ್ರ ಅಭಯಾರಣ್ಯವಾಗಲಿದೆ.

PREV
17
ಅಪ್ಸರಕೊಂಡ ಕರ್ನಾಟಕದ ಮೊದಲ ಸಮುದ್ರ ಸಂರಕ್ಷಿತ ವಲಯ ಘೋಷಣೆಯೊಂದೇ ಬಾಕಿ!

ಕರ್ನಾಟಕವು ತನ್ನ ವನ್ಯಜೀವಿ ಸಂರಕ್ಷಣೆ ಕಾರ್ಯದಲ್ಲಿ ಹೊಸ ಅಧ್ಯಾಯವೊಂದನ್ನು ಆರಂಭಿಸಲು ಸಜ್ಜಾಗಿದೆ. ರಾಜ್ಯದ ಅರಣ್ಯ ಸಚಿವ ಶ್ರೀ ಈಶ್ವರ್ ಖಂಡ್ರೆ ನೇತೃತ್ವದ  ರಾಜ್ಯ ವನ್ಯಜೀವಿ ಮಂಡಳಿ (SBWL) ಸ್ಥಾಯಿ ಸಮಿತಿಯು, ರಾಜ್ಯದ ಮೊದಲ ಸಮುದ್ರ ಸಂರಕ್ಷಿತ ವಲಯವಾಗಿ  ಘೋಷಿಸುವ ಪ್ರಮುಖ ಹೆಜ್ಜೆಯನ್ನು ಬುಧವಾರ ಇಟ್ಟಿದೆ. ಇದರೊಂದಿಗೆ 'ಮುಗ್ಲಿ-ಅಪ್ಸರಕೊಂಡ ಸಮುದ್ರ ಸಂರಕ್ಷಿತ ವಲಯ'ವಾಗಿ ಶೀಘ್ರದಲ್ಲೇ ಅಧಿಕೃತ ಘೋಷಣೆಯ ರೂಪ ಪಡೆಯಲಿದೆ. ಈ ಮಹತ್ವದ ಯೋಜನೆ ಈಗ ರಾಜ್ಯ ಸಚಿವ ಸಂಪುಟದ ಅಂತಿಮ ಅನುಮೋದನೆಗಾಗಿ ಕಾಯುತ್ತಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಕಾಲದಲ್ಲಿ ಈ ಪ್ರಸ್ತಾಪಕ್ಕೆ ಅನುಮೋದನೆ ದೊರಕಿದರೂ, ಕೋವಿಡ್-19 ಸಾಂಕ್ರಾಮಿಕದಿಂದಾಗಿ ಯೋಜನೆ ಮುಂದೂಡಲ್ಪಟ್ಟಿತ್ತು. ಇತ್ತೀಚೆಗೆ ಮರುಚರ್ಚೆಗೊಂಡ ಈ ಪ್ರಸ್ತಾವನೆಗೆ ಸರ್ವಾನುಮತ ಅನುಮೋದನೆ ಲಭಿಸಿದ್ದು, ಶೀಘ್ರ ಘೋಷಣೆಯಾಗುವ ನಿರೀಕ್ಷೆಯಿದೆ.
 

27

ಪ್ರಾಕೃತಿಕ ಸಂಪತ್ತಿನಿಂದ ಕೂಡಿರುವ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಅಪ್ಸರಕೊಂಡ ಪ್ರದೇಶವನ್ನು ಸಮುದ್ರ ಸಂರಕ್ಷಿತ ವಲಯವಾಗಿ ರಾಜ್ಯ ಸರ್ಕಾರ ಘೋಷಣೆ ಮಾಡಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ. ಪ್ರಕೃತಿ ಸಂರಕ್ಷಣಾ ಸಂಘದಿಂದ ಸಿದ್ಧಪಡಿಸಲಾದ 11 ಅಪಾಯದಲ್ಲಿರುವ ಅಥವಾ ಅಳಿವಿನಂಚಿನಲ್ಲಿರುವ ಪ್ರಜಾತಿಗಳನ್ನು ಉಳಿಸುವ ಉದ್ದೇಶದಿಂದ ಅಪ್ಸರಕೊಂಡ ರಾಜ್ಯದ ಮೊದಲ ಸಮುದ್ರ ಸಂರಕ್ಷಿತ ವಲಯ ಪ್ರದೇಶ ಎಂದು ಘೋಷಣೆಯಾಗುವ ದಿನ ಹತ್ತಿರಕ್ಕೆ ಬರುತ್ತಿದೆ. ಈ ಘೋಷಣೆಯೊಂದಿಗೆ ಭಾರತದ ಏಳನೇ ಸಮುದ್ರ ಅಭಯಾರಣ್ಯವಾಗಿ 'ಮುಗ್ಲಿ-ಅಪ್ಸರಕೊಂಡ' ಸ್ಥಾನ ಪಡೆದುಕೊಳ್ಳಲಿದೆ. ಇದಕ್ಕೂ ಮುನ್ನ ಭಾರತದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ 2 ಸಮುದ್ರ ಸಂರಕ್ಷಿತ ಪ್ರದೇಶಗಳು, ಗುಜರಾತ್, ಮಹಾರಾಷ್ಟ್ರ, ತಮಿಳುನಾಡು ಮತ್ತು ಒಡಿಶಾದಲ್ಲಿ ತಲಾ  ಒಂದು ಸಂರಕ್ಷಿತ ಪ್ರದೇಶಗಳು ಇದೆ.
 

37

ಎಲ್ಲಿದೆ ಪ್ರದೇಶ, ವಿಶೇಷವೇನು?
ಹೊನ್ನಾವರದಿಂದ 6 ಕಿಮೀ ಅರಬ್ಬೀ ಸಮುದ್ರದೊಳಗೆ ವಿಸ್ತರಣೆಯಾಗಲಿರುವ ಈ ಸಮುದ್ರ ಸಂರಕ್ಷಣಾ ವಲಯ ಒಟ್ಟು 5,960 ಹೆಕ್ಟೇರ್ ವ್ಯಾಪ್ತಿಯಲ್ಲಿದೆ. ಭೂಮಿಯ ಮೇಲ್ಭಾಗದ ಪ್ರದೇಶದಲ್ಲಿ 838.02 ಹೆಕ್ಟೇರ್ ಮತ್ತು ಸಮುದ್ರದಲ್ಲಿ 5124.3 ಹೆಕ್ಟೇರ್ ವ್ಯಾಪಿಸಿದೆ. ಇದು ಸಮುದ್ರದ ಆಲಿವ್- ರಿಡ್ಲಿ ಆಮೆ, ಮುತ್ತು ಪರಿಸರ, ಕೊಕ್ಕರೆ, ವಲಸೆ ಶಾರ್ಕ್, ಸಮುದ್ರ ಕುದುರೆ ಇವೇ ಮೊದಲಾದ ಪ್ರಾಣಿಗಳು ಮತ್ತು ಸಮುದ್ರ ಜೀವಿಗಳಿಗೆ ಅಶ್ರಯ ನೀಡಿದೆ. ಇವೆಲ್ಲವೂ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಬರುತ್ತದೆ.

ಈ ಸಮುದ್ರ ಸಂರಕ್ಷಿತ ಪ್ರದೇಶವು 8.2 ಕಿಮೀ ಉದ್ದವಾಗಿದ್ದು, ಅಧಿಕಾರಿಗಳು ಕಾಸರಕೋಡಿನ ಮರಳು ತೀರಗಳು ಆಲಿವ್ - ರಿಡ್ಲಿ ಆಮೆಯ ಸಂತತಿಗೆ ಹೆಚ್ಚಿನ ಪ್ರಾಶಸ್ತ್ಯದ ಜಾಗವಾಗಿದೆ.  2022ರಲ್ಲಿ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿದ್ದಾಗ ಸಮುದ್ರ ಸಂರಕ್ಷಿತ ವಲಯದ ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು. ಈಗಾಗಲೇ ವನ್ಯಜೀವಿ ಮಂಡಳಿಯಿಂದ ಅನುಮೋದನೆ ಪಡೆದಿದ್ದು, ಆದರೂ ಸಚಿವ ಸಂಪುಟದಲ್ಲಿ ಇದರ ಮಂಡನೆ ಆಗಿರಲಿಲ್ಲ.

47

ಏನಿದು ಅಪ್ಸರಕೊಂಡ ಸಂರಕ್ಷಿತ ವಲಯ?:
ಅಪ್ಸರಕೊಂಡ ವಲಯದಲ್ಲಿ ಅಪರೂಪವಾದ ಆಲಿವ್- ರಿಡ್ಲಿ ಆಮೆಗಳು ಹೆಚ್ಚು ಕಂಡುಬರುತ್ತವೆ. ಹೀಗಾಗಿ ಆಮೆಗಳ ಸಂತತಿ ಉಳಿವಿಗಾಗಿ ಅಪ್ಸರಕೊಂಡವನ್ನು ಸಂರಕ್ಷಿತ ವಲಯವಾಗಿ ಮಾಡುವ ಉದ್ದೇಶ ಹೊಂದಲಾಗಿದೆ. ಈ ಆಮೆಗಳು ನವೆಂಬರ್, ಡಿಸೆಂಬರ್‌ ಸಂತಾನೋತ್ಪತ್ತಿಗಾಗಿ ತೀರಕ್ಕೆ ಬಂದು ಮರಳಿನೊಳಗೆ ಮೊಟ್ಟೆ ಇಡುತ್ತವೆ. ಇಂಥ ಸಮಯದಲ್ಲಿ ಮೊಟ್ಟೆಗಳನ್ನು ರಕ್ಷಿಸಲು ಸಂರಕ್ಷಿತ ವಲಯ ಯೋಜನೆಯಡಿ ಆದ್ಯತೆ ನೀಡಲಾಗುತ್ತದೆ.

57

ಸಂರಕ್ಷಿತ ವಲಯ ಮಾಡುವುದರಿಂದ ಪ್ರವಾಸೋದ್ಯಮ, ವಾಣಿಜ್ಯ ಚಟುವಟಿಕೆ ಮತ್ತು ಮೀನುಗಾರಿಕೆಗೆ ನಿರ್ಬಂಧ ಹೇರಲಾಗುವುದಿಲ್ಲ. ಇವುಗಳೊಂದಿಗೆ ನೇತ್ರಾಣಿ ದ್ವೀಪದ ಸುತ್ತಲೂ 14 ಜಾತಿಯ ಹವಳದ ದಿಬ್ಬಗಳು, 50ಕ್ಕೂ ಹೆಚ್ಚು ಫೈಟೋಪ್ಲಾಂಕ್ಟನ್, 100ಕ್ಕೂ ಹೆಚ್ಚು ಝೂಪ್ಲಾಂಕ್ಟನ್ ಪ್ರಭೇದಗಳು, 2 ಜಾತಿಯ ಸಮುದ್ರ ಹುಲ್ಲು, 100ಕ್ಕೂ ಹೆಚ್ಚು ಕಡಲಕಳೆ ಜಾತಿಗಳು ಸಹ ಸೇರಿಕೊಂಡಿವೆ. ಈ ಸಮುದ್ರ ಅಭಯಾರಣ್ಯವು ಅನೇಕ ಅಪರೂಪದ ಹಾಗೂ ಸಂರಕ್ಷಣೆಗೆ ಪಾತ್ರವಾದ ಜಾತಿಗಳಿಗೆ ಆಶ್ರಯವಾಗಲಿದೆ. ಹಂಪ್‌ಬ್ಯಾಕ್ ತಿಮಿಂಗಿಲಗಳು, ಸ್ಪಾಟ್‌ಟೈಲ್ ಶಾರ್ಕ್‌ಗಳು, ಆಲಿವ್ ರಿಡ್ಲಿ ಆಮೆಗಳು, 80 ಕ್ಕೂ ಹೆಚ್ಚು ಸಮುದ್ರ ಪಕ್ಷಿ ಜಾತಿಗಳಿಗೆ ಆಶ್ರಯವಾಗಲಿದೆ. ಈ ಘೋಷಣೆಯೊಂದಿಗೆ ಭಾರತದ ಏಳನೇ ಸಮುದ್ರ ಅಭಯಾರಣ್ಯವಾಗಿ 'ಮುಗ್ಲಿ-ಅಪ್ಸರಕೊಂಡ' ಸ್ಥಾನ ಪಡೆದುಕೊಳ್ಳಲಿದೆ. 

67

ಮೀನುಗಾರಿಕೆಗೆ ತೊಂದರೆ ಆಗದು
ಗುಣವಂತೆಯ ಮುಗುಳಿಯಿಂದ ಹೊನ್ನಾವರದ ಪ್ರದೇಶವನ್ನು ಸಮುದ್ರ ಸಂರಕ್ಷಣಾ ವಲಯವಾಗಿ ನಿರ್ಮಿಸಲು ಯೋಚಿಸಲಾಗಿದೆ. ಇಲ್ಲಿ ಮುಗುಳಿ ಕಡಲ ತೀರದಲ್ಲಿ ಕಲ್ಲಿನ ಬಂಡೆಗಳು ಹೆಚ್ಚಿದೆ. ಇಲ್ಲಿ ಆಮೆಯು ಮೊಟ್ಟೆ ಇಡಲು ಸಾಧ್ಯವಿಲ್ಲ. ಕಾಸರಕೋಡಿನ ಟೊಂಕದಲ್ಲಿ ಆಮೆಯ ಸಂತತಿಯನ್ನು ಉಳಿಸುವ ಯೋಗ್ಯ ಸ್ಥಳವಿದೆ. ಪ್ರವಾಸೋದ್ಯಮ ಇಲಾಖೆಯ ಪ್ರಕಾರ ಹೊನ್ನಾವರದಿಂದ ಮುಗುಳಿಯ ಪ್ರದೇಶವನ್ನು ಸಂರಕ್ಷಿತ ವಲಯ ಎಂದು ಮಾಡಬೇಕು ಎಂದಿದೆ. ಆದರೆ ಅಲ್ಲಿನ ಎಲ್ಲ ಪ್ರದೇಶಗಳು ಆಮೆ ಮೊಟ್ಟೆ ಇಡಲು ಸರಿಯಾದ ಸ್ಥಳವಾಗಿಲ್ಲ. ಇನ್ನು ಮೀನುಗಾರರಿಗೂ ಅನುಕೂಲವಾಗುತ್ತದೆ. ಮೀನಿನ ವಿವಿಧ ಉತ್ಪನ್ನಗಳನ್ನು ಮಾರಾಟ ಮಾಡಬಹುದು. ಜತೆಗೆ ಮೀನುಗಾರರ ಮಹಿಳೆಯರಿಗೆ ಸ್ವ ಉದ್ಯೋಗವನ್ನು ನೀಡಬಹುದು. ಸಂರಕ್ಷಿತ ವಲಯ ಎಂದಾಕ್ಷಣ ಮೀನುಗಾರರ ಜಾಗಕ್ಕೆ ಯಾವುದೇ ಸಮಸ್ಯೆಗಳು ಉಂಟಾಗುವುದಿಲ್ಲ ಎನ್ನುತ್ತಾರೆ ಪರಿಸರ ತಜ್ಞ ಹಾಗೂ ವನ್ಯಜೀವಿ ಸಂರಕ್ಷಣಾಕಾರ ಎನ್.ಎಂ. ಗುರುಪ್ರಸಾದ್.
 

77

ತೊಂದರೆ ಆಗದಿರಲಿ:
ಅಪ್ಸರಕೊಂಡವನ್ನು ಸಮುದ್ರ ಸಂರಕ್ಷಿತ ವಲಯವಾಗಿ ಘೋಷಿಸುವುದರಿಂದ ಅನುಕೂಲ ಮತ್ತು ಅನಾನೂಕೂಲಗಳೆರಡು ಇವೆ. ಯೋಜನೆ ಜಾರಿಗೆ ತರುವುದಾದರೆ ಮೀನುಗಾರರನ್ನು ಯೋಜನೆಯಡಿ ಬಳಸಿಕೊಳ್ಳಬೇಕು. ಅಲ್ಲದೇ ಯೋಜನೆಯಿಂದ ಮೀನುಗಾರಿಕೆಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂಬುದು ಸ್ಥಳೀಯ ಮೀನುಗಾರರ ಆಶಯ.
 

Read more Photos on
click me!

Recommended Stories