ಈ ಹಿಂದೆ ನಗರದಲ್ಲಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಹಾಗೂ ಮೈಸೂರು ಕಾಗದ ಕಾರ್ಖಾನೆಗಳು ಆರಂಭಗೊಂಡ ಸಂದರ್ಭದಲ್ಲಿ ಅಂದಿನ ಮೈಸೂರು ಸಂಸ್ಥಾನ ಎರಡು ಕಾರ್ಖಾನೆಗಳಿಗೆ ಕಬ್ಬಿಣದ ಅದಿರು, ಸುಣ್ಣದ ಕಲ್ಲು, ಕಲ್ಲಿದ್ದಲು, ಬಿದಿರು ಸೇರಿದಂತೆ ಇನ್ನಿತರ ಕಚ್ಛಾ ಸಾಮ್ರಗಿಗಳನ್ನು ಪೂರೈಸಲು ರೈಲ್ವೆ ಸಂಪರ್ಕಗಳನ್ನು ಕಲ್ಪಿಸಿಕೊಟ್ಟಿತ್ತು. ನಂತರದ ದಿನಗಳಲ್ಲಿ ಈ ಸಂಪರ್ಕಗಳು ಕಣ್ಮರೆಯಾಗಿದ್ದು, ಇದರೊಂದಿಗೆ ಎರಡು ಕಾರ್ಖಾನೆಗಳ ಅವನತಿ ಸಹ ಆರಂಭಗೊಂಡಿತು. ಇದೀಗ ನಗರದಲ್ಲಿ ಹೊಸ ಕೈಗಾರಿಕೆಗಳಿಗೆ ಪೂರಕವಾಗುವಂತೆ ಹೊಸ ರೈಲ್ವೆ ಸಂಪರ್ಕಗಳಿಗೆ ಎದುರು ನೋಡುತ್ತಿದ್ದ ಇಲ್ಲಿನ ಕೈಗಾರಿಕೋದ್ಯಮಿಗಳಲ್ಲಿ ಭವಿಷ್ಯದ ಭರವಸೆಗಳನ್ನು ಮೂಡಿಸಿದೆ.
ಭದ್ರಾವತಿಯಿಂದ ಚಿಕ್ಕಜಾಜೂರುವರೆಗೆ ನೂತನ ರೈಲ್ವೆ ಮಾರ್ಗ ಆರಂಭಿಸುವ ಕುರಿತು ಈ ಬಾರಿ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ಘೋಷಿಸಿತ್ತು. ಸುಮಾರು 1,825 ಕೋಟಿ ರೂ. ವೆಚ್ಚದ 73 ಕಿ.ಮೀ ಉದ್ದದ ರೈಲ್ವೆ ಸಂಪರ್ಕಕ್ಕೆ ಅನುಮೋದನೆ ನೀಡಿತ್ತು. ಇದೀಗ ಕಾಮಗಾರಿ ಆರಂಭಿಸಲು ಅಂತಿಮ ಹಂತದ ಸರ್ವೆ ಕಾರ್ಯ ಕೈಗೊಳ್ಳಲು ಆದೇಶಿಲಾಗಿದೆ. ಮಲೆನಾಡು ಭಾಗಕ್ಕೆ ಬಯಲು ಸೀಮೆ ಹಾಗೂ ಅರೆ ಮಲೆನಾಡು ಭಾಗಗಳ ಸಂಪರ್ಕ ಕಲ್ಪಿಸಲು ಪ್ರಸ್ತುತ ಯಾವುದೇ ರೈಲ್ವೆ ಮಾರ್ಗವಿಲ್ಲ. ಈ ಹಿನ್ನೆಲೆಯಲ್ಲಿ ಸಂಸದ ಬಿ.ವೈ.ರಾಘವೇಂದ್ರ ಅವರು ಹೊಸ ರೈಲ್ವೆ ಮಾರ್ಗ ಅನ್ವೇಷಣೆ ಕೈಗೊಂಡು ಸಂಪರ್ಕ ಕಲ್ಪಿಸುವಂತೆ ಹಲವು ಬಾರಿ ರೈಲ್ವೆ ಸಚಿವರು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದರು. ಇದರ ಪರಿಣಾಮ ಹೊಸ ರೈಲ್ವೆ ಮಾರ್ಗ ಆರಂಭಗೊಳ್ಳುತ್ತಿದೆ.