ಮಂಜಿನ ನಗರಿ ಮಡಿಕೇರಿಯ ಈ ಐದು ಬಡಾವಣೆಗಳಲ್ಲಿ ಭೂಕುಸಿತದ ಆತಂಕ!

First Published | Jun 10, 2024, 7:28 PM IST

ಕೊಡಗು ಜಿಲ್ಲೆಗೆ ಭೂಕುಸಿತ ಮತ್ತು ಪ್ರವಾಹಗಳು 2018 ರಿಂದಲೂ ಬಿಟ್ಟು ಬಿಡದೆ ಕಾಡುತ್ತಿರುವ ಪೆಡಂಭೂತಗಳು. ಅದರಲ್ಲೂ ಈ ಬಾರಿಯೂ ವಾಡಿಕೆಗಿಂತ ಹೆಚ್ಚು ಅಂದರೆ ಶೇ 104 ರಷ್ಟು ಮಳೆಯಾಗುವುದಾಗಿ ಈಗಾಗಲೇ ಭಾರತೀಯ ಹವಾಮಾನ ಇಲಾಖೆ ಸೂಚಿಸಿದೆ. 

ಈ ಮಳೆ, ಮಂಜಿನ ನಗರಿ ಮಡಿಕೇರಿಗೆ ದೊಡ್ಡ ಗಂಡಾಂತರ ತಂದೊಡ್ಡುತ್ತದೆ ಎನ್ನುವ ಆತಂಕಕ್ಕೆ ಕಾರಣವಾಗಿದೆ. ಹೌದು ಜಿಲ್ಲೆಯಲ್ಲಿ ಈ ಬಾರಿಯೂ ಭೂಕುಸಿತ ಮತ್ತು ಪ್ರವಾಹ ಎದುರಾಗುವ ಸಾಧ್ಯತೆ ಇರುವುದು ಒಂದೆಡೆಯಾದರೆ, ಮತ್ತೊಂದೆಡೆ ಮಂಜಿನ ನಗರಿ ಮಡಿಕೇರಿಯ ಹಲವು ಬಡಾವಣೆಗಳಲ್ಲಿ ಭೂಕುಸಿತವಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ನಗರದ ಇಂದಿರಾ ನಗರ, ಚಾಮುಂಡೇಶ್ವರಿ ನಗರ, ಮಂಗಳಾದೇವಿ ನಗರ, ಪುಟಾಣಿ ನಗರ, ಜ್ಯೋತಿ ನಗರ ಮತ್ತು ತ್ಯಾಗರಾಜ ಕಾಲೋನಿ ಸೇರಿದಂತೆ ಹಲವೆಡೆ ಭೂಕುಸಿತವಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಈ ಕುರಿತು ಈಗಾಗಲೇ ಜಿಲ್ಲಾ ವಿಪತ್ತು ನಿರ್ವಹಣಾ ತಂಡ ಹಾಗೂ ಜಿಲ್ಲಾಡಳಿತ ಕೂಡ ಸಭೆ ನಡೆಸಿ ಒಂದಷ್ಟು ಪೂರ್ವ ಸಿದ್ಧತೆ ನಡೆಸಿಕೊಳ್ಳುವಂತೆ ಮಡಿಕೇರಿ ನಗರಸಭೆಗೆ ಸೂಚಿಸಿದೆಯಂತೆ. 
 

ಇಷ್ಟು ಬಡಾವಣೆಗಳ 300 ಕ್ಕೂ ಹೆಚ್ಚು ಮನೆಗಳು ತೊಂದರೆಗೆ ಈಡಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಇದು ಈಗ ಮಡಿಕೇರಿ ನಗರದ ಜನತೆಯನ್ನು ನಿದ್ದೆಗೆಡಿಸುವಂತೆ ಮಾಡಿದೆ. ಚಾಮುಂಡೇಶ್ವರಿ ನಗರ, ಇಂದಿರಾ ನಗರಗಳಲ್ಲಿ 2018 ರಿಂದಲೂ ಭೂಕುಸಿತವಾಗಿ ತೀವ್ರ ತೊಂದರೆಯ ಪರಿಸ್ಥಿತಿಯಲ್ಲಿ ಇವೆ ಎಂಬ ಕುಟುಂಬಗಳಿಗೆ ಈಗಾಗಲೇ ಕರ್ಣಂಗೇರಿ, ಕೆ.ನಿಡುಗಣೆ ಮತ್ತು ಜಂಬೂರುಗಳಲ್ಲಿ ಮನೆಗಳನ್ನು ನೀಡಲಾಗಿದೆ. ಆದರೂ ಮಂಗಳಾ ದೇವಿ ಮತ್ತು ಚಾಮುಂಡೇಶ್ವರಿ ನಗರಗಳಲ್ಲಿ ಇನ್ನೂ ಸಾಕಷ್ಟು ಮನೆಗಳು ಅಪಾಯದಲ್ಲಿವೆ. ಈ ಬಾರಿ ಮಳೆ ತೀವ್ರವಾಗಿ ಸುರಿದಲ್ಲಿ ಈ ಬಾರಿಯೂ ತೊಂದರೆ ಎದುರಾಗಬಹುದು ಎನ್ನುವ ಆತಂಕವಿದೆ. ಹೀಗಾಗಿಯೇ ಹಲವು ಬಡಾವಣೆಗಳ 300 ಕುಟುಂಬಗಳಿಗೆ ನಗರಸಭೆ ಸಿಬ್ಬಂದಿ ಮಳೆ ತೀವ್ರಗೊಂಡಲ್ಲಿ ಮನೆಯನ್ನು ಖಾಲಿ ಮಾಡಿ ಸುರಕ್ಷಿತ ಸ್ಥಳಗಳಿಗೆ ತೆರಳಬೇಕಾಗುತ್ತದೆ ಎಂದು ಈಗಾಗಲೇ ಮೌಖಿಕವಾಗಿ ಸೂಚಿಸಿದ್ದಾರೆ. ಒಂದು ವೇಳೆ ಅತೀ ಹೆಚ್ಚು ಮಳೆ ಸುರಿಯಲಾರಂಭಿಸಿ ತೊಂದರೆ ಎದುರಾಗಬಹುದು ಎಂದು ಖಚಿತವಾದಲ್ಲಿ ಕೂಡಲೇ ಅಂತಹ ಮನೆಗಳನ್ನು ಲಿಖಿತವಾಗಿಯೇ ನೋಟಿಸ್ ಕೊಟ್ಟು ಒತ್ತಾಯ ಪೂರ್ವಕವಾಗಿ ಖಾಲಿ ಮಾಡಿಸುತ್ತೇವೆ. ಮನೆ ಖಾಲಿ ಮಾಡುವುದಕ್ಕೆ ಜನರು ಮತ್ತು ವಾಹನಗಳ ಅಗತ್ಯವಿದ್ದರೆ ನಗರಸಭೆಯಿಂದಲೇ ಸೌಲಭ್ಯ ಕಲ್ಪಿಸಲಾಗುತ್ತದೆ ಎಂದು ಮಡಿಕೇರಿ ನಗರಸಭೆ ಆಯುಕ್ತ ವಿಜಯ ಅವರು ಹೇಳಿದ್ದಾರೆ. 
 

Latest Videos


ಈ ಕುರಿತು ಮಾತನಾಡಿರುವ ಚಾಮುಂಡೇಶ್ವರಿ ನಗರದ ನಿವಾಸಿ ಜಿಲೇಕಾಬಿ ಅವರು ಮಳೆಗಾಲ ಆರಂಭವಾದಾಗಲೆಲ್ಲಾ ನಗರಸಭೆಯವರು ಬಂದು ಈ ರೀತಿ ಒಂದು ನೋಟಿಸ್ ಕೊಟ್ಟು ಸುಮ್ಮನಾಗಿ ಬಿಡುತ್ತಾರೆ. ಇದಕ್ಕೆ ಬದಲಾಗಿ ಅಪಾಯದ ಸ್ಥಿತಿಯಲ್ಲಿ ಬದುಕುತ್ತಿರುವ ಮಡಿಕೇರಿ ನಗರದ ವಿವಿಧ ಬಡಾವಣೆಗಳ ಎಲ್ಲಾ ಕುಟುಂಬಗಳಿಗೆ ಶಾಶ್ವತವಾಗಿ ಸುರಕ್ಷಿತ ಸೂರು ಒದಿಸುವಂತೆ ಒತ್ತಾಯಿಸಿದ್ದಾರೆ.

ಒಟ್ಟಿನಲ್ಲಿ ಕೊಡಗು ಜಿಲ್ಲೆಯಲ್ಲಿ ಈ ಬಾರಿಯೂ ಅತೀ ಹೆಚ್ಚು ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಸೂಚಿಸಿದ್ದರೆ, ಮತ್ತೊಂದೆಡೆ ಮಡಿಕೇರಿ ನಗರದ ವಿವಿಧ ಬಡಾವಣೆಗಳಲ್ಲಿ ಭೂಕುಸಿತವಾಗುವ ಆತಂಕ ಎದುರಾಗಿರುವುದು ಎಲ್ಲರನ್ನೂ ಚಿಂತೆಗೀಡು ಮಾಡಿದೆ.

- ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್

click me!