ಭಾರತೀಯ ರೈಲ್ವೆಯು ದಕ್ಷಿಣ ಭಾರತದ ಎರಡು ಪ್ರಮುಖ ರೈಲು ಮಾರ್ಗಗಳಾದ ಬೆಂಗಳೂರು-ತುಮಕೂರು ಮತ್ತು ಮಹಬೂಬ್‌ನಗರ-ಸಿಕಂದರಾಬಾದ್-ಮೇಡ್ಚಲ್ ವಿಭಾಗಗಳಲ್ಲಿ ವಿದ್ಯುತ್ ಎಳೆತ ವ್ಯವಸ್ಥೆಯನ್ನು ಆಧುನೀಕರಿಸಲು 448 ಕೋಟಿ ರೂಪಾಯಿಗಳ ಯೋಜನೆಗೆ ಅನುಮೋದನೆ ನೀಡಿದೆ.
ದಕ್ಷಿಣ ಭಾರತದ ಪ್ರಮುಖ ರೈಲ್ವೆ ಕಾರಿಡಾರ್‌ಗಳಲ್ಲಿ ಹೆಚ್ಚುತ್ತಿರುವ ಜನದಟ್ಟಣೆ ಮತ್ತು ರೈಲು ವಿಳಂಬದ ಸಮಸ್ಯೆಗೆ ಶೀಘ್ರದಲ್ಲೇ ಮುಕ್ತಿ ಸಿಗಲಿದೆ. ದಕ್ಷಿಣ ಮಧ್ಯ ರೈಲ್ವೆ ಮತ್ತು ನೈಋತ್ಯ ರೈಲ್ವೆ ವ್ಯಾಪ್ತಿಯ ಎರಡು ಪ್ರಮುಖ ಮಾರ್ಗಗಳಲ್ಲಿ ವಿದ್ಯುತ್ ಎಳೆತ ವ್ಯವಸ್ಥೆಯನ್ನು (ಟ್ರಾಕ್ಷನ್ ಸಿಸ್ಟಮ್) ಆಧುನೀಕರಿಸಲು ಭಾರತೀಯ ರೈಲ್ವೆಯು 448 ಕೋಟಿ ರೂಪಾಯಿಗಳ ಯೋಜನೆಗೆ ಅನುಮೋದನೆ ನೀಡಿದೆ.
ದಕ್ಷಿಣ ಮಧ್ಯ ರೈಲ್ವೆಯ ಮಹಬೂಬ್‌ನಗರ-ಸಿಕಂದರಾಬಾದ್-ಮೇಡ್ಚಲ್ ವಿಭಾಗ ಹಾಗೂ ನೈಋತ್ಯ ರೈಲ್ವೆಯ ಬೆಂಗಳೂರು-ತುಮಕೂರು ವಿಭಾಗಗಳು ಈ ಯೋಜನೆಯಡಿ ನವೀಕರಣಗೊಳ್ಳಲಿವೆ. ರೈಲುಗಳ ಸಾಮರ್ಥ್ಯವನ್ನು ಹೆಚ್ಚಿಸುವುದು, ಕಾರ್ಯಾಚರಣೆಯಲ್ಲಿ ವಿಶ್ವಾಸಾರ್ಹತೆ ತರುವುದು ಮತ್ತು ಪ್ರಯಾಣಿಕ ಹಾಗೂ ಸರಕು ಸಾಗಣೆಗೆ ವೇಗ ನೀಡುವುದು ಈ ಹೆಜ್ಜೆಯ ಮುಖ್ಯ ಉದ್ದೇಶವಾಗಿದೆ.
27
ರೈಲ್ವೆ ಇಲಾಖೆ ಅನುಮೋದಿಸಿರುವ ಬದಲಾವಣೆಗಳೇನು?
ಈ ಯೋಜನೆಯ ಮೂಲಕ ಹಳೆಯ ವಿದ್ಯುತ್ ವ್ಯವಸ್ಥೆಯ ಜಾಗದಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಲಾಗುತ್ತಿದ್ದು, ಇದು ಭವಿಷ್ಯದ ಹೆಚ್ಚುವರಿ ಸಂಚಾರದ ಬೇಡಿಕೆಯನ್ನು ಸಮರ್ಥವಾಗಿ ನಿಭಾಯಿಸಲಿದೆ.
ರೈಲ್ವೆ ಸಚಿವಾಲಯವು ಎರಡೂ ಮಾರ್ಗಗಳಲ್ಲಿ ಸದ್ಯ ಚಾಲ್ತಿಯಲ್ಲಿರುವ 1x25 kV ವಿದ್ಯುತ್ ಎಳೆತ ವ್ಯವಸ್ಥೆಯನ್ನು ಅತ್ಯಾಧುನಿಕ 2x25 kV ವ್ಯವಸ್ಥೆಗೆ ಮೇಲ್ದರ್ಜೆಗೇರಿಸಲು ಹಸಿರು ನಿಶಾನೆ ತೋರಿಸಿದೆ. ಇಲಾಖೆಯ ಪ್ರಕಾರ, ಈ ಹೊಸ ತಂತ್ರಜ್ಞಾನವು ರೈಲುಗಳ ಸುಗಮ ಸಂಚಾರಕ್ಕೆ ಹೆಚ್ಚು ಸ್ಥಿರ ಹಾಗೂ ದಕ್ಷತೆಯಿಂದ ಕೂಡಿದ ವಿದ್ಯುತ್ ಸರಬರಾಜನ್ನು ಖಚಿತಪಡಿಸುತ್ತದೆ.
37
1. ಬೆಂಗಳೂರು-ತುಮಕೂರು ಮಾರ್ಗದ ಮಹತ್ವವೇನು?
ಬೆಂಗಳೂರು-ತುಮಕೂರು ರೈಲು ವಿಭಾಗವು ಪುಣೆ-ಹುಬ್ಬಳ್ಳಿ-ಚಿಕ್ಕಜಾಜೂರು-ಬೀರೂರು-ತುಮಕೂರು-ಬೆಂಗಳೂರು-ಸೇಲಂ- ಕನ್ಯಾಕುಮಾರಿ ಕಾರಿಡಾರ್‌ನ ಪ್ರಮುಖ ಭಾಗವಾಗಿದೆ. ಇದು ದಕ್ಷಿಣದ ಪ್ರಮುಖ ಆರ್ಥಿಕ ಮತ್ತು ಕೈಗಾರಿಕಾ ಕೇಂದ್ರಗಳನ್ನು ಸಂಪರ್ಕಿಸುವ ಅತ್ಯಂತ ಜನನಿಬಿಡ ನೆಟ್‌ವರ್ಕ್ (High Utilization Network - HUN Route-10) ಎನಿಸಿಕೊಂಡಿದೆ.
ಸುಮಾರು 120 ಹಳಿ ಕಿಲೋಮೀಟರ್‌ಗಳಷ್ಟು ವ್ಯಾಪಿಸಲಿರುವ ಈ ನವೀಕರಣ ಯೋಜನೆಯಿಂದಾಗಿ, ಕರ್ನಾಟಕ ಸೇರಿದಂತೆ ಇಡೀ ದಕ್ಷಿಣ ಭಾರತದಲ್ಲಿ ರೈಲುಗಳ ದಟ್ಟಣೆ ಕಡಿಮೆಯಾಗಲಿದೆ. ಅಲ್ಲದೆ, ಸಾರ್ವಜನಿಕರ ಪ್ರಯಾಣ ಹಾಗೂ ಸರಕು ಸಾಗಣೆ ಮತ್ತಷ್ಟು ಸುಗಮವಾಗಲಿದೆ.
ಮಹಬೂಬ್‌ನಗರ-ಸಿಕಂದರಾಬಾದ್-ಮೇಡ್ಚಲ್ ವಿಭಾಗವು ಧರ್ಮಾವರಂ, ಧೋನೆ, ಸಿಕಂದರಾಬಾದ್, ಮುದ್ಖೇಡ್, ಇಂದೋರ್ ಮತ್ತು ಅಜ್ಮೀರ್ ನಗರಗಳನ್ನು ಜೋಡಿಸುವ ಹೈ-ಡೆನ್ಸಿಟಿ ನೆಟ್‌ವರ್ಕ್ (ಅತಿ ಹೆಚ್ಚು ಜನದಟ್ಟಣೆಯ ಮಾರ್ಗ) ಆಗಿದೆ.
ಹೊಸ ಎಳೆತ ವ್ಯವಸ್ಥೆಯು ಈ ಮಾರ್ಗದ ಸಾಮರ್ಥ್ಯ ಮತ್ತು ದಕ್ಷತೆಯನ್ನು ಗಣನೀಯವಾಗಿ ಹೆಚ್ಚಿಸಲಿದೆ. ಇದರಿಂದ ಸರಕು ಸಾಗಣೆ ರೈಲುಗಳ ವೇಗ ಹೆಚ್ಚಲಿದ್ದು, ಈ ಭಾಗದ ವ್ಯಾಪಾರ ಮತ್ತು ಕೈಗಾರಿಕಾ ವಲಯಕ್ಕೆ ಭಾರಿ ನೆರವಾಗಲಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
57
ಪ್ರಯಾಣಿಕರಿಗೆ ಸಿಗುವ ಲಾಭಗಳೇನು?
ಸ್ಥಿರ ವಿದ್ಯುತ್ ಸರಬರಾಜು: ನವೀಕೃತ 2x25 kV ವ್ಯವಸ್ಥೆಯು ರೈಲುಗಳಿಗೆ ನಿರಂತರ ಹಾಗೂ ಬಲಿಷ್ಠ ವಿದ್ಯುತ್ ಸಂಪರ್ಕವನ್ನು ಒದಗಿಸುತ್ತದೆ. ತಾಂತ್ರಿಕ ಅಡಚಣೆಗಳು ಕಡಿಮೆಯಾಗುತ್ತವೆ.
ಹೆಚ್ಚಿನ ರೈಲುಗಳ ಸಂಚಾರ: ಮುಂಬರುವ ದಿನಗಳಲ್ಲಿ ಈ ಮಾರ್ಗಗಳಲ್ಲಿ ರೈಲ್ವೆ ಇಲಾಖೆಗೆ ಮತ್ತಷ್ಟು ಹೊಸ ರೈಲುಗಳನ್ನು ಓಡಿಸಲು ಸಾಧ್ಯವಾಗುತ್ತದೆ.
ಸಮಯ ಉಳಿತಾಯ: ಕಾರ್ಯಾಚರಣೆಯ ದಕ್ಷತೆ ಹೆಚ್ಚಳದಿಂದಾಗಿ ಪ್ರಯಾಣಿಕರು ನಿಗದಿತ ಸಮಯಕ್ಕೆ ಸರಿಯಾಗಿ ತಲುಪಬಹುದು ಹಾಗೂ ಸರಕು ಸಾಗಣೆಯೂ ವೇಗವಾಗಿ ನಡೆಯುತ್ತದೆ.
67
ಬೆಂಗಳೂರು - ತುಮಕೂರು ರೈಲು ಅಭಿವೃದ್ಧಿಗೆ ರೂ. 162.57 ಕೋಟಿ
ದಕ್ಷಿಣ ರೈಲ್ವೆ ಅಭಿವೃದ್ಧಿಗೆ ಒಟ್ಟು ರೂ. 447.58 ಕೋಟಿ ಅಂದರೆ ಸುಮಾರು 448 ಕೋಟಿ ಹೂಡಿಕೆ ಮಾಡಲಾಗುತ್ತಿದೆ. ರೈಲುಗಳ ಸಾಮರ್ಥ್ಯ, ದಕ್ಷತೆ ಮತ್ತು ಸಂಚಾರದ ವಿಶ್ವಾಸಾರ್ಹತೆಯನ್ನು ಹೆಚ್ಚಿಸುವ ಬೃಹತ್ ಜಂಟಿ ಯೋಜನೆ ಇದಾಗಿದೆ
ಇದರಲ್ಲಿ ನೈರುತ್ಯ ರೈಲ್ವೆ ವಿಭಾಗವಾದ ಬೆಂಗಳೂರು - ತುಮಕೂರು ರೈಲು ಅಭಿವೃದ್ಧಿಗೆ ರೂ. 162.57 ಕೋಟಿ ಮೀಸಲಿಡಲಾಗಿದೆ. ಇದು ದಕ್ಷಿಣ ಭಾರತದ ಪ್ರಮುಖ ಆರ್ಥಿಕ ಮತ್ತು ಕೈಗಾರಿಕಾ ಕೇಂದ್ರಗಳನ್ನು ಸಂಪರ್ಕಿಸುವ ನಿರಂತರ ಕಾರ್ಯನಿರತ ಕಾರಿಡಾರ್.
77
ದಕ್ಷಿಣ ಮಧ್ಯ ರೈಲ್ವೆ ಅಭಿವೃದ್ಧಿಗೆ ರೂ. 285.01 ಕೋಟಿ
ಮಹಬೂಬ್‌ನಗರ - ಸಿಕಂದರಾಬಾದ್ - ಮೇಡ್ಚಲ್ ದಕ್ಷಿಣ ಮಧ್ಯ ರೈಲ್ವೆ (South Central Railway) ವಿಭಾಗಕ್ಕೆ ಸೇರಿದ್ದು, ರೂ. 285.01 ಕೋಟಿ ಹೂಡಿಕೆ ಮಾಡಲಾಗಿದೆ. ಅತಿ ಹೆಚ್ಚು ಜನದಟ್ಟಣೆ ಹೊಂದಿರುವ ಮಾರ್ಗವಾಗಿದ್ದು, ಭಾರೀ ಪ್ರಮಾಣದ ಪ್ರಯಾಣಿಕ ಹಾಗೂ ಸರಕು ಸಾಗಣೆ ಅವಲಂಬಿತವಾದ ಮಾರ್ಗವಾಗಿದೆ.
ದಿನನಿತ್ಯ ರೈಲು ಪ್ರಯಾಣ ಮಾಡುವ ಸಾರ್ವಜನಿಕರಿಗೆ ಹಾಗೂ ವಾಣಿಜ್ಯ ಉದ್ದೇಶಗಳಿಗಾಗಿ ರೈಲ್ವೆಯನ್ನು ನೆಚ್ಚಿಕೊಂಡಿರುವ ಉದ್ಯಮಗಳಿಗೆ ಈ ಹೂಡಿಕೆಯು ವರದಾನವಾಗಲಿದೆ. ಇದು ಮುಂಬರುವ ವರ್ಷಗಳಲ್ಲಿ ದಕ್ಷಿಣ ಭಾರತದಲ್ಲಿ ಅತ್ಯಂತ ಬಲಿಷ್ಠ ಮತ್ತು ಸುಸಜ್ಜಿತ ರೈಲ್ವೆ ಜಾಲವನ್ನು ನಿರ್ಮಿಸಲು ದಾರಿದೀಪವಾಗಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ