Photo Gallery | ಹುಬ್ಬಳ್ಳಿಯಲ್ಲಿದೆ ಉತ್ತರ ಕರ್ನಾಟಕದ ಮೊದಲ ರೈಲ್ವೆ ಮ್ಯೂಸಿಯಂ!

First Published | Dec 30, 2024, 9:48 PM IST

ಹುಬ್ಬಳ್ಳಿಯಲ್ಲಿ ಸ್ಥಾಪಿಸಲಾಗಿರುವ ಉತ್ತರ ಕರ್ನಾಟಕದ ಪ್ರಥಮ ರೈಲು ಮ್ಯೂಸಿಯಂ ಪ್ರವಾಸಿಗರ ಆಕರ್ಷಣೆಯ ತಾಣವಾಗಿದೆ. ರೈಲು ಮ್ಯೂಸಿಯಂನಲ್ಲಿ ಏನೇನಿದೆ ಅನ್ನೋದು ಫೋಟೊಗಳ ಸಹಿತ ಇಲ್ಲಿ ವಿವರಿಸಲಾಗಿದೆ.

- ಮಹೇಶ ಅರಳಿ

ಹುಬ್ಬಳ್ಳಿ ರೈಲ್ವೆ ಮ್ಯೂಸಿಯಂ

ಭಾರತದ ಸಂಚಾರ ಕ್ಷೇತ್ರದಲ್ಲಿ ನೂರಾರು ವರ್ಷಗಳಿಂದ ಉತ್ತಮ ಸೇವೆಯ ಮೂಲಕ ರೈಲ್ವೆ ವಿಶಿಷ್ಟ ಛಾಪು ಮೂಡಿಸಿದೆ. ಇಂದಿಗೂ ಬಹಳಷ್ಟು ಮಂದಿ ಸುರಕ್ಷಿತ ಮತ್ತು ಸುಖಕರ ಸಂಚಾರಕ್ಕಾಗಿ ರೈಲನ್ನೆ ನೆಚ್ಚಿಕೊಂಡಿದ್ದಾರೆ. 
 

ರೈಲ್ವೆ ಮ್ಯೂಸಿಯಂ

ಮೊದ ಮೊದಲು ಕಲ್ಲಿದ್ದಲಿನಿಂದ ಓಡುತ್ತಿದ್ದ ಉಗಿಬಂಡಿ ವಿದ್ಯುತ್ ಚಾಲಿತವಾಗಿ ಸಂಚರಿಸುವಷ್ಟು ಪ್ರಗತಿ ಸಾಧಿಸಿದೆ. ಆರಂಭದಲ್ಲಿ ಅಂದಾಜು ಗಂಟೆಗೆ 50ರಿಂದ 60 ಕಿಮೀ ಓಡುತ್ತಿದ್ದ ರೈಲುಗಳು ಇಂದು ಗಂಟೆಗೆ 160 ಕಿಮೀಗೂ ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿವೆ. ಕಾಲಕ್ಕೆ ತಕ್ಕಂತೆ ತಂತ್ರಜ್ಞಾನ ಅಳವಡಿಸಿಕೊಂಡು ಪ್ರಯಾಣಿಕರ ಸುಖಕರ ಪ್ರಯಾಣಕ್ಕೆ ನಿರಂತರವಾಗಿ ಶ್ರಮಿಸುತ್ತಿದೆ. ಹೀಗಾಗಿ ಪ್ರಯಾಣಕ್ಕೆ ಬಹಳಷ್ಟು ಮಂದಿಗೆ ರೈಲುಗಳೇ ಅಚ್ಚುಮೆಚ್ಚು. ಪ್ರಯಾಣಿಕರು ಮಾತ್ರವಲ್ಲದೇ ಸರಕು ಸಾಗಾಟದಲ್ಲೂ ರೈಲ್ವೆ ಸೈ ಎನಿಸಿಕೊಂಡಿದೆ. ಅಷ್ಟೇ ಅಲ್ಲದೇ 20 ಲಕ್ಷಕ್ಕೂ ಅಧಿಕ ಮಂದಿಗೆ ರೈಲ್ವೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಉದ್ಯೋಗ ನೀಡುವ ಮೂಲಕ ಲಕ್ಷಾಂತರ ಮಂದಿಗೆ ಅನ್ನವೂ ನೀಡಿದೆ.

Tap to resize

ರೈಲ್ವೆ ಇತಿಹಾಸ

ಭಾರತದ ಸಾರಿಗೆ ರಂಗದಲ್ಲಿ ಹೆಗ್ಗುರುತು ಮೂಡಿಸಿರುವ ರೈಲ್ವೆ ಇತಿಹಾಸವೂ ಸಾಕಷ್ಟು ಕುತೂಹಲಕಾರಿಯಾಗಿದೆ. ರೈಲು ವ್ಯವಸ್ಥೆಯ ಇತಿಹಾಸ ತಿಳಿಸಿಕೊಡುವ ಮ್ಯೂಜಿಯಂ ಹುಬ್ಬಳ್ಳಿಯಲ್ಲಿ 4150 ಚದರ ಮೀಟರ್ ಜಾಗದಲ್ಲಿ ತಲೆಯೆತ್ತಿದೆ. ಇಲ್ಲಿನ ರೈಲು ನಿಲ್ದಾಣದ ಸನಿಹದಲ್ಲಿ 2020ರ ಆ. 9ರಂದು ಉತ್ತರ ಕರ್ನಾಟಕದ ಪ್ರಥಮ ರೈಲ್ವೆ ಮ್ಯೂಜಿಯಂ ಚಾಲನೆ ನೀಡಲಾಯಿತು. ಪ್ರತಿದಿನ ನೂರಾರು ಮಂದಿಗೆ ಇಲ್ಲಿಗೆ ಭೇಟಿ ನೀಡಿ ರೈಲ್ವೆಯ ಇತಿಹಾಸ ಅರಿತುಕೊಳ್ಳುತ್ತಿದ್ದಾರೆ.
 

ರೈಲು ಇತಿಹಾಸ:

ಈ ಮ್ಯೂಜಿಯಂನಲ್ಲಿ ಭಾರತದ ರೈಲ್ವೆಯ ಇತಿಹಾಸ, ಆರಂಭದಲ್ಲಿ ರೈಲುಗಳು ಹೇಗಿದ್ದವು, ಸ್ಟೇಷನ್ಗಳು ಯಾವ ರೀತಿ ಇದ್ದವು, ಬೋಗಿಗಳು, ಹಳಿಗಳ ವಿನ್ಯಾಸ ಹೇಗೆ ಇದ್ದವು? ಆಗಿನ ಕಾಲದಲ್ಲಿ ಯಂತ್ರೋಪಕರಣಗಳು ಯಾವ ತೆರನಾಗಿದ್ದವು? ರೈಲುಗಳ ಆಗಮನ ಮತ್ತು ನಿರ್ಗಮನ ಸಂದೇಶವನ್ನು ರವಾನಿಸುವ ಸಾಧನಗಳು, ಸಿಗ್ನಲ್ಗಳು ಹೇಗೆ ಕಾರ್ಯ ನಿರ್ವಹಿಸುತ್ತಿದ್ದವು? ಸ್ಟೇಷನ್ ಮಾಸ್ತರಗಳು ಹೇಗೆ ಕಾರ್ಯ ನಿರ್ವಹಿಸುತ್ತಿದ್ದರು? ಹೀಗೆ ಹತ್ತೆಂಟು ಮಾಹಿತಿಗಳನ್ನು ಮ್ಯೂಜಿಯಂನಲ್ಲಿ ಅರಿತುಕೊಳ್ಳಬಹುದು. ಒಟ್ಟಾರೆ ಕುತೂಹಲದ ಮನಸ್ಸುಗಳಿಗೆ ಭರಪೂರ ಮಾಹಿತಿ ಕಣಜ ಸಿಗುವುದು ಪಕ್ಕಾ.

ಮ್ಯೂಸಿಯಂನಲ್ಲಿ ಏನೇನಿದೆ?

ರೈಲು ವಸ್ತು ಸಂಗ್ರಹಾಲಯದಲ್ಲಿ ಎರಡು ಕೊಠಡಿಗಳಲ್ಲಿ ರೈಲುಗಳ ಅಪರೂಪದ ಚಿತ್ರಗಳಿವೆ. ಅದೇ ಕೊಠಡಿಗಳಲ್ಲಿ ಈ ಹಿಂದೆ ಉಪಯೋಗಿಸುತ್ತಿದ್ದ ರೈಲುಗಳ ಯಂತ್ರೋಪಕರಣಗಳಿವೆ. ಮುಖ್ಯವಾಗಿ ಸಿಗ್ನಲ್ ದೀಪಗಳು, ಸಂವಹನ ಸಾಧನಗಳು, ಸರಕುಗಳ ತೂಕ ಮಾಡುವ ಯಂತ್ರಗಳು, ಅಪರೂಪದ ರೈಲ್ವೆ ಟಿಕೆಟ್ಗಳು ಕಾಣಸಿಗುತ್ತವೆ. 
 

ಹುಬ್ಬಳ್ಳಿ ರೈಲ್ವೆ ಮ್ಯೂಸಿಯಂ

ಹೊರಾಂಗಣದಲ್ಲಿ ರೈಲುಗಳ ಪ್ರಯಾಣಿಕ ಹಾಗೂ ಸರಕು ಬೋಗಿಗಳು, ಹಳಿಗಳನ್ನು ಪ್ರದರ್ಶನಕ್ಕಿಡಲಾಗಿದೆ. ಚಿಣ್ಣರು ಸಂತೋಷ ಪಡಲು ಅನುಕೂಲವಾಗುವಂತೆ ಪುಟಾಣಿಗಳ ರೈಲು ಸಂಚರಿಸುವುದು ಇಲ್ಲಿನ ಮತ್ತೊಂದು ವಿಶೇಷವಾಗಿದೆ. 

ಸೆಲ್ಫಿ ಪಾಯಿಂಟ್

ರೈಲ್ವೆ ಇತಿಹಾಸ ಅರಿಯುವುದರ ಜತೆಗೆ ಹಳೆಯ ರೈಲು ಬೋಗಿಗಳ ಹೊರಗೆ ಮತ್ತು ಒಳಗೆ ನಿಂತು ಸೆಲ್ಫಿ ತೆಗೆಸಿಕೊಂಡು ಸಂಭ್ರಮಿಸಬಹುದು. ವಾರಾಂತ್ಯದಲ್ಲಿ ಕುಟುಂಬ ಸಮೇತ ಬಂದರೆ ಮಾಹಿತಿ ಅರಿಯುವುದರ ಜತೆಗೆ ಮನಸ್ಸು ಖುಷಿ ಆಗುವುದು ಗ್ಯಾರಂಟಿ. ಅಲ್ಲದೇ ಶಾಲಾ ವಿದ್ಯಾರ್ಥಿಗಳು ಕಿರು ಪ್ರವಾಸ ಕೈಗೊಳ್ಳಲು ಉತ್ತಮ ಸ್ಥಳವಾಗಿದೆ. 

Latest Videos

click me!