37 ಎಕರೆ ಜಮೀನು: ಆ ಹಣದಲ್ಲಿಯೇ ಬೋರ್‌ವೆಲ್ ಕೊರೆಸಿದರು. ಮತ್ತಷ್ಟು ಜಮೀನು ಖರೀದಿಸಿದರು. ಈಗ ಅವರ ಹೆಸರಿನಲ್ಲಿ 37 ಎಕರೆ ಜಮೀನಿದೆ. ಅದರಲ್ಲಿ 7 ಎಕರೆಯಲ್ಲಿ ನಾನಾ ದೇಸೀಯ ತಳೀಯ ಭತ್ತಗಳನ್ನು ಬೆಳೆಯುತ್ತಿದ್ದಾರೆ. ಜತೆಗೆ 18 ಎಕರೆ ಅಡಕೆ, 7 ಎಕರೆ ಮಾವು ಹಾಕಿದ್ದಾರೆ. 2.5 ಸಾವಿರ ಸಾಗವಾನಿ ಗಿಡಗಳನ್ನು ನೆಟ್ಟಿದ್ದಾರೆ. 350 ತೆಂಗಿನ ಮರಗಳನ್ನು ಬೆಳೆಸಿದ್ದಾರೆ. 10 ಎಕರೆಯಲ್ಲಿ ನರ್ಸರಿ ಮಾಡಿ ನಾನಾ ಬಗೆಯ ಗಿಡಗಳನ್ನು ಬೆಳೆಸಿ ಮಾರಾಟ ಮಾಡುತ್ತಾರೆ. ಗ್ರೀನ್ ಹೌಸ್ ಸ್ಥಾಪಿಸಿ ಅದರಲ್ಲೂ ವಿವಿಧ ಬೆಳೆಗಳನ್ನು ಬೆಳೆಯುತ್ತಾರೆ. ಇವನ್ನೆಲ್ಲ ಸಂಪೂರ್ಣವಾಗಿ ಸಾವಯವ ವಿಧಾನದಲ್ಲೇ ಬೆಳೆಯುತ್ತಿದ್ದಾರೆ. ಎರೆಹುಳು ಗೊಬ್ಬರ ಮತ್ತು ಜೀವಾಮೃತವನ್ನು ತಾವೇ ತಯಾರಿಸುತ್ತಾರೆ. ಅವುಗಳನ್ನು ಅಗತ್ಯಕ್ಕೆ ತಕ್ಕಂತೆ ಬೆಳೆಗಳಿಗೆ ನೀಡುತ್ತಾರೆ. ಇತ್ತೀಚೆಗೆ ಬಯೋ ಗೊಬ್ಬರ ಘಟಕವನ್ನು ಸ್ಥಾಪಿಸಿದ್ದಾರೆ. ಜಮೀನಿನ ಕಸ ಕಡ್ಡಿ, ಸಗಣಿ, ಜಾನುವಾರುಗಳ ಮೂತ್ರವನ್ನು ಇದಕ್ಕೆ ಹಾಕಿ ದ್ರವ ಗೊಬ್ಬರ ತಯಾರಿಸಿ ಬೆಳೆಗಳಿಗೆ ನೀಡುತ್ತಿದ್ದಾರೆ. ಜಮೀನಿನಲ್ಲಿ ನಿತ್ಯ ಏಳೆಂಟು ಜನ ಕೆಲಸ ಮಾಡುತ್ತಾರೆ. ಇವರ ಕೃಷಿ ಕೈಂಕರ್ಯ ನೋಡಿ ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳೇ ಬೆರಗುಗೊಂಡಿದ್ದಾರೆ. ಕೃಷಿಯಿಂದ ಲಾಭ ಇಲ್ಲ ಅನ್ನೋರಿಗೆ ಮುತ್ತಣ್ಣ ಅವರು ಸಾಧನೆಯ ಮೂಲಕ ಉತ್ತರ ಕೊಟ್ಟಿದ್ದಾರೆ.