ಕಂಡೋರ ಹೆಂಡ್ತಿ ರೀಲ್ಸ್ ಮಾಡೋದನ್ನ ಕದ್ದು ನೋಡಿದ ಕ(ಮ)ಲಾಕರ ಗುರೂಜಿ ಈಗ ಕಂಬಿ ಹಿಂದೆ!

Published : Feb 04, 2026, 05:40 PM IST

ಖ್ಯಾತ ಟಿವಿ ಜ್ಯೋತಿಷಿ ಕಮಲಾಕರ್ ಭಟ್, ರೀಲ್ಸ್ ಮಾಡುವ ವಿವಾಹಿತೆ ಸುಚಿತ್ರಾಳ ವ್ಯಾಮೋಹಕ್ಕೆ ಬಿದ್ದು ಅನೈತಿಕ ಸಂಬಂಧ ಬೆಳೆಸಿಕೊಂಡಿದ್ದರು. ಈ ಸಂಬಂಧವು ಘೋರ ದುರಂತಕ್ಕೆ ಕಾರಣವಾಗಿ, ಮಹಿಳೆಯ ಸಂಬಂಧಿಕರ ಮೇಲೆ ನಡೆದ ದಾಳಿಯಲ್ಲಿ ಓರ್ವ ವ್ಯಕ್ತಿ ಕೊಲೆಯಾಗಿದ್ದು, ಇದೀಗ ಜ್ಯೋತಿಷಿ ಕಂಬಿ ಎಣಿಸುತ್ತಿದ್ದಾರೆ.

PREV
17

ಯಾವಾಗಲೂ ರೀಲ್ಸ್ ಮಾಡುತ್ತಾ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತಿದ್ದ ಕಂಡೋರ ಹೆಂಡತಿಯನ್ನು ನೋಡಿದ ಬೆಳ್ಳಂಬೆಳಗ್ಗೆ ಜ್ಯೋತಿಷ್ಯ ಹೇಳುವ ಗುರೂಜಿ ಕಮಲಾಕರ್ ಭಟ್ ಇದೀಗ ಕಂಬಿ ಹಿಂದೆ ಬಿದ್ದಿದ್ದಾರೆ. 

27

ಮುಂಜಾನೆ ಟಿವಿ ಪರದೆಯ ಮೇಲೆ ಕುಳಿತು ಭವಿಷ್ಯದ ಮಾತುಗಳನ್ನಾಡುತ್ತಾ, ಕೋಟ್ಯಂತರ ಜನರಿಗೆ ಉಪದೇಶ ನೀಡುತ್ತಿದ್ದ ಆ ಮುಖದ ಹಿಂದೆ ಇಷ್ಟೊಂದು ಕ್ರೌರ್ಯ ಅಡಗಿದೆ ಎಂದು ಯಾರೂ ಊಹಿಸಿರಲಿಲ್ಲ. ದಿನಕ್ಕೆ 700 ಜನರಿಗೆ ಅನ್ನದಾನ ಮಾಡುತ್ತಿದ್ದ 'ಪುಣ್ಯವಂತ'ನ ಅಸಲಿ ಮುಖವಾಡ ಕಳಚಿದೆ. 'ರೀಲ್ಸ್' ಹುಚ್ಚು ಹತ್ತಿಸಿಕೊಂಡಿದ್ದ ವಿವಾಹಿತ ಮಹಿಳೆಯ ವ್ಯಾಮೋಹಕ್ಕೆ ಬಿದ್ದ ಖ್ಯಾತ ಜ್ಯೋತಿಷಿ ಕಮಲಾಕರ್ ಭಟ್, ಈಗ ತನ್ನ ಭವಿಷ್ಯವನ್ನು ತಾನೇ ಕತ್ತಲಾಗಿಸಿಕೊಂಡು ಜೈಲು ಕಂಬಿ ಎಣಿಸುತ್ತಿದ್ದಾನೆ. ಈ ಅನೈತಿಕ ಸಂಬಂಧದ ಬೆಂಕಿ ಒಂದು ಜೀವವನ್ನು ಬಲಿಪಡೆದಿದ್ದು, ಸಮಾಜವನ್ನೇ ಬೆಚ್ಚಿ ಬೀಳಿಸಿದೆ.

37

ಸಿದ್ದಾಪುರದ ಮೂಲದ ಕಮಲಾಕರ್ ಭಟ್ ಸಣ್ಣ ವಯಸ್ಸಿನಲ್ಲಿ ಬಡತನದಿಂದ ಬೆಳೆದು ಬಂದವರು. ಕೇರಳದಲ್ಲಿ ವೇದ ಅಧ್ಯಯನ ಮಾಡಿ, ಅರಸೀಕೆಯ ಮುಸ್ಲಿಂ ಕಾಲೇಜಿನಲ್ಲಿ ಸಂಸ್ಕೃತ ಪಾಠ ಮಾಡಿದ್ದ ಈತ, ನಂತರ ಜ್ಯೋತಿಷ್ಯವನ್ನೇ ವೃತ್ತಿ ಮಾಡಿಕೊಂಡಿದ್ದ. 'ನಿತ್ಯಪೂಜೆ ಭಿಕ್ಷಾ ಪಾತ್ರೆ' ಎಂಬ ಅಭಿಯಾನದ ಮೂಲಕ ಹಸಿದವರಿಗೆ ಅನ್ನ ನೀಡುತ್ತಿದ್ದ ಈತನನ್ನು ಜನ 'ಗುರೂಜಿ' ಎಂದೇ ಕರೆಯುತ್ತಿದ್ದರು. ಟಿವಿ ವಾಹಿನಿಗಳಲ್ಲಿ 12 ರಾಶಿಗಳ ಫಲ ಹೇಳುತ್ತಾ ಫೇಮಸ್ ಆಗಿದ್ದ ಈತ, ಈಗ ಕೊಲೆಯ ಆರೋಪ ಹೊತ್ತು ನಿಂತಿದ್ದಾನೆ.

47

ಈ ಪ್ರಕರಣದ ಕೇಂದ್ರಬಿಂದು ಸುಚಿತ್ರಾ. ಈಕೆ ಶಿವಮೊಗ್ಗ ಮೂಲದವಳು, 20 ವರ್ಷಗಳ ಹಿಂದೆ ಸಿದ್ದಾಪುರದ ಮಹೇಶ್ ನಾಯ್ಕ್ ಎಂಬುವವರನ್ನು ಮದುವೆಯಾಗಿದ್ದಳು. ಇಬ್ಬರು ಹೆಣ್ಣುಮಕ್ಕಳಿದ್ದ ಸುಂದರ ಸಂಸಾರ ಇದಾಗಿತ್ತು. ಗಂಡ ಮಹೇಶ್ ಬೆಂಗಳೂರಿನ ಹೋಟೆಲ್‌ನಲ್ಲಿ ಕೆಲಸಕ್ಕೆ ಸೇರಿದಾಗ, ಇತ್ತ ಸುಚಿತ್ರಾಗೆ ಸೋಷಿಯಲ್ ಮೀಡಿಯಾ ಮತ್ತು 'ರೀಲ್ಸ್' ಗೀಳು ಹತ್ತಿತ್ತು. ಇದೇ ಸಮಯದಲ್ಲಿ ಈಕೆ ಜ್ಯೋತಿಷಿ ಕಮಲಾಕರ್ ಭಟ್ ಕಚೇರಿಯಲ್ಲಿ ಕೆಲಸಕ್ಕೆ ಸೇರುತ್ತಾಳೆ. ಹೆಂಡತಿಯನ್ನು ಕಳೆದುಕೊಂಡು ಒಂಟಿಯಾಗಿದ್ದ ಜ್ಯೋತಿಷಿ, ಸುಚಿತ್ರಾಳ ರೀಲ್ಸ್ ನೋಡಿ ಮರುಳಾಗಿ ಆಕೆಯೊಂದಿಗೆ ಅನೈತಿಕ ಸಂಬಂಧ ಬೆಳೆಸಿದ್ದನು.

57

ಆರು ತಿಂಗಳ ಹಿಂದೆ ಮಕ್ಕಳನ್ನೂ ಕರೆದುಕೊಂಡು ಜ್ಯೋತಿಷಿಯ ಮನೆ ಸೇರಿದ ಸುಚಿತ್ರಾ, ಗಂಡನನ್ನೂ ಮರೆತು ಸಂಸಾರ ಹೂಡಿದ್ದಳು. ಆದರೆ ಜ್ಯೋತಿಷಿಯ ಮನೆಯಲ್ಲಿ ಮಕ್ಕಳಿಗೆ ಟಾರ್ಚರ್ ಕೊಡಲಾರಂಭಿಸಿದಾಗ, ದೊಡ್ಡ ಮಗಳು ಸುಮಶ್ರೀ ರಹಸ್ಯವಾಗಿ ತನ್ನ ತಂದೆ ಮಹೇಶ್‌ಗೆ ಮೆಸೇಜ್ ಮಾಡುತ್ತಾಳೆ. 'ಅಪ್ಪಾ, ನಮ್ಮನ್ನು ಇಲ್ಲಿಂದ ರಕ್ಷಿಸು, ಇಲ್ಲದಿದ್ದರೆ ಇವರು ನಮಗೆ ವಿಷ ಹಾಕುತ್ತಾರೆ' ಎಂದು ಅಂಗಲಾಚುತ್ತಾಳೆ. ಮಗಳ ರಕ್ಷಣೆಗಾಗಿ ಧಾವಿಸಿದ ಮಹೇಶ್, ಮಗಳನ್ನು ತನ್ನ ಅಣ್ಣ ವಸಂತ್ ನಾಯ್ಕ್ ಮನೆಯಲ್ಲಿ ಇರಿಸುತ್ತಾನೆ.

67

ತನ್ನ ಕೈಯಿಂದ ಜಾರಿಹೋದ ಸುಚಿತ್ರಾಳ ಮಗಳನ್ನು ಮತ್ತೆ ಪಡೆಯಲು ಜ್ಯೋತಿಷಿ ಕಮಲಾಕರ್ ಭಟ್ 'ಡೆತ್ ಸ್ಕ್ವಾಡ್'ನಂತೆ ದಾಳಿ ನಡೆಸಿದ್ದಾನೆ. ಐವರು ಗೂಂಡಾಗಳನ್ನು ಕರೆದುಕೊಂಡು ಹೋಗಿ ವಸಂತ್ ನಾಯ್ಕ್ ಅವರ ಮನೆಯ ಮೇಲೆ ದಾಳಿ ಮಾಡಿದ್ದಾನೆ. ಈ ಭೀಕರ ಹಲ್ಲೆಯಲ್ಲಿ ವಸಂತ್ ನಾಯ್ಕ್ (43) ಸ್ಥಳದಲ್ಲೇ ಪ್ರಾಣ ಕಳೆದುಕೊಂಡರೆ, ಗಂಡ ಮಹೇಶ್ ಮತ್ತು ನೆರೆಮನೆಯ ಯುವಕ ಕುಮಾರ್ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.

77

ದಿನವೂ ಅನ್ನ ನೀಡುತ್ತಿದ್ದ ಕೈಗಳು ಅಂದು ರಕ್ತದ ಓಕುಳಿಯಾಡಿದ್ದವು. ಪ್ರಸ್ತುತ ಸಿದ್ದಾಪುರ ಪೊಲೀಸರು (FIR: 23/26) ಜ್ಯೋತಿಷಿ ಕಮಲಾಕರ್ ಭಟ್, ಸುಚಿತ್ರಾ, ಆಕೆಯ ತಂದೆ ಲೋಕನಾಥ್ ಸೇರಿದಂತೆ ಏಳು ಜನರನ್ನು ಬಂಧಿಸಿದ್ದಾರೆ. ಧರ್ಮೋಪದೇಶ ನೀಡುವವರ ನೈಜ ಮುಖ ಹೇಗಿರುತ್ತದೆ ಎಂಬುದಕ್ಕೆ ಈ ಪ್ರಕರಣ ಕನ್ನಡಿಯಂತಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories