ಆದರೆ ಸಂಜೆ ಆರು ಗಂಟೆಯಾಯಿತ್ತೆಂದರೆ ಈ ಬೋಟುಗಳು ಕೂಡ ಬಂದ್ ಆಗುತ್ತವೆ. ಅಲ್ಲಿಗೆ ಅವರು ಬದುಕನ್ನು ಸಂಪೂರ್ಣ ಜೈಲು ಬಂಧಿಗಳಂತೆ ಅನುಭವಿಸಬೇಕು. 40 ಕ್ಕೂ ಹೆಚ್ಚು ಕುಟುಂಬಗಳಿರುವ ಆದಿವಾಸಿ ಬುಡಕಟ್ಟು ಜನರು ಯಾವುದೇ ಅಗತ್ಯ ವಸ್ತುಗಳ ಕೊಳ್ಳಬೇಕಾದರೂ ನದಿಯನ್ನು ದಾಟಲೇಬೇಕು. ಅದೂ ಕೂಡ ರಾತ್ರಿ ಯಾರಾದರೂ ಅನಾರೋಗ್ಯಕ್ಕೆ ತುತ್ತಾರೆಂದರೆ ಅಲ್ಲಿಗೆ ಮುಗಿದೇ ಹೋಯಿತು. ಬೆಳಗಾಗುವವರೆ ಈ ಹಾಡಿಯಲ್ಲೇ ನರಳಬೇಕು. ಇಲ್ಲವೆ 25 ಕಿಲೋ ಮೀಟರ್ ದೂರದಲ್ಲಿ ಇರುವ ಸಿದ್ದಾಪುರ ಅಥವಾ ಮಾಲ್ದಾರೆ ಭಾಗದ ಯಾರಿಗಾದರೂ ಕರೆ ಮಾಡಿ ಬಾಡಿಗೆಗೆ ವಾಹನ ಮಾಡಿಕೊಳ್ಳಬೇಕು.
ಒಂದು ವೇಳೆ ವಾಹನವನ್ನು ಬಾಡಿಗೆಗೆ ಮಾಡಿಕೊಳ್ಳೋಣ ಎಂದರೂ ಆ ವಾಹನ ಮಾಲ್ದಾರೆಯ ದಟ್ಟಾರಣ್ಯದ ಕಾಡಿನೊಳಗೆ ಕಾಡು ದಾರಿಯಲ್ಲಿ ಬರಬೇಕು. ಹೀಗಾಗಿ ಯಾರೂ ಬಾಡಿಗೆಗೂ ಬರುವುದಿಲ್ಲ. ಇದರಿಂದ ಏನೇ ಆದರೂ ಬೆಳಿಗ್ಗೆ ಅರಣ್ಯ ಇಲಾಖೆಯ ಬೋಟುಗಳು ಚಾಲೂ ಆಗುವವರೆಗೆ ಸಾವು ಬದುಕಿನ ನಡುವೆ ಹೋರಾಡಲೇಬೇಕು. ಯಾರಾದರೂ ಗರ್ಭಿಣಿಯರಿದ್ದರೆ ಅಂತಹವರ ಕುಟುಂಬ ಪಡುವ ಪಾಡು ಅಷ್ಟಿಷ್ಟಲ್ಲಾ. ಇಲ್ಲಿ ಕಿರಿಯ ಪ್ರಾಥಮಿಕ ಶಾಲೆಯೊಂದಿದ್ದು ಹಾಡಿಯ ಬಹುತೇಕ ಮಕ್ಕಳು 5 ನೇ ತರಗತಿಯವರೆಗೆ ದುಬಾರೆಯಲ್ಲಿ ಶಾಲೆಗೆ ಹೋಗುತ್ತಾರೆ. ಐದನೇ ತರಗತಿ ಮುಗಿದ ಬಳಿಕ ಬಹುತೇಕ ವಿದ್ಯಾರ್ಥಿಗಳು ಶಾಲೆಗೆ ಹೋಗುವುದು ತೀರಾ ಕಡಿಮೆ. ಕಾರಣ ಆರನೇ ತರಗತಿಗೆ ಹೋಗಬೇಕೆಂದರೆ ನದಿಯನ್ನು ದಾಟಿ ನಂಜರಾಯಪಟ್ಟಣ ಶಾಲೆಗೆ ಹೋಗಬೇಕು. ಇದು ದುಸ್ಥರದ ಸಂಗತಿ.