ಧರ್ಮಸ್ಥಳದಲ್ಲಿ 26 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಸತೀಶ್, ಸಲೀಂ ಅಬ್ದುಲ್ ಅನ್ಸಾರಿ ಹೆಸರಿನಲ್ಲಿ ಮಹಾರಾಷ್ಟ್ರದಲ್ಲಿ ಬದುಕು ಕಟ್ಟಿಕೊಂಡ ಬಳಿಕ ಮತ್ತೆ ಹುಟ್ಟೂರಿಗೆ ಮರಳಿದ್ದಾರೆ. ತಾಯಿ-ಮಗನ ಭಾವುಕ ಮಿಲನದ ಸಂಪೂರ್ಣ ಕಥೆ ಇಲ್ಲಿದೆ.
ಧರ್ಮಸ್ಥಳ (ಜೂ.11): ಹೆತ್ತ ತಾಯಿಯ ಕಣ್ಣೀರು, ದೇವರ ಮೇಲಿನ ಅಚಲ ನಂಬಿಕೆ ಮತ್ತು 26 ವರ್ಷಗಳ ನಿರಂತರ ನಿರೀಕ್ಷೆಗೆ ಕೊನೆಗೂ ಉತ್ತರ ಸಿಕ್ಕಿದೆ. 12 ವರ್ಷ ವಯಸ್ಸಲ್ಲಿ ಮನೆ ಬಿಟ್ಟವನು ಸುದೀರ್ಘ 26 ವರ್ಷಗಳ ಬಳಿಕ ಮನೆ ಸೇರಿದ ರೋಚಕ ಕಥೆ ಇದು.
26
ಕುಟುಂಬವನ್ನೇ ಮರೆತುಬಿಟ್ಟ
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದ ಅಶೋಕನಗರದ ಸತೀಶ್ ಎಂಬ ಬಾಲಕ ಸುಮಾರು 26 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ. ಆಗ ಕೇವಲ 12 ವರ್ಷದ ಬಾಲಕ ಸತೀಶ್, ಧರ್ಮಸ್ಥಳಕ್ಕೆ ಬಂದಿದ್ದ ಸರ್ಕಸ್ ತಂಡದ ಜೊತೆ ಯಾರಿಗೂ ಹೇಳದೆ ಮನೆ ಬಿಟ್ಟು ಹೊರಟಿದ್ದ. ಮಗ ಎಲ್ಲಿಗೆ ಹೋದ, ಹೇಗಿದ್ದಾನೆ ಎಂಬ ಸುಳಿವೇ ಸಿಗದೆ ಕುಟುಂಬ ವರ್ಷಗಳ ಕಾಲ ಕಣ್ಣೀರಲ್ಲೇ ದಿನ ಕಳೆದಿತ್ತು. ಕಾಲ ಚಕ್ರ ಉರುಳುತ್ತಾ ಹೋಯಿತು. ಸತೀಶ್ ಮಹಾರಾಷ್ಟ್ರ ತಲುಪಿದ. ಅಲ್ಲೇ ಜೀವನ ಕಟ್ಟಿಕೊಂಡ. ಕೆಲಸ ಮಾಡುತ್ತಾ, ಬದುಕಿನ ಹೋರಾಟದಲ್ಲಿ ಮುಳುಗುತ್ತಾ ತನ್ನ ಊರು, ತನ್ನ ಭಾಷೆ, ತನ್ನ ಕುಟುಂಬವನ್ನೇ ಮರೆತುಬಿಟ್ಟ. ಸತೀಶ್ ಎಂಬ ಹೆಸರು ನಿಧಾನವಾಗಿ ಮರೆಯಾಗಿ, ಆತ ಸಲೀಂ ಅಬ್ದುಲ್ ಅನ್ಸಾರಿಯಾಗಿ ಹೊಸ ಬದುಕು ಆರಂಭಿಸಿದ. ತಾಲೀಮಾ ಎಂಬ ಮಹಿಳೆಯನ್ನು ವಿವಾಹವಾಗಿ ಖುಷಿ ಮತ್ತು ಅಝಂ ಎಂಬ ಇಬ್ಬರು ಮಕ್ಕಳ ತಂದೆಯಾದ. ಕನ್ನಡ, ತುಳು ಭಾಷೆಗಳನ್ನೂ ಮರೆತು ಸಂಪೂರ್ಣ ಹಿಂದಿಯೇ ಆತನ ವ್ಯವಹಾರಿಕ ಹಾಗೂ ತಾಯಿ ಭಾಷೆಯಾಗಿ ಹೋಯಿತು.
36
26 ವರ್ಷಗಳ ಬಳಿಕ ಧರ್ಮಸ್ಥಳಕ್ಕೆ ಬಂದವನ ಕಣ್ಣೆದುರೇ ಬಂತು ಹುಟ್ಟಿದ ಮನೆ!
12 ವರ್ಷಕ್ಕೇ ಊರು ಬಿಟ್ಟವ ಮತ್ತೆ ಧರ್ಮಸ್ಥಳ ಬರಲೇ ಇಲ್ಲ. ಬದುಕು ಭಾಷೆ ಎಲ್ಲವೂ ಬದಲಾಗಿತ್ತು. ಆದರೆ ವಿಧಿಯ ಆಟವೇ ಬೇರೆ. ಇತ್ತೀಚೆಗೆ ಸ್ನೇಹಿತರೊಂದಿಗೆ ಧರ್ಮಸ್ಥಳ ದೇವಸ್ಥಾನಕ್ಕೆ ಬಂದಿದ್ದ ಸಲೀಂ, ವರ್ಷಗಳ ಹಿಂದೆ ಸರ್ಕಸ್ ನಡೆದಿದ್ದ ಸ್ಥಳದ ಬಳಿ ಕಾಲಿಟ್ಟಾಗ ಹೃದಯದ ಆಳದಲ್ಲಿ ಮಲಗಿದ್ದ ನೆನಪುಗಳು ಏಕಾಏಕಿ ಎಚ್ಚೆತ್ತುಕೊಂಡಿವೆ. ಇದೇ ನನ್ನ ಊರು... ಎಂಬ ಭಾವನೆ ಅವನ ಮನಸ್ಸನ್ನು ಆವರಿಸಿದೆ. ಅದನ್ನೇ ಸುಳಿವಾಗಿಸಿಕೊಂಡು ಸುತ್ತಮುತ್ತಲಿನ ಅಂಗಡಿಯವರನ್ನು ವಿಚಾರಿಸಿದ್ದಾನೆ. ಒಂದು ಮನೆ, ಮತ್ತೊಂದು ಮನೆ ಎಂದು ಹುಡುಕುತ್ತಾ ಕೊನೆಗೆ ತನ್ನದೇ ಮನೆಯ ಬಾಗಿಲ ಮುಂದೆ ನಿಂತಿದ್ದಾನೆ. 26 ವರ್ಷಗಳ ಹಿಂದೆ ಕಣ್ಮರೆಯಾಗಿದ್ದ ಮಗನನ್ನು ಕಂಡು ತಾಯಿ ಅಕ್ಷರಶಃ ಕಣ್ಣೀರಾಗಿದ್ದಾರೆ. ಧರ್ಮಸ್ಥಳ, ಕಟೀಲು, ಪಣೋಲಿಬೈಲು ದೇವರ ಮುಂದೆ ಹರಕೆ ಹೊತ್ತಿದ್ದ ತಾಯಿ, ನಾನು ಸಾಯುವ ಮೊದಲು ನನ್ನ ಮಗನನ್ನು ಒಮ್ಮೆ ತೋರಿಸು ಎಂದು ಪ್ರಾರ್ಥಿಸಿದ್ದಳು. ಕೆಲವೇ ದಿನಗಳ ಹಿಂದೆ ಉಳಿದ ಮಕ್ಕಳ ಬಳಿ ಕುಳಿತುಕೊಂಡು ಇದೇ ಬೇಡಿಕೆಯನ್ನು ಕಣ್ಣೀರಿಡುತ್ತಾ ಹೇಳಿದ್ದರಂತೆ. ಆ ತಾಯಿಯ ಪ್ರಾರ್ಥನೆಯಂತೆ 26 ವರ್ಷಗಳ ಬಳಿಕ ಮಗ ಮತ್ತೆ ತಾಯಿಯ ಮಡಿಲಿಗೆ ಮರಳಿದ್ದಾನೆ.
ಮನೆ ಬಿಟ್ಟು ಹೋದಾಗ ಅವನು ಸತೀಶ್. ಆದರೆ ಮತ್ತೆ ಮನೆಗೆ ಮರಳಿ ಬಂದಾಗ ಅವನು ಸಲೀಂ ಅಬ್ದುಲ್ ಅನ್ಸಾರಿ. ಹೆಸರು ಬದಲಾಗಿತ್ತು, ಧರ್ಮ ಬದಲಾಗಿತ್ತು, ಭಾಷೆ ಬದಲಾಗಿತ್ತು ಜೊತೆಗೆ ಆತನ ಬದುಕು ಕೂಡ ಬದಲಾಗಿತ್ತು. ಆದರೆ ತಾಯಿಯ ಹೃದಯದಲ್ಲಿ ಅವನು ಇನ್ನೂ ಅದೇ ಕಳೆದುಹೋದ ಮಗ ಸತೀಶ್ ಆಗಿಯೇ ಉಳಿದಿದ್ದ.
56
ಧರ್ಮಸ್ಥಳ ಕ್ಷೇತ್ರ ದರ್ಶನದೊಂದಿಗೆ ತಾಯಿಯ ದರ್ಶನ!
ಮಹಾರಾಷ್ಟ್ರದಿಂದ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬಂದು ದೇವರ ದರ್ಶನ ಮುಗಿಸಿ ವಾಸವಿದ್ದ ರೂಮ್‌ನ ಅಸುಪಾಸಿನಲ್ಲೇ ಸುತ್ತಾಡಿಕೊಂಡವನಿಗೆ ತನ್ನ ಬಾಲ್ಯದ ದಿನಗಳು ಮರುಕಳಿಸಿವೆ. ತಾನು ಕಲಿತ ಎಸ್.ಡಿ.ಎಮ್ ಶಾಲೆ, ಆಟದ ಮೈದಾನ, ಬೆಳೆದ ಊರು ನೆನೆಪಿಗೆ ಬಂದು ತನ್ನ ತಾಯಿಯನ್ನು ಹುಡುಕಿಕೊಂಡು ಧರ್ಮಸ್ಥಳ ಗ್ರಾಮ ಪಂಚಾಯತ್ ಕೆಳಭಾಗದಲ್ಲಿರುವ ಯತೀಶ್ ಯಕ್ಷ ಎಂಬವರ ಅಂಗಡಿಗೆ ಬಂದ ಸತೀಶ್ ನಾನು ಬಾಲ್ಯದಲ್ಲಿ ಈ ಊರಿನಲ್ಲಿ ಬೆಳೆದಿದ್ದು, ನಾನು 26 ವರ್ಷದ ಹಿಂದೆ ಊರು ಬಿಟ್ಟು ಹೋಗಿದ್ದೆ, ತನ್ನ ತಂದೆ-ತಾಯಿ, ತಮ್ಮಂದಿರ ಹೆಸರು ಹೇಳುತ್ತಿದ್ದಂತೆ ಅಂಗಡಿಯ ಮಾಲೀಕ ಯತೀಶ್ ಯಕ್ಷರಿಗೆ ಆತನ ಬಗ್ಗೆ ಗೊತ್ತಾಗಿದೆ.
66
ಹುಟ್ಟೂರಿಗೆ ಮರಳಿ ಬಂದ ಸಲೀಂ
ಮಹಾರಾಷ್ಟ್ರದಲ್ಲಿ ಮದುವೆ ಹಾಲ್, ಡೆಕೋರೇಶನ್, ಚಾಲಕ, ಹೋಟೆಲ್‌ಗಳಲ್ಲಿ ಕೆಲಸ ಮಾಡಿ ಬದುಕು ಕಟ್ಟಿಕೊಂಡ ಸತೀಶ ಸಲೀಂ ಅಬ್ದುಲ್ ಅನ್ಸಾರಿಯಾಗಿ ಬದಲಾಗಿ ಹೊಸ ಜೀವನಕ್ಕೆ ಮುನ್ನಡಿ ಬರೆದಿದ್ದಾನೆ. ಮಹಾರಾಷ್ಟ್ರ ರಾಜ್ಯದ ನಾಗ್ಪುರ ಜಿಲ್ಲೆಯ ಕಲ್ಮೇಶ್ವರ ತಾಲೂಕಿನ ದಹೆಂಗಾವ್‌ನಲ್ಲಿ ಬಾಡಿಗೆ ಮನೆಯೊಂದರಲ್ಲಿ ಪತ್ನಿ ತಾಲೀಮಾ ಜೊತೆ ಇದ್ದಾರೆ ಹಾಗೂ ಪುತ್ರಿ ಖುಷಿ (14) ಹಾಗೂ ಪುತ್ರ ಅಝಂ(9) ವಿದ್ಯಾಭ್ಯಾಸ ನಡೆಸುತ್ತಿದ್ದಾರೆ. 2005 ರಿಂದ ದಹೆಂಗಾವ್‌ನ ಶರ್ಮ ಡಾಬಾದ ವ್ಯವಸ್ಥಾಪಕರಾಗಿ ವೃತ್ತಿ ಜೀವನ ನಡೆಸುತ್ತಿದ್ದಾರೆ. ಸುಮಾರು ಮಾಸಿಕ 25 ಸಾವಿರ ಸಂಪಾದನೆ ಮಾಡಿ ಬದುಕು ಕಟ್ಟಿಕೊಂಡ ಸತೀಶ್ ಯಾನೆ ಸಲೀಂ ಅನ್ಸಾರಿ ದಹೆಂಗಾವ್‌ನಿಂದ ತನ್ನ ಸಹೊದ್ಯೋಗಿ ರಮೇಶ್‌ರೊಂದಿಗೆ 1258 ಕಿಮೀ.ಕ್ರಮಿಸಿ ಹುಟ್ಟೂರಿಗೆ ಮರಳಿ ಬಂದಿದ್ದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ