ಚಿನ್ನಸ್ವಾಮಿ ದುರಂತ: ಇದುವರೆಗೂ ರಾಜ್ಯ ಸರ್ಕಾರ ಕೈಗೊಂಡ ಕ್ರಮಗಳೇನು?

Published : Jun 10, 2025, 09:59 AM IST

ಆರ್‌ಸಿಬಿ ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾಲ್ತುಳಿತದಲ್ಲಿ 11 ಮಂದಿ ಸಾವನ್ನಪ್ಪಿದ ಘಟನೆ ರಾಜ್ಯಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ಭದ್ರತಾ ವೈಫಲ್ಯದ ಬಗ್ಗೆ ತನಿಖೆ ನಡೆಯುತ್ತಿದ್ದು, ಹೈಕೋರ್ಟ್‌ನಲ್ಲಿ ಇಂದು ವಿಚಾರಣೆ ನಡೆಯಲಿದೆ. ಇದುವರೆಗೂ ರಾಜ್ಯ ಸರ್ಕಾರ ಕೈಗೊಂಡ ಕ್ರಮಗಳೇನು?

PREV
17

ಆರ್‌ಸಿಬಿ ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾಲ್ತುಳಿತಕ್ಕೆ 11 ಅಭಿಮಾನಿಗಳ ಸಾವು ಪ್ರಕರಣ ರಾಜ್ಯಾದ್ಯಂತ ಶೋಕ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ಒಂದು ಕಡೆ ಆಟಗಾರರು ಹೊಟೇಲ್‌ ನಿಂದ ಹೊರಡುವ ಮುನ್ನವೇ ದುರಂತ ನಡೆದಿತ್ತು ಎನ್ನಲಾಗಿದೆ. ವಿಚಾರ ಗೊತ್ತಿದ್ದರೂ ಸೆಲೆಬ್ರೇಷನ್‌ ಮುಂದುವರೆಸಲಾಗಿದೆ. ಭದ್ರತಾ ನಿರ್ವಹಣೆಯಲ್ಲಿ ನಿರ್ಲಕ್ಷ್ಯವಿತ್ತೇ? ಎಂಬ ಬಗ್ಗೆ ಸೇರಿದಂತೆ ಹಲವು ವಿಚಾರಗಳು ಹೈಕೋರ್ಟ್ ನಲ್ಲಿ ಇಂದು ವಿಚಾರಣೆ ಆಗಲಿದೆ.

27

ಇದುವರೆಗೂ ರಾಜ್ಯ ಸರ್ಕಾರ ಕೈಗೊಂಡ ಕ್ರಮಗಳೇನು?

  1. ಆರ್.ಸಿ.ಬಿ. ,ಡಿಎನ್ ಎ ,ಕೆಎಸ್ ಸಿಎ ಮೇಲೆ ಮೂರು ಎಫ್ ಐಅರ್
  2. ಮೂರು ಸಂಸ್ಥೆಗಳ ಅಧಿಕಾರಿಗಳ ಬಂಧನ .ಕೆಎಸ್ ಸಿಎ ಹೊರತು ಪಡಿಸಿ .
  3. ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಮೂರು ಎಫ್ ಐಆರ್ ದಾಖಲು
  4. ಇನ್ಸ್ ಪೆಕ್ಟರ್ ಗಿರೀಶ್ ದೂರಿನ ಮೇರೆಗೆ ಎಫ್ ಐಆರ್ ದಾಖಲು
  5. ಕಮಿಷನರ್ ದಯಾನಂದ್ ಸೇರಿ ಐದು ಮಂದಿ ಅಧಿಕಾರಿಗಳ ಸಸ್ಪೆಂಡ್
  6. ಡಿಸಿ. ಜಗದೀಶ್ ನೇತೃತ್ವದಲ್ಲಿ ಮ್ಯಾಜಿಸ್ಟ್ರೀಯಲ್ ವಿಚಾರಣೆ
  7. ಕಬ್ಬನ್ ಪಾರ್ಕ್ ನಲ್ಲಿ ದಾಖಲಾಗಿದ್ದ ಎಲ್ಲಾ ಕೇಸ್ ಗಳು ಸಿಐಡಿ ತನಿಖೆಗೆ ವರ್ಗಾವಣೆ
  8. 11 ಮಂದಿ ಕುಟುಂಬಸ್ಥರಿಗೆ 25 ಲಕ್ಷ ಪರಿಹಾರ ವಿತರಣೆ .ಸರಕಾರ ಹಾಗೂ ಕೆಎಸ್ ಸಿಎಯಿಂದ ಪರಿಹಾರ
  9. ಗಾಯಳುಗಳಿಗೆ ಸರ್ಕಾರದಿಂದಲೇ ಚಿಕತ್ಸಾ ವೆಚ್ಚ ಭರಿಸಲು ನಿರ್ಧಾರಕಬ್ಬನ್ ಪಾರ್ಕ್ ಸಿಬ್ಬಂದಿ ಹಾಗೂ ಅಂದು ಬಂದೋಬಸ್ತ್ ನಲ್ಲಿದ್ದ ಎಲ್ಲಾ ಸಿಬ್ಬಂದಿ ವಿಚಾರಣೆ ನಡೆಸಲು ನಿರ್ಧಾರ
  10. ಆರ್ ಸಿಬಿ ಹಾಗೂ ಡಿಎನ್ ಎ ಎಡವಟ್ಟಿನಿಂದ ಘಟನೆ ನಡೆದಿದೆ.
  11. ಗಾಯಗೊಂಡ ಅಭಿಮಾನಿಗಳಿಂದಲ್ಲೂ ದೂರು ದಾಖಲಿಸಿಕೊಂಡು ತನಿಖೆ.
  12. ಕಬ್ಬನ್ ಪಾರ್ಕ್ ನಲ್ಲಿ ದಾಖಲಾದ ಎಲ್ಲಾ ಎಫ್ ಐಆರ್ ಗಳ ತನಿಖೆಯ ಹೊಣೆ ಸಿಐಡಿಗೆ.
37

ಆಟಗಾರರು ಹೊಟೇಲ್‌ ನಿಂದ ಹೊರಡುವ ಮುನ್ನವೇ ನಡೆದಿತ್ತು ದುರಂತ

ಆರ್‌ಸಿಬಿ ವಿಜಯೋತ್ಸವದ ಅಂಗವಾಗಿ ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ಸ್ ಬಳಿ ನಡೆಯಬೇಕಾದ ಸಮಾರಂಭ ಆರಂಭಕ್ಕೂ ಮುನ್ನವೇ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಭೀಕರ ಕಾಲ್ತುಳಿತ ಸಂಭವಿಸಿತ್ತು. ಆರ್‌ಸಿಬಿ ಆಟಗಾರರು ತಾಜ್ ಹೋಟೆಲ್‌ನಿಂದ ಹೊರಡುವ ಮುನ್ನವೇ ಈ ದುರಂತದ ಬಗ್ಗೆ ಮೆಸೇಜ್ ಪೊಲೀಸರಿಗೂ ತಲುಪಿತ್ತು. ನಾಲ್ವರು ವ್ಯಕ್ತಿಗಳು ಕಾಲ್ತುಳಿತದಿಂದ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಕೂಡ ಅದೇ ಸಮಯದಲ್ಲಿ ಬಂದಿತ್ತು. ದಿನದ ಸಂಜೆ 4:30ಕ್ಕೆ ತಾಜ್ ಹೋಟೆಲ್‌ನಿಂದ ಆಟಗಾರರನ್ನು ಪೊಲೀಸರು ಹೊರಗೆ ಕರೆದುಕೊಂಡು ಬಂದರು. ಸುಮಾರು 4:45ಕ್ಕೆ ಅವರನ್ನು ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ಸ್ ಬಳಿ ತಲುಪಿಸಿದರು.

47

ಸೆಲೆಬ್ರೇಷನ್‌ಗೆ ಮುನ್ನವೇ ಡಿಜಿ ಹಾಗೂ ಐಜಿಪಿಗೆ ಮಾಹಿತಿ ನೀಡಿದ್ದ ಕಮಿಷನರ್

ಕಾಲ್ತುಳಿತದ ಕುರಿತು ಮಾಹಿತಿ ದೊರಕುತ್ತಿದ್ದಂತೆಯೇ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಈ ಬಗ್ಗೆ ಡಿಜಿ ಹಾಗೂ ಐಜಿಪಿಗೆ ಮಾಹಿತಿ ನೀಡಿದರು. ಆದರೆ, ಈ ದುರ್ಘಟನೆ ಬಗ್ಗೆ ಪೂರ್ವದಲ್ಲಿ ಮಾಹಿತಿ ಸಿಕ್ಕಿದ್ದರೂ ಸಹ, ಸರ್ಕಾರ ವಿಜಯೋತ್ಸವವನ್ನು ಮುಂದುವರೆಸಿದುದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪ್ರಾಣಹಾನಿ ಸಂಭವಿಸಿದ್ದರೂ, ಸರ್ಕಾರ ಸಮಾರಂಭವನ್ನು ನಿಲ್ಲಿಸದೆ ಅದೇ ಉತ್ಸಾಹದಲ್ಲಿ ಸೆಲೆಬ್ರೇಶನ್ ನಡೆಸಿದೆ. ಈ ಮಧ್ಯೆ, ಸಿಎಂ ಸಿದ್ದರಾಮಯ್ಯ ಅವರ ಗಮನಕ್ಕೆ ಈ ದುರಂತದ ಮಾಹಿತಿ ತಲುಪಿದೆಯೇ ಇಲ್ಲವೋ ಎಂಬುದೂ ಸ್ಪಷ್ಟವಾಗಿಲ್ಲ. ಆದರೆ, ಸಾವಿನ ಸುದ್ದಿ ತಿಳಿದಿದ್ದರೂ ಹಬ್ಬದ ವೈಭವ ತಡೆಯದೆ ಮುಂದುವರಿಸಿದ ಸರ್ಕಾರದ ನಡೆಗೆ ಸಾಮಾಜಿಕ ಜಾಲತಾಣಗಳಿಂದ ಆರಂಭವಾಗಿ ರಾಜಕೀಯ ವಲಯಗಳವರೆಗೆ ಆಕ್ರೋಶ ವ್ಯಕ್ತವಾಗಿದೆ.

57

ಭದ್ರತಾ ನಿರ್ವಹಣೆಯಲ್ಲಿ ನಿರ್ಲಕ್ಷ್ಯವಿತ್ತೇ?

ಈ ಹೃದಯವಿದ್ರಾವಕ ಘಟನೆ ನಂತರ ಮೂರು ಐಪಿಎಸ್ ಅಧಿಕಾರಿಗಳಾದ ಪೊಲೀಸ್ ಕಮಿಷನರ್, ಅಡಿಷನಲ್ ಕಮಿಷನರ್ ಹಾಗೂ ಡಿಸಿಪಿಯವರನ್ನು ಅಮಾನತುಗೊಳಿಸಲಾಗಿದೆ. ಇದುವರೆಗೆ ಇತಿಹಾಸದಲ್ಲೇ ಮೊದಲ ಬಾರಿಗೆ ಬೃಹತ್ ಮಟ್ಟದಲ್ಲಿ ಅತೀ ಹಿರಿಯ ಅಧಿಕಾರಿಯನ್ನು ಸಸ್ಪೆಂಡ್ ಮಾಡಿರುವುದು, ಘಟನೆಗೆ ಕಾರಣವಾದ ಭದ್ರತಾ ವೈಫಲ್ಯ ಎಷ್ಟು ತೀವ್ರವಾಗಿತ್ತೆಂಬುದನ್ನು ಸೂಚಿಸುತ್ತದೆ. ಈ ಅಮಾನತಿಗೆ ಸಾರ್ವಜನಿಕ ವಲಯದಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. "ಭದ್ರತಾ ನಿರ್ವಹಣೆಯಲ್ಲಿ ಎಷ್ಟು ನಿರ್ಲಕ್ಷ್ಯವಿತ್ತು?" ಎಂಬ ಪ್ರಶ್ನೆ ಎಲ್ಲೆಡೆ ಕೇಳಿಬರುತ್ತಿದೆ.

ಈ ಘಟನೆಯ ಹಿನ್ನೆಲೆಯಲ್ಲಿ, ಇಂದು ಹೈಕೋರ್ಟ್‌ಗೆ ಭದ್ರತಾ ವ್ಯವಸ್ಥೆಯ ಕುರಿತ ಸಂಪೂರ್ಣ ವರದಿ ಸಲ್ಲಿಸಲಾಗುತ್ತಿದೆ. ಅಂದು ಕಾರ್ಯಕ್ರಮ ನಡೆಯುವ ವೇಳೆ ಪೊಲೀಸ್ ಬಂದೋಬಸ್ತ್ ಹೇಗಿತ್ತು? ಯಾವ ಅಧಿಕಾರಿ ಎಲ್ಲಿ ನಿಯೋಜಿತರಾಗಿದ್ದರು? ಎಷ್ಟು ಅಧಿಕಾರಿಗಳು ಮತ್ತು ಸಿಬ್ಬಂದಿ ಕರ್ತವ್ಯದಲ್ಲಿದ್ದರು? ಅವರು ತಮ್ಮ ಜವಾಬ್ದಾರಿ ಎಷ್ಟು ಪ್ರಾಮಾಣಿಕವಾಗಿ ನಿರ್ವಹಿಸಿದರು? ಎಂಬ ಎಲ್ಲ ವಿವರಗಳನ್ನು ವರದಿಯಲ್ಲಿ ಉಲ್ಲೇಖಿಸಲಾಗುತ್ತಿದೆ

67

ದಾಖಲೆ ಹೈಕೋರ್ಟ್ ಗೆ 

ಕಮಿಷನರ್ ಸೇರಿದಂತೆ, ಬಂದೋಬಸ್ತ್‌ಗೆ ನಿಯೋಜಿತ ಡಿಸಿಪಿ, ಎಸಿಪಿ, ಇನ್ಸ್ಪೆಕ್ಟರ್‌ಗಳ ಹಾಜರಾತಿ ವಿವರಗಳು, ಗೇಟ್ ನಲ್ಲಿ ನಿಯೋಜನೆಗಳು, ಮತ್ತು ಕಾರ್ಯ ನಿರ್ವಹಣೆಯ ಸ್ಥಿತಿಗತಿಯ ಕುರಿತು ಸ್ಪಷ್ಟ ಮಾಹಿತಿ ಒದಗಿಸಲಾಗುತ್ತಿದೆ. ಈ ಅಧಿಕಾರಿಗಳ ಟವರ್ ಡಂಪ್ (ಮೊಬೈಲ್ ಬಳಕೆಯ ಮಾಹಿತಿ) ಸಹಿತ ಪ್ರತಿ ಚಲನವಲನದ ದಾಖಲೆಯನ್ನೂ ಸೇರಿಸಿ ಸಂಪೂರ್ಣ ದಾಖಲೆ ಹೈಕೋರ್ಟ್‌ಗೆ ಸಲ್ಲಿಸಲಾಗುತ್ತಿದೆ.

ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ನೇತೃತ್ವದ ತಂಡ – ಮೂವರು ಎಸಿಪಿಗಳು ಮತ್ತು ಇತರರು ಸೇರಿ ಬಂದೋಬಸ್ತ್ ವರದಿ ತಯಾರಿಸಿದ್ದಾರೆ. ಈ ವರದಿ ಇಂದು ಹೈಕೋರ್ಟ್‌ನಲ್ಲಿ ಪ್ರಸ್ತುತಪಡಿಸಲಾಗುತ್ತಿದೆ. ಅದರ ಮೇಲೆ ನ್ಯಾಯಾಲಯ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದು ಕಾದು ನೋಡಬೇಕಿದೆ.

77

ಹೈಕಮಾಂಡ್‌ ಭೇಟಿ ಮಾಡಲಿರುವ ಸಿಎಂ, ಡಿಸಿಎಂ

ಈ ದುರಂತವನ್ನು ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್ ಹೈಕಮಾಂಡ್, ಹೆಚ್ಚಿನ ಮಾಹಿತಿಗಾಗಿ ನೇರವಾಗಿ ರಾಜ್ಯದ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಬಳಿ ಮಾಹಿತಿ ಕೇಳಲಿದೆ. ಈ ಸಂಬಂಧ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ದೆಹಲಿಗೆ ತೆರಳಿದ್ದು, ಮೊದಲ ಬಾರಿಗೆ ನಾಯಕರು ಒಟ್ಟಿಗೆ ತೆರಳಿ ಹೈಕಮಾಂಡ್ ರನ್ನು ಭೇಟಿ ಮಾಡಲಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ನಾಯಕ ರಾಹುಲ್ ಗಾಂಧಿಯವರನ್ನು ಬೆಳಿಗ್ಗೆ 11 ಗಂಟೆಗೆ ಭೇಟಿ ಮಾಡಿ, ದುರಂತದ ಕುರಿತು ಸಂಪೂರ್ಣ ಮಾಹಿತಿ ನೀಡಲಿದ್ದಾರೆ.

ಸಿಎಂ ಮತ್ತು ಡಿಸಿಎಂ ಅವರು ಕಾಲ್ತುಳಿತದ ಘಟನೆ, ತನಿಖೆಯ ಪ್ರಗತಿ, ಸರ್ಕಾರ ಕೈಗೊಂಡ ಕ್ರಮಗಳು ಮತ್ತು ಅಧಿಕಾರಿಗಳ ವಿರುದ್ಧ ನಡೆದ ಕ್ರಮಗಳ ಕುರಿತು ಸಂಪೂರ್ಣ ವರದಿ ಸಲ್ಲಿಸಲಿದ್ದಾರೆ. ಪೊಲೀಸ್ ಅಧಿಕಾರಿಗಳ ಅಮಾನತು ಕೂಡ ಸಾರ್ವಜನಿಕ ಟೀಕೆಗೆ ಕಾರಣವಾಗಿರುವ ಹಿನ್ನೆಲೆಯಲ್ಲಿ, ಹೈಕಮಾಂಡ್ ಈ ಕುರಿತು ಸ್ಪಷ್ಟನೆ ಪಡೆಯಲು ಮುಂದಾಗಿದೆ. ಈ ಘಟನೆ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿರುವುದರಿಂದ, ಇದನ್ನು ರಾಜಕೀಯ ಪಕ್ಷವೂ ಗಂಭೀರವಾಗಿ ತೆಗೆದುಕೊಂಡಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories