ಆರ್‌ಸಿಬಿ ವಿಜಯೋತ್ಸವ ಕಾಲ್ತುಳಿತದಲ್ಲಿ ಮೃತಪಟ್ಟ ಯಾದಗಿರಿಯ ಶಿವಲಿಂಗ ಕುಟುಂಬಕ್ಕೆ ಸಚಿವ ಶರಣಬಸಪ್ಪ ದರ್ಶನಾಪುರ ಡಿಸಿ ಕಚೇರಿಯಲ್ಲಿ 30 ನಿಮಿಷ ನಿಲ್ಲಿಸಿ ಪರಿಹಾರ ನೀಡಿದ್ದಾರೆ. ಇತರೆಡೆ ಸಂತ್ರಸ್ತರ ಮನೆಗೇ ತೆರಳಿ ಪರಿಹಾರ ನೀಡಿದ್ದರೆ, ಯಾದಗಿರಿಯಲ್ಲಿ ಮಾತ್ರ ಸಂತ್ರಸ್ತ ಕುಟುಂಬಕ್ಕೆ ಅಗೌರವ ತೋರಿದ್ದಾರೆ.
ಯಾದಗಿರಿ (ಜೂ.09): ಇವರೇನು ಜನ ಸೇವಕರೋ ಅಥವಾ ದರ್ಪ ತೋರುವ ಮಿನಿಸ್ಟರೋ ಗೊತ್ತಿಲ್ಲ. ಆರ್‌ಸಿಬಿ ವಿಜಯೋತ್ಸವವನ್ನು ಸರಿಯಾಗಿ ಆಯೋಜನೆ ಮಾಡದ ಸರ್ಕಾರದ ತಪ್ಪಿಗೆ ಪ್ರಾಣ ಬಿಟ್ಟ ಯಾದಗಿರಿಯ ಶಿವಲಿಂಗ ಅವರ ಕುಟುಂಬ ನೋವಲ್ಲಿದ್ದರೂ ಅವರನ್ನು ಡಿಸಿ ಕಚೇರಿಗೆ ಕರೆಸಿಕೊಂಡು 30 ನಿಮಿಷ ನಿಲ್ಲಿಸಿ, ತನ್ನದೇ ಜೇಬಿನಿಂದ ಹಣ ಕೊಟ್ಟಂತೆ ಪೋಸ್ ಕೊಟ್ಟ ಸಣ್ಣ ಕೈಗಾರಿಕೆ ಸಚಿವ ಶರಣಬಸಪ್ಪ ದರ್ಶನಾಪುರ ಅವರಿಗೆ ಸ್ವಲ್ಪವೂ ಮಾನವೀಯತೆಯೇ ಇಲ್ಲವೆಂಬಂತೆ ಕಾಣುತ್ತಿದೆ. ಸಾವಿನ ನೋವಲ್ಲಿರುವ ಕುಟುಂಬದ ಮುಂದೆ ನಿಮ್ಮ ಮಂತ್ರಿಗಿರಿ ದರ್ಪ ತೋರುವಷ್ಟು ಕುಚೇಷ್ಟೆಯೇ ಎಂಬ ಮಾತು ಎಲ್ಲೆಡೆ ಕೇಳಿಬರುತ್ತಿದೆ.
28
11 ಸಂತ್ರಸ್ತ ಕುಟುಂಬಕ್ಕೆ ಪರಿಹಾರ ಹೆಚ್ಚಿಸಿದ್ದ ಸರ್ಕಾರ
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಐಪಿಎಲ್ ಸೀಸನ್ 18 ಟ್ರೋಫಿ ಗೆದ್ದ ವಿಜಯೋತ್ಸವ ಆಚರಣೆ ವೇಳೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ಸಂಭವಿಸಿ ಸಾವಿಗೀಡಾದ 11 ಜನರ ಸಂತ್ರಸ್ತ ಕುಟುಂಬಕ್ಕೆ ಸರ್ಕಾರದಿಂದ 25 ಲಕ್ಷ ರೂ. ಪರಿಹಾರ ನೀಡಲಾಗುತ್ತಿದೆ. ಮಂಡ್ಯ, ಕೋಲಾರ, ಬೆಂಗಳೂರು ಸೇರಿ ಎಲ್ಲೆಡೆ ಸಚಿವರು, ಮಂತ್ರಿಗಳು ಹಾಗೂ ಜಿಲ್ಲಾಧಿಕಾರಿಗಳು ಸಂತ್ರಸ್ತರ ಮನೆಗೆ ಹೋಗಿ ಚೆಕ್ ವಿತರಣೆ ಮಾಡಿ ಬಂದಿದ್ದಾರೆ.
38
30 ನಿಮಿಷ ನಿಂತಿದ್ದರೂ ಸೌಜನ್ಯಕ್ಕಾದರೂ ಕೂರಿಸಲಿಲ್ಲ
ಯಾದಗಿರಿಯಲ್ಲಿ ಸಚಿವ ಶರಣಬಸಪ್ಪ ದರ್ಶನಾಪುರ ಅವರು ನೋವಲ್ಲಿರುವ ಶಿವಲಿಂಗ ಅವರ ಕುಟುಂಬವನ್ನು ಡಿಸಿ ಕಚೇರಿಗೆ ಕರೆಸಿ, ತಪ್ಪಿತಸ್ಥರಿಗೆ ತಮ್ಮ ಜೇಬಿನಿಂದ ಹಣ ಕೊಟ್ಟವರಂತೆ 30 ನಿಮಿಷಕ್ಕೂ ಹೆಚ್ಚು ಕಾಲ ಅವರನ್ನು ನಿಲ್ಲಿಸಿದ್ದಾರೆ.
ಇವರು ರಾಜ್ಯವನ್ನಾಳುವ ಒಬ್ಬ ಮಂತ್ರಿ ಆಗಿದ್ದರೂ, ಸಂತ್ರಸ್ತ ಕುಟುಂಬಸ್ಥರನ್ನು ಸೌಜನ್ಯಕ್ಕಾದರೂ ಕೂರಿಸಿ ನಿಧಾನವಾಗಿ ಮಾತನಾಡಿಸುವ ಗೌರವದ ಗುಣ ತೋರಿಸಲಿಲ್ಲ.
ಸಂತ್ರಸ್ತ ಕುಟುಂಬವನ್ನು ಅಲೆದಾಡಿಸಿ ಒಬ್ಬರೇ ಮಂತ್ರಿ ದರ್ಶನಾಪುರ
ಚುನಾವಣೆ ವೇಳೆ ಶರಣಬಸಪ್ಪ ದರ್ಶನಾಪುರ ಓಟು ಕೇಳಲು ಗಲ್ಲಿ ಗಲ್ಲಿಗೆ ಹೋಗುತ್ತಾರೆ. ಆದರೆ, ಈಗ ಜನರು ಮತ ಹಾಕಿ ಗೆಲ್ಲಿಸಿ ಅಧಿಕಾರ ಕೊಡಿಸಿದ್ದಾರೆ ಅಲ್ಲವೇ ಅದಕ್ಕೆ ಎಲ್ಲವನ್ನೂ ತಾವಿದ್ದಲ್ಲಿಗೆ ಕರೆಸಿಕೊಳ್ಳುತ್ತಾರೆ.
ಯಾದಗಿರಿ ಜಿಲ್ಲಾಧಿಕಾರಿ ಕಚೇರಿಯಿಂದ ಅದೇ ತಾಲೂಕು ವ್ಯಾಪ್ತಿಯಲ್ಲಿರುವ ಶಿವಲಿಂಗ ಅವರ ಊರಿಗೆ ಸಚಿವ ಶರಣಬಸಪ್ಪ ದರ್ಶನಾಪುರ ಅವರು ಹೋಗಲಿಲ್ಲ. ಆ ಗ್ರಾಮಕ್ಕೆ ಹೋಗಿದ್ದರೆ ಅಲ್ಲಿನ ಕುಂದು-ಕೊರತೆಗಳನ್ನು ವೀಕ್ಷಣೆ ಮಾಡಿದಂತಾಗುತ್ತಿತ್ತು. ಜನರು ಹಾಳು ಕೊಂಪೆಯಲ್ಲಿ ಬಿದ್ದರೂ ಪರವಾಗಿಲ್ಲ ತನ್ನ ಬಿಳಿ ಅಂಗಿ ಮೇಲೆ ಒಂದು ಮಣ್ಣಿನ ಧೂಳು ಮೆತ್ತಿಕೊಳ್ಳಬಾರದು ಎಂಬ ಮನಸ್ಥಿತಿ ಇರುವ ಸಚಿವರು ಮತ ಹಾಕಿದ ಜನರಿಗೆ ಅದೇನು ಅಭಿವೃದ್ಧಿ ಮಾಡ್ತಾರೋ ಗೊತ್ತಿಲ್ಲ.
ಶಿವಲಿಂಗ ಕುಟುಂಬಸ್ಥರಿಗೆ ನಿಂತುಕೊಂಡು ಸುಸ್ತಾಗಿರಬೇಕು, ಆಗ ಸಚಿವ ಶರಣಬಸಪ್ಪ ದರ್ಶನಾಪುರ ಒಂದು ನಿಮಿಷ ಎದ್ದು ಚೆಕ್ ವಿತರಣೆ ಮಾಡಿ ಕಳುಹಿಸಿದ್ದಾರೆ.
58
ಸಹನಾ ಮನೆಗೆ ಹೋದ ಡಿಸಿ:
ಚಿನ್ನಸ್ವಾಮಿ ಕ್ರೀಡಾಂಗಣದ ಕಾಲ್ತುಳಿತದಲ್ಲಿ ಮೃತಪಟ್ಟ ಕೋಲಾರದ ಯುವತಿ ಸಹನಾ ಅವರ ಕುಟುಂಬ ಭೇಟಿ ಮಾಡಿದ ಕೋಲಾರ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಅಧಿಕಾರಿಗಳು ಚೆಕ್ ವಿತರಣೆ ಮಾಡಿದ್ದಾರೆ. ಈ ವೇಳೆ ಸಹನಾ ಪೋಷಕರು ಸರ್ಕಾರದ ಪರಿಹಾರ ಬೇಡ, ಮಗಳು ಬೇಕು ಎಂದು ಕಣ್ಣೀರಿಟ್ಟಿದ್ದಾರೆ.
68
ಮಂಡ್ಯ ಪೂರ್ಣಚಂದ್ರ ಮನೆಗೆ ಸಚಿವ ಚಲುರಾಯಸ್ವಾಮಿ
ಮಂಡ್ಯದಲ್ಲಿ ಕೃಷಿ ಸಚಿವ ಚೆಲುವರಾಯಸ್ವಾಮಿ ಅವರು ಕಾಲ್ತುಳಿತದಲ್ಲಿ ಮೃತಪಟ್ಟ ಯುವಕ ಪೂರ್ಣಚಂದ್ರ ಅವರ ಮನೆ ಬಾಗಿಲಿಗೆ ಹೋಗಿ ಅವರ ಪೋಷಕರಿಗೆ ಸಾಂತ್ವನದ ಮಾತು ಹೇಳಿ, ಧೈರ್ಯ ತುಂಬಿ ನಂತರ25 ಲಕ್ಷ ರೂ. ಚೆಕ್ ವಿತರಣೆ ಮಾಡಿದ್ದಾರೆ.
78
ಅಕ್ಷತಾ ಮನೆಗೆ ಡಿಸಿ ಸಮೇತ ಹೋದ ಶಾಸಕ ಭೀಮಣ್ಣ
ಇನ್ನು ಇದೇ ಕಾಲ್ತುಳಿತದಲ್ಲಿ ಮೃತಪಟ್ಟ ನವ ವಿವಾಹಿತೆ ಉತ್ತರ ಕನ್ನಡದ ಸಿದ್ಧಾಪುರ ಮೂಲದ ಅಕ್ಷತಾ ಅವರ ಮನೆಗೆ ಜಿಲ್ಲಾಧಿಕಾರಿ, ಪೊಲೀಸ್ ಅಧಿಕಾರಿಗಳೊಂದಿಗೆ ತೆರಳಿದ ಕಾಂಗ್ರೆಸ್ ಶಾಸಕ ಭೀಮಣ್ಣ ನಾಯ್ಕ, ಸಂತ್ರಸ್ತ ಕುಟುಂಬಕ್ಕೆ 25 ಲಕ್ಷ ರೂ. ಚೆಕ್ ವಿತರಣೆ ಮಾಡಿದ್ದಾರೆ.
88
ಕೊನೆಗೆ ಸಾಂತ್ವನದ ಮಾತು ಹೇಳಿದ ದರ್ಶನಾಪುರ:
ಸಂತ್ರಸ್ತ ಶಿವಲಿಂಗನ ಕುಟುಂಬದವರಿಗೆ ಸಾಂತ್ವನ ಹೇಳುತ್ತಾ, ಈ ಘಟನೆ ನಡೆಯಬಾರದಿತ್ತು ನಡೆದು ಹೊಗಿದೆ, ಧೈರ್ಯದಿಂದ ಇರಿ ಎಂದು ಹೇಳಿದ್ದಾರೆ. ಆಗ ಶಿವಲಿಂಗ ಅವರ ಕುಟುಂಬಸ್ಥರು ನಮ್ಮ ಕುಟುಂಬ ಕೂಲಿ ಕಾರ್ಮಿಕರ ಕಟುಂಬವಾಗಿದೆ. ನಮಗೆ ಒಂದು ಅವಧಿಯ ಪರಿಹಾರ ಕೊಟ್ಟರೆ ಮೃತ ಶಿವಲಿಂಗನ ಅಣ್ಣನಿಗೆ ಸರ್ಕಾರಿ ನೌಕರಿ ಕೊಡಿಸಿ ಎಂದು ಕೈಮುಗಿದು ಬೇಡಿಕೊಂಡಿದ್ದಾರೆ.
ತಮ್ಮನ ಹೆಸರಿನ ಮೇಲೆ ಅವರ ಅಣ್ಣ ಬದುಕು ಕಟ್ಟಿಕೊಳ್ಳುತ್ತಾನೆ. ನಮಗೂ ವಯಸ್ಸಾಗಿದೆ ಎಂದು ಅಳಲು ತೋಡಿಕೊಂಡ ಶಿವಲಿಂಗನ ತಾಯಿ ಲಕ್ಷ್ಮೀ ಮನವಿ ಮಾಡಿದ್ದಾರೆ. ಈ ವೇಳೆ 'ಡಿ' ಗ್ರೂಪ್ ನೌಕರಿ ಕೊಡಿಸುವುದಾಗಿ ಸಚಿವ ಶರಣಬಸಪ್ಪ ದರ್ಶನಾಪುರ ನಾಮಕೇವಾಸ್ತೆ ಭರವಸೆ ಕೊಟ್ಟು ಕಳುಹಿಸಿದ್ದಾರೆ.