ತನುಜಾ ಚಿತ್ರ ಟ್ರೇಲರ್‌ ಬಿಡುಗಡೆ ಮಾಡಿದ ಸಚಿವ ಕೆ. ಸುಧಾಕರ್‌

First Published Dec 8, 2022, 10:23 AM IST

ಹರೀಶ್‌ ಎಂ ಡಿ ಹಳ್ಳಿ ನಿರ್ದೇಶಿಸಿರುವ ತನುಜಾ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದೆ. 
ಫೋಟೋಕೃಪೆ: ಮನು

 ಶಿವಮೊಗ್ಗದ ಕುಗ್ರಾಮದಿಂದ ಬೆಂಗಳೂರಿಗೆ ಬಂದು ಕಷ್ಟದಲ್ಲಿ ನೀಟ್‌ ಪರೀಕ್ಷೆ ಬರೆದ ಸಾಧಕಿ ಕುರಿತಾದ ‘ತನುಜಾ’ ಚಿತ್ರದ ಟ್ರೇಲರ್‌ ಅನ್ನು ಆರೋಗ್ಯ ಸಚಿವ ಕೆ. ಸುಧಾಕರ್‌ ಬಿಡುಗಡೆ ಮಾಡಿದರು. ಹರೀಶ್‌ ಎಂ ಡಿ ಹಳ್ಳಿ ಈ ಸಿನಿಮಾ ನಿರ್ದೇಶಿಸಿದ್ದಾರೆ.

ಈ ವೇಳೆ ಮಾತನಾಡಿದ ಸಚಿವ ಸುಧಾಕರ್‌, ‘ತನುಜಾ ಪರೀಕ್ಷೆ ಬರೆಯಲು ಸಹಾಯ ಮಾಡುವಂತೆ ದೆಹಲಿಯ ನೀಟ್‌ ಅಧಿಕಾರಿಗಳ ಜೊತೆ ಮಾತನಾಡಿದ್ದೆ. ಈ ವಿಷಯದಲ್ಲಿ ಆಗಿನ ಮುಖ್ಯಮಂತ್ರಿಗಳಾಗಿದ್ದ ಯಡಿಯೂರಪ್ಪ, ಪತ್ರಕರ್ತ ವಿಶ್ವೇಶ್ವರ ಭಟ್‌ ಸಹಕಾರ ಅಪಾರ. 

 ಇದರಲ್ಲಿ ನಾನು ಸಚಿವನಾಗಿಯೇ ಅಭಿನಯಿಸಿದ್ದೇನೆ. ನಿರ್ದೇಶಕ ಹರೀಶ್‌ ಡಾಕ್ಟರ್‌ ಆಗಿದ್ದ ನನ್ನನ್ನು ಆ್ಯಕ್ಟರ್‌ ಮಾಡಿದರು. ನೀಟ್‌ ಪರೀಕ್ಷೆ ಬರೆದ ತನುಜಾ ವೈದ್ಯೆ ಆಗುವ ಹಾದಿಯಲ್ಲಿದ್ದಾಳೆ’ ಎಂದರು.

ಪತ್ರಕರ್ತ ವಿಶ್ವೇಶ್ವರ ಭಟ್‌, ‘ತನುಜಾ ಕುರಿತು ನಾನು ಬರೆದ ಅಂಕಣ ಓದಿದ ಹರೀಶ್‌ ಈ ಸಿನಿಮಾ ಮಾಡಲು ಮುಂದಾದರು. ಸದ್ಯದಲ್ಲೇ ಚಿತ್ರ ಬಿಡುಗಡೆಯಾಗಲಿದೆ’ ಎಂದರು. ಮುಖ್ಯಪಾತ್ರದಲ್ಲಿ ನಟಿಸಿದ ಸಪ್ತ ಕಾವೂರು, ‘ತನುಜಾ ಎಲ್ಲಾ ವಿದ್ಯಾರ್ಥಿಗಳಿಗೂ ಸ್ಫೂರ್ತಿ. 

ಆಕೆಯ ಪಾತ್ರ ಮಾಡಿರುವುದಕ್ಕೆ ನನಗೆ ಹೆಮ್ಮೆ ಇದೆ’ ಎಂದರು. ನಟ ರಾಜೇಶ್‌ ನಟರಂಗ ತಮ್ಮ ಪಾತ್ರದ ಕುರಿತು ಮಾತನಾಡಿದರು. ಸಾಧಕಿ ತನುಜಾ ಉಪಸ್ಥಿತರಿದ್ದರು. ನಿರ್ಮಾಪಕರಾದ ಚಂದ್ರಶೇಖರ್‌ ಗೌಡ, ಮನೋಜ್‌ ಬಿ.ಜಿ ಉಪಸ್ಥಿತರಿದ್ದರು. ಪ್ರದ್ಯೋತನ ಸಂಗೀತ, ಉಮೇಶ್‌ ಆರ್‌.ಬಿ ಸಂಕಲನ, ರವೀಂದ್ರನಾಥ್‌. ಟಿ ಛಾಯಾಗ್ರಹಣ ಚಿತ್ರಕ್ಕಿದೆ.

ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ, ವೈದ್ಯಕೀಯ ಶಿಕ್ಷಣ ಸಚಿವ ಕೆ ಸುಧಾಕರ್‌, ಪತ್ರಕರ್ತ ವಿಶ್ವೇಶ್ವರ ಭಟ್‌, ಸಪ್ತಾ ಕಾವೂರು ಮುಖ್ಯ ಪಾತ್ರದಲ್ಲಿ ನಟಿಸಿರುವ ‘ತನುಜಾ’ ಚಿತ್ರದ ಮೋಶನ್‌ ಪೋಸ್ಟರ್‌ ಕೆಲವು ದಿನಗಳ ಹಿಂದೆ ಬಿಡುಗಡೆ ಮಾಡಲಾಗಿತ್ತು.

ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡ ನಿರ್ದೇಶಕ ಹರೀಶ್, 'ನನ್ನ ನಿರ್ದೇಶನದ ಈ ಚಿತ್ರಕ್ಕೆ ನನ್ನ ಹಲವು ಸ್ನೇಹಿತರು ಬಂಡವಾಳ ಹೂಡಿದ್ದಾರೆ. ಒಂದು ದಿನದಲ್ಲಿ ನಡೆಯುವ ಕಥೆ ಇದು. ನೀಟ್ ಪರೀಕ್ಷೆ ಬರೆಯಲು ಸುಮಾರು 350ಕಿ.ಮೀ. ದೂರ ಪ್ರಯಾಣ ಮಾಡಿ, ಪರೀಕ್ಷೆ ಬರೆದ ವಿದ್ಯಾರ್ಥಿನಿಯ ಕಥೆಯೇ ರೋಚಕತೆಯಿಂದ ಕೂಡಿತ್ತು. 

ಈ ವಿಚಾರ ಎಲ್ಲರ ಕುತೂಹಲ ಕೆರಳಿಸಿತ್ತು. ಈ ಒನ್‌ಲೈನ್ ಸ್ಟೋರಿಯನ್ನು ಇಟ್ಟುಕೊಂಡು ಸಿನಿಮಾ ಮಾಡಿದ್ದೇವೆ. ಶಿವಮೊಗ್ಗ, ಬೆಂಗಳೂರಿನಲ್ಲಿ ಚಿತ್ರೀಕರಣ ನಡೆದಿದೆ. ಒಂದು ಟೇಕ್‌ ಸಹ ತೆಗೆದುಕೊಳ್ಳದ ಯಡಿಯೂರಪ್ಪ ಲೀಲಾಜಾಲವಾಗಿ ನಟಿಸಿದ್ದರ ಬಗ್ಗೆ ಹೇಳಿದರು. 

click me!