ನಿರ್ಮಾಣ ಕಷ್ಟ ಗೊತ್ತಾಗಲಿಲ್ಲ, ಮನೆ ಮಂದಿ ಸೇರಿ ಮಾಡಿರುವ ಸಿನಿಮಾ ವೇದ: ಗೀತಾ ಶಿವರಾಜ್‌ಕುಮಾರ್

ಡಿಸೆಂಬರ್ 23ಕ್ಕೆ ಹ್ಯಾಟ್ರಿಕ್ ಹೀರೋ ಶಿವಣ್ಣ ವೇದ ಸಿನಿಮಾ ರಿಲೀಸ್. ಮನೆಯಲ್ಲಿ ಮಾಡಿದ ಪ್ರೆಸ್‌ ಮೀಟ್‌ ಹೇಗಿತ್ತು ನೋಡಿ...

ಶಿವರಾಜ್‌ಕುಮಾರ್‌ ನಟನೆಯ ‘ವೇದ’ ಸಿನಿಮಾ ಡಿಸೆಂಬರ್‌ 23ಕ್ಕೆ ತೆರೆಗೆ ಬರುತ್ತಿದೆ. ಸಿನಿಮಾ ಬಿಡುಗಡೆ ಆಗುತ್ತಿರುವ ಹಿನ್ನೆಲೆಯಲ್ಲಿ ಚಿತ್ರದ ಕುರಿತು ಹೇಳಿಕೊಳ್ಳುವುದಕ್ಕೆ ಶಿವಣ್ಣ ಅವರ ಮನೆ ಆವರಣದಲ್ಲೇ ಪ್ರೀ ರಿಲೀಸ್‌ ಈವೆಂಟ್‌ ಆಯೋಜಿಸಲಾಗಿತ್ತು.

 ಗೀತಾ ಪಿಕ್ಚರ್‌ ಮೂಲಕ ಗೀತಾ ಶಿವರಾಜ್‌ಕುಮಾರ್‌ ನಿರ್ಮಾಣದ ಮೊದಲ ಚಿತ್ರ. ಜೀ ಸ್ಟುಡಿಯೋಸ್‌ ನಿರ್ಮಾಣಕ್ಕೆ ಸಾಥ್‌ ನೀಡಿದೆ


ಎ ಹರ್ಷ ನಿರ್ದೇಶನ, ರಘು ನಿಡುವಳ್ಳಿ ಸಂಭಾಷಣೆ, ಸ್ವಾಮಿ ಜೆ ಗೌಡ ಕ್ಯಾಮೆರಾ, ಅರ್ಜುನ್‌ ಜನ್ಯ ಸಂಗೀತ ಚಿತ್ರಕ್ಕಿದೆ. ಗಾನವಿ ಲಕ್ಷ್ಮಣ್‌, ಉಮಾಶ್ರೀ, ಅದಿತಿ ಸಾಗರ್‌, ಚೆಲುವರಾಜು, ರಾಘು ಶಿವಮೊಗ್ಗ, ವಿನಯ್‌ ಬಿದ್ದಪ್ಪ, ಪ್ರಸನ್ನ, ಕುರಿ ಪ್ರತಾಪ್‌, ಲಾಸ್ಯ ನಾಗರಾಜ್‌, ಭರತ್‌ ಸಾಗರ್‌, ಸಂಜೀವ್‌, ಚಾರ್ವಿ ಗೌಡ, ಶ್ವೇತಾ ಚಂಗಪ್ಪ, ಚೇತನ್‌ ಹರಿ ಹೀಗೆ ಚಿತ್ರದಲ್ಲಿ ದೊಡ್ಡ ತಾರಾಗಣವೇ ಇದೆ.

ಈ ಸಂದರ್ಭದಲ್ಲಿ ಮಾತನಾಡಿದ ಶಿವರಾಜ್‌ಕುಮಾರ್‌, ‘ನನ್ನ 125ನೇ ಸಿನಿಮಾ. ಗೀತಾ ನಿರ್ಮಾಣದ ಮೊದಲ ಸಿನಿಮಾ. ಈ 125 ಎಂಬುದು ಒಂದು ಸಾವಿರ ದಾಟಲಿ. ಯಾಕೆಂದರೆ ಅಷ್ಟುಶಕ್ತಿ ನನಗೆ ಇದೆ. ಅದಕ್ಕೆ ಕಾರಣ ನಿಮ್ಮ ಪ್ರೀತಿ ಮತ್ತು ಅಭಿಮಾನ. ನನ್ನ ಒಬ್ಬನ ಸಿನಿಮಾ ಅಲ್ಲ ಇದು. ಇಡೀ ತಂಡದ ಸಿನಿಮಾ.

ಚಿತ್ರದಲ್ಲಿ ನಟಿಸಿರುವ ಮತ್ತು ಚಿತ್ರಕ್ಕಾಗಿ ಕೆಲಸ ಮಾಡಿರುವ ಪ್ರತಿಯೊಬ್ಬರ ಶ್ರಮವೂ ಇದೆ. ಈ ಚಿತ್ರವನ್ನು ಬೇರೆ ಯಾರೋ ನಿರ್ಮಾಣ ಮಾಡಬೇಕಿತ್ತು. ಅದು ಯಾಕೋ ತಡವಾಗುತ್ತಿತ್ತು. ಆಗ ನಾನೇ ಕೇಳಿದೆ. ಅವರು ಪ್ರೀತಿಯಿಂದ ಒಪ್ಪಿಕೊಂಡರು. 

100ನೇ ಚಿತ್ರದ ಸಂಭ್ರಮ ಇದೇ ಮನೆ ಮುಂದೆ ಮಾಡಿದ್ವಿ. ಆಗ ಅಮ್ಮ ಇದ್ದರು. ನನ್ನ ತಾಯಿ ನನ್ನ ಮೊದಲ ಚಿತ್ರದ ನಿರ್ಮಾಪಕರು. ಅಮ್ಮನ ಆಶೀರ್ವಾದಿಂದ ‘ಆನಂದ್‌’ ಶುರುವಾಗಿ, ಈಗ ನನ್ನ ಪತ್ನಿ ಮೂಲಕ ವೇದ ಆಗಿದ್ದೇನೆ. 

ಇದೊಂದು ರೀತಿಯಲ್ಲಿ ಆನಂದಮಯ ವೇದ. ಬುಡಕಟ್ಟು ಸಮುದಾಯ. ಅಲ್ಲೊಬ್ಬ ಹೂವಿನಂತ ಮನುಷ್ಯ. ಗ್ರಂಥದಂತೆ ಇರುವ ಆತನ ಬದುಕು, ಫ್ಲವರ್‌ ಹಿಂದೆ ಇರುವ ಫೈರ್‌, ನನ್ನ ಜೀವನದಲ್ಲಿ ಆಟ ಆಡುವ ನಾಲ್ಕು ಅಂಶಗಳು... ಇವುಗಳ ಸುತ್ತ ವೇದ ಸಿನಿಮಾ ಸಾಗುತ್ತದೆ. ಕತೆಗೆ ಸೂಕ್ತ ಎನಿಸುವಂತೆ ಟೈಟಲ್‌ ಕೂಡ ಇಟ್ಟಿದ್ದೇವೆ’ ಎಂದರು.

ನಿರ್ಮಾಪಕಿ ಗೀತಾ ಶಿರಾಜ್‌ಕುಮಾರ್‌, ‘ನಿರ್ದೇಶಕ ಎ ಹರ್ಷ ಎಲ್ಲವನ್ನು ಹೇಳಿಕೊಡುತ್ತಿದ್ದರು. ಹೀಗಾಗಿ ನನಗೆ ಸಿನಿಮಾ ನಿರ್ಮಾಣದ ಕಷ್ಟಗಳು ಗೊತ್ತಾಗಲಿಲ್ಲ. ಚಿತ್ರದಲ್ಲಿ ನಟಿಸಿರುವ ಪ್ರತಿಯೊಬ್ಬರು ನಮ್ಮ ಮನೆಯ ಕುಟುಂಬದವರಂತೆ ಆಗಿದ್ದಾರೆ. ಮನೆಮಂದಿ ಸೇರಿ ಮಾಡಿರುವ ಸಿನಿಮಾ ಇದು’ ಎಂದರು.

Latest Videos

click me!