ಕನ್ನಡ ಚಿತ್ರರಂಗದ ನವರಸ ನಾಯಕ ಎಂದೇ ಖ್ಯಾತಿ ಪಡೆದಿರುವ ಜಗ್ಗೇಶ್ (Navarasa Nayaka Jaggesh) ಅವರು ತಮ್ಮ ಪತ್ನಿಯ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಹೆಂಡ್ತಿಗೆ ಮುದ್ದಾಗಿ ವಿಶ್ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಪತ್ನಿ ಹಾಗೂ ಮೊಮ್ಮಗನ ಫೋಟೊ ಶೇರ್ ಮಾಡಿ ವಿಶ್ ಮಾಡಿದ್ದಾರೆ ನಟ.
ಜಗ್ಗೇಶ್ ಅವರು ತಮ್ಮ ಇನ್’ಸ್ಟಾಗ್ರಾಂ ಸೇರಿ ಇತರ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಮುದ್ದಾದ ಫ್ಯಾಮಿಲಿ ಫೋಟೊ ಹಂಚಿಕೊಂಡಿದ್ದಾರೆ. ಅದರಲ್ಲಿ ಮಧ್ಯದಲ್ಲಿ ಜಗ್ಗೇಶ್ ಅವರು ನಿಂತಿದ್ದು, ಅವರ ಬಲಬದಿಗೆ ಮೊಮ್ಮಗ ನಿಂತು ತಾತನ ಕೆನ್ನೆಗೆ ಮುತ್ತು ನೀಡುತ್ತಿದ್ದರೆ, ಇನ್ನೊಂದು ಕಡೆ ಪತ್ನಿ ಪರಿಮಳ (Parimala Jaggesh) ತಮ್ಮ ಮುದ್ದಿನ ಪತಿಯ ಕೆನ್ನೆಗೆ ಸಿಹಿ ಮುತ್ತನ್ನು ನೀಡುತ್ತಿದ್ದಾರೆ.
ಈ ಫೋಟೊವನ್ನು ಹಂಚಿಕೊಂಡಿರುವ ಜಗ್ಗೇಶ್ ‘ನಲ್ಮೆಯ ಮಡದಿ ಪರಿಮಳ ಹುಟ್ಟುಹಬ್ಬದ ಶುಭಾಶಯಗಳು. ಚಾಕಲೇಟು ನೀಡಿ ಕ್ಯಾಚ್ ಹಾಕಲು ಹುಟ್ಟುಹಬ್ಬದ ಶುಭಾಶಯ ನಾ ಕೋರುವಾಗ ಅಕೆ 14ವರ್ಷದವಳು. ಇಂದು 56ನೆ ಹುಟ್ಟುಹಬ್ಬ. ರಾಯರ ಕೃಪೆಯಿಂದ ನೂರ್ಕಾಲ ಬಾಳು ಎಂದು ಹಾರೈಸಿದ್ದಾರೆ.
ಜಗ್ಗೇಶ್ ಮತ್ತು ಪರಿಮಳ ಅವರದ್ದು ಹದಿಹರೆಯದ ಲವ್ ಸ್ಟೋರಿ (love story) ಅಂದ್ರೆ ತಪ್ಪಾಗಲ್ಲ. ಕೆಲಸಕ್ಕಾಗಿ ಅಲೆದಾಡುತ್ತಿದ್ದಾಗ, ದಾರಿಯಲ್ಲಿ ಕುಂಟಾಬಿಲ್ಲೆ ಆಡುತ್ತ ಕಣ್ಣಿಗೆ ಬಿದ್ದ 14 ವರ್ಷದ ಹುಡುಗಿ ಪರಿಮಳ. ಆಕೆಯನ್ನು ಒಲಿಸಿಕೊಳ್ಳಲು ಪ್ರಯತ್ನಿಸಿ, ನಂತರ ಆಕೆ ಓಕೆ ಎಂದ ನಂತರ ಪ್ರೀತಿ, ಮನೆಯವರ ವಿರುದ್ಧ ಕಟ್ಟಿಕೊಂಡು, ಕೋರ್ಟ್ ಕೇಸುಗಳನ್ನ ಎದುರಿಸಿ, ಕೊನೆಗೆ ಕೋರ್ಟ್ ಒಪ್ಪಿಗೆ ನೀಡಿದ ನಂತ್ರ ಮದುವೆಯಾದ ಜೋಡಿ ಇವರು.
ಇದೀಗ ದಾಂಪತ್ಯ ಜೀವನದಲ್ಲಿ 40 ವರ್ಷಗಳನ್ನು ಪೂರೈಸಿರುವ ಈ ಜೋಡಿಯನ್ನು ಆದರ್ಶ ದಂಪತಿಗಳು ಅಂತಾನೆ ಹೇಳಬಹುದು. ಹೆಂಡತಿಯ ಸಾಧನೆಯಲ್ಲಿ ಸದಾ ಜೊತೆಯಾಗಿರುವ ಪತಿ ಜಗ್ಗೇಶ್, ಜೊತೆಗೆ ನವರಸ ನಾಯಕನ ಪ್ರತಿ ಏಳು ಬೀಳಿನಲ್ಲಿ ಜೊತೆಯಾಗಿ ನಿಲ್ಲುವ ಪರಿಮಳ. ಇವರಿಬ್ಬರ ಮಧುರ ಭಾಂದವ್ಯಕ್ಕೆ 40 ವರ್ಷಗಳ ದಾಂಪತ್ಯ ಜೀವನವೇ ಸಾಕ್ಷಿ. ಇವರಿಗೆ ಇಬ್ಬರು ಗಂಡು ಮಕ್ಕಳು ಹಾಗೂ ಒಬ್ಬ ಮೊಮ್ಮಗನೂ ಇದ್ದಾನೆ.
ಪ್ರತಿ ಬಾರಿ ಪತ್ನಿಯ ಹುಟ್ಟುಹಬ್ಬ, ಮದುವೆ ವಾರ್ಷಿಕೋತ್ಸವ ಬಂದಾಗಲೆಲ್ಲಾ, ಜಗ್ಗೇಶ್, ತಮ್ಮ ಪ್ರೇಮ ಕಥನವನ್ನು ನೆನಪಿಸಿಕೊಳ್ಳುತ್ತಾ, ಅದನ್ನ ಯಾವಾಗಲೂ ಹಸಿರಾಗಿಟ್ಟುಕೊಳ್ಳುತ್ತಾರೆ. ಜೊತೆಗೆ ತಮ್ಮ ಜೀವನದಲ್ಲಿ ಸಾತ್ ಕೊಟ್ಟ ಪತ್ನಿಯನ್ನೂ ಕೊಂಡಾಡೋದನ್ನ ಮರೆಯೋದಿಲ್ಲ ಜಗ್ಗೇಶ್.
ಮತ್ತೊಂದು ವಿಷ್ಯ ಗೊತ್ತಾ, ಜಗ್ಗೇಶ್ ಅವರನ್ನ ಪರಿಮಳ ಮದುವೆಯಾದಾಗ ಅವರಿಗೇ ಕೇವಲ 16 ವರ್ಷ, ಅಂದ್ರೆ ಆಗಷ್ಟೇ ಹತ್ತನೇ ಕ್ಲಾಸ್ ಮುಗಿಸಿದ್ದರು. ಮದುವೆಯಾಗಿ ಮಕ್ಕಳಾದ ಬಳಿಕ, ಪತ್ನಿಯ ಹೆಚ್ಚಿನ ವಿದ್ಯಾಭ್ಯಾಸ ಮಾಡುವ ಆಸೆಗೆ ನೀರೆರೆದು ಪೋಷಿಸಿದವರು ಜಗ್ಗೇಶ್. ಇಂದು ಪರಿಮಳ ಡಾಕ್ಟರೇಟ್ ಪಡೆದು ಸಾಧನೆ ಮಾಡಿರೋದಕ್ಕೂ ಜಗ್ಗೇಶ್ ಅವರ ಬೆಂಬಲವೇ ಕಾರಣ.