ಸ್ಮಾರ್ಟ್‌ಪೋನ್‌ಗಳು ನಮ್ಮ ಕೆಲಸವನ್ನು ಎಷ್ಟು ಸುಲಭ ಮಾಡಿದೆಯೋ ಬದುಕನ್ನು ಅಷ್ಟೇ ಹಾಳು ಮಾಡಿದೆ ಅನ್ನೋದು ಇಲ್ಲಿಯವರೆಗೂ ಮೇಲ್ನೋಟಕ್ಕೆ ಕಾಣುತ್ತಿತ್ತು. ಆದರೆ, ಇತ್ತೀಚೆಗೆ ಪ್ರಖ್ಯಾತ ಮೊಬೈಲ್ ಕಂಪನಿ ವಿವೋ, ಸೈಬರ್ ಮೀಡಿಯಾ ಸಹಯೋಗದಲ್ಲಿ ನಡೆಸಿದ ಆರನೇ ಆವೃತ್ತಿಯ ವಿವೋ-ಸೈಬರ್‌ಮೀಡಿಯಾ ರಿಸರ್ಚ್ ಪ್ರಕಾರ ಈಗ ಸ್ಮಾರ್ಟ್‌ಫೋನ್ 'ಫೋಬಿಯಾ' ಆಗಿ ಬದಲಾಗಿದೆ.
ಕೈಗಳಲ್ಲಿ ಕೂರುವ ಮೊಬೈಲ್ ಮನುಷ್ಯ ಸಂಬಂಧವನ್ನೇ ಕಟ್ಟಿಹಾಕಿದೆ ಎನ್ನುವುದು ಒಟ್ಟಾರೆ ರಿಸರ್ಚ್‌ನ ಮೂಲ ಅರ್ಥವಾಗಿದೆ. ಇಂದು ಮನುಷ್ಯನಿಗೆ ಕುಂತರೂ, ನಿಂತರೂ ಕೊನೆಗೆ ನಿತ್ಯಕರ್ಮಗಳಿಗೆ ಹೋಗುವಾಗಲೂ ಮೊಬೈಲ್ ಬೇಕೇ ಬೇಕು ಎನ್ನುವಷ್ಟದ ಮಟ್ಟಕ್ಕೆ ಬಂದಿದೆ.
ಮೊಬೈಲ್ ಇಲ್ಲದೇ ಇದ್ದರೆ ಏನೋ ಒಂದು ಚಡಪಡಿಕೆ.ಆದರೆ, ಇಂದು ಇದೇ ಮೊಬೈಲ್‌ಗಳು ಮನುಷ್ಯನ ಸಂಬಂಧಗಳ ಮೇಲೆ ಪರಿಣಾಮ ಬೀರುತ್ತಿದೆ.ತಮ್ಮ ಕುಟುಂಬದೊಂದಿಗೆ ಕೆಟ್ಟ ಸಂಬಂಧ ಹೊಂದಿರೋದಕ್ಕೆ ಕಾರಣ ಮೊಬೈಲ್ ಎಂದು ಸ್ವತಃ ಇಂದಿನ ಮಕ್ಕಳೇ ಹೇಳುತ್ತಿದ್ದಾರೆ ಎನ್ನುವುದು ಸರ್ವೆಯ ವಿವರವಾಗಿದೆ. ಹೈದರಾಬಾದ್,ಬೆಂಗಳೂರು, ಅಹಮದಾಬಾದ್, ದೆಹಲಿ, ಮುಂಬೈ, ಕೋಲ್ಕತ್ತಾ, ಚೆನ್ನೈ ಮತ್ತು ಪುಣೆಯಲ್ಲಿ ಸ್ಮಾರ್ಟ್‌ಫೋನ್ ಬಳಕೆದಾರರನ್ನು ಅಧ್ಯಯನ ಮಾಡಿದ ಬಳಿಕ ಈ ವರದಿ ಪ್ರಕಟವಾಗಿದೆ.
ವಿವೋ ನಡೆಸಿದ ಸ್ವಿಚ್ ಆಫ್ 3.0 ಸಮೀಕ್ಷೆಯಲ್ಲಿ ಮೊಬೈಲ್‌ನಿಂದಾಗಿ ಪೋಷಕರು, ಸಂಗಾತಿ ಹಾಗೂ ಮಕ್ಕಳ ಜೊತೆಗಿನ ರಿಲೇಷನ್‌ಷಿಪ್ ಹಾಳಾಗುತ್ತಿದೆ. ಸ್ಮಾರ್ಟ್‌ಫೋನ್‌ನಲ್ಲಿ ಪೋಷಕರು ದಿನಕ್ಕೆ ಸರಾಸರಿ 5 ಗಂಟೆ ಕಾಲ ಕಳೆಯುತ್ತಿದ್ದರೆ, ಮಕ್ಕಳು 4 ಗಂಟೆಗಿಂತ ಅಧಿಕ ಸಮಯವನ್ನು ಮೊಬೈಲ್‌ನಲ್ಲಿ ಕಳೆಯುತ್ತಿದ್ದಾರೆ ಎಂದು ವರದಿ ತಿಳಿಸಿದೆ. ಹಾಗೂ ಹೆಚ್ಚಿನವರು ಸೋಶಿಯಲ್ ಮೀಡಿಯಾದಲ್ಲಿಯೇ ತಮ್ಮ ಸಮಯವನ್ನು ಕಳೆಯುತ್ತಿದ್ದಾರೆ ಎಂದೂ ಸರ್ವೆಯಲ್ಲಿ ತಿಳಿಸಲಾಗಿದೆ.
ಇಂದು ವೈಯಕ್ತಿಕ ಸಂಬಂಧ ಅತಿಯಾಗಿ ಹಾನಿಯಾಗುತ್ತಿರುವುದಕ್ಕೆ ಮೂಲ ಕಾರಣ ಮೊಬೈಲ್. ಶೇ. 66ರಷ್ಟು ಪೋಷಕರು ಹಾಗೂ ಶೇ. 56ರಷ್ಟು ಮಕ್ಕಳು ಅತಿಯಾದ ಸ್ಮಾರ್ಟ್‌ಫೋನ್ ಬಳಕೆಯಿಂದ ತಮ್ಮ ಸಂಬಂಧದಲ್ಲಿ ಕೆಟ್ಟ ಬದಲಾವಣೆ ಆಗಿದೆ ಅನ್ನೋದನ್ನು ಒಪ್ಪಿಕೊಂಡಿದ್ದಾರೆ. ಇದು ಇಬ್ಬರ ನಡುವಿನ ಮನಸ್ತಾಪಗಳಿಗೂ ಕಾರಣವಾಗಿದೆ.