ರಾಜ್ಯ ರಾಜಕೀಯಕ್ಕೆ ರೀ HDK: ನನಗೆ ರಾಜಕೀಯ ಜನ್ಮ ನೀಡಿದ ನೆಲವೇ ನನ್ನ ಅಂತಿಮ ಆಯ್ಕೆ, ರಾಮನಗರದತ್ತ ಕುಮಾರಸ್ವಾಮಿ

Published : Jan 25, 2026, 04:48 PM IST

ರಾಜಕೀಯದಿಂದ ದೂರ ಸರಿಯುವ ವದಂತಿಗಳಿಗೆ ತೆರೆ ಎಳೆದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ,  ರಾಮನಗರವೇ ತಮ್ಮ ಅಂತಿಮ ರಾಜಕೀಯ ನೆಲೆ ಎಂದಿರುವ ಅವರು, 2028ರಲ್ಲಿ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

PREV
18
ಮತ್ತೆ ರಾಜ್ಯ ರಾಜಕಾರಣದಲ್ಲಿ ಸಕ್ರಿಯ

ರಾಮನಗರ: ರಾಜಕೀಯದಿಂದ ದೂರ ಸರಿಯುವ ಸೂಚನೆ ನೀಡಿದ್ದ ಕೇಂದ್ರ ಸಚಿವ ಹಾಗೂ ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿ, ಮತ್ತೆ ರಾಜ್ಯ ರಾಜಕಾರಣದಲ್ಲಿ ಸಕ್ರಿಯವಾಗಿ ಮುಂದುವರಿಯುವ ಸ್ಪಷ್ಟ ಸಂದೇಶ ನೀಡಿದ್ದಾರೆ. ಅದರಲ್ಲೂ ರಾಮನಗರವೇ ನನ್ನ ಅಂತಿಮ ರಾಜಕೀಯ ನೆಲೆ ಎಂದು ಘೋಷಿಸುವ ಮೂಲಕ ಮುಂದಿನ ಚುನಾವಣಾ ರಾಜಕೀಯಕ್ಕೆ ಸ್ಪಷ್ಟ ದಿಕ್ಕು ನೀಡಿದ್ದಾರೆ.

ರಾಮನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಕುಮಾರಸ್ವಾಮಿ, “ಕಳೆದ ಚುನಾವಣೆಯಲ್ಲಿ ಅನಿವಾರ್ಯವಾಗಿ ಕಾರ್ಯಕರ್ತರ ಒತ್ತಡಕ್ಕೆ ಮಣಿದು ಮಂಡ್ಯಕ್ಕೆ ಹೋಗಬೇಕಾಯಿತು. ಆದರೆ ನನಗೆ ರಾಜಕೀಯ ಜನ್ಮ ನೀಡಿದ್ದು ರಾಮನಗರ. ಇದೇ ನನ್ನ ಅಂತಿಮ ಆಯ್ಕೆ. ಇಲ್ಲಿಯೇ ನನ್ನ ಉಳಿದ ರಾಜಕೀಯ ಜೀವನ ಕಳೆಯುತ್ತೇನೆ” ಎಂದು ಸ್ಪಷ್ಟಪಡಿಸಿದರು.

28
ಬಿಜೆಪಿ–ಜೆಡಿಎಸ್ ಸಮ್ಮಿಶ್ರ ಸರ್ಕಾರ ಬರಲಿದೆ

ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಬಿಜೆಪಿ–ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸವನ್ನೂ ಕುಮಾರಸ್ವಾಮಿ ವ್ಯಕ್ತಪಡಿಸಿದರು. “ಸರ್ಕಾರಗಳು ಬರುತ್ತವೆ, ಹೋಗುತ್ತವೆ. ಆದರೆ ಸರ್ಕಾರಗಳು ಜನಾಭಿಪ್ರಾಯಕ್ಕೆ ಮಣಿಯಬೇಕು. 2028ರಲ್ಲಿ ರೈತರ ಸರ್ಕಾರ ಬರಲಿದೆ. ಈ ಸರ್ಕಾರದಲ್ಲಿ ದುಡ್ಡಿಲ್ಲ, ಜನರ ನಂಬಿಕೆಯೂ ಇಲ್ಲ” ಎಂದು ಪ್ರಸ್ತುತ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

38
ಅಧಿಕಾರ ಯಾರಿಗೂ ಶಾಶ್ವತವಲ್ಲ

“ನನ್ನ ಜೊತೆಯಲ್ಲೇ ಇದ್ದವರು ಇಂದು ಅಧಿಕಾರದ ದರ್ಪದಲ್ಲಿ ಮಾತನಾಡುತ್ತಿದ್ದಾರೆ. ಆದರೆ ಅಧಿಕಾರ ಯಾರಿಗೂ ಶಾಶ್ವತವಲ್ಲ ಎಂಬುದನ್ನು ಅವರು ನೆನಪಿಟ್ಟುಕೊಳ್ಳಬೇಕು” ಎಂದು ಕಾಂಗ್ರೆಸ್ ನಾಯಕರಿಗೆ ಎಚ್ಚರಿಕೆ ನೀಡಿದರು. 2006ರಿಂದ ನಡೆದ ಅನೇಕ ಘಟನೆಗಳ ಕುರಿತು ವೇದಿಕೆಯಲ್ಲಿ ಹಲವು ಮಂದಿ ಮಾತನಾಡಿದ್ದಾರೆ. “ಆಗಲೇ ದಾಖಲೆಗಳನ್ನು ಹೊಂದಿಸಿ ಕೋರ್ಟ್‌ಗೆ ಹೋಗೋಣ ಎಂದು ನಾನು ಹೇಳಿದ್ದೆ” ಎಂದರು.

48
ಭೂಮಿ, ಕೃಷಿ ಮತ್ತು ತಂದೆಯ ಬೋಧನೆ

ತಮ್ಮ ರಾಜಕೀಯ ಹಾಗೂ ವೈಯಕ್ತಿಕ ಬದುಕಿನ ಬೇರುಗಳ ಬಗ್ಗೆ ಮಾತನಾಡಿದ ಕುಮಾರಸ್ವಾಮಿ, “ನನ್ನ ಅಧಿಕಾರ, ವೃತ್ತಿ ಎಲ್ಲವೂ ಈ ನೆಲದಿಂದಲೇ ಆರಂಭವಾಯಿತು. ನಮ್ಮ ತಂದೆ ದೇವೇಗೌಡರು ಬಡ ರೈತ ಕುಟುಂಬದಿಂದ ಬಂದವರು. ಕೃಷಿ ಬಿಟ್ಟು ಬೇರೆ ವೃತ್ತಿಗೆ ಹೋದರೆ ಕುಟುಂಬ ಹಾಳಾಗುತ್ತದೆ ಎಂದು ಹೇಳುತ್ತಿದ್ದರು. ಭೂಮಿಯನ್ನು ನಂಬಿ ಬದುಕಿ ಎಂದೇ ಅವರು ನಮಗೆ ಕಲಿಸಿದರು” ಎಂದು ನೆನಪಿಸಿಕೊಂಡರು.

“ರಸ್ತೆಯಲ್ಲಿ ಸಗಣಿ ಬಿದ್ದಿದ್ದರೆ ಹೊಲಕ್ಕೆ ಹಾಕಿ ಎಂದು ಸಹೋದರಿಗೆ ಹೇಳುತ್ತಿದ್ದ ತಂದೆ, ಕೃಷಿಯೇ ನಮ್ಮನ್ನು ಉಳಿಸುತ್ತದೆ ಎಂದು ಬೋಧಿಸಿದ್ದರು” ಎಂದು ಹೇಳಿದರು.

58
ರಾಮನಗರದಲ್ಲಿ ಭೂ ಖರೀದಿ, ಸರ್ಕಾರದ ಹಿಂಸೆ ಆರೋಪ

ರಾಮನಗರದ ಜೊತೆಗಿನ ತಮ್ಮ ಆತ್ಮೀಯ ಸಂಬಂಧವನ್ನು ವಿವರಿಸಿದ ಕುಮಾರಸ್ವಾಮಿ, “ನಾನು ಇಲ್ಲಿನ ಬದುಕನ್ನು ಕಟ್ಟಿಕೊಂಡಿದ್ದೇನೆ. 1983ರಲ್ಲಿ ಭೂಮಿ ಖರೀದಿ ಮಾಡಿದ್ದೇನೆ. ಒಟ್ಟು 46 ಎಕರೆ ಜಮೀನು ಖರೀದಿಸಿದ್ದೇನೆ. ನೆಮ್ಮದಿಗಾಗಿ ಭೂಮಿ ತೆಗೆದುಕೊಂಡೆ. ಆದರೆ ಇಂದು 4.5 ಎಕರೆ ಭೂಮಿ ಖರೀದಿಸಿದ್ದೇನೆ ಎಂಬ ಕಾರಣಕ್ಕೆ ಈ ಸರ್ಕಾರ ಅನಗತ್ಯ ಹಿಂಸೆ ಕೊಡುತ್ತಿದೆ” ಎಂದು ಆರೋಪಿಸಿದರು. “ಸಮಯ ಬರಲಿ ಅಂತ ಕಾಯುತ್ತಿದ್ದೇನೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

68
‘ರಾಜಕೀಯ ಬಿಡೋಣ ಎಂದುಕೊಂಡಿದ್ದೆ’

ಒಂದು ಹಂತದಲ್ಲಿ ರಾಜಕೀಯ ಬಿಡಬೇಕು ಎಂದುಕೊಂಡಿದ್ದೆ. ಆದರೆ ಮನೆ ಬಳಿ ಅನೇಕ ಹಿರಿಯರು ಬಂದು ಮಾತನಾಡಿದರು. ಅವರ ಮಾತಿನಿಂದಲೇ ನಾನು ಇಂದು ಬದುಕಿದ್ದೇನೆ” ಎಂದ ಕುಮಾರಸ್ವಾಮಿ, ಹಳೆಯ ದಿನಗಳನ್ನು ನೆನಪಿಸಿಕೊಂಡರು.

ಬೆಂಗಳೂರು ಅಭಿವೃದ್ಧಿ ಕುರಿತ ಹೇಳಿಕೆ

ತಮ್ಮ ಆಡಳಿತಾವಧಿಯ ಸಾಧನೆಗಳನ್ನು ಪ್ರಸ್ತಾಪಿಸಿದ ಅವರು, “2004ರಲ್ಲಿ ನೀವು ನನ್ನನ್ನು ಶಾಸಕನಾಗಿ ಆಯ್ಕೆ ಮಾಡಿದ್ದೀರಿ. 2006ರಲ್ಲಿ ಮುಖ್ಯಮಂತ್ರಿ ಆಗುವ ಅನಿವಾರ್ಯತೆ ಬಂತು. ಬೆಂಗಳೂರಿನಲ್ಲಿ ಅನೇಕ ಅಭಿವೃದ್ಧಿ ಯೋಜನೆಗಳನ್ನು ಮಾಡಿದ್ದರೂ ನಾನು ಅದಕ್ಕೆ ಪ್ರಚಾರ ಮಾಡಿಕೊಂಡಿಲ್ಲ” ಎಂದು ಹೇಳಿದರು.

“ಮೊದಲ 19 ಕಿಲೋಮೀಟರ್ ಮೆಟ್ರೋ ಕಾಮಗಾರಿ ನನ್ನ ಅವಧಿಯಲ್ಲಿ ಆರಂಭವಾಯಿತು. ಐದು ನಗರಸಭೆಗಳನ್ನು ಒಗ್ಗೂಡಿಸಿ ಬೃಹತ್ ಮಹಾನಗರ ಪಾಲಿಕೆ ರಚಿಸಿದ್ದು ನಾನೇ. 59 ರಸ್ತೆಗಳನ್ನು ಅಗಲೀಕರಣ ಮಾಡಲಾಗಿದೆ” ಎಂದು ಹೇಳಿದರು.

78
ಭೂಸ್ವಾಧೀನ ಮತ್ತು ರೈತರ ಪರ ಹೋರಾಟ

ಭೂಸ್ವಾಧೀನ ಪ್ರಕ್ರಿಯೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಕುಮಾರಸ್ವಾಮಿ, “ಇಂದಿನ ಸರ್ಕಾರ ರೈತರನ್ನು ಗೌರವದಿಂದ ನಡೆಸಿಕೊಳ್ಳುತ್ತಿಲ್ಲ. ಈಗಲ್‌ಟನ್ ಭೂಮಿಗೆ ಎಕರೆಗೆ 13 ಕೋಟಿ ರೂ. ದರ ನಿಗದಿಯಾಗಿದೆ. ಆದರೆ ಇಲ್ಲಿ ರೈತರಿಗೆ ಕೇವಲ 2.45 ಕೋಟಿ ಕೊಡಲು ಮುಂದಾಗಿದ್ದಾರೆ” ಎಂದು ಆರೋಪಿಸಿದರು.

ಡಿಕೆ ಶಿವಕುಮಾರ್ ಅವರನ್ನು ಉಲ್ಲೇಖಿಸಿ, “ರೈತರ ಬದುಕಿನ ಬಗ್ಗೆ ಗೌರವ ಇರಬೇಕು. ರೈತರನ್ನು ಬಾಡಿಗೆ ರೈತರು ಎನ್ನುವ ಮನಸ್ಥಿತಿ ಸರಿಯಲ್ಲ” ಎಂದು ಟೀಕಿಸಿದರು.

88
ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು

ಸಿಎಂ ಸಿದ್ದರಾಮಯ್ಯ ಅವರು ‘ಜೆಡಿಎಸ್ ಅಧಿಕಾರಕ್ಕೆ ಬರಲ್ಲ, ಕುಮಾರಸ್ವಾಮಿ ಸಿಎಂ ಆಗಲ್ಲ’ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, “2018ರಲ್ಲಿ ಕೂಡ ಇದೇ ಮಾತು ಹೇಳಿದ್ದರು. ಆದರೆ ನಂತರ ಅವರೇ ನನ್ನ ಮನೆಗೆ ಬಂದು ಮುಖ್ಯಮಂತ್ರಿ ಆಗುವಂತೆ ಕೇಳಿಕೊಂಡಿದ್ದರು. 2028ರಲ್ಲೂ ಇತಿಹಾಸ ಮರುಕಳಿಸುತ್ತದೆ” ಎಂದು ತಿರುಗೇಟು ನೀಡಿದರು.

‘ನನಗೆ ಸಿಎಂ ಆಗುವುದು ಮುಖ್ಯವಲ್ಲ’

ಕೊನೆಯಲ್ಲಿ ಮಾತನಾಡಿದ ಅವರು, “ನನಗೆ ಮುಖ್ಯಮಂತ್ರಿ ಆಗುವುದು ಮುಖ್ಯವಲ್ಲ. ರಾಜ್ಯದಲ್ಲಿ ಜನತಾ ಸರ್ಕಾರ ಬರಬೇಕು. ಭ್ರಷ್ಟ ಸರ್ಕಾರವನ್ನು ಕಿತ್ತಾಕಬೇಕು ಎಂಬುದೇ ನನ್ನ ಹೋರಾಟ” ಎಂದು ಹೇಳಿದರು.

“ರಾಮನಗರದಿಂದ ನನ್ನನ್ನು ಯಾರೂ ಓಡಿಸಲು ಸಾಧ್ಯವಿಲ್ಲ. ನೋಟಿಫಿಕೇಷನ್ ಆಗಲಿ, ಒತ್ತಡ ಆಗಲಿ – ರೈತರ ಜೊತೆ ನಾನು ನಿಂತಿದ್ದೇನೆ. ಭೂಮಿ ಮತ್ತು ಚಿನ್ನದ ಬೆಲೆ ಎಂದಿಗೂ ಬೀಳುವುದಿಲ್ಲ” ಎಂದು ಸ್ಪಷ್ಟ ಸಂದೇಶ ನೀಡಿದರು.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories