ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿಯಾದ ಸಾರಾ ಮಹೇಶ್, ಪಕ್ಷ ಸಂಘಟನೆ ಮತ್ತು ಮೈತ್ರಿಯಲ್ಲಿ ಚಾಮರಾಜ ಕ್ಷೇತ್ರದ ಬೇಡಿಕೆ, ಚಾಮುಂಡೇಶ್ವರಿ ಸ್ಪರ್ಧೆ, ನಿಖಿಲ್ ಕುಮಾರಸ್ವಾಮಿ ಸ್ಪರ್ಧೆಯ ವದಂತಿಗಳ ಬಗ್ಗೆ ಸ್ಪಷ್ಟನೆ ನೀಡಿದ್ದು, ಜಿ.ಟಿ.ದೇವೇಗೌಡರನ್ನು ಮರಳಿ ಕರೆತರುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.
ಬೆಂಗಳೂರು: ಮಾಜಿ ಪ್ರಧಾನಿ, JDS ವರಿಷ್ಠ ಎಚ್.ಡಿ. ದೇವೇಗೌಡರನ್ನು ಭೇಟಿ ಮಾಡಿದ ಬಳಿಕ ಮಾಜಿ ಸಚಿವ ಸಾ.ರಾ. ಮಹೇಶ್ ಅವರು ಪಕ್ಷದ ಒಳಚರ್ಚೆಗಳ ಕುರಿತು ಮಹತ್ವದ ಹೇಳಿಕೆ ನೀಡಿದ್ದಾರೆ. ಪದ್ಮನಾಭನಗರದಲ್ಲಿರುವ ದೇವೇಗೌಡರ ನಿವಾಸದಲ್ಲಿ ನಡೆದ ಸಭೆಯಲ್ಲಿ ಎರಡು ಪ್ರಮುಖ ವಿಚಾರಗಳ ಬಗ್ಗೆ ವಿಸ್ತೃತ ಚರ್ಚೆ ನಡೆದಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
“ಇಂದಿನ ಸಭೆ ಮುಖ್ಯವಾಗಿ ಎರಡು ವಿಷಯಗಳ ಕುರಿತಾಗಿತ್ತು. ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಪಕ್ಷ ಸಂಘಟನೆ ಬಲಪಡಿಸುವ ಬಗ್ಗೆ ಮತ್ತು ಹಾಸನದಲ್ಲಿ ನಡೆಯಲಿರುವ ಸಮಾವೇಶದ ಬಗ್ಗೆ ಸುಧೀರ್ಘವಾಗಿ ಚರ್ಚೆ ನಡೆಯಿತು. ಈ ಎರಡೂ ವಿಷಯಗಳ ಕುರಿತು ದೇವೇಗೌಡರ ಜೊತೆ ಸಮಗ್ರ ಚರ್ಚೆ ನಡೆಸಲಾಗಿದೆ” ಎಂದು ಸಾರಾ ಮಹೇಶ್ ತಿಳಿಸಿದರು.
26
ಚಾಮರಾಜ ಕ್ಷೇತ್ರದ ಕುರಿತ ಬೇಡಿಕೆ
ಚಾಮರಾಜ ಕ್ಷೇತ್ರವನ್ನು ಮೈತ್ರಿ ರಾಜಕಾರಣದ ಭಾಗವಾಗಿ ಜೆಡಿಎಸ್‌ಗೆ ಬಿಟ್ಟುಕೊಡಬೇಕು ಎಂಬ ಬೇಡಿಕೆಯನ್ನೂ ಪಕ್ಷದ ವರಿಷ್ಠರ ಮುಂದೆ ಇಡಲಾಗಿದೆ ಎಂದು ಸಾರಾ ಮಹೇಶ್ ತಿಳಿಸಿದರು. ಮೈತ್ರಿಯಲ್ಲಿ ಚಾಮರಾಜ ಕ್ಷೇತ್ರವನ್ನು ಜೆಡಿಎಸ್‌ಗೆ ನೀಡುವಂತೆ ಒತ್ತಾಯಿಸಲು ನಾವು ಮನವಿ ಮಾಡಿದ್ದೇವೆ ಎಂದು ಹೇಳಿರುವುದರಿಂದ ಮೈತ್ರಿ ಪಕ್ಷ ಬಿಜೆಪಿಯ ಮುಂದಿನ ನಡೆ ಏನು ಎಂಬುದನ್ನು ಕಾದು ನೋಡಬೇಕು.
ಏಕೆಂದರೆ ಈಗಾಗಲೇ ಚಾಮರಾಜ ಕ್ಷೇತ್ರದಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಬಿರುಸಿನ ಚಟುವಟಿಕೆ ಆರಂಭಿಸಿದ್ದು, ನಾನು ಆಕಾಂಕ್ಷಿ ಎಂದಿದ್ದಾರೆ. ಇದಕ್ಕೆ ಕಳೆದ ಚುನಾವಣೆಯಲ್ಲಿ ಸೋತ ಬಿಜೆಪಿ ಅಭ್ಯರ್ಥಿ ಎಲ್ ನಾಗೇಂದ್ರ ಕೆಂಡಾಮಂಡಲ ಆಗಿದ್ದರು. ಇಬ್ಬರ ಕಿತ್ತಾಟದ ನಡುವೆ ಈಗ ಜೆಡಿಎಸ್ ಕಣ್ಣಿಟ್ಟಿರುವುದು ತೀವ್ರ ಕುತೂಹಲ ಮೂಡಿಸಿದೆ. ಪ್ರಸ್ತುತ ಅಲ್ಲಿ ಕಾಂಗ್ರೆಸ್ ನ ಹರೀಶ್ ಗೌಡ ಕ್ಷೇತ್ರದ ಶಾಸಕರಾಗಿದ್ದಾರೆ.
36
ಚಾಮುಂಡೇಶ್ವರಿ ಕ್ಷೇತ್ರದ ಚರ್ಚೆ
ಚಾಮುಂಡೇಶ್ವರಿ ಕ್ಷೇತ್ರದಿಂದ ತಾವು ಸ್ಪರ್ಧಿಸುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಇನ್ನೂ ವಿಧಾನಸಭಾ ಚುನಾವಣೆಗೆ ಎರಡು ವರ್ಷ ಸಮಯ ಇದೆ. ಈಗಿರುವ ಶಾಸಕರು ಪಕ್ಷದ ಜೊತೆ ಸಕ್ರಿಯವಾಗಿ ಕಾಣಿಸಿಕೊಳ್ಳುತ್ತಿಲ್ಲ. ಈ ಕಾರಣದಿಂದ ಜನರು ಹಾಗೂ ಕಾರ್ಯಕರ್ತರು ವಿವಿಧ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ” ಎಂದರು.
“ನನ್ನನ್ನು ಕೃಷ್ಣರಾಜ ನಗರ ಕ್ಷೇತ್ರದ ಜನರು ಮೂರು ಬಾರಿ ಆಯ್ಕೆ ಮಾಡಿ ಸಚಿವನನ್ನಾಗಿಸಿದ್ದಾರೆ. ಯಾವ ಕ್ಷೇತ್ರದಿಂದ ಯಾರು ಸ್ಪರ್ಧಿಸಬೇಕು ಎಂಬುದನ್ನು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ದೇವೇಗೌಡರೇ ತೀರ್ಮಾನ ಮಾಡುತ್ತಾರೆ. ಒಂದು ಪಕ್ಷದಲ್ಲಿ ಇದ್ದಾಗ ಕಾರ್ಯಕರ್ತರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವುದು ಸಹಜ” ಎಂದು ಹೇಳಿದರು.
“ಪಕ್ಷದ ಹೈಕಮಾಂಡ್ ಎಲ್ಲಿ ಸ್ಪರ್ಧೆ ಮಾಡಲು ಹೇಳಿದರೂ ನಾನು ಅಲ್ಲಿ ಸ್ಪರ್ಧೆ ಮಾಡಲು ಸಿದ್ಧನಿದ್ದೇನೆ. ಈಗ ಕೃಷ್ಣರಾಜ ನಗರ ಕ್ಷೇತ್ರದಲ್ಲಿ ಶ್ರೀವತ್ಸ ಇದ್ದಾರೆ. ಅವರು ಮಹಾನಗರ ಪಾಲಿಕೆಗೆ ಭಾರೀ ಮತಗಳಿಂದ ಆಯ್ಕೆಯಾಗಿದ್ದಾರೆ. ಅಂತಿಮವಾಗಿ ಪಕ್ಷದ ವರಿಷ್ಠರು ಯಾವ ತೀರ್ಮಾನ ಕೈಗೊಳ್ಳುತ್ತಾರೆ ಎಂಬುದನ್ನು ಕಾಯಬೇಕು. ಪಕ್ಷ ಎಲ್ಲಿ ಸ್ಪರ್ಧೆ ಮಾಡಲು ಹೇಳಿದರೂ, ಯಾರ ವಿರುದ್ಧವಾದರೂ ನಾನು ಸ್ಪರ್ಧಿಸಲು ಸಿದ್ಧನಿದ್ದೇನೆ. ಪಕ್ಷದ ಹಿತವೇ ನನ್ನ ಮೊದಲ ಆದ್ಯತೆ ಎಂದು ಸಾರಾ ಮಹೇಶ್ ಸ್ಪಷ್ಟಪಡಿಸಿದರು.
56
ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಕುರಿತ ವದಂತಿ
ನಿಖಿಲ್ ಕುಮಾರಸ್ವಾಮಿ ಮೈಸೂರಿನಲ್ಲಿ ಸ್ಪರ್ಧಿಸಲಿದ್ದಾರೆ ಎಂಬ ವದಂತಿಗಳ ಕುರಿತು ಮಾತನಾಡಿದ ಸಾರಾ ಮಹೇಶ್, “ನಿಖಿಲ್ ಅವರಿಗೆ ರಾಜ್ಯದ ಹಲವು ಭಾಗಗಳಿಂದ ಸ್ಪರ್ಧೆ ಮಾಡುವಂತೆ ಒತ್ತಡ ಬರುತ್ತಿದೆ. ಹಿಂದೆ ಪಕ್ಷದಲ್ಲಿ ಯಾರೂ ಸ್ಪರ್ಧಿಸಲು ಮುಂದೆ ಬರದ ಸಂದರ್ಭದಲ್ಲಿ ಅವರು ಸ್ಪರ್ಧೆ ಮಾಡಬೇಕಾಯಿತು” ಎಂದರು.
“ಪ್ರಸ್ತುತ ಪರಿಸ್ಥಿತಿಯಲ್ಲಿ ನಿಖಿಲ್ ಅವರು ಪಕ್ಷ ಸಂಘಟನೆಗೆ ಹೆಚ್ಚಿನ ಗಮನ ನೀಡುತ್ತಿದ್ದಾರೆ. ವೈಯಕ್ತಿಕವಾಗಿ ಅವರು ‘ನಾನು ಸ್ಪರ್ಧೆ ಮಾಡುವುದಕ್ಕಿಂತ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಕೆಲಸ ಮಾಡುತ್ತೇನೆ’ ಎಂದು ನಮಗೆ ಹೇಳಿದ್ದಾರೆ. ಅವರು ಎಲ್ಲರಿಗೂ ಚುನಾವಣಾ ಕೆಲಸ ಮಾಡಿ ಗೆಲ್ಲಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ” ಎಂದು ತಿಳಿಸಿದರು.
66
ಜಿ.ಟಿ.ದೇವೇಗೌಡರನ್ನು ಮನವೊಲಿಸುವ ಪ್ರಶ್ನೆ ಇಲ್ಲ
ಜಿ.ಟಿ.ದೇವೇಗೌಡರನ್ನು ಮತ್ತೆ ಪಕ್ಷಕ್ಕೆ ಸಮೀಪಕ್ಕೆ ತರುವ ವಿಚಾರಕ್ಕೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಸಾರಾ ಮಹೇಶ್, “2006ರಲ್ಲಿ ಸ್ವಲ್ಪ ಸಮಸ್ಯೆಗಳು ಎದುರಾದವು. 2013ರಲ್ಲೂ ಅವರು ಬೇಸರಗೊಂಡಿದ್ದರು. ಆ ಸಂದರ್ಭದಲ್ಲಿ ಕುಮಾರಸ್ವಾಮಿ ಅವರು ‘ನಮ್ಮ ಮನೆ ಬಾಗಿಲು ಮುಚ್ಚಿದೆ’ ಎಂದಿದ್ದರು. ಆದರೂ ನಾವು ಎಲ್ಲರೂ ಒಟ್ಟಾಗಿ ಪ್ರಯತ್ನ ಮಾಡಿ ಅವರನ್ನು ಮರಳಿ ಕರೆತಂದೆವು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಜಿ.ಟಿ.ದೇವೇಗೌಡರನ್ನು ಮನವೊಲಿಸುವ ಮನಸ್ಥಿತಿ ಯಾರಲ್ಲೂ ಇಲ್ಲ. ಈ ಬಾರಿ ಅವರನ್ನು ಮತ್ತೆ ಕರೆತರುವ ಪ್ರಶ್ನೆಯೇ ಇಲ್ಲ” ಎಂದು ಅವರು ಸ್ಪಷ್ಟವಾಗಿ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.