Published : Feb 23, 2026, 04:53 PM ISTUpdated : Feb 23, 2026, 05:10 PM IST
ಕರ್ನಾಟಕ ಕಾಂಗ್ರೆಸ್‌ನಲ್ಲಿ ಸಚಿವ ಸಂಪುಟ ಪುನರ್‌ರಚನೆಗೆ ಒತ್ತಾಯ ಹೆಚ್ಚಾಗಿದ್ದು, 30ಕ್ಕೂ ಹೆಚ್ಚು ಮೊದಲ ಬಾರಿಯ ಶಾಸಕರು ಹೈಕಮಾಂಡ್‌ಗೆ ಪತ್ರ ಬರೆದಿದ್ದಾರೆ. ಕನಿಷ್ಠ 5ಮಂದಿ ಹೊಸ ಶಾಸಕರಿಗೆ ಸಚಿವ ಸ್ಥಾನ ನೀಡಬೇಕೆಂದು ಆಗ್ರಹಿಸಿದ್ದು, 2028ರ ಚುನಾವಣೆಯ ಗುರಿ ಸಾಧಿಸಲು ಅಗತ್ಯವೆಂದು ಪ್ರತಿಪಾದಿಸಿದ್ದಾರೆ.
ಸಂಪುಟದಲ್ಲಿ ಕನಿಷ್ಠ ಐದು ಮಂದಿ ಹೊಸ ಶಾಸಕರಿಗೆ ಅವಕಾಶ ನೀಡುವಂತೆ ಒತ್ತಾಯ
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಪವರ್ ಶೇರಿಂಗ್ ವಿಚಾರ ತೀವ್ರ ಚರ್ಚೆಗೆ ಕಾರಣವಾಗಿರುವ ನಡುವೆಯೇ, ಕಾಂಗ್ರೆಸ್ ಪಕ್ಷದೊಳಗೆ ಸಚಿವ ಸಂಪುಟ ಪುನರ್‌ರಚನೆಗೆ ಸಂಬಂಧಿಸಿದ ಕೂಗು ಮತ್ತೊಮ್ಮೆ ಜೋರಾಗಿದೆ. ವಿಶೇಷವಾಗಿ ಮೊದಲ ಬಾರಿ ಆಯ್ಕೆಯಾದ ಶಾಸಕರೇ ಮುಂದಾಳತ್ವ ವಹಿಸಿ, ಕ್ಯಾಬಿನೆಟ್ ರೀಶಫಲ್ ನಡೆಸಿ ಹೊಸ ಶಾಸಕರಿಗೆ ಅವಕಾಶ ನೀಡಬೇಕೆಂದು ಒತ್ತಾಯಿಸಿ ಹೈಕಮಾಂಡ್‌ಗೆ ಮನವಿ ಸಲ್ಲಿಸಿದ್ದಾರೆ. ಮೊದಲ ಬಾರಿ ವಿಧಾನಸಭೆಗೆ ಆಯ್ಕೆಯಾದ 30ಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರು, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರಿಗೆ ಪತ್ರ ಬರೆದು, ಸಚಿವ ಸಂಪುಟ ಪುನರ್‌ರಚನೆಯಲ್ಲಿ ತಮ್ಮನ್ನು ಪರಿಗಣಿಸುವಂತೆ ಒತ್ತಾಯಿಸಿದ್ದಾರೆ. ಈಗಿರುವ ಸಚಿವ ಸಂಪುಟದಲ್ಲಿ ಕನಿಷ್ಠ ಐದು ಮಂದಿ ಹೊಸ ಶಾಸಕರಿಗೆ ಅವಕಾಶ ನೀಡಬೇಕು ಎಂಬುದು ಅವರ ಪ್ರಮುಖ ಬೇಡಿಕೆಯಾಗಿದೆ.
26
ಸಚಿವ ಸಂಪುಟ ಪುನರ್‌ರಚನೆಗೆ ಶಾಸಕರ ಒತ್ತಾಯ
ಶಾಸಕರ ಮನವಿ ಪತ್ರದಲ್ಲಿ, “ಮುಂದಿನ ಸಚಿವ ಸಂಪುಟ ಪುನರ್‌ರಚನೆಯ ವೇಳೆ ಹೊಸದಾಗಿ ಆಯ್ಕೆಯಾದ ಶಾಸಕರನ್ನು ಸಂಪುಟಕ್ಕೆ ಸೇರಿಸಬೇಕು. ನಾವು ಒಟ್ಟು 38 ಮಂದಿ ಮೊದಲ ಬಾರಿ ಕಾಂಗ್ರೆಸ್‌ನಿಂದ ಗೆದ್ದ ಶಾಸಕರಿದ್ದೇವೆ. ಜನರು ನಮ್ಮನ್ನು ಹೊಸ ನಿರೀಕ್ಷೆಗಳೊಂದಿಗೆ ಆಯ್ಕೆ ಮಾಡಿದ್ದಾರೆ. ಆ ನಿರೀಕ್ಷೆಗಳಿಗೆ ತಕ್ಕಂತೆ ಹೊಸ ಶಾಸಕರಿಗೆ ಸಚಿವ ಸ್ಥಾನ ನೀಡುವುದು ಸೂಕ್ತ” ಎಂದು ಉಲ್ಲೇಖಿಸಲಾಗಿದೆ. ಪತ್ರದಲ್ಲಿ, ಈಗಿರುವ 34 ಸದಸ್ಯರ ಸಚಿವ ಸಂಪುಟದಲ್ಲಿ ಕನಿಷ್ಠ ಐದು ಮಂದಿ ಹೊಸಬರಿಗೆ ಅವಕಾಶ ಕಲ್ಪಿಸಬೇಕು, ಶಕ್ತಿಶಾಲಿ ಮತ್ತು ಡೈನಾಮಿಕ್ ಆಗಿ ಕೆಲಸ ಮಾಡುವ ಶಾಸಕರಿಗೆ ಮನ್ನಣೆ ನೀಡಬೇಕು ಎಂದು ಸ್ಪಷ್ಟವಾಗಿ ಮನವಿ ಮಾಡಲಾಗಿದೆ. ಇತರ ರಾಜ್ಯಗಳಲ್ಲಿ ಮೊದಲ ಬಾರಿ ಗೆದ್ದ ಶಾಸಕರು ಮುಖ್ಯಮಂತ್ರಿ ಅಥವಾ ಸಚಿವರಾಗಿ ಯಶಸ್ವಿಯಾಗಿ ಕೆಲಸ ಮಾಡುತ್ತಿರುವ ಉದಾಹರಣೆಗಳನ್ನು ಕೂಡ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
36
2028ರ ಗುರಿ ಸಾಧನೆಗೆ ಹೊಸಬರ ಪಾತ್ರ
ಹೊಸದಾಗಿ ಆಯ್ಕೆಯಾದ ಶಾಸಕರು ಕಾಂಗ್ರೆಸ್ ಐಡಿಯಾಲಜಿ, ಪಾರದರ್ಶಕತೆ ಹಾಗೂ ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡು ಕೆಲಸ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಇಂತಹ ಶಾಸಕರಿಗೆ ಸಚಿವ ಸ್ಥಾನ ನೀಡಿದರೆ, 2028ರ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲು ಇದು ಸಹಕಾರಿಯಾಗಲಿದೆ ಎಂಬ ಅಭಿಪ್ರಾಯವನ್ನು ಶಾಸಕರು ವ್ಯಕ್ತಪಡಿಸಿದ್ದಾರೆ. ಈ ಮನವಿ ಪತ್ರಕ್ಕೆ ಭೀಮಸೇನ ಚಿಮ್ಮನಕಟ್ಟಿ, ಪೊನ್ನಣ್ಣ, ಇಕ್ಬಾಲ್ ಹುಸೇನ್, ಎನ್.ಟಿ. ಶ್ರೀನಿವಾಸ, ಅಶೋಕ್ ಕುಮಾರ್ ರೈ, ಎನ್. ಶ್ರೀನಿವಾಸ, ದರ್ಶನ ಧ್ರುವ ನಾರಾಯಣ ಸೇರಿದಂತೆ ಹಲವರು ಸಹಿ ಹಾಕಿದ್ದಾರೆ. ಈ ಪತ್ರದ ನೇತೃತ್ವವನ್ನು ಶಾಸಕ ರವಿಕುಮಾರ್ ಗಣಿಗ ವಹಿಸಿದ್ದರು ಎನ್ನಲಾಗಿದೆ.
ಜನವರಿಯಲ್ಲಿ ನಡೆದ ವಿಶೇಷ ಅಧಿವೇಶನದ ವೇಳೆ ಈ ಮನವಿ ಪತ್ರ ಸಿದ್ಧಗೊಂಡಿದ್ದು, ಅಧಿವೇಶನದ ಕಲಾಪದ ನಡುವೆ ಶಾಸಕರಿಂದ ಸಹಿ ಸಂಗ್ರಹಿಸಲಾಗಿದೆ. ಜನವರಿ 27ರಂದು ಬೆಂಗಳೂರುಗೆ ಆಗಮಿಸಿದ್ದ ಸುರ್ಜೇವಾಲಾ ಅವರಿಗೆ ಶಾಸಕರು ಈ ಪತ್ರವನ್ನು ನೇರವಾಗಿ ಹಸ್ತಾಂತರಿಸಿದ್ದಾರೆ. ಇದೇ ಪತ್ರವನ್ನು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳಿಗೂ ಸಲ್ಲಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ನಾಯಕತ್ವದ ಜಟಾಪಟಿ ತೀವ್ರಗೊಳ್ಳುವ ಮುನ್ನವೇ ಈ ಪತ್ರ ಸಿದ್ಧಗೊಂಡಿದ್ದು, ಸಚಿವ ಸಂಪುಟ ಪುನರ್‌ರಚನೆಯಾದರೆ ಹೊಸಬರಿಗೆ ಅವಕಾಶ ನೀಡಬೇಕು ಎಂಬ ಒತ್ತಾಯವನ್ನು ಸಂಘಟಿತವಾಗಿ ಮುಂದಿಟ್ಟಿರುವುದು ಪಕ್ಷದೊಳಗಿನ ಹೊಸ ಸಮೀಕರಣಗಳತ್ತ ಗಮನ ಸೆಳೆಯುತ್ತಿದೆ. ಇದೀಗ ಈ ಮನವಿಗೆ ಹೈಕಮಾಂಡ್ ಯಾವ ರೀತಿಯ ಸ್ಪಂದನೆ ನೀಡಲಿದೆ ಎಂಬುದೇ ರಾಜ್ಯ ರಾಜಕಾರಣದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.
56
ಸಹಿ ಮಾಡಿರುವ ಶಾಸಕರು
ಶಿವಗಂಗಾ ಬಸವರಾಜ್
ವಿಶ್ವಾಸ್ ವೈದ್ಯ
ಇಕ್ಬಾಲ್ ಹುಸೇನ್
ಅಶೋಕ್ ಕುಮಾರ್ ರೈ
ಎನ್ ಟಿ ಶ್ರೀನಿವಾಸ್
ದರ್ಶನ್ ಧ್ರುವ ನಾರಾಯಣ್
ರವಿ ಗಣಿಗ
ಭೀಮಸೇನ ಚಿಮ್ಮನಕಟ್ಟಿ
ಎ.ಎಸ್ ಪೊನ್ನಣ್ಣ
ಬಾಬಾ ಸಾಹೇಬ್ ಪಾಟೀಲ್
ನಾರಾ ಭರತ್ ರೆಡ್ಡಿ
ಎಸಿ ಶ್ರೀನಿವಾಸ್
ಮಹೇಂದ್ರ ತಮ್ಮಣ್ಣನವರ್
ಮಂಥರ್ ಗೌಡ
66
ಸಹಿ ಮಾಡಿರುವ ಶಾಸಕರು
15. ದೇವೇಂದ್ರಪ್ಪ
16. ಎನ್ ಶ್ರೀನಿವಾಸ್
17. ಆಸೀಫ್ ಸೇಟ್
18. ರಾಜಾ ವೇಣುಗೋಪಾಲ್ ನಾಯಕ್
19. ಉದಯ್ ಕುಮಾರ್
20. ಹೆಚ್ ವಿ ವೆಂಕಟೇಶ್
21. ಪ್ರಕಾಶ್ ಕೋಳಿವಾಡ
22. ಆನಂದ್ ಕೆ ಎಸ್
23. ಚೆನ್ನಾರೆಡ್ಡಿ ಪಾಟೀಲ್
24. ಬಸವಂತಪ್ಪ
25. ರವಿ ಶಂಕರ್
26. ಗಣೇಶ್ ಪ್ರಸಾದ್
27. ಬಾಬಾಸಾಹೇಬ್ ಪಾಟೀಲ್
28. ಅಶೋಕ್ ಮನುಗುಳಿ
29. ನಯನಾ ಮೋಟಮ್ಮ
30. ಚನ್ನಾರೆಡ್ಡಿ ಪಾಟೀಲ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.