Annamalai: ಅಣ್ಣಾಮಲೈ ಹೊಸ ಅಭಿಯಾನಕ್ಕೆ ಭರ್ಜರಿ ಪ್ರತಿಕ್ರಿಯೆ! ಬಿಜೆಪಿ ತೊರೆದ ಗಂಟೆಗಳಲ್ಲೇ 8 ಲಕ್ಷ ಜನ ಸೇರ್ಪಡೆ!

Published : Jun 05, 2026, 09:49 PM IST

ಬಿಜೆಪಿ ತೊರೆದ ಕೆ. ಅಣ್ಣಾಮಲೈ 'ವಿ ದ ಲೀಡರ್ಸ್' ಎಂಬ ಹೊಸ ರಾಜಕೀಯ ಚಳವಳಿಯನ್ನು ಆರಂಭಿಸಿದ್ದಾರೆ. ಕೆಲವೇ ಗಂಟೆಗಳಲ್ಲಿ 8 ಲಕ್ಷಕ್ಕೂ ಹೆಚ್ಚು ಜನರು ಸ್ವಯಂಸೇವಕರಾಗಿ ನೋಂದಾಯಿಸಿಕೊಂಡಿದ್ದು, ಸಮಾಜ ಸಬಲೀಕರಣ ಮತ್ತು ಸ್ಥಳೀಯ ಮಟ್ಟದಲ್ಲಿ ಬದಲಾವಣೆ ತರುವುದು ಈ ಅಭಿಯಾನದ ಮುಖ್ಯ ಗುರಿಯಾಗಿದೆ.

PREV
16

ಬಿಜೆಪಿ ತೊರೆದು ಹೊಸ ರಾಜಕೀಯ ಚಳವಳಿಗೆ ಚಾಲನೆ ನೀಡಿರುವ ಕೆ. ಅಣ್ಣಾಮಲೈ (K Annamalai) ಅವರಿಗೆ ಆರಂಭದಲ್ಲೇ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ. ಅಣ್ಣಾಮಲೈ ಅವರ 'ವಿ ದ ಲೀಡರ್ಸ್' ( (We The Leaders Movement) ಎಂಬ ಹೊಸ ಅಭಿಯಾನಕ್ಕೆ ಸ್ವಯಂಸೇವಕರಾಗಿ ಸೇರಲು 8 ಲಕ್ಷಕ್ಕೂ ಹೆಚ್ಚು ಮಂದಿ ತಮ್ಮ ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ಬಿಜೆಪಿ ತೊರೆಯುವುದಾಗಿ ಘೋಷಿಸಿದ ಬೆನ್ನಲ್ಲೇ ಅವರು ಈ ಚಳವಳಿ ಆರಂಭಿಸಿದ್ದು, ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಜನರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

26

ಸಮಾಜವನ್ನು ಸಬಲೀಕರಣಗೊಳಿಸುವುದು, ನಾಯಕತ್ವ ಗುಣಗಳನ್ನು ಬೆಳೆಸುವುದು ಮತ್ತು ಸ್ಥಳೀಯ ಮಟ್ಟದಲ್ಲಿ ಅರ್ಥಪೂರ್ಣ ಬದಲಾವಣೆಗಳನ್ನು ತರುವುದೇ 'ವಿ ದ ಲೀಡರ್ಸ್' ಅಭಿಯಾನದ ಗುರಿ ಎಂದು ವೆಬ್‌ಸೈಟ್‌ನಲ್ಲಿ ತಿಳಿಸಲಾಗಿದೆ. ಶಿಕ್ಷಣ, ಆರೋಗ್ಯ, ಸುಸ್ಥಿರತೆ ಮತ್ತು ಯುವ ನಾಯಕತ್ವದಲ್ಲಿ ಆಸಕ್ತಿ ಇರುವವರು ತಮ್ಮೊಂದಿಗೆ ಕೈಜೋಡಿಸಬಹುದು ಎಂದು ಅಣ್ಣಾಮಲೈ ಕರೆ ನೀಡಿದ್ದಾರೆ.

36

ಸ್ಥಳೀಯ ಮಟ್ಟದಲ್ಲಿ ಕೆಲಸ ಮಾಡುವ ಮೂಲಕ ಉತ್ತಮ ನಾಳೆ ನಿರ್ಮಿಸಲು ಎಲ್ಲರೂ ಒಂದಾಗೋಣ ಎಂದು ವೆಬ್‌ಸೈಟ್‌ನಲ್ಲಿ ಹೇಳಲಾಗಿದೆ. ‘ನಾವು ಮುಂದೆ ಬರೋಣ, ಕಾರ್ಯಪ್ರವೃತ್ತರಾಗೋಣ ಮತ್ತು ಬದಲಾವಣೆಯ ಚಾಲಕಶಕ್ತಿಯಾಗೋಣ’ ಎಂಬ ಸಾಲುಗಳೊಂದಿಗೆ ಅಣ್ಣಾಮಲೈ ತಮ್ಮ 'ಎಕ್ಸ್' ಖಾತೆಯಲ್ಲಿ ವೆಬ್‌ಸೈಟ್ ಲಿಂಕ್ ಹಂಚಿಕೊಂಡಿದ್ದಾರೆ.

46

ಈ ಹೊಸ ರಾಜಕೀಯ ಚಳವಳಿಯ ಭಾಗವಾಗಿ, ಕೊಯಮತ್ತೂರಿನಲ್ಲಿ 'ಎಪಿಜೆ ಅಬ್ದುಲ್ ಕಲಾಂ ಸೆಂಟರ್ ಫಾರ್ ಎಥಿಕ್ಸ್ ಅಂಡ್ ಪಾಲಿಟಿಕ್ಸ್' ಎಂಬ ಸಂಸ್ಥೆಯನ್ನು ಆರಂಭಿಸುವುದಾಗಿಯೂ ಅಣ್ಣಾಮಲೈ ಘೋಷಿಸಿದ್ದಾರೆ. 'ನಾವು ಬದಲಾಗೋಣ, ಬದಲಾವಣೆ ತರೋಣ' ಎನ್ನುವುದು ಈ ಚಳವಳಿಯ ಮೂಲತತ್ವ. ವ್ಯಕ್ತಿ ಪೂಜೆಯ ರಾಜಕಾರಣದ ಬದಲು, ಜನರ ಅಗತ್ಯಗಳಿಗೆ ಆದ್ಯತೆ ನೀಡುವ ಸಾಮಾನ್ಯರ ರಾಜಕೀಯವನ್ನು ಕಟ್ಟುವುದಾಗಿ ಅಣ್ಣಾಮಲೈ ಹೇಳಿದ್ದಾರೆ. 

ತಾವು ಯಾರೊಂದಿಗೂ ಸ್ಪರ್ಧೆ ಮಾಡುತ್ತಿಲ್ಲ, ಆಡಳಿತ ಮತ್ತು ವಿರೋಧ ಪಕ್ಷಗಳು ತಮ್ಮ ನೀತಿಗಳನ್ನು ಹೇಳಲಿ, ನಾವು ನಮ್ಮ ನೀತಿಗಳನ್ನು ಸರಿಯಾದ ಸಮಯದಲ್ಲಿ ಸ್ಪಷ್ಟಪಡಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ.

56

ಹಲವು ದಿನಗಳ ಊಹಾಪೋಹಗಳಿಗೆ ತೆರೆ ಎಳೆದಿದ್ದ ತಮಿಳುನಾಡು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಅಣ್ಣಾಮಲೈ, ಪಕ್ಷ ತೊರೆದು ಹೊಸ ರಾಜಕೀಯ ಚಳವಳಿ ಆರಂಭಿಸುವ ಬಗ್ಗೆ ಸಾಮಾಜಿಕ ಜಾಲತಾಣಗಳ ಮೂಲಕ ಘೋಷಿಸಿದ್ದರು. ಬಿಜೆಪಿಯ ರಾಷ್ಟ್ರೀಯ ನಾಯಕರನ್ನು ಭೇಟಿಯಾದ ಬಳಿಕವೇ ಅಣ್ಣಾಮಲೈ ಪಕ್ಷದಿಂದ ಹೊರಬಂದಿದ್ದಾರೆ. ಒಬ್ಬ ಹೆಮ್ಮೆಯ ತಮಿಳಿಗ ಮತ್ತು ಭಾರತೀಯನಾಗಿ ತನ್ನ ಅಸ್ಮಿತೆಯನ್ನು ಉಳಿಸಿಕೊಂಡು, ತಮಿಳುನಾಡಿನ ಹಿತಾಸಕ್ತಿಗಳಿಗೆ ಆದ್ಯತೆ ನೀಡುವುದನ್ನು ಮುಂದುವರಿಸುವುದಾಗಿ ಅಣ್ಣಾಮಲೈ ಹೇಳಿದ್ದಾರೆ.

66

ಇದೇ ವೇಳೆ, ದೆಹಲಿಯಿಂದ ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅಣ್ಣಾಮಲೈ ಅವರಿಗೆ ಭರ್ಜರಿ ಸ್ವಾಗತ ಸಿಕ್ಕಿತು. ಶುಕ್ರವಾರ ಸಂಜೆ ವಿಮಾನ ನಿಲ್ದಾಣಕ್ಕೆ ಬಂದ ಅವರನ್ನು ಹೂವು, ಬೊಕ್ಕೆಗಳನ್ನು ನೀಡಿ ಸ್ವಾಗತಿಸಲು ನೂರಾರು ಮಂದಿ ನೆರೆದಿದ್ದರು.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories