ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರ ನಿವಾಸದಲ್ಲಿ ನಡೆದ ಸಭೆಯಲ್ಲಿ ಹಳೆ ಮೈಸೂರು ಭಾಗದಲ್ಲಿ ಪಕ್ಷದ ಪುನಶ್ಚೇತನಕ್ಕೆ ಮಹತ್ವದ ಚರ್ಚೆ ನಡೆದಿದೆ. ಜಿ.ಟಿ. ದೇವೇಗೌಡರಿಗೆ ಗೇಟ್ ಪಾಸ್ , ನಿಖಿಲ್ ಗೆ ಚಾಮರಾಜ ಕ್ಷೇತ್ರ , ಸಾ.ರಾ.ಮಹೇಶ್ ಚಾಮುಂಡೇಶ್ವರಿ ಅಭ್ಯರ್ಥಿಯಾಗಿ ಘೋಷಿಸುವ ಬಗ್ಗೆ ಗಂಭೀರ ಚಿಂತನೆ.
ಬೆಂಗಳೂರು: ಜೆಡಿಎಸ್ ಪಕ್ಷದೊಳಗೆ ಭಾರೀ ರಾಜಕೀಯ ಚಟುವಟಿಕೆಗಳು ಆರಂಭವಾಗಿದ್ದು, ಹಳೆ ಮೈಸೂರು ಭಾಗದಲ್ಲಿ ಪಕ್ಷದ ಉಳಿವಿಗಾಗಿ ಮಹತ್ವದ ತೀರ್ಮಾನಗಳನ್ನು ಕೈಗೊಳ್ಳಬೇಕೆಂಬ ಒತ್ತಡ ಜೆಡಿಎಸ್ ವರಿಷ್ಠರ ಮೇಲೆ ಹೆಚ್ಚಾಗಿದೆ. ಇದರ ಭಾಗವಾಗಿ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ನಿವಾಸದಲ್ಲಿ ಜೆಡಿಎಸ್ ನಾಯಕರು ಸಭೆ ಸೇರಿದ್ದಾರೆ. ಭಾನುವಾರ ಬೆಳಗ್ಗೆ 11 ಗಂಟೆಗೆ ಪದ್ಮನಾಭನಗರದಲ್ಲಿರುವ ದೇವೇಗೌಡರ ನಿವಾಸಕ್ಕೆ ಮೈಸೂರು ಭಾಗದ ಪ್ರಮುಖ ಜೆಡಿಎಸ್ ಮುಖಂಡರು ಭೇಟಿ ನೀಡಿ, ಪಕ್ಷದ ಭವಿಷ್ಯ, ಕ್ಷೇತ್ರ ಹಂಚಿಕೆ ಹಾಗೂ ನಾಯಕತ್ವ ಸಂಬಂಧಿತ ನಿರ್ಧಾರಗಳ ಕುರಿತು ಚರ್ಚೆ ನಡೆಸಿದ್ದಾರೆ.
28
ಮೈಸೂರು ಭಾಗದಲ್ಲಿ ಕುಸಿದ ಜೆಡಿಎಸ್ ಬಲ
ಕಳೆದ ವಿಧಾನಸಭಾ ಚುನಾವಣೆಯ ಬಳಿಕ ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಶಕ್ತಿ ಗಣನೀಯವಾಗಿ ಕುಸಿತ ಕಂಡಿದೆ. ಈ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆಗೆ ಹೊಸ ಉಸಿರು ತುಂಬುವ ಅಗತ್ಯವಿದೆ ಎಂದು ಸ್ಥಳೀಯ ನಾಯಕರು ಅಭಿಪ್ರಾಯಪಟ್ಟಿದ್ದಾರೆ. ಪಕ್ಷದ ಪುನಶ್ಚೇತನಕ್ಕಾಗಿ ವರಿಷ್ಠರು ಕಠಿಣ ಹಾಗೂ ಸ್ಪಷ್ಟ ನಿರ್ಧಾರಗಳನ್ನು ಕೈಗೊಳ್ಳಬೇಕೆಂಬ ಒತ್ತಾಯ ಕೇಳಿಬರುತ್ತಿದೆ. ಇದರ ಜೊತೆಗೆ ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿಗಾಗಿ ಪಕ್ಷವು ಕ್ಷೇತ್ರ ಹುಡುಕಾಟ ಆರಂಭಿಸಿದೆ. ಬಹುತೇಕ ಚಾಮರಾಜ ಕ್ಷೇತ್ರದಲ್ಲೇ ನಿಖಿಲ್ ನಿಲ್ಲಿಸಲು ಚಿಂತನೆ ನಡೆಸಿದೆ.
38
ಜಿ.ಟಿ.ದೇವೇಗೌಡ ಕುರಿತು ಗಂಭೀರ ಅಸಮಾಧಾನ
ಜೆಡಿಎಸ್ ಹಿರಿಯ ನಾಯಕ ಜಿ.ಟಿ.ದೇವೇಗೌಡ ಅವರು ಬಹುತೇಕ ಪಕ್ಷದಿಂದ ವಿಮುಖರಾಗಿದ್ದು, ಕಾಂಗ್ರೆಸ್‌ಗೆ ಹೆಚ್ಚು ಸಮೀಪವಾಗಿದ್ದಾರೆ ಎಂಬ ಆರೋಪಗಳು ಜೆಡಿಎಸ್ ಪಾಳಯದಲ್ಲಿವೆ. ಸಹಕಾರ ಕ್ಷೇತ್ರ ಹಾಗೂ ಇತ್ತೀಚಿನ ಎಂಎಲ್‌ಸಿ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ ಎಂಬ ಆರೋಪಗಳು ಬೆಳಕಿಗೆ ಬಂದಿದ್ದು, ಈ ಹಿನ್ನೆಲೆಯಲ್ಲಿ ಈ ಬಾರಿ ಯಾವುದೇ ರೀತಿಯ ರಾಜಿ ಇಲ್ಲದೆ ಸ್ಪಷ್ಟ ಕ್ರಮ ಕೈಗೊಳ್ಳಬೇಕೆಂದು ನಾಯಕರು ಆಗ್ರಹಿಸಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆಗಳಿಗೆ ಕಾರಣವಾಗಿ, ಜಿ.ಟಿ.ದೇವೇಗೌಡರಿಗೆ ‘ಗೇಟ್ ಪಾಸ್’ ನೀಡುವ ನಿರ್ಧಾರ ಬಹುತೇಕ ಖಚಿತವಾಗಿದೆ.
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಹೊಸ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕೆಂಬ ಬೇಡಿಕೆ ಗಟ್ಟಿಯಾಗಿದ್ದು, ಮಾಜಿ ಸಚಿವ ಸಾ.ರಾ. ಮಹೇಶ್ ಅವರನ್ನು 2028ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಘೋಷಿಸುವ ಬಗ್ಗೆ ಚರ್ಚೆ ನಡೆದಿದೆ. ಈ ಕುರಿತು ಎಂಎಲ್‌ಸಿ ಮಂಜೇಗೌಡ ಅವರು ಸ್ಪಷ್ಟ ಹೇಳಿಕೆ ನೀಡಿದ್ದು, “ನಾವು ಈಗಾಗಲೇ ಈ ನಿರ್ಧಾರ ತೆಗೆದುಕೊಂಡಿದ್ದೇವೆ. ಸಾ.ರಾ. ಮಹೇಶ್ ಕೂಡ ಇದಕ್ಕೆ ಒಪ್ಪಿಗೆ ನೀಡಿದ್ದಾರೆ. 2028ರಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಅವರೇ” ಎಂದು ತಿಳಿಸಿದ್ದಾರೆ.
ಚಾಮರಾಜ ಕ್ಷೇತ್ರದಲ್ಲಿ ಒಕ್ಕಲಿಗ ಮತಗಳ ಪ್ರಾಬಲ್ಯ ಇರುವುದರಿಂದ, ನಿಖಿಲ್ ಕುಮಾರಸ್ವಾಮಿಗೆ ಇದು ಸುರಕ್ಷಿತ ಕ್ಷೇತ್ರವಾಗಲಿದೆ ಎಂಬ ಲೆಕ್ಕಾಚಾರ ಜೆಡಿಎಸ್ ಪಾಳಯದಲ್ಲಿದೆ. ಇದರಿಂದ ಮೈಸೂರು ಭಾಗದಲ್ಲಿ ಜೆಡಿಎಸ್ ತನ್ನ ಹಳೆಯ ವೈಭವವನ್ನು ಮರಳಿ ಪಡೆಯಬಹುದು ಎಂಬ ನಿರೀಕ್ಷೆಯೂ ವ್ಯಕ್ತವಾಗಿದೆ.
58
ನಿಖಿಲ್ ಕುಮಾರಸ್ವಾಮಿಗೆ ಹೊಸ ಕ್ಷೇತ್ರ?
ಇದರ ಜೊತೆಗೆ ಮತ್ತೊಂದು ಮಹತ್ವದ ರಾಜಕೀಯ ಸೂತ್ರವನ್ನು ನಾಯಕರು ಮುಂದಿಟ್ಟಿದ್ದಾರೆ. ಮೈಸೂರಿನ ಚಾಮರಾಜ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದಿಂದ ಎಲ್. ನಾಗೇಂದ್ರ ಹಾಗೂ ಪ್ರತಾಪ್ ಸಿಂಹ ಎಂಬ ಇಬ್ಬರು ಪ್ರಬಲ ಆಕಾಂಕ್ಷಿಗಳು ಇದ್ದು, ಯಾರಿಗೆ ಟಿಕೆಟ್ ನೀಡಿದರೂ ಬಂಡಾಯದ ಭೀತಿ ಎದುರಾಗುವ ಸಾಧ್ಯತೆ ಇದೆ. ಹೀಗಾಗಿ ಮೈತ್ರಿ ರಾಜಕಾರಣದ ಭಾಗವಾಗಿ, ಆ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡುವಂತೆ ಬಿಜೆಪಿ ನಾಯಕರಿಗೆ ಮನವಿ ಮಾಡಬೇಕು ಎಂಬ ಸಲಹೆ ಕೇಳಿಬಂದಿದೆ. ಅದೇ ವೇಳೆ, ಚಾಮರಾಜ ಕ್ಷೇತ್ರಕ್ಕೆ ನಿಖಿಲ್ ಕುಮಾರಸ್ವಾಮಿ ಅವರನ್ನು ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಸಬೇಕು ಎಂಬ ಒತ್ತಾಯವೂ ಕೇಳಿಬರುತ್ತಿದೆ.
68
ವಿರೋಧಿಗಳ ಒಗ್ಗೂಡಿಕೆ, ಪಕ್ಷದಲ್ಲಿ ಸಂಚಲನ
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜಿ.ಟಿ.ದೇವೇಗೌಡ ವಿರುದ್ಧ ಕಳೆದ ಚುನಾವಣೆಯಲ್ಲಿ ಸೋತಿದ್ದ ಮಾವಿನಹಳ್ಳಿ ಸಿದ್ದೇಗೌಡ ಅವರನ್ನು ಮತ್ತೆ ಪಕ್ಷಕ್ಕೆ ಕರೆತರಲು ಪ್ರಯತ್ನಗಳು ನಡೆಯುತ್ತಿವೆ. ಈ ಕುರಿತು ಸಾ.ರಾ. ಮಹೇಶ್ ಅವರು ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆಸಿರುವುದಾಗಿ ತಿಳಿದುಬಂದಿದೆ. ಜೆಡಿಎಸ್ ಪಕ್ಷದ 25ರ ಸಂಭ್ರಮದಲ್ಲಿ ಪ್ರಮುಖರ ಸಮಿತಿ (ಕೋರ್ ಕಮಿಟಿ) ರಚಿಸಿದಾಗಲೇ ಪಕ್ಷದಿಂದ ದೂರ ಸರಿದಿರುವ ಹಾಗೂ ಕಾಂಗ್ರೆಸ್ ಜೊತೆ ಪದೇ ಪದೇ ಕಾಣಿಸಿಕೊಂಡು ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರ ಹೊಗಳುತ್ತಿರುವ ಜಿಟಿ ದೇವೇಗೌಡರಿಗೆ ಕೋಕ್ ನೀಡಲಾಗಿತ್ತು.
78
ದೇವೇಗೌಡರ ಮನೆಗೆ ನಾಯಕರು ಭೇಟಿ
ಈ ಎಲ್ಲ ವಿಚಾರಗಳನ್ನು ಮುಂದಿಟ್ಟು, ಮೈಸೂರು ಭಾಗದ ಜೆಡಿಎಸ್ ಮುಖಂಡರು ಇಂದು ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿಯಾಗಲಿದ್ದಾರೆ. ಸಾ.ರಾ. ಮಹೇಶ್, ಮಂಜೇಗೌಡ, ಅಶ್ವಿನ್ ಕುಮಾರ್, ವಿವೇಕಾನಂದ ಸೇರಿದಂತೆ ಹಲವರು ಸಭೆಯಲ್ಲಿ ಭಾಗವಹಿಸಲಿದ್ದು, ಪಕ್ಷದ ಭವಿಷ್ಯಕ್ಕೆ ಸಂಬಂಧಿಸಿದ ನಿರ್ಣಾಯಕ ತೀರ್ಮಾನಗಳ ನಿರೀಕ್ಷೆ ಮೂಡಿದೆ.
88
ಜೆಡಿಎಸ್ ಪಾಳಯದಲ್ಲಿ ಕ್ಷಿಪ್ರ ರಾಜಕೀಯ ಕ್ರಾಂತಿ?
ಒಟ್ಟಿನಲ್ಲಿ, ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಉಳಿವು ಮತ್ತು ಪುನಶ್ಚೇತನಕ್ಕಾಗಿ ದಳಪತಿಗಳು ದೊಡ್ಡ ಹಾಗೂ ಧೈರ್ಯಶಾಲಿ ನಿರ್ಧಾರಗಳನ್ನು ಕೈಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಈ ನಿರ್ಧಾರಗಳು ಜಿ.ಟಿ.ದೇವೇಗೌಡರ ಭವಿಷ್ಯ, ಸಾ.ರಾ. ಮಹೇಶ್ ಅವರ ರಾಜಕೀಯ ಪುನರಾಗಮನ ಹಾಗೂ ನಿಖಿಲ್ ಕುಮಾರಸ್ವಾಮಿಗೆ ಹೊಸ ಕ್ಷೇತ್ರ ಈ ಮೂರು ಅಂಶಗಳ ಸುತ್ತಲೇ ಸುತ್ತುತ್ತಿವೆ. ಮುಂದಿನ ಕೆಲ ದಿನಗಳಲ್ಲಿ ಈ ಸಭೆಯ ಫಲಿತಾಂಶ ಜೆಡಿಎಸ್ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸುವುದು ಬಹುತೇಕ ಖಚಿತವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.