71 ನೇ ವಿಶ್ವ ಸುಂದರಿ ಸ್ಪರ್ಧೆಗೆ ಕ್ಷಣಗಣನೆ, ಭಾರತಕ್ಕೆ ಬಂದಿಳಿದ ವಿಶ್ವ ರೂಪದರ್ಶಿಯರು ಕನ್ನಡತಿ ದೇಶದ ಪ್ರತಿನಿಧಿ

First Published | Feb 10, 2024, 6:39 PM IST

ಪ್ರಖ್ಯಾತ ಬ್ಯೂಟಿ ಪೇಜೆಂಟ್‌ ಮಿಸ್‌ ವರ್ಲ್ಡ್‌ ಸಂಸ್ಥೆಯು 71 ನೇ ವಿಶ್ವ ಸುಂದರಿ  ಸ್ಪರ್ಧೆ (Miss World  2023) ಫೆಬ್ರವರಿ 18 ರಿಂದ ಮಾರ್ಚ್ 9, 2024 ರವರೆಗೆ ನಡೆಯಲಿದೆ ಎಂದು ಘೋಷಿಸಿದೆ. ಇದು ಜಾಗತಿಕ ಸಂಭ್ರಮವನ್ನು ಈ ಬಾರಿ ಭಾರತ ಆಯೋಜಿಸುತ್ತಿದೆ. ಸುಮಾರು 3 ದಶಕಗಳ ನಂತರ ಭಾರತದಲ್ಲಿ ವಿಶ್ವ ಸುಂದರಿ ಸ್ಪರ್ಧೆ ನಡೆಸುತ್ತಿದೆ. 1996ರಲ್ಲಿ  ಭಾರತ ಕೊನೆಯದಾಗಿ ವಿಶ್ವ ಸುಂದರಿ ಸ್ಪರ್ಧೆ ಆಯೋಜನೆ ಮಾಡಿತ್ತು.

ಪ್ರಸ್ತುತ ಇರುವ ವಿಶ್ವ ಸುಂದರಿ ಕರೋಲಿನಾ ಬಿಲಾವ್ಸ್ಕಾ ಮತ್ತು ಮಾಜಿ ವಿಶ್ವ ಸುಂದರಿ ವಿಜೇತರಾದ ಭಾರತದ ಮಾನುಷಿ ಚಿಲ್ಲರ್, ಜಮೈಕಾದ ಟೋನಿ ಆನ್ ಸಿಂಗ್, ಮೆಕ್ಸಿಕೊದ ವನೆಸ್ಸಾ ಪೊನ್ಸ್ ಡಿ ಲಿಯಾನ್,  ಮತ್ತು ಪೋರ್ಟೊ ರಿಕೊದ  ಸ್ಟೆಫನಿ ಡೆಲ್ ವ್ಯಾಲೆ ಸೇರಿದಂತೆ ವಿಶ್ವ ಸುಂದರಿಗಳ ಅದ್ಭುತ ತಂಡವು ಗ್ರಾಂಡ್ ಫಿನಾಲೆಗೆ ವೇದಿಕೆಯನ್ನು ಸಿದ್ಧಪಡಿಸಲು ಮೊದಲ ಬಾರಿಗೆ ಒಂದು ಗೂಡಿದ್ದು, ಈ ಈವೆಂಟ್‌ನ ಇತಿಹಾಸದಲ್ಲಿ ಗಮನಾರ್ಹ ಕ್ಷಣವನ್ನು ಗುರುತಿಸುತ್ತದೆ. 
 

ಭಾರತ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು (ITDC) 71ನೇ ವಿಶ್ವ ಸುಂದರಿ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮವನ್ನು ನಡೆಸಿ ಕೊಡಲಿದ್ದು, ಪ್ರಾರಂಭಿಸಲು ಫೆಬ್ರವರಿ 20 ರಂದು ನವದೆಹಲಿಯ ಭವ್ಯ ಹೋಟೆಲ್ ದಿ ಅಶೋಕ್‌ನಲ್ಲಿ  'ಇಂಡಿಯಾ ವೆಲ್ಕಮ್ಸ್ ದಿ ವರ್ಲ್ಡ್ ಗಾಲಾ' ದೊಂದಿಗೆ ಗ್ಯಾಂಡ್‌ ಆಗಿ ಓಪನಿಂಗ್ ಸೆರೆಮನಿ ನಡೆಯಲಿದೆ.

Tap to resize

julia morley

ಈ ಸ್ಪರ್ಧೆಯು ನವದೆಹಲಿಯ ಭಾರತ್ ಮಂಟಪ ಸೇರಿದಂತೆ ವಿವಿಧ ಸ್ಥಳಗಳಲ್ಲಿ ನಡೆಯಲಿದೆ ಮತ್ತು ವಿವಿಧ ದೇಶಗಳ 120 ಸ್ಪರ್ಧಿಗಳು ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.  71ನೇ ಆವೃತ್ತಿಯ ಸ್ಪರ್ಧೆ  ಭಾರತದಲ್ಲಿ ಹಮ್ಮಿಕೊಳ್ಳುವುದು ತುಂಬಾ ಅರ್ಥಗರ್ಭಿತವಾಗಿದೆ ಮತ್ತು ಈ ಆವೃತ್ತಿಗಾಗಿ ನಾನು ಉತ್ತಮ ತಂಡ ರಚಿಸಿದ್ದೇನೆ ಎಂದು ವಿಶ್ವ ಸುಂದರಿ ಸಂಸ್ಥೆಯ ಅಧ್ಯಕ್ಷೆ ಮತ್ತು ಸಿಇಒ ಜೂಲಿಯಾ ಮೊರ್ಲಿ ತಿಳಿಸಿದ್ದಾರೆ.   

ಕಳೆದ ವರ್ಷದ ಫೆಬ್ರವರಿಯಲ್ಲಿ, 2023 ರಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಸ್ಪರ್ಧೆ ನಡೆಯಲಿದೆ ಎಂದು  ಮೋರ್ಲಿ ಘೋಷಿಸಿದ್ದರು. ಬಳಿಕ ಭಾರತಕ್ಕೆ ಶಿಫ್ಟ್ ಆಯ್ತು. ಕಾಶ್ಮೀರದಲ್ಲಿ ಕಳೆದ ಡಿಸೆಂಬರ್‌ ನಲ್ಲಿ ನಡೆಸಲು ಯೋಜನೆ ಹಾಕಲಾಗಿತ್ತು ಆದರೆ ಕಾರಣಾಂತರಗಳಿಂದ ಮುಂಬೈಗೆ ಶಿಫ್ಟ್ ಆಗಿ 2024ರಲ್ಲಿ 71ನೇ ಎಡಿಷನ್‌ ಸ್ಪರ್ಧೆ ನಡೆಯುತ್ತಿದೆ. 

ಈ ಬಾರಿಯ ಆವೃತ್ತಿಗೆ ಭಾರತದಿಂದ ಕರಾವಳಿ ಬೆಡಗಿ ಸಿನಿ ಶೆಟ್ಟಿ ಪ್ರತಿನಿಧಿಯಾಗಿದ್ದಾರೆ.  ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ 2022 ವಿಜೇತೆ ಆಗಿರುವ ಇವರು ಅಂತರಾಷ್ಟ್ರೀಯ ವೇದಿಕೆಯಲ್ಲಿ ಹೆಮ್ಮೆಯಿಂದ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಈಕೆ ಕನ್ನಡತಿ, ಕರಾವಳಿ ಬೆಡಗಿ, ಉಡುಪಿಯ ಜಿಲ್ಲೆಯ ಇನ್ನಂಜೆಯವರು.  ಸಿನಿ ಸದಾನಂದ ಶೆಟ್ಟಿ 2022ರಲ್ಲಿ ಫೆಮಿನಾ ಮಿಸ್ ಕರ್ನಾಟಕ ಕೂಡ ಗೆದ್ದಿದ್ದಾರೆ. ಇನ್ನು 2024ರ ಅಂದರೆ 72ನೇ ಆವೃತ್ತಿಯ ಮಿಸ್‌ ವರ್ಲ್ಡ್‌ನಲ್ಲಿ ಭಾರತದ ಸ್ಪರ್ಧಿಯಾಗಿ ನಂದಿತಾ ಗುಪ್ತಾ ಕಣಕ್ಕಿಳಿಯಲಿದ್ದಾರೆ. 19 ವರ್ಷದ ಈಕೆ  ಮುಂಬೈನ ಕಾಲೇಜೊಂದರಲ್ಲಿ ಬ್ಯುಸಿನೆಸ್‌ ಮ್ಯಾನೇಜ್‌ಮೆಂಟ್‌ ವಿದ್ಯಾಭ್ಯಾಸ ಮಾಡುತ್ತಿದ್ದು, 2ನೇ ವರ್ಷದ ಪದವಿಯಲ್ಲಿ ಓದುತ್ತಿದ್ದಾರೆ.

ಈ ಸ್ಪರ್ಧೆಯ ಗ್ರ್ಯಾಂಡ್ ಫಿನಾಲೆಯು ಮಾರ್ಚ್ 9 ರಂದು ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಯುವ ಮೂಲಕ ಮುಕ್ತಾಯಗೊಳ್ಳಲಿದೆ. ಈ ಘಳಿಗೆಯನ್ನು ದೂರದರ್ಶನದಲ್ಲಿ ಪ್ರಸಾರ ಮಾಡಲಾಗುತ್ತದೆ ಮತ್ತು ಜಾಗತಿಕವಾಗಿ ಪ್ರಸಾರ ಮಾಡಲಾಗುತ್ತದೆ. ಹೆಸರಾಂತ ಸೂಪರ್‌ಸ್ಟಾರ್‌ಗಳು ತಮ್ಮ ಅತ್ಯುತ್ತಮ ಪ್ರದರ್ಶನಗಳೊಂದಿಗೆ ಈವೆಂಟ್‌ಗೆ ಇನ್ನಷ್ಟು  ತಾರಾ ಮೆರುಗು ನೀಡಲಿದ್ದಾರೆ. 
 

21-ದಿನಗಳ ಈ ಉತ್ಸವದಲ್ಲಿ ವಿವಿಧ ಹಂತದ ಸ್ಫರ್ಧೆಗಳು ನಡೆಯಲಿದ್ದು, ಅದರಲ್ಲಿ ಟಾಪ್‌ 20 ರೂಪವತಿಯರ ಆಯ್ಕೆ ಫೈನಲ್‌ ಗೆ ನಡೆಯಲಿದೆ. ಪ್ರತಿಯೊಂದನ್ನು Miss World.com ವೆಬ್‌ಸೈಟ್‌ ಚಾನೆಲ್‌ ನಲ್ಲಿ ನೋಡಬಹುದು. ನವದೆಹಲಿ ಮತ್ತು ಮುಂಬೈನಲ್ಲಿ ಈವೆಂಟ್‌ಗಳು ನಡೆಯಲಿದೆ.  ಭಾರತದಲ್ಲಿ 71 ನೇ ವಿಶ್ವ ಸುಂದರಿ ಉತ್ಸವದ ಅದ್ದೂರಿ ಆಚರಣೆಯು 28 ವರ್ಷಗಳ ಬಳಿಕ ಮತ್ತೆ  ಹಿಂದಿರುಗಿರುವುದು ಒಂದು ವಿಶಿಷ್ಟ ಸಂದರ್ಭವಾಗಿದೆ. ಪ್ರಿಯಾಂಕಾ ಚೋಪ್ರಾ, ಮಾನುಷಿ ಚಿಲ್ಲರ್ ಮತ್ತು ಐಶ್ವರ್ಯಾ ರೈ ಅವರಂತಹ ಪ್ರಸಿದ್ಧ ವ್ಯಕ್ತಿಗಳನ್ನು ಒಳಗೊಂಡಂತೆ ಒಟ್ಟು 6 ಮಂದಿ ವಿಶ್ವ ಸುಂದರಿ ವಿಜೇತರನ್ನು ನೀಡಿದ ಸುದೀರ್ಘ ಇತಿಹಾಸವನ್ನು ಭಾರತ ಹೊಂದಿದೆ.
 

Latest Videos

click me!