ಚಳಿಗಾಲದಲ್ಲಿ ತುಪ್ಪ ಎಷ್ಟು ಗಟ್ಟಿಯಾಗುತ್ತದೆಯೆಂದರೆ ಅದನ್ನ ಬಳಸಲು ಕಷ್ಟ. ಮತ್ತೊಮ್ಮೆ ಸ್ಟೌವ್ ಮೇಲೆ ಇಟ್ಟು ಬಿಸಿ ಮಾಡಬೇಕು. ಆದರೆ ಇದು ಪದೇ ಪದೆ ಮಾಡುವುದು ಸೂಕ್ತವಲ್ಲ. ಹೀಗಾಗಿ ತುಪ್ಪ ಗಟ್ಟಿಯಾಗುವುದನ್ನು ತಡೆಯಲು, ಯಾವಾಗಲೂ ಮೃದುವಾಗಿರುವಂತಿರಲು ಏನು ಮಾಡಬೇಕು ಎಂದು ಇಲ್ಲಿ ವಿವರಿಸಿದೆ
ಚಳಿಗಾಲದಲ್ಲಿ ತುಪ್ಪ ಗಟ್ಟಿಯಾಗುತ್ತದೆಯೇ ಮೃದುವಾಗಲು ಹೀಗೆ ಮಾಡಿ!
ಮಳೆಗಾಲ ಇನ್ನೇನು ಮುಗಿದು ಚಳಿಗಾಲ ಶುರುವಾಗಲಿದೆ. ಚಳಿಗಾಲದಲ್ಲಿ ಅಡುಗೆ ಮನೆಯ ದೊಡ್ಡ ಸಮಸ್ಯೆ ಎಂದರೆ ಡಬ್ಬಿಯಲ್ಲಿಟ್ಟ ತುಪ್ಪ ಗಟ್ಟಿಯಾಗುವುದು. ಇದು ಪ್ರತಿ ಚಳಿಗಾಲದಲ್ಲೂ ಭಾರತೀಯರ ಅಡುಗೆ ಮನೆಗಳಲ್ಲಿ ಈ ಸಮಸ್ಯೆ ಕಾಡುತ್ತದೆ. ದಸರಾ, ದೀಪಾವಳಿಯಂದು ಸಿಹಿ ತಿಂಡಿ ಮಾಡಲು ತುಪ್ಪದ ಡಬ್ಬಿ ತೆಗೆದರೆ ಅಲ್ಲಿ ದ್ರವ ರೂಪದ ತುಪ್ಪವೇ ಮಾಯವಾಗಿ ಮೇಣದಂತೆ ಗಟ್ಟಿಯಾಗಿ ಅಂಟಿಕೊಂಡಿರುವ ತುಪ್ಪ ಇರುತ್ತೆ.
ತುಪ್ಪ ಗಟ್ಟಿಯಾಗಿದ್ದರೆ ಕೆಟ್ಟಿದೆ ಎಂದರ್ಥವಲ್ಲ
ತುಪ್ಪ ಗಟ್ಟಿಯಾಗಿದೆ ಎಂದರೆ ಕೆಲವರು ಉಪಯೋಗಿಸುವದೇ ಇಲ್ಲ. ಗಟ್ಟಿಯಾಗಿದ್ದರೆ ತುಪ್ಪ ಕೆಟ್ಟು ಹೋಗಿದೆ ಎಂದೇ ಬಹುತೇಕರು ಭಾವಿಸಿದ್ದಾರೆ. ಆದರೆ ತುಪ್ಪ ಗಟ್ಟಿಯಾದ ಮಾತ್ರಕ್ಕೆ ಕೆಡುವುದಿಲ್ಲ. ಇನ್ನೊಂದು ಸಂಗತಿ ಎಂದರೆ ತುಪ್ಪಕ್ಕೆ ಎಕ್ಸಪೇರಿ ಡೇಟ್ ಎಂಬುದೇ ಇಲ್ಲ. ತುಪ್ಪ ಹಳೆಯದಾದಷ್ಟು ಅದರ ಕ್ವಾಲಿಟಿ ಹೆಚ್ಚುತ್ತದೆ.
25
ಚಳಿಗಾಲದಲ್ಲಿ ತುಪ್ಪ ಮೃದುವಾಗಿರಲು ಏನು ಮಾಡಬೇಕು?
ವಾತಾವರಣದಲ್ಲಿ ತಾಪಮಾನ ಕಡಿಮೆಯಾದಾಗ ತುಪ್ಪ ಸ್ವಾಭಾವಿಕವಾಗಿ ಗಟ್ಟಿಯಾಗುತ್ತದೆ. ಇದು ಚಳಿಗಾಲದಲ್ಲಿ ಸಾಮಾನ್ಯ. ಆದರೆ ತುಪ್ಪ ಇರಿಸುವ ಪಾತ್ರೆ, ಇಡುವ ಜಾಗದಲ್ಲಿ ಕೆಲವು ಸಣ್ಣ ಬದಲಾವಣೆ ಮಾಡಿದ್ರೆ ಸಾಕು, ಚಳಿಗಾಲದಲ್ಲೂ ತುಪ್ಪ ಗಟ್ಟಿಯಾಗದೆ ಮೃದುವಾಗಿರುತ್ತದೆ. ಅದು ಹೇಗೆ ಎಂಬುದು ಇಲ್ಲಿ ವಿವರಿಸಲಾಗಿದೆ.
ಚಳಿಗಾಲದಲ್ಲಿ ತುಪ್ಪ ಗಟ್ಟಿಯಾಗುವುದು, ಬಂಗಾರದ ಬಣ್ಣದಿಂದ ಬಿಳಿಬಣ್ಣಕ್ಕೆ ತಿರುಗುವುವುದು ಅಥವಾ ಸ್ವಲ್ಪ ಹರಳಿನಂತಾಗುವುದು ಸಾಮಾನ್ಯ. ಇದರಿಂದ ತುಪ್ಪದಲ್ಲಿ ಏನೋ ಸಮಸ್ಯೆಯಾಗಿದೆ ಎಂದರ್ಥವಲ್ಲ. ತುಪ್ಪ ತಣ್ಣಗಾದಾಗ ಅದರಲ್ಲಿರುವ ವಿವಿಧ ಕೊಬ್ಬಿನಾಮ್ಲಗಳು ಬೇರೆ ಬೇರೆ ತಾಪಮಾನದಲ್ಲಿ ಗಟ್ಟಿಯಾಗುತ್ತವೆ. ಹೀಗಾಗಿ ತುಪ್ಪದಲ್ಲಿ ಹರಳಿನಂತಹ ಹರಳಿನಂತಾಗುತ್ತೆ. ವಾಸ್ತವವಾಗಿ, ಸರಿಯಾಗಿ ತಯಾರಿಸಿದ ಉತ್ತಮ ಗುಣಮಟ್ಟದ ತುಪ್ಪದ ಲಕ್ಷಣವೆಂದು ಹಲವರು ನಂಬುತ್ತಾರೆ.
35
ಸೂಕ್ತವಾದ ಡಬ್ಬಿಯಲ್ಲಿ ತುಪ್ಪ ಹಾಕಿ
ಗಾಳಿಯಾಡದಂತಹ ಗಾಜಿನ ಅಥವಾ ಸ್ಟೇನ್‌ಲೆಸ್ ಸ್ಟೀಲ್ ಡಬ್ಬಿಯಲ್ಲಿ ತುಪ್ಪ ಹಾಕಿಡುವುದು ಉತ್ತಮ. ಪ್ಲಾಸ್ಟಿಕ್ ಡಬ್ಬಿಗಳಿಗಿಂತ ಇವು ತೇವಾಂಶ, ಗಾಳಿ ಒಳಗೆ ಹೋಗದಂತೆ ಉತ್ತಮವಾಗಿ ತಡೆಯುತ್ತವೆ. ಮೊದಲನೆಯದಾಗಿ ತುಪ್ಪ ಹಾಳಾಗಲು ಅಥವಾ ಗಟ್ಟಿಯಾಗಲು ಮುಖ್ಯ ಕಾರಣ ಚಳಿ ಅಲ್ಲ, ತೇವಾಂಶ.
ಏಕೆಂದರೆ ತುಪ್ಪದಲ್ಲಿ ಸ್ವಾಭಾವಿಕವಾಗಿಯೇ ನೀರಿನ ಅಂಶ ಬಹಳ ಕಡಿಮೆ ಇರುತ್ತದೆ. ಡಬ್ಬಿ ಸರಿಯಾಗಿ ಮುಚ್ಚಿಡುವುದರಿಂದ ತೇವಾಂಶ ಒಳಗೆ ಹೋಗುವುದನ್ನು ತಡೆಯಬಹುದು. ಹೀಗಾಗಿ ಚಳಿಯಲ್ಲಿ ತುಪ್ಪ ಎಷ್ಟೇ ಗಟ್ಟಿಯಾದರೂ ಅದು ಹಲವು ತಿಂಗಳು ತಾಜಾವಾಗಿರುತ್ತದೆ.
ಚಳಿಗಾಲದಲ್ಲಿ ತುಪ್ಪವನ್ನು ಎಲ್ಲಿ ಇಡುತ್ತೀರಿ ಎಂಬುದು ತುಂಬಾ ಮುಖ್ಯ. ಬೆಚ್ಚಗಿನ ಸ್ಥಳದಲ್ಲಿಡುವುದರಿಂದ ತುಪ್ಪ ಗಟ್ಟಿಯಾಗುವುದಿಲ್ಲ. ಕಿಟಕಿಯ ಪಕ್ಕ ಅಥವಾ ಹೊರಗಿನ ಗೋಡೆಯ ಸಮೀಪದ ಸ್ಥಳಗಳಲ್ಲಿ ತುಪ್ಪ ಇಡುವುದನ್ನು ತಪ್ಪಿಸಿ. ಇಂತಹ ಜಾಗಗಳು ರಾತ್ರಿ ವೇಳೆ ಹೆಚ್ಚು ತಂಪಾಗುವುದರಿಂದ ತುಪ್ಪ ತುಂಬಾ ಗಟ್ಟಿಯಾಗಿ ತೆಗೆದುಕೊಳ್ಳಲು ಕಷ್ಟವಾಗಬಹುದು. ಹಾಗೆ ತುಪ್ಪದ ಡಬ್ಬಿಯನ್ನು ಗ್ಯಾಸ್ ಸ್ಟೌವ್ ಅಥವಾ ಯಾವುದೇ ನೇರ ಶಾಖದ ಮೂಲದ ಬಳಿಯೂ ಇಡಬೇಡಿ. ಪದೇ ಪದೆ ಬಿಸಿಯಾಗುವುದು, ತಣ್ಣಗಾಗುವುದು ಚಳಿಗಿಂತಲೂ ತುಪ್ಪದ ರುಚಿ ಮತ್ತು ಗುಣಮಟ್ಟದ ಮೇಲೆ ಹೆಚ್ಚು ಪರಿಣಾಮ ಬೀರಬಹುದು.
55
ತುಪ್ಪ ತೆಗೆಯುವಾಗ ಬಳಸುವ ಚಮಚವೂ ಮುಖ್ಯ
ಇದು ಚಳಿಗಾಲದ ತುಪ್ಪ ಗಟ್ಟಿಯಾಗಲು ಕಾರಣಗಳಲ್ಲಿ ಇದೂ ಒಂದು. ತುಪ್ಪ ಗಟ್ಟಿಯಾದಾಗ ಅಡುಗೆ ಮನೆಯಲ್ಲಿ ಕೈಗೆ ಸಿಕ್ಕ ಯಾವುದೇ ಚಮಚವನ್ನು ಬಳಸುವುದೇ ಹೆಚ್ಚು. ಒಂದು ವೇಳೆ ಅಂತಹ ಚಮಚ ಒದ್ದೆಯಾಗಿದ್ದರೆ ಅದನ್ನು ಬಳಸಬಾರದು. ಒದ್ದೆಯಾಗಿದ್ದರೆ ಏನಾಗಲ್ಲ ಎಂದು ಬಳಸುವುದೇ ತುಪ್ಪ ಕೆಡಲು ಕಾರಣ.
ಹೀಗಾಗಿ ತುಪ್ಪದ ಡಬ್ಬಿಗೆ ಪ್ರತ್ಯೇಕ ಚಮಚವೊಂದನ್ನು ಇಟ್ಟುಕೊಳ್ಳಿ. ಪ್ರತಿ ಬಾರಿ ಬಳಸುವ ಮೊದಲು ಚಮಚವನ್ನು ಸ್ವಚ್ಛವಾಗಿ ತೊಳೆದು ಸಂಪೂರ್ಣ ಒಣಗಿಸಿದ ಬಳಿಕ ಬಳಸಿ. ಹಸಿಯಾದ ಚಮಚ ಬಳಸುವುದರಿಂದ ಒಳಗೆ ಸೇರುವ ಒಂದು ಹನಿ ತೇವಾಂಶವೇ ಚಳಿಯಿಂದ ಉಂಟಾಗುವ ಗಟ್ಟಿತನಕ್ಕಿಂತ ತುಪ್ಪ ಹಾಳಾಗುವ ಸಾಧ್ಯತೆಯನ್ನು ಹೆಚ್ಚು ಹೆಚ್ಚಿಸಬಹುದು.
ತುಪ್ಪ ತುಂಬಾ ಗಟ್ಟಿಯಾಗಿದ್ದರೆ ಹೀಗೆ ಮಾಡಿ
ತುಪ್ಪ ಸಾಮಾನ್ಯವಾಗಿ ಬಳಸುವುದಕ್ಕಿಂತ ಹೆಚ್ಚು ಗಟ್ಟಿಯಾಗಿದ್ದರೆ ಇಡೀ ಡಬ್ಬಿಯನ್ನು ಮೈಕ್ರೋವೇವ್‌ನಲ್ಲಿ ಬಿಸಿ ಮಾಡಬೇಡಿ. ಬಳಸುವ ಕೆಲವು ನಿಮಿಷಗಳ ಮೊದಲು ತುಪ್ಪವನ್ನು ಕೋಣೆಯ ತಾಪಮಾನದಲ್ಲಿ ಇಡಬಹುದು. ಅಥವಾ ಮುಚ್ಚಿದ ಡಬ್ಬಿಯನ್ನು ಸ್ವಲ್ಪ ಸಮಯ ಬೆಚ್ಚಗಿನ ನೀರು ಇರುವ ಪಾತ್ರೆಯಲ್ಲಿ ಇಟ್ಟು ನಿಧಾನವಾಗಿ ಮೃದುವಾಗಿಸಬಹುದು. ಈ ಎರಡೂ ವಿಧಾನಗಳಿಂದ ತುಪ್ಪ ಹೊರಗಿನಿಂದ ಒಳಗಿನವರೆಗೆ ನಿಧಾನವಾಗಿ ಮೃದುವಾಗುತ್ತದೆ. ಇದರಿಂದ ಅದು ಸುಲಭವಾಗಿ ತೆಗೆದುಕೊಳ್ಳಲು, ಬಳಸಲು ಮೃದುವಾಗುತ್ತದೆ. ಪದೇ ಪದೆ ನೇರ ಶಾಖಕ್ಕೆ ಒಡ್ಡುವುದರಿಂದ ರುಚಿಗೆ ಆಗಬಹುದಾದ ಪರಿಣಾಮವನ್ನೂ ತಪ್ಪಿಸುತ್ತೆ.
ಗಮನಿಸಿ:
ಈ ಲೇಖನವನ್ನು ಸಾಮಾನ್ಯ ಮಾಹಿತಿ ನೀಡುವ ಉದ್ದೇಶಕ್ಕಾಗಿ ಮಾತ್ರ ನೀಡಲಾಗಿದೆ. ತಾಪಮಾನ ಮತ್ತು ಋತುವಿಗೆ ಅನುಗುಣವಾಗಿ ತುಪ್ಪದ ಗಟ್ಟಿತನ ಸಹಜವಾಗಿ ಬದಲಾಗುತ್ತದೆ. ಆದರೆ ತುಪ್ಪದಲ್ಲಿ ಹುಳಿ ವಾಸನೆ, ಅಚ್ಚು ಅಥವಾ ಅಸಹಜ ರುಚಿ ಕಂಡುಬಂದರೆ, ಅದನ್ನು ಹೇಗೆ ಸಂಗ್ರಹಿಸಿದ್ದರೂ ಬಳಸದೆ ಎಸೆಯಿರಿ. ಇವು ಸಾಮಾನ್ಯವಾಗಿ ಚಳಿಗಾಲದಲ್ಲಿ ಉಂಟಾಗುವ ಗಟ್ಟಿತನದ ಲಕ್ಷಣಗಳಲ್ಲ, ತುಪ್ಪ ಹಾಳಾಗಿರುವ ಸೂಚನೆಗಳಾಗಿವೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.