ಯೋಗೇಶ್ ಗೌಡ ಹತ್ಯೆ ಪ್ರಕರಣ: ಇನ್ಸ್‌ಪೆಕ್ಟರ್‌ ಟಿಂಗರಿಕರ್‌ರಿಂದ ನಕಲಿ ಸಾಕ್ಷಿ ಸೃಷ್ಟಿ, ಕೋರ್ಟ್‌ನಲ್ಲಿ ಸಿಬಿಐ ವಾದ

Published : May 27, 2026, 02:36 PM IST

ಧಾರವಾಡದ ಬಿಜೆಪಿ ಮುಖಂಡ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ, ಆರಂಭಿಕ ತನಿಖಾಧಿಕಾರಿ ಇನ್ಸ್‌ಪೆಕ್ಟರ್ ಟಿಂಗರಿಕರ್ ನಕಲಿ ಸಾಕ್ಷಿ ಸೃಷ್ಟಿಸಿದ್ದಾರೆ ಎಂದು ಸಿಬಿಐ ಹೈಕೋರ್ಟ್‌ನಲ್ಲಿ ವಾದಿಸಿದೆ. ತಮ್ಮ 7 ವರ್ಷಗಳ ಶಿಕ್ಷೆಯನ್ನು ರದ್ದುಗೊಳಿಸುವಂತೆ ಕೋರಿ ಟಿಂಗರಿಕರ್ ಮೇಲ್ಮನವಿ ಸಲ್ಲಿಸಿದ್ದಾರೆ.

PREV
16
ಇನ್ಸ್‌ಪೆಕ್ಟರ್‌ ಟಿಂಗರಿಕರ್‌ರಿಂದ ನಕಲಿ ಸಾಕ್ಷಿ ಸೃಷ್ಟಿ

ಬೆಂಗಳೂರು: ಧಾರವಾಡದ ಬಿಜೆಪಿ‌ ಮುಖಂಡ ಯೋಗೀಶ್ ಗೌಡ ಕೊಲೆ ನಡೆದಾಗ ಆರಂಭದಲ್ಲಿ ತನಿಖೆ ನಡೆಸಿದ್ದ ಪೊಲೀಸ್ ಇನ್ಸ್‌ಪೆಕ್ಟರ್ ಚನ್ನಕೇಶವ ಟಿಂಗರಿಕರ್, ನೈಜ ಆರೋಪಿಗಳನ್ನು ಪರಾರಿಯಾಗಲು ಬಿಟ್ಟು, ನಕಲಿ ಸಾಕ್ಷಿಗಳನ್ನು ಸೃಷ್ಟಿಸಿದ್ದಾರೆ.‌ ಕೊಲೆಗೆ ಬಳಸಿದ್ದ ಶಸ್ತ್ರಾಸ್ತ್ರಗಳನ್ನು ಬಚ್ಚಿಟ್ಟು, ಮರಣೋತ್ತರ ಪರೀಕ್ಷೆ ನಡೆಸಿದಾಗ ದೊರೆತ ರಕ್ತವನ್ನು ನಕಲಿ ಶಸ್ತ್ರಾಸ್ತ್ರಗಳಿಗೆ ಸವರುವ ಮೂಲಕ ಸ್ವತಃ ತಾವೇ ಸಾಕ್ಷಿ‌ ಸೃಷ್ಟಿಸಿದ್ದಾರೆ‌ ಎಂದು ಸಿಬಿಐ ಬಲವಾಗಿ ವಾದಿಸಿದೆ. ಸದರಿ ಪ್ರಕರಣದಲ್ಲಿ ತಮಗೆ ಏಳು ವರ್ಷ ಶಿಕ್ಷೆ ವಿಧಿಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಆದೇಶ ರದ್ದುಪಡಿಸಬೇಕು ಎಂದು ಕೋರಿ ಟಿಂಗರಿಕರ್ ಹೈಕೋರ್ಟ್‌ಗೆ ಕ್ರಿಮಿನಲ್ ಮೇಲ್ಮನವಿ ಸಲ್ಲಿಸಿದ್ದಾರೆ. ಜತೆಗೆ ಶಿಕ್ಷೆಯನ್ನು ಅಮಾನತಿನಲ್ಲಿಟ್ಟು‌‌‌‌ ಜಾಮೀನು ಮಂಜೂರು ಮಾಡಬೇಕು‌‌ ಎಂದು ಮಧ್ಯಂತರ‌‌ ಮನವಿ ಮಾಡಿದ್ದಾರೆ. ಈ ಪಕ್ರರಣದ ವಿಚಾರಣೆ ವೇಳೆ ಸಿಬಿಐ ಪರ ವಾದ ಮಂಡಿಸಿದ ಕೇಂದ್ರ ಸರ್ಕಾರದ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್ ಜಿ)‌ ಎಸ್‌.ವಿ.‌ ರಾಜು‌ ಈ ವಿಚಾರಗಳನ್ನು ಕೋರ್ಟ್‌ ಗಮನಕ್ಕೆ ತಂದರು.

26
ಸಾಕ್ಷಿಗಳಿಗೆ ಬೆದರಿಕೆ

ಮೇಲ್ಮನವಿ ಸಂಬಂಧ ಸಿಬಿಐ ಪರ ವಾದ ಮಂಡಿಸಿದ ಕೇಂದ್ರ ಸರ್ಕಾರದ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್ ಜಿ)‌ ಎಸ್‌.ವಿ.‌ ರಾಜು‌ ಅವರು, ಯೋಗೀಶ್‌ಗೌಡ‌ಕೊಲೆ ಪ್ರಕರಣದಲ್ಲಿ ಟಿಂಗರಿಕರ್‌ ತನಿಖಾಧಿಕಾರಿಯಾಗಿದ್ದರು.‌ ಸಿಸಿಟಿವಿ ದೃಶ್ಯಗಳನ್ನು ಸಂಗ್ರಹಿಸಿದ್ದರೂ 7ರಿಂದ 14ನೇ ಆರೋಪಿಗಳನ್ನು ಮೊದಲು ಆರೋಪಿಗಳನ್ನಾಗಿಸಿಲ್ಲ. ಕಾಂಗ್ರೆಸ್‌ ಮುಖಂಡ ವಿನಯ್‌ ಕುಲಕರ್ಣಿ ಅವರ ಹೆಸರು ಹೇಳದಂತೆ ಸಾಕ್ಷಿಗಳಿಗೆ ಬೆದರಿಕೆ ಹಾಕಿದ್ದರು ಎಂದರು.

36
ಟಿಂಗರಿಕರ್‌ಗೆ ಗರಿಷ್ಠ 7 ವರ್ಷ ಶಿಕ್ಷೆ

ಅಲ್ಲದೇ,‌ ಸಾಕ್ಷ್ಯ ನಾಶ ಅಪರಾಧಕ್ಕೆ ಐಪಿಸಿ ಸೆಕ್ಷನ್‌ 201 ಮತ್ತು 218 ಅಡಿ ಟಿಂಗರಿಕರ್‌ಗೆ ಗರಿಷ್ಠ 7 ವರ್ಷ ಶಿಕ್ಷೆ ವಿಧಿಸಲಾಗಿದೆ. ‌ಈ ಪ್ರಕರಣಕ್ಕೆ ಕಾನೂನಿನಲ್ಲಿ ಇನ್ನೂ ಹೆಚ್ಚಿನ ಪ್ರಮಾಣ ಶಿಕ್ಷೆ ವಿಧಿಸಲು ಅವಕಾಶವಿದ್ದರೆ ವಿಚಾರಣಾ ನ್ಯಾಯಾಲಯ ವಿಧಿಸುತ್ತಿತ್ತು. ಟೆಂಗರಿಕರ್‌ ಜೈಲಿನಲ್ಲಿ 70ಕ್ಕೂ ಹೆಚ್ಚು ದಿನ ಮಾತ್ರ ಕಳೆದಿದ್ದಾರೆ. ಈ ಹಂತದಲ್ಲಿ ಶಿಕ್ಷೆ ಅಮಾನತು ಮಾಡಿ ಜಾಮೀನು ಮಂಜೂರು ಮಾಡಬಾರದು. ಎರಡು ವರ್ಷದ ನಂತರ ಅರ್ಜಿ ಸಲ್ಲಿಸಲು ಆದೇಶಿಸಬೇಕು. ಮೇಲ್ನೋಟಕ್ಕೆ ಜಾಮೀನು ನೀಡುವ ಹಾಗೂ ಶಿಕ್ಷೆ ಅಮಾನತು ಮಾಡುವ ಪ್ರಕರಣ ಇದೆ ಎಂಬುದನ್ನು ಟೆಂಗರಿಕರ್‌ ನ್ಯಾಯಾಲಯಕ್ಕೆ ತೋರಿಸಬೇಕು ಎಂದು ವಾದಿಸಿದರು.

46
ಯೋಗೇಶ್ ಕೊಲೆ ಕೇಸಲ್ಲಿ ‘ಹೈ’ನಲ್ಲಿ ವಾದ

ಟಿಂಗರಿಕರ್ ಪರ ಹಿರಿಯ ವಕೀಲ ಪಿ.ಪಿ. ಹೆಗ್ಡೆ, ‌ಇತರರ ಜೊತೆ ಪಿತೂರಿ ನಡೆಸಿದ ಹಾಗೂ ಸರಿಯಾಗಿ ತನಿಖೆ ನಡೆಸಿಲ್ಲ ಎಂಬ ಆರೋಪ ಟೆಂಗರಿಕರ್‌ ವಿರುದ್ಧವಿದೆ. ಅದಕ್ಕೆ ಐಪಿಸಿ ಸೆಕ್ಷನ್‌ ಏಳು ವರ್ಷ ಶಿಕ್ಷೆ ವಿಧಿಸಲಾಗಿದೆ. ಇವು ಜಾಮೀನು ನೀಡಬಹುದಾದ ಪ್ರಕರಣಗಳಾಗಿವೆ. 2026ರ ಏ.15ರಿಂದ ಟಿಂಗರಿಕರ್‌ ಜೈಲಿನಲ್ಲಿರುವುದರಿಂದ ಸ್ವಯಂಚಾಲಿತವಾಗಿ ಅವರನ್ನು ಅಮಾನತಿನಲ್ಲಿ ಇಡಲಾಗಿದೆ‌ ಎಂದು ವಾದಿಸಿದರು.

ಪ್ರಕರಣದಲ್ಲಿ ಬಸವರಾಜ ಮುತ್ತಗಿ ಮತ್ತು 17ನೇ ಆರೋಪಿಯಾಗಿದ್ದ ಶಿವಾನಂದ ಬಿರಾದಾರ್‌ ಅವರು ಅಪ್ರೂವರ್‌ ಆಗಿದ್ದು, ಅವರ ಸಾಕ್ಷಿಯನ್ನು ಆಧರಿಸಿ ಟೆಂಗರಿಕರ್‌ಗೆ ಶಿಕ್ಷೆ ವಿಧಿಸಲಾಗಿದೆ.‌ ಹಾಗಾಗಿ, ಶಿಕ್ಷೆ ಅಮಾನತುಪಡಿಸಿ ಜಾಮೀನು ಮಂಜೂರು ಮಾಡಬೇಕು ಎಂದು ಕೋರಿದರು. ಈ ಮಧ್ಯೆ ಶಿಕ್ಷೆ ಅಮಾನತಿಗೆ ವಿರೋಧಿಸಿ ಮಧ್ಯಂತರ ಅರ್ಜಿಸಲ್ಲಿಸಿರುವ ಸಂತ್ರಸ್ತರ ಪರ ವಕೀಲರು, ತಾವು ಎಎಸ್‌ಜಿ ರಾಜು ಅವರ ವಾದವನ್ನು ಅಳವಡಿಸಿಕೊಳ್ಳುವುದಾಗಿ ತಿಳಿಸಿದರು. ವಾದ- ಪ್ರತಿವಾದ ಆಲಿಸಿದ ಪೀಠ ವಿಚಾರಣೆಯನ್ನು‌ ಶುಕ್ರವಾರಕ್ಕೆ ಮುಂದೂಡಿತು.

56
ವಿಚಾರಣೆ ಜೂ.2ಕ್ಕೆ ಮುಂದೂಡಿಕೆ

ಬೆಂಗಳೂರು: ಧಾರವಾಡದ ಬಿಜೆಪಿ ಮುಖಂಡ  ಯೊಗೇಶ್ ಗೌಡರ್ ಕೊಲೆ ಪ್ರಕರಣದಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಿಧಿಸಿರುವ ಜೀವಾವಧಿ ಶಿಕ್ಷೆ ರದ್ದು ಮಾಡುವಂತೆ ಕೋರಿ ಮಾಜಿ ಶಾಸಕ ವಿನಯ್ ಕುಲಕರ್ಣಿ ಮತ್ತು ಚಂದ್ರಶೇಖರ್ ಇಂಡಿ ಸಲ್ಲಿಸಿರುವ ಕ್ರಿಮಿನಲ್ ಮೇಲ್ಮನವಿಗಳ ವಿಚಾರಣೆಯನ್ನು ಹೈಕೋರ್ಟ್ ‌ಜೂ.2ಕ್ಕೆ ಮುಂದೂಡಿದೆ. ವಿಶೇಷ ನ್ಯಾಯಾಲಯದ ಆದೇಶ ರದ್ದುಪಡಿಸಬೇಕು ಎಂದು ಕೋರಿ ವಿನಯ್ ಹಾಗೂ ಇಂಡಿ ಹೈಕೋರ್ಟ್‌ಗೆ ಕ್ರಿಮಿನಲ್ ಮೇಲ್ಮನವಿ ಸಲ್ಲಿಸಿದ್ದಾರೆ. ಶಿಕ್ಷೆಯನ್ನು ಅಮಾನತ್ತಿನಲ್ಲಿರಿಸಿ ಜಾಮೀನು ಮಂಜೂರು ಮಾಡುವಂತೆ ಮಧ್ಯಂತರ ಮನವಿ ಮಾಡಿದ್ದಾರೆ.‌ ಮೇಲ್ಮನವಿಗಳು ನ್ಯಾ.ಸುನೀಲ್ ದತ್ ಯಾದವ್ ಮತ್ತು ನ್ಯಾ. ಎಸ್.ರಾಚಯ್ಯ ಅವರ ನೇತೃತ್ವದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು. ಮಧ್ಯಂತರ ಮನವಿ ಕುರಿತು ಆಕ್ಷೇಪಣೆ ಸಲ್ಲಿಸಲು ಸಿಬಿಐ ಪರ ವಕೀಲರು ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ನ್ಯಾಯಪೀಠವು ಜೂ.2ಕ್ಕೆ ಮುಂದೂಡಿತು.

66
ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ವಿನಯ್‌

ಇದಕ್ಕೂ‌‌ ಮುನ್ನ ವಿಚಾರಣೆ ವೇಳೆ ವಿನಯ್ ಕುಲಕರ್ಣಿ ಪರ ಹಿರಿಯ ವಕೀಲ ಸಿದ್ಧಾರ್ಥ್‌ ಲೂಥ್ರಾ, ಶಿಕ್ಷೆಯಾಗಿರುವುದರಿಂದ ‌ಕುಲಕರ್ಣಿ‌ ಅವರ ಶಾಸಕ ಸ್ಥಾನದಿಂದ ಅನರ್ಹಗೊಂಡಿದ್ದಾರೆ. ಸದ್ಯ ಖಾಲಿಯಿರುವ ಅವರ ಸ್ಥಾನಕ್ಕೆ ಮಧ್ಯಂತರ ಚುನಾವಣೆಯನ್ನು ಚುನಾವಣಾ ಆಯೋಗ ಘೋಷಣೆ ಮಾಡುವ ಸಾಧ್ಯತೆಯಿದೆ. ಹಾಗಾಗಿ, ಚುನಾವಣೆ ಘೋಷಣೆ ಮಾಡುವುದನ್ನು ತಡೆಯೊಡ್ಡಬೇಕು. ‌ನಮ್ಮ‌ ಮೇಲ್ಮನವಿಗೆ ಸಿಬಿಐ ಇನ್ನೂ ಆಕ್ಷೇಪಣೆ ಸಲ್ಲಿಸಿಲ್ಲ‌ ಎಂದು ವಿವರಿಸಿದರು.

ವಿನಯ್ ಕುಲಕರ್ಣಿ ಪರ ಮತ್ತೊಬ್ಬ ಹಿರಿಯ ವಕೀಲ ಸಿ.ವಿ.‌ನಾಗೇಶ್‌, ಆಕ್ಷೇಪಣೆ ಸಲ್ಲಿಸದಿದ್ದರೆ ವಿಚಾರಣೆ ಮುಂದುವರಿಸಲಾಗುವುದು ಎಂಬುದಾಗಿ ನ್ಯಾಯಾಲಯ ಆದೇಶಿಸಬೇಕು ಎಂದು ಕೋರಿದರು.

ಸಿಬಿಐ ಪರ ವಿಶೇಷ ಸರ್ಕಾರಿ ಅಭಿಯೋಜಕ ಪಿ.ಪ್ರಸನ್ನಕುಮಾರ್ ಅವರು, ಆಕ್ಷೇಪಣೆಯನ್ನು ಸಂಜೆ ವೇಳೆಗೆ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು. ಅದಕ್ಕೆ ಸಿ.ವಿ.ನಾಗೇಶ್‌, ಶಿಕ್ಷೆ ಅಮಾನತಿಗೆ ಮನವಿ ಮಾಡಲಾಗಿದೆ. ಸಿಬಿಐ ಆಕ್ಷೇಪಣೆ ಸಲ್ಲಿಸದಿದ್ದರೂ ನ್ಯಾಯಾಲಯ ವಿಚಾರಣೆ ಮುಂದುವರಿಸಬಹುದು‌ ಎಂದರು.

ಆಗ ಪ್ರತಿಕ್ರಿಯಿಸಿದ ಪೀಠ, ವಿನಯ್‌ ಕುಲಕರ್ಣಿ ಮತ್ತು ಚಂದ್ರಶೇಖರ್‌ ಇಂಡಿ ಅವರ ಶಿಕ್ಷೆ ಅಮಾನತು ಕೋರಿರುವ ಮನವಿಗಳನ್ನು ರಜಾಕಾಲ ಮುಗಿದ ಬಳಿಕ ವಿಚಾರಣೆ ನಡೆಸಬಹುದು. ವಿಚಾರಣೆಗೆ ದಿನಾಂಕ ನಿಗದಿಪಡಿಸಲಾಗುವುದು, ಆಕ್ಷೇಪಣೆ ಸಲ್ಲಿಸಲು ಸಿಬಿಐಗೆ ಸೂಚಿಸಿ ವಿಚಾರಣೆಯನ್ನು ಜೂ.2ಕ್ಕೆ ಮುಂದೂಡಿತು.

Read more Photos on
click me!

Recommended Stories