ಹೊಸನಗರ ತಾಲೂಕಿನ ರಿಪ್ಪನ್‌ಪೇಟೆಯಲ್ಲಿ ಮಧ್ಯರಾತ್ರಿ ಮೊಟ್ಟೆ ಸಾಗಿಸುತ್ತಿದ್ದ ಸರಕು ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಈ ಅಪಘಾತದಲ್ಲಿ ಅಪಾರ ಪ್ರಮಾಣದ ಮೊಟ್ಟೆಗಳು ನಾಶವಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಮೊಟ್ಟೆ ಸಾಗಿಸುತ್ತಿದ್ದ ಐಷರ್ ಸರಕು ವಾಹನ ಮಧ್ಯರಾತ್ರಿ ಪಲ್ಟಿಯಾದ ಘಟನೆ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಪಟ್ಟಣದ ಗ್ರಾಮ ಪಂಚಾಯಿತಿ ಕಚೇರಿ ಮುಂಭಾಗದಲ್ಲಿ ನಡೆದಿದೆ. ಮಧ್ಯರಾತ್ರಿ ವೇಳೆ ಸಂಚರಿಸುತ್ತಿದ್ದ ವಾಹನ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ಪಲ್ಟಿಯಾಗಿದೆ.
24
ಅರ್ಧಕ್ಕೂ ಹೆಚ್ಚು ಮೊಟ್ಟೆಗಳು ಒಡೆದು ರಸ್ತೆಯ ಮೇಲೆ ಚೆಲ್ಲಾಪಿಲ್ಲಿ
ವಾಹನ ಪಲ್ಟಿಯಾದ ಪರಿಣಾಮ ವಾಹನದಲ್ಲಿದ್ದ ಅರ್ಧಕ್ಕೂ ಹೆಚ್ಚು ಮೊಟ್ಟೆಗಳು ಒಡೆದು ರಸ್ತೆಯ ಮೇಲೆ ಚೆಲ್ಲಾಪಿಲ್ಲಿಯಾಗಿವೆ. ಘಟನೆಯಿಂದ ವಾಹನಕ್ಕೂ ಹಾನಿಯಾಗಿದ್ದು, ಮೊಟ್ಟೆಗಳ ನಷ್ಟವು ಗಮನಾರ್ಹ ಪ್ರಮಾಣದಲ್ಲಿದೆ. ಅದೃಷ್ಟವಶಾತ್, ಈ ಅವಘಡದಲ್ಲಿ ಯಾವುದೇ ಪ್ರಾಣಾಪಾಯ, ಯಾರಿಗೂ ಗಂಭೀರ ಗಾಯಗಳಾಗಿಲ್ಲ.
34
ಕುಂದಾಪುರದ ನಿವಾಸಿಗೆ ಸೇರಿದ ವಾಹನ
ರಾತ್ರಿ ಸಮಯದಲ್ಲಿ ವಾಹನ ಸಂಚಾರ ಕಡಿಮೆಯಿದ್ದ ಕಾರಣ ಮತ್ತಷ್ಟು ಅನಾಹುತ ಸಂಭವಿಸುವುದು ತಪ್ಪಿದೆ. ಪಲ್ಟಿಯಾದ ವಾಹನವು ಕುಂದಾಪುರದ ನಿವಾಸಿ ರಹಮತ್ತುಲ್ಲಾ ಅವರಿಗೆ ಸೇರಿದ್ದು ಎಂದು ತಿಳಿದು ಬಂದಿದೆ. ಅಪಘಾತಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ.
ಘಟನೆ ಬಳಿಕ ಸ್ಥಳೀಯರ ಸಹಕಾರದಿಂದ ಸಂಬಂಧಪಟ್ಟವರು ವಾಹನ ಮತ್ತು ರಸ್ತೆ ತುಂಬೆಲ್ಲಾ ಹರಡಿದ ಮೊಟ್ಟೆಗಳನ್ನು ತೆರವುಗೊಳಿಸಿದರು. ಹಾಗೆಯೇ ಚೆನ್ನಾಗಿರುವ ಮೊಟ್ಟೆಗಳನ್ನು ತೆಗೆದುಕೊಂಡು ಹೋಗಲಾಯ್ತು. ರಿಪ್ಪನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿದೆ.