ಧಾರವಾಡ: ಆರ್‌ಎಸ್‌ಎಸ್‌ ಬೈಠಕ್‌ ಆರಂಭ

First Published | Oct 29, 2021, 8:42 AM IST

ಧಾರವಾಡ(ಅ.29):  ಇಲ್ಲಿಯ ಗರಗ ರಸ್ತೆಯಲ್ಲಿರುವ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದಲ್ಲಿ ಮೂರು ದಿನಗಳ ಕಾಲ ನಡೆಯುತ್ತಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ಕಾರ್ಯಕಾರಿ ಮಂಡಳಿಯ ಸಭೆಯು ಗುರುವಾರ ಸರಸಂಘಚಾಲಕ ಡಾ. ಮೋಹನ್‌ ಭಾಗವತ್‌ ಮತ್ತು ಸರಕಾರ್ಯವಾಹರಾದ ದತ್ತಾತ್ರೇಯ ಹೊಸಬಾಳೆ ಅವರು ಭಾರತಮಾತೆಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಪ್ರಾರಂಭವಾಯಿತು.
 

ದೇಶಾದ್ಯಂತದಿಂದ ಆಗಮಿಸಿರುವ ಎಲ್ಲ ಪ್ರಾಂತಗಳ ಹಾಗೂ ಕ್ಷೇತ್ರಗಳ ಸಂಘಚಾಲಕ, ಕಾರ್ಯವಾಹ, ಪ್ರಚಾರಕ, ಅಖಿಲ ಭಾರತ ಕಾರ್ಯಕಾರಿಣಿ ಸದಸ್ಯರು ಮತ್ತು ಕೆಲ ಆಯ್ದ ಸಂಘಟನೆಗಳ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಗಳು ಸೇರಿದಂತೆ ಸುಮಾರು 350 ಕಾರ್ಯಕರ್ತರು ಈ ಸಭೆಯಲ್ಲಿ ಭಾಗವಹಿಸಿದ್ದಾರೆ.

ಬಾಂಗ್ಲಾದೇಶದಲ್ಲಿ ಇತ್ತೀಚಿಗೆ ನಡೆದ ಹಿಂದೂಗಳ ಮೇಲಿನ ಹಿಂಸಾಚಾರದ ಬಗ್ಗೆ ನಿರ್ಣಯವನ್ನು ಅಂಗೀಕರಿಸುವುದು ಸೇರಿದಂತೆ ಸಭೆಯಲ್ಲಿ ಸಂಘದ ಕಾರ್ಯದ ಪ್ರಸ್ತುತ ಸ್ಥಿತಿಗತಿ, ಕಾರ್ಯ ವಿಸ್ತಾರ ಹಾಗೂ ಕಾರ್ಯಕರ್ತರ ವಿಕಾಸದ ಯೋಜನೆಗಳು ಹಾಗೂ ದೇಶದ ವರ್ತಮಾನ ವಿಷಯಗಳ ಕುರಿತು ಚರ್ಚೆ ನಡೆಯಲಿದೆ. 

Tap to resize

ಸಭೆಯಲ್ಲಾದ ತೀರ್ಮಾನಗಳ ಕುರಿತು ಮಾಧ್ಯಮಗಳಿಗೆ ಅ. 30ರಂದು ಮಾಹಿತಿ ಒದಗಿಸಲಾಗುವುದು ಎಂದು ಅಖಿಲ ಭಾರತ ಸಹ ಪ್ರಚಾರಕ ನರೇಂದ್ರ ಕುಮಾರ ಮಾಧ್ಯಮಗಳಿಗೆ ಸ್ಪಷ್ಟಪಡಿಸಿದರು.

ಸಭೆಯ ಆರಂಭದಲ್ಲಿ ಇತ್ತೀಚಿಗೆ ನಿಧನರಾದ ಗಣ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಇದರಲ್ಲಿ ಸಂಸ್ಕಾರ ಭಾರತೀಯ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಅಮೀರ್‌ ಚಂದ್‌, ಕನ್ನಡ ಲೇಖಕರಾದ ಜಿ. ವೆಂಕಟಸುಬ್ಬಯ್ಯ, ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌. ದೊರೆಸ್ವಾಮಿ, ಖ್ಯಾತ ಕವಿ ಡಾ. ಎಚ್‌. ಸಿದ್ದಲಿಂಗಯ್ಯ, ರಾಜಕಾರಣಿ ಆಸ್ಕರ್‌ ಫೆರ್ನಾಂಡಿಸ್‌, ಸ್ವಾಮಿ ಅಧ್ಯಾತ್ಮಾನಂದಜೀ, ಸ್ವಾಮಿ ಓಂಕಾರಾನಂಜೀ, ಸ್ವಾಮಿ ಅರುಣಗಿರಿಜೀ, ಹಿರಿಯ ಪತ್ರಕರ್ತ ಶ್ಯಾಮ್‌ ಖೋಸ್ಲಾ ಸೇರಿದಂತೆ ಹಲವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಝಡ್‌ ಪ್ಲಸ್‌ ಭದ್ರತೆ ಹೊಂದಿರುವ ಡಾ. ಮೋಹನ ಭಾಗವತ್‌ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಆರ್‌ಎಸ್‌ಎಸ್‌ ಮುಖಂಡರು ಆಗಮಿಸಿದ ಕಾರಣ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಸುತ್ತಲೂ ಸೂಕ್ತ ಭದ್ರತೆ ಒದಗಿಸಲಾಗಿತ್ತು. ಗರಗ ರಸ್ತೆ ತುಂಬೆಲ್ಲಾ ಕೇಸರಿ ಧ್ವಜಗಳು ರಾರಾಜಿಸುತ್ತಿದ್ದವು.

Latest Videos

click me!