ಕನ್ನಡ ಮಾತ್ರ ಬಲ್ಲ ತರಕಾರಿ ವ್ಯಾಪಾರಿ ಅಜ್ಜಿಯೊಬ್ಬರು, ಭಾಷೆ ಬಾರದ ಗ್ರಾಹಕರೊಂದಿಗೆ ವ್ಯಾಪಾರ ಮಾಡುವ ವಿಡಿಯೋ ವೈರಲ್ ಆಗಿದೆ. ಅಜ್ಜಿಯ ಈ ಜಾಣ್ಮೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲೊಂದು ವಿಡಿಯೋ ವೈರಲ್ ಆಗುತ್ತಿದೆ. ತರಕಾರಿ ವ್ಯಾಪಾರ ಮಾಡುತ್ತಿರುವ ಅಜ್ಜಿಗೆ ಕನ್ನಡ ಮಾತ್ರ ಬರುತ್ತದೆ. ತಮಗೆ ಹಿಂದಿ ಭಾಷೆ ತಿಳಿಯದಿದ್ದರೂ ಕನ್ನಡ ಗೊತ್ತಿಲ್ಲದ ಜನರೊಂದಿಗೆ ಸುಲಭವಾಗಿ ವ್ಯಾಪಾರ ಮಾಡುತ್ತಾರೆ. ವ್ಯಾಪಾರದ ವೇಳೆ ಅಜ್ಜಿ ಬಳಸಿದ ಟೆಕ್ನಿಕ್‌ಗೆ ನೆಟ್ಟಿಗರು ಫಿದಾ ಆಗಿದ್ದು, ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೇ ಮೇಲು ಎಂದು ಕಮೆಂಟ್ ಮಾಡುತ್ತಿದ್ದಾರೆ.
25
21 ಲಕ್ಷ ವ್ಯೂವ್ ಪಡೆದ ವಿಡಿಯೋ
ಅಜ್ಜಿ ವ್ಯಾಪಾರ ಮಾಡುತ್ತಿರುವ ವಿಡಿಯೋವನ್ನು ಮಂಜು ಮಡಿವಾಳರ್ ಎಂಬವರು (manju_madivalar1) ತಮ್ಮ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದು, ವೈರಲ್ ಆಗುತ್ತಿದೆ. ಈವರೆಗೂ ಈ ವಿಡಿಯೋಗೆ 21 ಲಕ್ಷಕ್ಕೂ ಅಧಿಕ ವ್ಯೂವ್ ಬಂದಿದೆ. ಅಜ್ಜಿಗೆ ಹಿಂದಿ ಬಾಷೆ ಬರಲ್ಲ. ಆದ್ರೂ ಕೂಡ ಅಜ್ಜಿ ತನ್ನ ತೆಲೆ ಉಪಯೋಗಿಸಿ ವ್ಯಾಪಾರ ಮಾಡ್ತಿದ್ದಾರೆ. ಇದನ್ನು ನೋಡಿ ತುಂಬಾನೇ ಖುಷಿ ಆಯ್ತು ಎಂದು ಬರೆದುಕೊಂಡಿದ್ದಾರೆ.
35
ವೈರಲ್ ವಿಡಿಯೋದಲ್ಲಿ ಏನಿದೆ?
ವಿಡಿಯೋದಲ್ಲಿ ಓರ್ವ ವ್ಯಕ್ತಿ, ನಿನಗೆ ಹಿಂದಿ ಬರಲ್ಲ. ಆದರೂ ಅವರಿಗೆ ತರಕಾರಿ ಬೆಲೆ ಹೇಗೆ ಹೇಳಿದೆ ಎಂದು ಕೇಳುತ್ತಾರೆ. ಇದಕ್ಕೆ ಅಜ್ಜಿ ಕೈಯಲ್ಲಿ 500 ಗ್ರಾಂ ತೂಕದ ಕಲ್ಲು ಮತ್ತು 20 ರೂಪಾಯಿ ನೋಟ್ ಹಿಡಿದು ತೋರಿಸುತ್ತಾರೆ. ಅಂದ್ರೆ ಅರ್ಧ ಕೆಜಿ ಬೆಂಡೆಕಾಯಿಗೆ 20 ರೂಪಾಯಿ ಎಂದರ್ಥ. ಈ ರೀತಿಯಾಗಿ ಸನ್ನೆ ಮೂಲಕ ಅಜ್ಜಿ ಸುಲಭವಾಗಿ ಕನ್ನಡ ಗೊತ್ತಿಲ್ಲದವರೊಂದಿಗೆ ವ್ಯಾಪಾರ ಮಾಡುವ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದಾರೆ.
ಈ ವಿಡಿಯೋ ಶೇರ್ ಮಾಡಿಕೊಂಡಿರುವ ಮಂಜು ತಾವು ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ವಜ್ರಬಂಡಿಯ ನಿವಾಸಿ ಎಂದು ಹೇಳಿದ್ದಾರೆ. ಅಜ್ಜಿಯೂ ಇದೇ ಗ್ರಾಮ ಅಥವಾ ಸುತ್ತಮುತ್ತಲಿನ ಹಳ್ಳಿಯ ನಿವಾಸಿ ಎಂದು ಗೊತ್ತಾಗುತ್ತದೆ. ಕೆಲವರು ಈ ಅಜ್ಜಿ ನಮ್ಮ ಇರಕಲಗಢ ಸಂತೆಗೂ ಬರುತ್ತಾರೆ. ತೂಕಕ್ಕಿಂತ ಸ್ವಲ್ಪ ಹೆಚ್ಚಾಗಿಯೇ ಹಾಕುತ್ತಾರೆ. ಸದಾ ನಗುತ್ತಲೇ ಎಲ್ಲರೊಂದಿಗೆ ವ್ಯಾಪಾರ ಮಾಡುತ್ತಾರೆ.
ಈ ವಿಡಿಯೋಗೆ ಪ್ರತಿಕ್ರಿಯಿಸಿರುವ ನೆಟ್ಟಿಗರು, ಇವರು ನಮ್ಮ ಅಜ್ಜಿ. ಸುತ್ತಮುತ್ತಲಿನ ಹಳ್ಳಿಗಳಿಗೆ ತೆರಳಿ ತರಕಾರಿ ವ್ಯಾಪಾರ ಮಾಡುತ್ತಾರೆ. ದುಡಿದು ತಿನ್ನುವ ಛಲ ಹೊಂದಿದ್ದಾರೆ ಎಂದು ಕಮೆಂಟ್ ಮಾಡಿದ್ದಾರೆ. ಈ ಅಜ್ಜಿ ನಿಮ್ಮೂರಿನ ಸಂತೆಗೂ ಬರ್ತಾರಾ? ಅಜ್ಜಿಯ ಪರಿಚಯ ನಿಮಗೆ ಇದೆಯಾ? ಹಾಗಿದ್ರೆ ಅಜ್ಜಿಯ ಹೆಸರು ಏನೆಂದು ಕಮೆಂಟ್ ಮಾಡಿ.