ದೇಶದಲ್ಲೇ ಮೊದಲು ಬಂಡೀಪುರ ಅರಣ್ಯದ 'ಎಐ' ಕಣ್ಗಾವಲು: 10 ಕಿ.ಮೀ ದೂರದಿಂದಲೇ ಪ್ರಾಣಿ ಗುರುತಿಸುವ ಹೈಟೆಕ್ ಕ್ಯಾಮರಾ!

Published : Feb 28, 2026, 08:12 PM IST

ದೇಶದಲ್ಲೇ ಮೊದಲ ಬಾರಿಗೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ, ಮಾನವ-ವನ್ಯಜೀವಿ ಸಂಘರ್ಷವನ್ನು ತಡೆಯಲು ಕೃತಕ ಬುದ್ಧಿಮತ್ತೆ (AI) ಆಧಾರಿತ ಥರ್ಮಲ್ ಕ್ಯಾಮೆರಾಗಳನ್ನು ಪ್ರಾಯೋಗಿಕವಾಗಿ ಅಳವಡಿಸಲಾಗಿದೆ. ಈ ಹೈಟೆಕ್ ತಂತ್ರಜ್ಞಾನವು ಅರಣ್ಯ ಅಪರಾಧಗಳನ್ನು ಪತ್ತೆಹಚ್ಚಲು ಸಹಕಾರಿಯಾಗಿದೆ.

PREV
15
ದೇಶದಲ್ಲೇ ಮೊದಲು ಎಐ ಕ್ಯಾಮೆರಾ

ಚಾಮರಾಜನಗರ: ಕಾಡಿನಿಂದ ನಾಡಿಗೆ ನುಗ್ಗಿ ರೈತರ ಬೆಳೆ ನಾಶಪಡಿಸುವ ಮತ್ತು ಮಾನವ ಜೀವಕ್ಕೆ ಸಂಚಕಾರ ತರುವ ವನ್ಯಪ್ರಾಣಿಗಳನ್ನು ತಡೆಯಲು ಬಂಡೀಪುರ ಅರಣ್ಯ ಇಲಾಖೆ ಈಗ 'ಹೈಟೆಕ್' ಮಂತ್ರ ಜಪಿಸಿದೆ. ಕೃತಕ ಬುದ್ಧಿಮತ್ತೆ (AI) ಹಾಗೂ ಥರ್ಮಲ್ ತಂತ್ರಜ್ಞಾನವನ್ನು ಬಳಸಿಕೊಂಡು ವನ್ಯಜೀವಿಗಳ ಚಲನವಲನದ ಮೇಲೆ ಹದ್ದಿನ ಕಣ್ಣಿಡುವ ನೂತನ ಯೋಜನೆಯನ್ನು ರಾಷ್ಟ್ರದಲ್ಲೇ ಮೊದಲ ಬಾರಿಗೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದೆ.

25
ಏನಿದು ಹೊಸ ತಂತ್ರಜ್ಞಾನ?

ಬಂಡೀಪುರ ಅರಣ್ಯ ಅಧಿಕಾರಿಗಳು ಜಿ.ಎಸ್. ಬೆಟ್ಟ ವಲಯದ ಆಯಕಟ್ಟಿನ ಎತ್ತರದ ಪ್ರದೇಶದಲ್ಲಿ ಈ ಅತ್ಯಾಧುನಿಕ 'ಎಐ ಹಾಗೂ ಥರ್ಮಲ್ ಜೂಮ್ ಕ್ಯಾಮರಾ'ಗಳನ್ನು ಅಳವಡಿಸಿದ್ದಾರೆ. ಈ ಕ್ಯಾಮರಾಗಳು ಸುಮಾರು 10 ಕಿಲೋಮೀಟರ್ ವ್ಯಾಪ್ತಿಯಲ್ಲಿ ವನ್ಯಪ್ರಾಣಿಗಳ ಇರುವಿಕೆಯನ್ನು ಗ್ರಹಿಸುವ ಸಾಮರ್ಥ್ಯ ಹೊಂದಿವೆ. 360 ಡಿಗ್ರಿ ಕೋನದಲ್ಲಿ ತಿರುಗುವ ಈ ಕ್ಯಾಮರಾಗಳು ಹಗಲು ಮತ್ತು ರಾತ್ರಿ ಎರಡೂ ವೇಳೆ ಅತ್ಯಂತ ನಿಖರವಾದ ಚಿತ್ರಗಳನ್ನು ಸೆರೆಹಿಡಿಯುತ್ತವೆ.

35
ಕಾರ್ಯನಿರ್ವಹಣೆ ಹೇಗೆ?

ಕಾಡಿನಿಂದ ಆನೆ, ಹುಲಿ, ಚಿರತೆ ಅಥವಾ ಕಾಡುಹಂದಿಗಳು ಅರಣ್ಯದ ಗಡಿ ಭಾಗಕ್ಕೆ ಬರುತ್ತಿದ್ದಂತೆಯೇ, ಈ ಎಐ ಕ್ಯಾಮರಾಗಳು ಅವುಗಳನ್ನು ತಕ್ಷಣವೇ ಗುರುತಿಸುತ್ತವೆ. ಪ್ರಾಣಿಗಳ ಛಾಯಾಚಿತ್ರದ ಜೊತೆಗೆ ಅವುಗಳ ನಿಖರವಾದ ಜಿಪಿಎಸ್ ಲೋಕೇಶನ್ (GPS Location) ಮಾಹಿತಿಯನ್ನು ಅರಣ್ಯಾಧಿಕಾರಿಗಳ ಮೊಬೈಲ್‌ಗೆ ಎಸ್‌ಎಂಎಸ್ (SMS) ಮೂಲಕ ರವಾನಿಸುತ್ತದೆ. ಇದರಿಂದ ಪ್ರಾಣಿಗಳು ಅರಣ್ಯದ ಗಡಿ ದಾಟಿ ನಾಡಿಗೆ ಬರುವ ಮೊದಲೇ ಅಧಿಕಾರಿಗಳಿಗೆ ಮಾಹಿತಿ ಸಿಗಲಿದ್ದು, ಅನಾಹುತಗಳನ್ನು ತಡೆಯಲು ಸಾಧ್ಯವಾಗುತ್ತದೆ.

45
ಬೆಳೆಗಾರರಿಗೆ ಮತ್ತು ಅರಣ್ಯ ರಕ್ಷಕರಿಗೆ ವರದಾನ

ಈ ಹಿಂದೆ ಪ್ರಾಣಿಗಳು ನಾಡಿಗೆ ಬಂದ ನಂತರವಷ್ಟೇ ಅಧಿಕಾರಿಗಳಿಗೆ ಮಾಹಿತಿ ಸಿಗುತ್ತಿತ್ತು. ಇದರಿಂದ ಸಮಸ್ಯೆಗೆ ಸ್ಪಂದಿಸುವಷ್ಟರಲ್ಲಿ ಬೆಳೆ ಹಾನಿ ಅಥವಾ ಜೀವಹಾನಿ ಸಂಭವಿಸುತ್ತಿತ್ತು. ಆದರೆ ಈಗ ಹೈಟೆಕ್ ಕಣ್ಗಾವಲಿನಿಂದಾಗಿ ಸಂಘರ್ಷವನ್ನು ಆರಂಭದಲ್ಲೇ ಹತ್ತಿಕ್ಕಬಹುದು. 'ಈ ತಂತ್ರಜ್ಞಾನದಿಂದ ಕೇವಲ ಪ್ರಾಣಿಗಳಷ್ಟೇ ಅಲ್ಲದೆ, ಅಕ್ರಮವಾಗಿ ಅರಣ್ಯ ಪ್ರವೇಶಿಸುವ ಕಳ್ಳಬೇಟೆಗಾರರನ್ನು ಕೂಡ ಛಾಯಾಚಿತ್ರ ಸಹಿತ ಪತ್ತೆಹಚ್ಚಬಹುದು. ಇದು ಅರಣ್ಯ ಅಪರಾಧಗಳನ್ನು ತಡೆಯಲು ಅತ್ಯಂತ ಸಹಕಾರಿ' ಎಂದು ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್ ತಿಳಿಸಿದ್ದಾರೆ.

55
ಯಶಸ್ಸಿನ ಹಾದಿಯಲ್ಲಿ ಬಂಡೀಪುರ:

ದೇಶದಲ್ಲೇ ಪ್ರಪ್ರಥಮ ಬಾರಿಗೆ ಈ ಪ್ರಯೋಗ ನಡೆಸಲಾಗುತ್ತಿದ್ದು, ಜಿ.ಎಸ್. ಬೆಟ್ಟ ವಲಯದಲ್ಲಿ ಇದು ಯಶಸ್ವಿಯಾದರೆ, ಮುಂದಿನ ದಿನಗಳಲ್ಲಿ ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಿರುವ ಬಂಡೀಪುರದ ಇತರ ವಲಯಗಳಿಗೂ ಈ ತಂತ್ರಜ್ಞಾನವನ್ನು ವಿಸ್ತರಿಸಲು ಅರಣ್ಯ ಇಲಾಖೆ ನಿರ್ಧರಿಸಿದೆ. ಈ ಮೂಲಕ ತಂತ್ರಜ್ಞಾನದ ಬಳಕೆಯಲ್ಲಿ ಕರ್ನಾಟಕದ ಅರಣ್ಯ ಇಲಾಖೆ ದೇಶಕ್ಕೇ ಮಾದರಿಯಾಗಿದೆ.

ವರದಿ - ಪುಟ್ಟರಾಜು.ಆರ್.ಸಿ ಏಷ್ಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ

Read more Photos on
click me!

Recommended Stories